ಸಚಿವ ಸ್ಥಾನಕ್ಕಾಗಿ ಪಟ್ಟು: ಸಿಎಂ ಭೇಟಿಯಾದ ಕಾಂಗ್ರೆಸ್ ಹಿರಿಯ ಶಾಸಕರು, ಏಪ್ರಿಲ್ 11ರಂದು ದೆಹಲಿ ಚಲೋ
x

ಸಚಿವ ಸ್ಥಾನಕ್ಕಾಗಿ ಪಟ್ಟು: ಸಿಎಂ ಭೇಟಿಯಾದ ಕಾಂಗ್ರೆಸ್ ಹಿರಿಯ ಶಾಸಕರು, ಏಪ್ರಿಲ್ 11ರಂದು ದೆಹಲಿ ಚಲೋ

ಶಾಸಕ ಹೆಚ್.ಸಿ. ಬಾಲಕೃಷ್ಣ, ಎನ್.ಎ. ಹ್ಯಾರಿಸ್, ಎಸ್. ಷಡಕ್ಷರಿ, ಮಹಾಂತೇಶ್ ಕೌಜಲಗಿ, ಹಂಪನಗೌಡ ಬಾದರ್ಲಿ, ಬಂಗಾರಪೇಟೆ ನಾರಾಯಣಸ್ವಾಮಿ ಹಾಗೂ ರಾಘವೇಂದ್ರ ಹಿಟ್ನಾಳ್ ಸಿಎಂ ಭೇಟಿಯಾಗಿದ್ದಾರೆ.


Click the Play button to hear this message in audio format

ಅಧಿವೇಶನ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆಯ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿಯಾಗಿ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ವಿಧಾನಸಭೆಯ ಮೊಗಸಾಲೆಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಈ ಮಹತ್ವದ ಭೇಟಿ ನಡೆದಿದ್ದು, ಮೂರ್ನಾಲ್ಕು ಬಾರಿ ಗೆದ್ದಿರುವ ಹಿರಿಯ ಶಾಸಕರಿಗೆ ಕ್ಯಾಬಿನೆಟ್‌ನಲ್ಲಿ ಕಡ್ಡಾಯವಾಗಿ ಅವಕಾಶ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಶಾಸಕ ಅಶೋಕ್ ಪಟ್ಟಣ್ ನೇತೃತ್ವದ ನಿಯೋಗದಲ್ಲಿ ಪ್ರಮುಖ ಹಿರಿಯ ಶಾಸಕರು ಇದ್ದರು. ಶಾಸಕ ಹೆಚ್.ಸಿ. ಬಾಲಕೃಷ್ಣ, ಎನ್.ಎ. ಹ್ಯಾರಿಸ್, ಎಸ್. ಷಡಕ್ಷರಿ, ಮಹಾಂತೇಶ್ ಕೌಜಲಗಿ, ಹಂಪನಗೌಡ ಬಾದರ್ಲಿ, ಬಂಗಾರಪೇಟೆ ನಾರಾಯಣಸ್ವಾಮಿ ಹಾಗೂ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚಿಸಿದರು. ಸರ್ಕಾರ ರಚನೆಯಾಗಿ ಎರಡೂವರೆ ವರ್ಷಗಳಾದರೂ ಸಚಿವ ಸಂಪುಟ ಪುನಾರಚನೆ ಆಗಿಲ್ಲ ಎಂಬುದನ್ನು ಅವರು ಈ ವೇಳೆ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಂಬರುವ ಸಂಪುಟ ಪುನಾರಚನೆ ವೇಳೆ ನಿರಂತರವಾಗಿ ಗೆದ್ದುಕೊಂಡು ಬಂದಿರುವ ತಮ್ಮನ್ನು ಪರಿಗಣಿಸಬೇಕು ಎಂದು ಅವರು ಮುಖ್ಯಮಂತ್ರಿಗಳ ಬಳಿ ಒಕ್ಕೊರಲಿನ ಮನವಿ ಮಾಡಿದ್ದಾರೆ.

ಏಪ್ರಿಲ್ 11ರಂದು ಹೈಕಮಾಂಡ್ ಭೇಟಿಗೆ ನಿರ್ಧಾರ

ತಮ್ಮ ಬೇಡಿಕೆ ಈಡೇರಿಕೆಗಾಗಿ ಹೈಕಮಾಂಡ್ ಮೊರೆ ಹೋಗಲು ಹಿರಿಯ ಶಾಸಕರು ನಿರ್ಧರಿಸಿದ್ದು, ಪಂಚರಾಜ್ಯಗಳ ಚುನಾವಣೆ ಮುಗಿದ ಬಳಿಕ ಏಪ್ರಿಲ್ 11ರಂದು ದೆಹಲಿಗೆ ತೆರಳಲಿದ್ದಾರೆ. ದೆಹಲಿ ಯಾತ್ರೆಯ ವಿಚಾರವನ್ನು ಶಾಸಕರು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೈಕಮಾಂಡ್ ಭೇಟಿ ಮಾಡುವುದು ನಿಮ್ಮ ಹಕ್ಕು ಹಾಗೂ ಸ್ವಾತಂತ್ರ್ಯ, ಅದಕ್ಕೆ ತಾವು ಅಡ್ಡಿಪಡಿಸುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಬಜೆಟ್ ಅಧಿವೇಶನ ಮುಗಿದ ಬಳಿಕ ತಾವೂ ದೆಹಲಿಗೆ ತೆರಳುತ್ತಿದ್ದು, ಆ ಸಂದರ್ಭದಲ್ಲಿ ಹೈಕಮಾಂಡ್ ಜೊತೆ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸುವುದಾಗಿ ಹಾಗೂ ಹಿರಿಯ ಶಾಸಕರ ಬೇಡಿಕೆಯ ವಿಷಯವನ್ನು ವರಿಷ್ಠರ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ.

Read More
Next Story