
ಐಟಿ ಅಧಿಕಾರಿಗಳ ಒತ್ತಡವೇ ಸಿ.ಜೆ.ರಾಯ್ ಆತ್ಮಹತ್ಯೆಗೆ ಕಾರಣ: ಕುಟುಂಬಸ್ಥರ ಆರೋಪ
ಕಳೆದ ತಿಂಗಳು ಕೇರಳದಲ್ಲಿ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿದ್ದ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ದುಬೈನಲ್ಲಿದ್ದ ರಾಯ್ ದಾಳಿಯ ವಿಷಯ ತಿಳಿದು ಬೆಂಗಳೂರಿಗೆ ಮರಳಿದ್ದರು.
ಕಾನ್ಫಿಡೆಂಟ್ ಗ್ರೂಪ್'ನ ಚೇರ್ಮನ್ ರಾಯ್ ಸಿ. ಜೆ ಅವರು ಆದಾಯ ತೆರಿಗೆ ಇಲಾಖೆಯ ದಾಳಿ ನಡೆಯುತ್ತಿದ್ದ ವೇಳೆ ಅಧಿಕಾರಿಗಳ ಎದುರೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಅವರ ಕುಟುಂಬ ಹಾಗೂ ಕಚೇರಿಯ ಮೂಲಗಳು ಆರೋಪಿಸಿವೆ. ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಐಟಿ ಶೋಧ ಕಾರ್ಯದ ಅಂತಿಮ ಹಂತದಲ್ಲಿ, ವಿಚಾರಣೆ ಎದುರಿಸುತ್ತಿದ್ದ ರಾಯ್ ಅವರು ತೀವ್ರ ಒತ್ತಡಕ್ಕೆ ಸಿಲುಕಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಅವರೆಲ್ಲರೂ ಹೇಳಿದ್ದಾರೆ.
ಕೇರಳ ಮೂಲದ ಐಟಿ ಅಧಿಕಾರಿಗಳ ತಂಡ ಮೂರು ದಿನಗಳಿಂದ ರಾಯ್ ಅವರ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿತ್ತು. ಕಳೆದ ತಿಂಗಳು ಕೇರಳದಲ್ಲಿ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡಿದ್ದ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ದುಬೈನಲ್ಲಿದ್ದ ರಾಯ್ ದಾಳಿಯ ವಿಷಯ ತಿಳಿದು ಬೆಂಗಳೂರಿಗೆ ಮರಳಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಚೇರಿಗೆ ಬಂದ ರಾಯ್ ಅವರನ್ನು ಅಧಿಕಾರಿಗಳು ಸುಮಾರು ಒಂದೂವರೆ ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ಬಳಿಕ ಅಧಿಕಾರಿಗಳು ಕೆಲ ನಿರ್ದಿಷ್ಟ ದಾಖಲೆಗಳನ್ನು ಕೇಳಿದರೆನ್ನಲಾಗಿದೆ. ದಾಖಲೆ ತರುವುದಾಗಿ ಹೇಳಿ ತಮ್ಮ ಚೇಂಬರ್‌ಗೆ ತೆರಳಿದ ರಾಯ್, ಅಲ್ಲಿಂದ ಪಿಸ್ತೂಲ್ ತಂದು ಅಧಿಕಾರಿಗಳ ಮುಂದೆಯೇ ಗುಂಡು ಹಾರಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಸ್ಪತ್ರೆಗೆ ಸಾಗಿಸುವ ಮೊದಲೇ ಸಾವು
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಯ್ ಅವರನ್ನು ಕಂಡ ಐಟಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನು ಎಚ್ಎಸ್ಆರ್ ಲೇಔಟ್‌ನಲ್ಲಿರುವ ನಾರಾಯಣ ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟರಲ್ಲಾಗಲೇ ತೀವ್ರ ರಕ್ತಸ್ರಾವವಾಗಿದ್ದರಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. ಘಟನೆಯ ನಂತರ ಐಟಿ ಅಧಿಕಾರಿಗಳು ಹತ್ತಕ್ಕೂ ಹೆಚ್ಚು ಬ್ಯಾಗ್‌ಗಳಲ್ಲಿ ದಾಖಲೆಗಳನ್ನು ತುಂಬಿಕೊಂಡು ಮೂರು ಇನೋವಾ ಕಾರುಗಳಲ್ಲಿ ಸ್ಥಳದಿಂದ ನಿರ್ಗಮಿಸಿದ್ದಾರೆ ಎಂದು ಹೇಳಲಾಗಿದೆ.
ಪೊಲೀಸ್ ಆಯುಕ್ತರ ಸ್ಪಷ್ಟನೆ ಏನು?
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಧ್ಯಾಹ್ನ 3.15ರ ಸುಮಾರಿಗೆ ಈ ಘಟನೆ ನಡೆದಿದೆ. ಕಂಪನಿಯ ನಿರ್ದೇಶಕರು ಈ ಬಗ್ಗೆ ದೂರು ನೀಡಿದ್ದಾರೆ. ರಾಯ್ ಅವರೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬಳಸಿದ ಪಿಸ್ತೂಲ್ ಯಾವುದು, ಲೈಸೆನ್ಸ್ ಇದೆಯೇ ಮತ್ತು ಎಷ್ಟು ರೌಂಡ್ ಫೈರ್ ಆಗಿದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸೋಕೋ (SOCO) ಮತ್ತು ಕ್ರೈಂ ಟೀಮ್‌ಗಳು ಸ್ಥಳ ಪರಿಶೀಲನೆ ನಡೆಸಿವೆ. ಐಟಿ ಅಧಿಕಾರಿಗಳೊಂದಿಗೂ ಮಾತನಾಡುತ್ತಿದ್ದೇವೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು. ಸದ್ಯ ಪೊಲೀಸರು ರಾಯ್ ಅವರ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಕುಟುಂಬಸ್ಥರಿಂದ ಐಟಿ ಅಧಿಕಾರಿಗಳ ವಿರುದ್ಧ ಆರೋಪ
ರಾಯ್ ಅವರ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಅವರ ಸಹೋದರ ಬಾಬು ರಾಯ್ ಗಂಭೀರ ಆರೋಪ ಮಾಡಿದ್ದಾರೆ. ಪುಕೆಟ್‌ನಲ್ಲಿರುವ ಅವರು ಮಾತನಾಡಿ, ತಮ್ಮ ಸಹೋದರನಿಗೆ ಯಾವುದೇ ಸಾಲ ಇರಲಿಲ್ಲ, ಯಾರ ಬೆದರಿಕೆಯೂ ಇರಲಿಲ್ಲ. ಅವರಿಗೆ ಶತ್ರುಗಳೂ ಇರಲಿಲ್ಲ. ಅಡಿಷನಲ್ ಕಮಿಷನರ್ ಕೃಷ್ಣ ಪ್ರಸಾದ್ ನೇತೃತ್ವದ ತಂಡ ಕೇರಳದಿಂದ ಬಂದಿತ್ತು. ಇಂದು ಬೆಳಿಗ್ಗೆ 10 ಗಂಟೆಗೆ ನನಗೆ ಕರೆ ಮಾಡಿದ್ದ ರಾಯ್, ಐಟಿ ಅಧಿಕಾರಿಗಳು ಬಂದಿದ್ದಾರೆ ಎಂದಿದ್ದರು. ಕೇವಲ ಐಟಿ ಅಧಿಕಾರಿಗಳ ವಿಪರೀತ ಒತ್ತಡದಿಂದಲೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಕಾನೂನು ಸಲಹೆಗಾರರ ಪ್ರತಿಕ್ರಿಯೆ ಏನಿದೆ?
ಕಾನ್ಫಿಡೆಂಟ್ ಗ್ರೂಪ್‌ನ ಕಾನೂನು ಸಲಹೆಗಾರ ಪಟಾಪಟ್ ಪ್ರಕಾಶ್ ಮತ್ತು ಕಂಪನಿಯ ವಕೀಲರು ಮಾತನಾಡಿ, ರಾಯ್ ಅವರು ಸಮಾಜದ ಆಸ್ತಿಯಂತಿದ್ದರು. ಕೊರೊನಾ ಸಂಕಷ್ಟದ ಸಮಯದಲ್ಲೂ ಸಿಬ್ಬಂದಿಗೆ ಸಂಬಳ ಕಡಿತಗೊಳಿಸದೆ ನೆರವಾಗಿದ್ದರು. ಅಂತಹ ಧೈರ್ಯವಂತ ವ್ಯಕ್ತಿ ಈ ರೀತಿ ಮಾಡಿಕೊಳ್ಳಲು ಐಟಿ ಅಧಿಕಾರಿಗಳು ನೀಡಿದ ತೀವ್ರ ಒತ್ತಡವೇ (Pressure) ಕಾರಣ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಮರಣೋತ್ತರ ಪರೀಕ್ಷೆಗೆ ಸಿದ್ಧತೆ
ಸಿ.ಜೆ. ರಾಯ್ ಅವರ ಪತ್ನಿ, ಮಗ ಮತ್ತು ಮಗಳು ದುಬೈನಲ್ಲಿ ನೆಲೆಸಿದ್ದಾರೆ. ಸಹೋದರ ಬಾಬು ರಾಯ್ ಪುಕೆಟ್‌ನಲ್ಲಿದ್ದು, ಶನಿವಾರ 6 ಗಂಟೆಗೆ ಬೆಂಗಳೂರು ತಲುಪಲಿದ್ದಾರೆ. ಕುಟುಂಬಸ್ಥರು ಬರುವ ಹಿನ್ನೆಲೆಯಲ್ಲಿ ಮೃತದೇಹವನ್ನು ನಾರಾಯಣ ಆಸ್ಪತ್ರೆಯಿಂದ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲು ಸಿದ್ಧತೆ ನಡೆಸಲಾಗಿದೆ. ಕುಟುಂಬಸ್ಥರು ಆಗಮಿಸಿದ ನಂತರ ನಾಳೆ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಸದ್ಯ ಹೆಚ್.ಎಸ್.ಆರ್ ಲೇಔಟ್ ನಾರಾಯಣ ಆಸ್ಪತ್ರೆ ಮತ್ತು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
(ಆತ್ಮಹತ್ಯೆಗಳನ್ನು ತಡೆಯಲು ಸಾಧ್ಯ. ಸಹಾಯಕ್ಕಾಗಿ ದಯವಿಟ್ಟು ಆತ್ಮಹತ್ಯೆ ತಡೆ ಸಹಾಯವಾಣಿಗಳನ್ನು ಸಂಪರ್ಕಿಸಿ:1ಲೈಫ್: 7893078930; ಲೈಫ್‌ಲೈನ್ +91-9163940404 , +91-9088030303; ಸುಮೈತ್ರಿ - 011-23389090 , +91-9315767849 ; ನೇಹಾ ಆತ್ಮಹತ್ಯೆ ತಡೆ ಕೇಂದ್ರ : 044-24640050; ಆಸರಾ ಸಹಾಯವಾಣಿ ಆತ್ಮಹತ್ಯೆ ತಡೆ, ಭಾವನಾತ್ಮಕ ಬೆಂಬಲ ಮತ್ತು ಆಘಾತ ನೆರವು ಕೇಂದ್ರ: 91-9820466726; ಕಿರಣ್, ಮಾನಸಿಕ ಆರೋಗ್ಯ ಪುನರ್ವಸತಿ ಕೇಂದ್ರ: 1800-599-0019; ದಿಶಾ: 0471-2552056; ಮೈತ್ರಿ: 0484-2540530; ಮತ್ತು ಸ್ನೇಹಾ ಆತ್ಮಹತ್ಯೆ ತಡೆ ಸಹಾಯವಾಣಿ: 044-24640050)

