
ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ: ಜಿಎಸ್‌ಟಿ ಅಧಿಕಾರಿ ಭರತ್ ಕುಮಾರ್ ಹೆಗಡೆ ಬಂಧನ
ತೆರಿಗೆ ವಂಚನೆ ಸಂಬಂಧ ಪ್ರಕರಣವನ್ನು ಇತ್ಯರ್ಥಪಡಿಸಲು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಭರತ್ ಕುಮಾರ್ ಹೆಗಡೆ 6 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ತೆರಿಗೆ ವಂಚನೆ ಸಂಬಂಧ ಪ್ರಕರಣವನ್ನು ಇತ್ಯರ್ಥಪಡಿಸಲು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರೊಬ್ಬರು 6 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯ (ಜಿಎಸ್ಟಿ) ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಭರತ್ ಕುಮಾರ್ ಹೆಗಡೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಬೆಂಗಳೂರಿನ ಜಕ್ಕೂರು ಮುಖ್ಯರಸ್ತೆಯ ಎಂ.ಎಸ್. ಪಲಾಜೊ ಅಪಾರ್ಟ್‌ಮೆಂಟ್ ನಿವಾಸಿಯಾದ ಇವರು, ತೆರಿಗೆ ವಂಚನೆಗೆ ಸಂಬಂಧಿಸಿದ ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದರು.
ದೂರುದಾರರಾದ ವಿಶ್ವಜೀತ್ ನಾಯಕ್ , ಜಯನಗರದ ಜೈನ್ ಪ್ರಕೃತಿ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಇವರ ಮೇಲೆ ಸುಮಾರು 60 ಲಕ್ಷ ರೂಪಾಯಿಗಳಷ್ಟು ತೆರಿಗೆ ವಂಚನೆ ಮಾಡಿರುವ ಬಗ್ಗೆ ತಪಾಸಣಾ ವರದಿ ಸಲ್ಲಿಕೆಯಾಗಿತ್ತು. ಈ ವರದಿಯ ವಿಚಾರಣೆಯನ್ನು ನಡೆಸಿ, ಪ್ರಕರಣವನ್ನು ದೂರುದಾರರ ಪರವಾಗಿ ಇತ್ಯರ್ಥಪಡಿಸಲು ಭರತ್ ಕುಮಾರ್ ಹೆಗಡೆ ಅವರು ಆರಂಭದಲ್ಲಿ 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮಾತುಕತೆಯ ನಂತರ 6 ಲಕ್ಷ ರೂಪಾಯಿ ನೀಡಲು ಒಪ್ಪಂದವಾಗಿತ್ತು.
ಲಂಚ ನೀಡಲು ಇಚ್ಛಿಸದ ವಿಶ್ವಜೀತ್ ನಾಯಕ್ ಅವರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ದೂರುದಾರರಿಂದ 6 ಲಕ್ಷ ರೂಪಾಯಿ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಿ. ರಾಜು ಮತ್ತು ತಂಡವು ದಾಳಿ ನಡೆಸಿ, ಆರೋಪಿ ಅಧಿಕಾರಿಯನ್ನು ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.
ಆರೋಪಿ ಅಧಿಕಾರಿ ಭರತ್ ಕುಮಾರ್ ಹೆಗಡೆ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಭ್ರಷ್ಟ ಅಧಿಕಾರಿಯ ನಿವಾಸ ಹಾಗೂ ಕಚೇರಿಗಳ ಮೇಲೆಯೂ ಪರಿಶೀಲನೆ ನಡೆಸಲಾಗುವುದು ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

