
ಸಚಿವ ಕೆ.ಎಚ್. ಮುನಿಯಪ್ಪ
ಹೋಟೆಲ್ ಉದ್ಯಮಕ್ಕೆ ಬಿಗ್ ರಿಲೀಫ್: ವಾಣಿಜ್ಯ ಸಿಲಿಂಡರ್ ಪೂರೈಕೆ ಹೆಚ್ಚಳ, ಗೇಲ್ ನೋಂದಣಿ ಕಡ್ಡಾಯ
ಸಿಲೆಂಡರ್‌ಗಳ ಕಾಳಸಂತೆ ಮಾರಾಟ ತಡೆಯಲು ಮುಂದಿನ ಶನಿವಾರದೊಳಗೆ ವಾಣಿಜ್ಯ ಸಿಲೆಂಡರ್ ಬಳಕೆದಾರರು ಗೇಲ್ ಸಂಸ್ಥೆಯಲ್ಲಿ ನೋಂದಣಿ ಕಡ್ಡಾಯ ಮಾಡಿಕೊಳ್ಳಬೇಕು. ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 2 ರೂ. ಕಡಿತಕ್ಕೆ ಸಿಎಂ ಬಳಿ ಪ್ರಸ್ತಾಪಿಸಲು ಸಚಿವ ಮುನಿಯಪ್ಪ ಭರವಸೆ ನೀಡಿದ್ದಾರೆ.
ರಾಜ್ಯಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಕಂಗೆಟ್ಟಿದ್ದ ಹೋಟೆಲ್, ಢಾಬಾ ಹಾಗೂ ಪಿಜಿ ಮಾಲೀಕರಿಗೆ ರಾಜ್ಯ ಸರ್ಕಾರ ಕೊನೆಗೂ ದೊಡ್ಡ ರಿಲೀಫ್ ನೀಡಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ಗ್ಯಾಸ್ ಕಂಪನಿಗಳು ಮತ್ತು ಹೋಟೆಲ್ ಮಾಲೀಕರ ಸಂಘದ ನಡುವೆ ನಡೆದ ಮಹತ್ವದ ಸಭೆಯಲ್ಲಿ, ಉದ್ಯಮಕ್ಕೆ ಅಗತ್ಯವಿರುವ ಗ್ಯಾಸ್ ಪೂರೈಕೆಯನ್ನು ಹೆಚ್ಚಿಸುವ ಜೊತೆಗೆ ಅಕ್ರಮಗಳನ್ನು ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಸರ್ಕಾರವು ಒಂದೆಡೆ ಉದ್ಯಮದ ನೆರವಿಗೆ ಧಾವಿಸಿದ್ದರೆ, ಮತ್ತೊಂದೆಡೆ ಪಾರದರ್ಶಕತೆಗೆ ಒತ್ತು ನೀಡಿದೆ.
ಪೂರೈಕೆ ಹೆಚ್ಚಳ
ಹೋಟೆಲ್ ಉದ್ಯಮದ ನಿರಂತರ ಬೇಡಿಕೆಗೆ ಸ್ಪಂದಿಸಿರುವ ಸರ್ಕಾರ, ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಇದುವರೆಗೆ ಪೂರೈಸಲಾಗುತ್ತಿದ್ದ ಪ್ರಮಾಣಕ್ಕೆ ಹೆಚ್ಚುವರಿಯಾಗಿ ಒಂದು ಸಾವಿರ ಸಿಲಿಂಡರ್‌ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ. ಈ ಸೇರ್ಪಡೆಯೊಂದಿಗೆ ರಾಜ್ಯದಲ್ಲಿ ಒಟ್ಟಾರೆಯಾಗಿ ಹತ್ತು ಸಾವಿರ ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಾಗಲಿದೆ. ವಿಶೇಷವೆಂದರೆ, ಈ ಹತ್ತು ಸಾವಿರ ಸಿಲಿಂಡರ್‌ಗಳ ಕೋಟಾವನ್ನು ಕೇವಲ ಹೋಟೆಲ್‌ಗಳಿಗೆ ಮಾತ್ರ ಸೀಮಿತಗೊಳಿಸದೆ, ವಾಣಿಜ್ಯ ಗ್ಯಾಸ್ ವ್ಯಾಪ್ತಿಗೆ ಬರುವ ಇಂದಿರಾ ಕ್ಯಾಂಟೀನ್‌ಗಳು, ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹಗಳು, ಢಾಬಾಗಳು ಹಾಗೂ ಹಾಸ್ಟೆಲ್‌ಗಳಿಗೂ ಸಮರ್ಪಕವಾಗಿ ಹಂಚಿಕೆ ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಆಹಾರ ಪೂರೈಕೆ ವಲಯದ ಬಹುತೇಕ ವಿಭಾಗಗಳಿಗೆ ಜೀವದಾನ ಸಿಕ್ಕಂತಾಗಿದೆ.
ಗೇಲ್ (GAIL) ಸಂಸ್ಥೆಯಲ್ಲಿ ನೋಂದಣಿ ಕಡ್ಡಾಯ
ಸಿಲಿಂಡರ್ ಪೂರೈಕೆಯನ್ನು ಹೆಚ್ಚಿಸುವ ಜೊತೆಯಲ್ಲೇ, ಕಾಳಸಂತೆಕೋರರಿಗೆ ಬಿಸಿ ಮುಟ್ಟಿಸಲು ಸರ್ಕಾರ ಮುಂದಾಗಿದೆ. ಇನ್ನು ಮುಂದೆ ವಾಣಿಜ್ಯ ಗ್ಯಾಸ್ ಬಳಸುವ ಪ್ರತಿಯೊಬ್ಬ ಮಾಲೀಕರು ಕಡ್ಡಾಯವಾಗಿ 'ಗೇಲ್' (GAIL) ಕಂಪನಿಯ ಅಧಿಕೃತ ವ್ಯವಸ್ಥೆಯಡಿ ತಮ್ಮನ್ನು ತಾವು ನೋಂದಾಯಿಸಿಕೊಳ್ಳಲೇಬೇಕು ಎಂಬ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮುಂದಿನ ಶನಿವಾರದವರೆಗೆ ಕಾಲಾವಕಾಶ ನೀಡಲಾಗಿದೆ. ನಿಗದಿತ ಗಡುವಿನೊಳಗೆ ನೋಂದಣಿ ಮಾಡಿಕೊಳ್ಳದ ಬಳಕೆದಾರರಿಗೆ ಮುಂದಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಯಾರು ಎಷ್ಟು ಪ್ರಮಾಣದ ಗ್ಯಾಸ್ ಬಳಕೆ ಮಾಡುತ್ತಿದ್ದಾರೆ ಎಂಬುದರ ನಿಖರ ಮಾಹಿತಿ ಕಲೆಹಾಕುವುದು ಮತ್ತು ಅಕ್ರಮ ದಾಸ್ತಾನು ಹಾಗೂ ಬಳಕೆಯನ್ನು ಶಾಶ್ವತವಾಗಿ ತಡೆಯುವುದು ಈ ನಿಯಮದ ಪ್ರಮುಖ ಉದ್ದೇಶವಾಗಿದೆ.
ಮುಂದಿನ ವಾರ ಮತ್ತೊಂದು ಸುತ್ತಿನ ಸಭೆ ನಡೆಸಿ, ಗ್ಯಾಸ್ ಪೂರೈಕೆಯನ್ನು ಆಧರಿಸಿ ಪರಿಷ್ಕರಿಸಲಾಗುವುದು. ನಗರ ಪ್ರದೇಶದ ನಿವಾಸಿಗಳು 25 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡಬಹುದು. ಗ್ರಾಮೀಣ ಪ್ರದೇಶದಲ್ಲಿ 45 ದಿನಕ್ಕೊಮ್ಮೆ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಈ ವ್ಯವಸ್ಥೆಗೆ ಯಾವುದೇ ಸಮಸ್ಯೆ ಇಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಪ್ರತಿ ವಾರಕ್ಕೊಮ್ಮೆ ಪರಿಶೀಲಿಸಲಾಗುವುದು. ಸದ್ಯಕ್ಕೆ ನಿತ್ಯ 10 ಸಾವಿರ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆಗೆ ನೀಡಲಾಗುತ್ತಿದ್ದು, ಗ್ರಾಹಕರು ಗೋದಾಮುಗಳ ಬಳಿ ಗಲಾಟೆ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದುವರೆಗೂ ಐದು ಸಿಲಿಂಡರ್ ಉಪಯೋಗಿಸುತ್ತಿದ್ದ ಹೋಟೆಲ್‌ಗಳಿಗೆ ಎರಡು ಸಿಲಿಂಡರ್‌ಗಳನ್ನು ಕಡ್ಡಾಯವಾಗಿ ನೀಡಲಾಗುವುದು. ಗೃಹ ಬಳಕೆಗೆ ಸಿಲಿಂಡರ್ ಪೂರೈಕೆಯಾಗದಿದ್ದರೆ, ಏರಿಯಾ ಮ್ಯಾನೇಜರ್‌ಗಳಿಗೆ ದೂರು ನೀಡಬೇಕು. ಏಜೆನ್ಸಿಗಳು ಸಹ ಕಾಳಸಂತೆಯಲ್ಲಿ ಮಾರಾಟ ನಡೆಸಿದರೆ, ಅವರ ಮೇಲೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯುತ್ ದರ ಕಡಿತದ ಬೇಡಿಕೆ
ಇದೇ ಸಭೆಯಲ್ಲಿ ಹೋಟೆಲ್ ಮಾಲೀಕರು ತಮ್ಮ ಉದ್ಯಮಕ್ಕೆ ಹೊರೆಯಾಗಿರುವ ವಿದ್ಯುತ್ ಬಿಲ್ ಕಡಿತದ ವಿಚಾರವನ್ನೂ ಪ್ರಸ್ತಾಪಿಸಿದ್ದಾರೆ. ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ ಎರಡು ರೂಪಾಯಿಗಳಷ್ಟು ಕಡಿತ ಮಾಡಬೇಕು ಎಂಬುದು ಅವರ ಪ್ರಮುಖ ಮನವಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, ಈ ವಿಚಾರ ನೇರವಾಗಿ ತಮ್ಮ ಗಮನಕ್ಕೆ ಬಂದಿಲ್ಲವಾದರೂ, ಮಾಲೀಕರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಬಗ್ಗೆ ಅರಿವಿದೆ ಎಂದರು. ಈ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ. ಈ ಎಲ್ಲಾ ಹೊಸ ನಿಯಮಗಳ ಅನುಷ್ಠಾನ, ಸಾಧಕ-ಬಾಧಕಗಳು ಹಾಗೂ ಮುಂದಿನ ರೂಪುರೇಷೆಗಳ ಕುರಿತು ಚರ್ಚಿಸಲು ಮುಂದಿನ ಸೋಮವಾರ ಹೋಟೆಲ್ ಮಾಲೀಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ದೇಶವೇ ಮೊದಲು
ಯುದ್ಧದ ಸಮಯದಲ್ಲಿ ಗ್ಯಾಸ್ ಸಿಲಿಂಡರ್‌ಗಳು ಪೂರೈಕೆಯಾಗುತ್ತಿರುವ ಮೊದಲ ರಾಷ್ಟ್ರವಾಗಿ ಭಾರತ ಎದ್ದು ನಿಂತಿದೆ. ಕೇಂದ್ರ ಸರ್ಕಾರವು ಈ ಬಗ್ಗೆ ಅನೇಕ ಕೆಲಸಗಳನ್ನು ಮಾಡಿದೆ. ಇತರೆ ದೇಶಗಳನ್ನು ಅವಲಂಬಿಸುವ ಬದಲು, ಗ್ರೀನ್ ಎನರ್ಜಿ, ಬಯೋಗ್ಯಾಸ್ ಬಳಕೆಯ ಬಗ್ಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಬೇಕು. ಮುಂದಿನ ಹತ್ತು ವರ್ಷಗಳಲ್ಲಿಯಾದರೂ ದೇಶ ಸ್ವಾವಲಂಬಿಯಾಗಲಿದೆ. ರಾಜ್ಯದ ಮುಖ್ಯಮಂತ್ರಿಗಳು ಸಿಲಿಂಡರ್ ನೀಡುವಂತೆ ಕೇಂದ್ರ ಸರ್ಕಾರಕ್ಕೆ 2ನೇ ಪತ್ರ ಬರೆದ ಬಳಿಕ, ರಾಜ್ಯಕ್ಕೆ ಹೆಚ್ಚುವರಿಯಾಗಿ ಶೇ.20 ರಷ್ಟು ಸಿಲಿಂಡರ್‌ಗಳು ಪೂರೈಕೆಯಾಗಿವೆ ಎಂದರು.

