
ಕರ್ನಾಟಕ ಹೈಕೋರ್ಟ್ ಹಾಗೂ ಮಂಗಳೂರಿನ ಜಿಲ್ಲಾಧಿಕಾರಿ ಹಳೇ ಕಚೇರಿ
ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಪತ್ರ
ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ವಿಕೇಂದ್ರೀಕರಣಗೊಳಿಸುವುದು ಮತ್ತು ಸಂವಿಧಾನ ಬದ್ಧವಾಗಿ ಎಲ್ಲರಿಗೂ ಸಕಾಲದಲ್ಲಿ ನ್ಯಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ಕರಾವಳಿ ಪ್ರದೇಶದ ಜನರಿಗೆ ತ್ವರಿತ ಮತ್ತು ಸುಲಭವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಹೈಕೋರ್ಟ್ನ ಸರ್ಕ್ಯೂಟ್ ಪೀಠವನ್ನು ಸ್ಥಾಪಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರಿಗೆ ಅಧಿಕೃತ ಪತ್ರ ಬರೆದಿದ್ದಾರೆ.
ಸಾರ್ವಜನಿಕರಿಗೆ ಕಾನೂನು ಸೇವೆಗಳನ್ನು ವಿಕೇಂದ್ರೀಕರಣಗೊಳಿಸುವುದು ಮತ್ತು ಸಂವಿಧಾನ ಬದ್ಧವಾಗಿ ಎಲ್ಲರಿಗೂ ಸಕಾಲದಲ್ಲಿ ನ್ಯಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.
ಸಂಚಾರಿ ಪೀಠದ ಅಗತ್ಯತೆ, ಪ್ರಯೋಜನಗಳು
ಮಂಗಳೂರಿನಲ್ಲಿ ಪೀಠ ಸ್ಥಾಪನೆಯಾಗುವುದರಿಂದ ಕರಾವಳಿ ಭಾಗದ ಜನ ಸಾಮಾನ್ಯರು ಸಣ್ಣಪುಟ್ಟ ಕಾನೂನು ಹೋರಾಟಗಳಿಗೂ ಬೆಂಗಳೂರಿನ ಪ್ರಧಾನ ಪೀಠಕ್ಕೆ ಅಲೆಯುವುದು ತಪ್ಪಲಿದೆ. ಬೆಂಗಳೂರಿನ ಮುಖ್ಯ ಪೀಠದಲ್ಲಿ ವರ್ಷಗಳಿಂದ ಬಾಕಿ ಉಳಿದಿರುವ ಸಾವಿರಾರು ಪ್ರಕರಣಗಳ ಒತ್ತಡವನ್ನು ಇದು ಗಣನೀಯವಾಗಿ ಕಡಿಮೆ ಮಾಡಲಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸಲು ಇದು ಸಹಕಾರಿಯಾಗಲಿದೆ.
ಮೂಲಸೌಕರ್ಯ ಒದಗಿಸಲು ಸರ್ಕಾರ ಸಿದ್ಧ
ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುಮಾರು 50 ಸಾವಿರ ಚದರ ಅಡಿ ಭೂಮಿ ಲಭ್ಯವಿದ್ದು, ಸಂಚಾರಿ ಪೀಠದ ಸುಗಮ ಕಾರ್ಯನಿರ್ವಹಣೆಗೆ ಇದು ಸೂಕ್ತವಾಗಿದೆ. ಪೀಠಕ್ಕೆ ಅಗತ್ಯವಿರುವ ನಾಗರಿಕ, ಆಡಳಿತಾತ್ಮಕ ಮತ್ತು ಲಾಜಿಸ್ಟಿಕಲ್ ಸೇರಿದಂತೆ ಎಲ್ಲಾ ರೀತಿಯ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಸಿಎಂ ತಮ್ಮ ಪತ್ರದಲ್ಲಿ ಮುಖ್ಯ ನ್ಯಾಯಮೂರ್ತಿಗಳ ಗಮನಕ್ಕೆ ತಂದಿದ್ದಾರೆ.
ಕಲಬುರಗಿ, ಧಾರವಾಡದಲ್ಲಿದೆ ಕಾಯಂ ಪೀಠ
ಕರ್ನಾಟಕ ಹೈಕೋರ್ಟ್ನ ಪ್ರಧಾನ ಪೀಠ ಬೆಂಗಳೂರಿನಲ್ಲಿದೆ. ಈ ಹಿಂದೆ ಸಂಚಾರಿ ಪೀಠಗಳಾಗಿದ್ದ ಧಾರವಾಡ ಹಾಗೂ ಕಲಬುರಗಿಯಲ್ಲಿ ಈಗ ಕಾಯಂ ಪೀಠಗಳು ಕಾರ್ಯನಿರ್ವಹಿಸುತ್ತಿವೆ. ಧಾರವಾಡ ಪೀಠವು ಧಾರವಾಡ, ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಗದಗ, ಹಾವೇರಿ, ಕೊಪ್ಪಳ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ. ಕಲಬುರಗಿ ಪೀಠವು ಕಲಬುರಗಿ, ಬೀದರ್, ವಿಜಯಪುರ ಮತ್ತು ರಾಯಚೂರು ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ.

