
Mangalore University| ಗೌರವ ಡಾಕ್ಟರೇಟ್: ಹಿರಿಯ ದೈವ ನರ್ತಕರನ್ನು ಕಡೆಗಣಿಸಿತೇ ಮಂಗಳೂರು ವಿ.ವಿ?
ದೈವ ನರ್ತನ ಸೇವೆಯಲ್ಲಿ 70 ವರ್ಷಗಳ ಕಾಲ ಸವೆಸಿದ, ಕಣಂತೂರು ಕಾಂತ ಅಥವಾ ಮಾಯಿಲ ಕುತ್ತಾರು ಅಂತಹ ಹಿರಿಯರು ವಿಶ್ವವಿದ್ಯಾನಿಲಯದ ಕಣ್ಣಿಗೆ ಬೀಳಲಿಲ್ಲವೇಕೆ ಎಂಬ ಪ್ರಶ್ನೆ ಎದ್ದಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಂದರ್ಭದಲ್ಲಿ ದೈವ ನರ್ತಕರೊಬ್ಬರಿಗೆ 'ಗೌರವ ಡಾಕ್ಟರೇಟ್' ಘೋಷಣೆಯಾಗಿದೆ. 44ನೇ ಘಟಿಕೋತ್ಸವದ ಈ ಸಂಭ್ರಮದ ಬೆನ್ನಲ್ಲೇ ಕರಾವಳಿಯ ಸಾಂಸ್ಕೃತಿಕ ವಲಯದಲ್ಲಿ ಚರ್ಚೆ ಮತ್ತು ಅಸಮಾಧಾನದ ಹೊಗೆಯಾಡುತ್ತಿದೆ.
ದೈವಾರಾಧನೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸೇವೆಯ ಹೆಸರಿನಲ್ಲಿ ಡಾ. ರವೀಶ್ ಪಡುಮಲೆ ಅವರಿಗೆ ಈ ಗೌರವ ನೀಡಲಾಗುತ್ತಿದೆಯಾದರೂ, ವಿವಿಯ ಈ ನಿರ್ಧಾರಕ್ಕೆ ಕಾರಣವೇನು ಎಂಬ ಪ್ರಶ್ನೆಗಳು ಎದ್ದಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಈ ಬಾರಿ ಮೂವರು ಗಣ್ಯರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ನಿಧನರಾದ ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ (ಮರಣೋತ್ತರ ಪ್ರದಾನ), ಕಿತ್ತಳೆ ಮಾರಿ ಶಾಲೆ ಕಟ್ಟಿದ ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಹಾಗೂ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ.
ಹಾಜಬ್ಬ ಮತ್ತು ಗೋವಿಂದ ಭಟ್ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಬಗ್ಗೆ ಯಾವುದೇ ಆಕ್ಷೇಪವಿಲ್ಲದಿದ್ದರೂ, ರವೀಶ್ ಪಡುಮಲೆ ಅವರ ಆಯ್ಕೆಯು ಕರಾವಳಿಯ ದೈವಾರಾಧನಾ ಸಮುದಾಯದಲ್ಲಿ ಅಚ್ಚರಿ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ದೈವ ನರ್ತನ ಕ್ಷೇತ್ರದಲ್ಲಿ ಇವರ ಸಾಧನೆ ಏನು? ಎಂಬ ಪ್ರಶ್ನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ದೈವ ನರ್ತನ ಸೇವೆಯಲ್ಲಿ 70-80 ವರ್ಷಗಳ ಕಾಲ ಸವೆಸಿದ, ಇಡೀ ತುಳುನಾಡೇ ಗೌರವಿಸುವ ಕಣಂತೂರು ಕಾಂತ ಅಥವಾ ಮಾಯಿಲ ಕುತ್ತಾರು ಅಂತಹ ಹಿರಿಯರು ವಿಶ್ವವಿದ್ಯಾನಿಲಯದ ಕಣ್ಣಿಗೆ ಬೀಳಲಿಲ್ಲವೇಕೆ? ರವೀಶ್ ಪಡುಮಲೆ ಅವರಿಗೆ ಸಂಘ ಪರಿವಾರದ ನಂಟೂ ಇದೆ ಎನ್ನಲಾಗಿದೆ. ಅನುಭವಿ ದೈವ ಚಾಕರಿಯ ಸಮುದಾಯದ ಹಿರಿಯರನ್ನು ಮೂಲೆಗೆ ಸರಿಸಿ, ಕಡಿಮೆ ಅನುಭವದ ವ್ಯಕ್ತಿಯನ್ನು ಆರಿಸುವುದು ಆ ಪರಂಪರೆಗೆ ಮಾಡಿದ ಅಗೌರವವಲ್ಲವೇ? ಎಂದು ಹಿರಿಯ ಜನಪದ ವಿದ್ವಾಂಸರೊಬ್ಬರು ಪ್ರಶ್ನಿಸಿದ್ದಾರೆ.
ಕರಾವಳಿಯ ಸಾಂಸ್ಕೃತಿಕ ಬೇರುಗಳನ್ನು ಬಲ್ಲವರು ಕಣಂತೂರು ಕಾಂತ ಅವರ ಹೆಸರನ್ನು ಮುಂಚೂಣಿಯಲ್ಲಿ ಇಡುತ್ತಾರೆ. ದೈವದ ಚಾಕರಿ ಮಾಡುವ ಸಮುದಾಯದ ಪರಂಪರೆಯನ್ನು ಎತ್ತಿ ಹಿಡಿದಿರುವ ಕಾಂತ ಅವರು ಉಳ್ಳಾಲ್ತಿ, ಜುಮಾದಿ, ಕೊಡಮಣಿತ್ತಾಯ... ಹೀಗೆ ದೈವಗಳ ನರ್ತಕರಾಗಿ ದಶಕಗಳ ಸೇವೆ ಸಲ್ಲಿಸಿದ್ದಾರೆ. ಅವರ ಮದಿಪು (ನುಡಿಗಟ್ಟು) ಮತ್ತು ಪಾಡ್ದನಗಳ ಜ್ಞಾನ ಅಪಾರ. ಅದೇ ರೀತಿ, ಮಾಯಿಲ ಕುತ್ತಾರು ಅವರು ಕೊರಗಜ್ಜ ಮತ್ತು ಪಂಜಂದಾಯ ದೈವಗಳ ಆರಾಧನೆಯಲ್ಲಿ ಹಿರಿಯ ವ್ಯಕಿ. ಇಂತಹವರನ್ನು ಬಿಟ್ಟು ಪಡುಮಲೆ ಅವರನ್ನು ಆರಿಸಿದ್ದರ ಹಿಂದೆ ಶೈಕ್ಷಣಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳೇ ಹೆಚ್ಚಿವೆ ಎಂಬುದು ಸಾರ್ವಜನಿಕ ವಲಯದ ವಾದ.
ಜನಪದ ಕ್ಷೇತ್ರದಲ್ಲಿ ರವೀಶ್ ಅವರ ಮೌಲಿಕ ಕೊಡುಗೆಯನ್ನು ಯಾವ ಅಕಾಡೆಮಿ ಅಥವಾ ವಿಶ್ವವಿದ್ಯಾನಿಲಯ ಇದುವರೆಗೆ ದಾಖಲಿಸಿದೆ ಎಂಬ ಬಗ್ಗೆ ಸ್ಪಷ್ಟನೆಯಿಲ್ಲ. ವಿಶ್ವವಿದ್ಯಾನಿಲಯವು ತನ್ನ ಆಯ್ಕೆಯ ಮಾನದಂಡಗಳನ್ನು ಬಹಿರಂಗಪಡಿಸಬೇಕೆಂದು ಕರಾವಳಿಯ ಬುದ್ಧಿಜೀವಿಗಳು ಮತ್ತು ಸಾಂಸ್ಕೃತಿಕ ಚಿಂತಕರು ಆಗ್ರಹಿಸುತ್ತಿದ್ದಾರೆ.
ಡಾ. ರವೀಶ್ ಅವರು ಈಗಾಗಲೇ ಮಂಗಳೂರು ವಿಶ್ವವಿದ್ಯಾಲಯದಿಂದ ತಮ್ಮ ಪ್ರೌಢ ಪ್ರಬಂಧಕ್ಕಾಗಿ ಗೌರವ ಡಾಕ್ಟರೇಟ್ ಪಡೆದಿದ್ದರು. ಈಗ ಬೆಳ್ತಂಗಡಿಯ ಕಾಲೇಜೊಂದರಲ್ಲಿ ಸಹ ಪ್ರಾಧ್ಯಾಪಕರಾಗಿ ವೃತ್ತಿಯಲ್ಲಿದ್ದಾರೆ. ಅವರು ದೈವನರ್ತನವನ್ನೂ ಮುಂದುವರಿಸಿದ್ದಾರೆ.

