ಯುಗಾದಿಗೂ ಮುನ್ನವೇ ಸಿಲಿಕಾನ್ ಸಿಟಿಗೆ ವರುಣನ ಕೃಪೆ; ಆಲಿಕಲ್ಲು ಸಹಿತ ಭಾರಿ ಮಳೆ
x

ಯುಗಾದಿಗೂ ಮುನ್ನವೇ ಸಿಲಿಕಾನ್ ಸಿಟಿಗೆ ವರುಣನ ಕೃಪೆ; ಆಲಿಕಲ್ಲು ಸಹಿತ ಭಾರಿ ಮಳೆ

ಸಂಜೆಯಾಗುತ್ತಿದ್ದಂತೆ ನಗರದ ಹೆಬ್ಬಾಳ, ಸಂಜಯನಗರ, ಭೂಪಸಂದ್ರ ಹಾಗೂ ನಾಗಶೆಟ್ಟಿಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ.


Click the Play button to hear this message in audio format

ಬೇಸಿಗೆಯ ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಯುಗಾದಿ ಹಬ್ಬಕ್ಕೂ ಮುನ್ನವೇ ವರುಣದೇವ ತಂಪೆರೆದಿದ್ದಾನೆ. ಮಂಗಳವಾರ ಸಂಜೆಯಾಗುತ್ತಿದ್ದಂತೆ ಸಿಲಿಕಾನ್ ಸಿಟಿಯ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದ್ದು, ನಗರದಲ್ಲಿ 'ಕೂಲ್ ಕೂಲ್' ವಾತಾವರಣ ನಿರ್ಮಾಣವಾಗಿದೆ. ದಿನೇ ದಿನೇ ಏರುತ್ತಿದ್ದ ತಾಪಮಾನದಿಂದ ತತ್ತರಿಸಿದ್ದ ಜನತೆಗೆ ಹಾಗೂ ಬಿಸಿಲಿನಿಂದ ಬೆಂಡಾಗಿದ್ದ ಭೂಮಿಗೆ ಈ ಬೇಸಿಗೆ ಮಳೆಯು ದೊಡ್ಡ ಮಟ್ಟದ ನೆಮ್ಮದಿ ತಂದಿದೆ.


ಸಂಜೆಯಾಗುತ್ತಿದ್ದಂತೆ ನಗರದ ಹೆಬ್ಬಾಳ, ಸಂಜಯನಗರ, ಭೂಪಸಂದ್ರ ಹಾಗೂ ನಾಗಶೆಟ್ಟಿಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗಿದೆ. ಇದರ ಜೊತೆಗೆ ಕೆಂಗೇರಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿರುಸಿನ ಮಳೆ ಸುರಿದಿದ್ದರೆ, ರಿಚ್‌ಮಂಡ್ ಟೌನ್ ಹಾಗೂ ಅದರ ಆಸುಪಾಸಿನಲ್ಲಿ ಮಳೆಯ ಸಿಂಚನವಾಗಿದೆ. ಯಲಹಂಕ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ವರುಣನ ಆರ್ಭಟ ಕಂಡುಬಂದಿದೆ. ವಿಶೇಷವಾಗಿ ಯಲಹಂಕದ ಮೊದಲ ಮತ್ತು ಎರಡನೇ ಹಂತ, ಯಲಹಂಕ ನ್ಯೂ ಟೌನ್ ಹಾಗೂ ಅಟ್ಟೂರು ಭಾಗದಲ್ಲಿ ಭಾರಿ ಪ್ರಮಾಣದ ಆಲಿಕಲ್ಲು ಮಳೆಯಾಗಿರುವುದು ವರದಿಯಾಗಿದೆ.

ಮುಂದಿನ ನಾಲ್ಕು ದಿನ ಮಳೆ ಮುನ್ಸೂಚನೆ

ರಾಜಧಾನಿ ಸೇರಿದಂತೆ ರಾಜ್ಯದಾದ್ಯಂತ ಮಳೆಯ ವಾತಾವರಣ ಮುಂದುವರಿಯುವ ಲಕ್ಷಣಗಳಿವೆ. ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ರಾಜ್ಯದ ವಿವಿಧೆಡೆ ಅಲ್ಲಲ್ಲಿ ಗುಡುಗು ಹಾಗೂ ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಮೂಲಕ ಬೇಸಿಗೆಯ ಆರಂಭದಲ್ಲಿಯೇ ರಾಜ್ಯದ ಜನತೆಗೆ ತಂಪಾದ ಹವಾಮಾನದ ಅನುಭವ ಸಿಗುವ ನಿರೀಕ್ಷೆಯಿದೆ.

Read More
Next Story