Appointment of DHO to Excise Department: Opposition parties express widespread outrage over CMs order
x

ಸಿಎಂ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌

ಅಬಕಾರಿ ಇಲಾಖೆಗೆ ಡಿಎಚ್‌ಒ ನೇಮಕ: ಸಿಎಂ ಆದೇಶಕ್ಕೆ ವಿಪಕ್ಷಗಳ ಆಕ್ರೋಶ

ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿ ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿರುವುದು ಆಡಳಿತದ ಹಿಡಿತ ಕಳೆದುಕೊಂಡಿದ್ದಾರೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಶಾಸಕ ಸುನೀಲ್‌ ಕುಮಾರ್‌ ಟೀಕಿಸಿದ್ದಾರೆ.


Click the Play button to hear this message in audio format

ಅಬಕಾರಿ ಇಲಾಕೆಯ ವಿರುದ್ಧ ಕೇಳಿ ಬರುತ್ತಿರುವ ಸಾವಿರಾರು ಕೋಟಿ ಭ್ರಷ್ಟಾಚಾರ ಆರೋಪ ನಡುವೇಯೆ ಸಿಎಂ ಸಿದ್ದರಾಮಯ್ಯ ಜಿಲ್ಲಾ ಆರೋಗ್ಯ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತರನ್ನಾಗಿ ಮಾಡಿ ಆದೇಶ ಹೊರಡಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ರಾಜ್ಯದ ಗ್ರಾಮಾಂತರ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರುಗಳಿಲ್ಲದೆ ಜನ ಸಾಮನ್ಯರು ನರಳಾಡುವಂತಾಗಿದೆ. ಆದರೆ ಜಿಲ್ಲಾ ಆರೋಗ್ಯ ಅಧಿಕಾರಿಯನ್ನೇ ನಿಯಮಗಳಿಗೆ ವಿರುದ್ಧವಾಗಿ ಅಬಕಾರಿ ಇಲಾಖೆಗೆ ನೇಮಕ ಮಾಡಿರುವುದು ಸರಿಯಲ್ಲ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್‌) ನಲ್ಲಿ ಪ್ರತಿಕ್ರಿಯಿಸಿದ್ದು, "ಸರ್ಕಾರಿ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಸ್ವತಃ ಮುಖ್ಯಮಂತ್ರಿಗಳೇ ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಪತ್ರ ಬರೆದು ನಿರ್ದೇಶನ ನೀಡಿರುವುದು ಕಾಂಗ್ರೆಸ್‌ ಸರ್ಕಾರದಲ್ಲಿ ನಡೆಯುತ್ತಿರುವ ವರ್ಗಾವಣೆ ದಂಧೆ, ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಕಮಿಷನ್ ದಂಧೆಗೆ ಕನ್ನಡಿ ಹಿಡಿದಿದೆ" ಎಂದಿದ್ದಾರೆ.

ವರ್ಗಾವಣೆ ಹಿಂದಿನ ಉದ್ದೇಶವೇನು ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೂ, ಅಬಕಾರಿ ಇಲಾಖೆಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಅವರು, ಮೊದಲೇ ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿಂದ ಬಡ ರೋಗಿಗಳು ಪರದಾಡುತ್ತಿದ್ದಾರೆ. ಹೊಸ ನೇಮಕಾತಿಯೂ ನಡೆಯುತ್ತಿಲ್ಲ. ಈ ವೇಳೆ ಸೇವೆಯಲ್ಲಿರುವ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗ ಮಾಡುವ ಅನಿವಾರ್ಯತೆ, ಹಪಾಹಪಿ ಏಕೆ ? ಇದರ ಹಿಂದಿರುವ ನಿಜವಾದ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

ವರ್ಗಾವಣೆಗೆ ಶಿಫಾರಸ್ಸು ಮಾಡಿರುವ ಅಧಿಕಾರಿ ಡಾ. ಮೋಹನ್ ಕೃಷಿ ಸಚಿವ ಚಲುವರಾಯಸ್ವಾಮಿ ಸಂಬಂಧಿ ಎನ್ನಲಾಗುತ್ತಿದೆ. ಇದೇನು ಸರ್ಕಾರವೋ ಅಥವಾ ತುಘಲಕ್ ದರ್ಬಾರೋ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ಶಾಸಕ ಸುನೀಲ್‌ ಕುಮಾರ್‌ ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್‌) ನಲ್ಲಿ " ಮಂಡ್ಯ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಮೈಸೂರು ಗ್ರಾಮಾಂತರ ಜಿಲ್ಲೆ ಅಬಕಾರಿ ಡಿಸಿಯಾಗಿ ನಿಯೋಜಿಸುವಂತೆ ಖುದ್ದು ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದು ನಿರ್ದೇಶನ ನೀಡಿರುವುದು ಸಿದ್ದರಾಮಯ್ಯನವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆಯಾಗಿದೆ. ಇದು ಅಬಕಾರಿ ಹಾಗೂ ಆರೋಗ್ಯ ಇಲಾಖೆಯ ವೃಂದ ನಿಯಮಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಿಎಂ "ಇಂದ್ರೀಯ" ವಶವಾಗಿ ಆಡಳಿತದ ಹದ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಇದು ನಿದರ್ಶನವಾಗಿದೆ ಎಂದು ಹೇಳಿದ್ದಾರೆ.

ಒತ್ತಡ, ವ್ಯಾಮೋಹ ಕಾಡುತ್ತಿದೆಯೇ ?

ಅಬಕಾರಿ ಇಲಾಖೆಯಲ್ಲಿ ನಡೆದಿರುವ 6,000 ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ಹಾಗೂ ಕಿಕ್ ಬ್ಯಾಕ್ ದಂಧೆಯ ಹಿಂದೆ ಇಂಥ ಅವೈಜ್ಞಾನಿಕ ಹಾಗೂ ನಿಯಮ ಬಾಹಿರ ವರ್ಗಾವಣೆಯ ಸೂಚನೆಗಳು ಕೆಲಸ ಮಾಡಿರುವ ಸಾಧ್ಯತೆಗಳು ದಟ್ಟವಾಗಿದೆ. ಮುಖ್ಯಮಂತ್ರಿಗಳೇ ಆಯಕಟ್ಟಿನ ಇಲಾಖೆಗೆ ಮಾತ್ರ ನೀವು ಈ ರೀತಿ ಎರವಲು ಸೇವೆಯ ಶಿಫಾರಸು ಮಾಡುತ್ತೀರಾ ? ಅಥವಾ ನಿಮ್ಮಿಂದ ಮಾಡಿಸುತ್ತಾರಾ? ಆರೋಗ್ಯ ಇಲಾಖೆಯಲ್ಲಿ ವೈದ್ಯರ ಇಲ್ಲದೆ ಸಾರ್ವಜನಿಕರು ನರಳುತ್ತಿರುವಾಗ ಜಿಲ್ಲಾ ವೈದ್ಯಾಧಿಕಾರಿಯನ್ನು ಅಬಕಾರಿ ಇಲಾಖೆಗೆ ನಿಯೋಜನೆ ಮಾಡುವಂತೆ ನೀವೇ ನಿರ್ದೇಶನ ನೀಡುತ್ತೀರೆಂದರೆ ಅದೆಂತ ಒತ್ತಡ ಹಾಗೂ ವ್ಯಾಮೋಹ ನಿಮ್ಮನ್ನು ಕಾಡುತ್ತಿರಬಹುದು? ಅಥವಾ ಅಧಿಕಾರ ಹಸ್ತಾಂತರದ ಚಿಂತೆ ನಿಮ್ಮನ್ನು ಆವರಿಸಿದೆಯೋ ಎಂದು ಪ್ರಶ್ನಿಸಿದ್ದಾರೆ.

ಸಿಎಂ ಆದೇಶದಲ್ಲೇನಿದೆ ?

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ, "ಮಂಡ್ಯ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರನ್ನು ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರನ್ನಾಗಿ ನಿಯೋಜಿಸಲು ಸೂಚಿಸಿದೆ" ಎಂದು ತಿಳಿಸಿದ್ದಾರೆ.

Read More
Next Story