
ಸಿಎಂ ಸಿದ್ದರಾಮಯ್ಯ
ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂ. ಅನುದಾನ: ಸಿಎಂ ಸಿದ್ದರಾಮಯ್ಯ
ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸ್ಥಗಿತಗೊಳಿಸಿದ್ದ ಮಹತ್ವಾಕಾಂಕ್ಷೆಯ ಕೃಷಿ ಭಾಗ್ಯ ಯೋಜನೆಯನ್ನು ಮರು ಜಾರಿ ಮಾಡಿದ್ದು, ಯೋಜನೆಯಡಿ 200 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಶುಕ್ರವಾರ (ಫೆ.6) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು 2021-22ನೇ ಸಾಲಿನಲ್ಲಿ ಸ್ಥಗಿತಗೊಳಿಸಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮತ್ತೆ ಜಾರಿಗೆ ತಂದಿದ್ದು, 2025-26ನೇ ಸಾಲಿನ ಬಜೆಟ್‌ನಲ್ಲಿ ಕೃಷಿಭಾಗ್ಯ ಯೋಜನೆಯಡಿ 12,000 ಕೃಷಿ ಹೊಂಡಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
968 ಕೋಟಿ ರೂ. ಹಣ ವ್ಯಯ
ಈ ಯೋಜನೆಯನ್ನು 2014-15ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಗಿತ್ತು. 2014 ರಿಂದ 2021ರವರೆಗೆ ಒಟ್ಟು 968.37 ಕೋಟಿ ರೂ. ಗೂ ಅಧಿಕ ಹಣವನ್ನು ವ್ಯಯಿಸಲಾಗಿತ್ತು. 2024-25ನೇ ಸಾಲಿನಲ್ಲಿ 200 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
ಗ್ಯಾರೆಂಟಿಯಿಂದ ಸಮಾನ ಅವಕಾಶ
ನಮ್ಮ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರಿಗಾಗಿ ಮಾಡಿದ ಶಕ್ತಿ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಅತ್ಯಂತ ಪ್ರಮುಖವೆನಿಸಿವೆ. ಅಲ್ಲದೇ ಅನ್ನಭಾಗ್ಯ ಯೋಜನೆಗಳಿಂದ ಬಡವರು ಉಳಿತಾಯದಲ್ಲಿ ಹೂಡಿಕೆ ಮಾಡಬಹುದಾಗಿದೆ. ಎಲ್ಲರಿಗೂ ಸಮಾನ ಅವಕಾಶವನ್ನು ನೀಡುವ ಉದ್ದೇಶದಿಂದ ಈ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ" ಎಂದರು.
6 ಸಾವಿರ ಕೋಟಿ ಬೆಳೆ ವಿಮೆ ಪರಿಹಾರ
ರೈತರಿಗೆ ಉತ್ತಮವಾದ ಬಿತ್ತನೆ ಬೀಜ, ಗೊಬ್ಬರ, ಔಷದಿಗಳನ್ನು ಸರ್ಕಾರ ಒದಗಿಸುತ್ತಿದ್ದು, ಯಂತ್ರೋಪಕರಣಗಳ ಖರೀದಿಗೆ 1,500 ಕೋಟಿ ರೂ. ಸಹಾಯಧನವನ್ನು ನೀಡಲಾಗುತ್ತಿದೆ. ಈವರೆಗೆ 6,000 ಕೋಟಿ ರೂ. ವಿಮೆ ಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ. ಕಬ್ಬು, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುವುದಕ್ಕೆ ರೈತರು ಸೀಮಿತವಾಗುತ್ತಿದ್ದಾರೆ. ಆದರೆ ಬೆಳೆ ತೆಗೆದ ನಂತರ ಚಟುವಟಿಕೆಗಳಲ್ಲಿ ರೈತರು ನಿರತರಾಗಬೇಕು. ಕಬ್ಬು ಬೆಳೆ ರೈತರೊಂದಿಗೆ ಚರ್ಚಿಸಿ ಸಂಧಾನ ನಡೆಸಿ ಕಬ್ಬು ಬೆಳೆಗೆ ಬೆಲೆ ನಿಗದಿಪಡಿಸಲಾಯಿತು. ಅಂತೆಯೇ ತೊಗರಿ ಬೆಳೆಗೆ ಖರೀದಿ ಕೇಂದ್ರವನ್ನು ಒಂದು ತಿಂಗಳ ಮುಂಚೆಯೇ ತೆರೆದು ರೈತರಿಗೆ ಅನುಕೂಲ ಕಲ್ಪಿಸಲಾಯಿತು" ಎಂದು ತಿಳಿಸಿದರು.
ಮೆಕ್ಕೆ ಜೋಳ ಹೆಚ್ಚುವರಿ ಇಳುವರಿ ಬಂದಿದ್ದು 54 ಲಕ್ಷ ಮೆ. ಟನ್ ಉತ್ಪಾದನೆಯಾಗಬಹುದಾಗಿದೆ. ಆದ್ದರಿಂದ ಕೇಂದ್ರ ಕ್ವಿಂಟಾಲ್ ವೊಂದಕ್ಕೆ 2400 ರೂ. ನಿಗದಿಪಡಿಸಿದ್ದು, ಮೆಕ್ಕೆಜೋಳ ಬಳಸುವ ಕಾರ್ಖಾನೆಗಳು, ಎಥನಾಲ್ ತಯಾರಕರೊಂದಿಗೆ ಚರ್ಚೆ ನಡೆಸಿ, 40 ಲಕ್ಷ ಮೆ.ಟನ್ ಮೆಕ್ಕೆಜೋಳ ಖರೀದಿಗೆ ಅನುವು ಮಾಡಿಕೊಡಲಾಯಿತು ಎಂದು ಹೇಳಿದರು.
ಉಪ ಉತ್ಪನ್ನಗಳ ಅಭಿವೃದ್ಧಿಯಾಗಲಿ
ರಾಜ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೆ ಎಂದಿಗೂ ಬೆಂಬಲವಾಗಿ ನಿಂತಿದೆ. ಕೃಷಿ ಲಾಭದಾಯಕವಾಗಿಸಲು ಹಾಗೂ ಕೃಷಿಕರ ಸಬಲೀಕರಣವನ್ನು ಸಾಧಿಸಲು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೃಷಿ ಹಾಗೂ ಉತ್ಪಾದನೋತ್ತರ ಚಟುವಟಿಕೆಗಳಲ್ಲಿ ರೈತರು ತೊಡಗಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕಗೊಳಿಸಬಹುದಾಗಿದೆ. ರೈತರು ಉದ್ಯಮಿಗಳಾಗಬೇಕು . ಉತ್ಪನ್ನಗಳನ್ನು ಬೆಳೆಯುವ ಜೊತೆಗೆ, ಸಂಗ್ರಹಣೆ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರುಕಟ್ಟೆ , ಉಪ ಉತ್ಪನ್ನಗಳ ಅಭಿವೃದ್ಧಿಯಲ್ಲಿ ರೈತರು ನಿರತರಾಗಬೇಕಿದೆ. ಕೃಷಿಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಕೊಳ್ಳುವುದು ಅಗತ್ಯ ಎಂದರು.
ಯುವಜನತೆ ಕೃಷಿಯತ್ತ ಮುಖ ಮಾಡಲಿ
ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಶೇ.80 ರಷ್ಟು ಜನ ಕೃಷಿಯನ್ನು ಅವಲಂಬಿಸಿದ್ದರು. ಈಗ ಈ ಪ್ರತಿಶತ ಶೇ. 62 ಕ್ಕೆ ಇಳಿದಿದೆ. ಕೃಷಿಯಲ್ಲಿ ಉತ್ಪಾದನೋತ್ತರ ಕಾರ್ಯಗಳನ್ನು ಕೈಗೊಂಡಾಗ ಮಾತ್ರ ಕೃಷಿ ಲಾಭದಾಯಕವಾಗುತ್ತದೆ ಎಂದು ಹೇಳಿದರು.
ರಾಜ್ಯಗಳ ಸಮ್ಮತಿಯಿಲ್ಲದೆ ಕಾಯ್ದೆ ಜಾರಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಈ ಹಿಂದೆ ಮನರೇಗಾ ಯೋಜನೆಯನ್ನು ಜಾರಿಗೊಳಿಸಿತ್ತು. ಇದರಡಿ ಮಹಿಳೆಯರು, ಅದಿವಾಸಿಗಳು, ಕಾರ್ಮಿಕರಿಗೆ ಉದ್ಯೋಗ ನೀಡುವ ಉತ್ತಮ ಯೋಜನೆಯಾಗಿದ್ದು, ಗ್ರಾಮಸಭೆಗಳಲ್ಲಿ ಕಾಮಗಾರಿಗಳು ನಿರ್ಧಾರವಾಗುತ್ತಿತ್ತು. ಆದರೆ ಈ ಅಧಿಕಾರವು ಈಗ ಕೇಂದ್ರ ಸರ್ಕಾರದ ಕೈಯಲ್ಲಿದ್ದು, ಅವರ ನಿರ್ಧರಿಸಿದಂತೆ ಕಾಮಗಾರಿ, ಅನುದಾನ ನೀಡಲಾಗುತ್ತದೆ. ರಾಜ್ಯದ ರೈತರೆಲ್ಲರೂ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಿ, ವಿಬಿ ಜಿ ರಾಮ್ ಜಿ ಯೋಜನೆಯನ್ನು ತಿರಸ್ಕರಿಸಬೇಕು ಎಂಬು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ರೈತರು ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಲಿ
ಮನರೇಗಾ ಅಡಿಯಲ್ಲಿ ಕಾರ್ಮಿಕರ ವೇತನ ಪೂರ್ತಿಯಾಗಿ ಕೇಂದ್ರವೇ ನೀಡುತ್ತಿತ್ತು. ಆದರೆ ಈಗ ಕೇಂದ್ರ ಕೇವಲ ಶೇ. 60 ಅನುದಾನ ನೀಡುತ್ತಿದ್ದು, ರಾಜ್ಯಗಳು ಶೇ.40 ರಷ್ಟನ್ನು ಭರಿಸಬೇಕಾಗಿದೆ. ಹಿಂದೆ 100 ದಿನ ಕೆಲಸದ ದಿನಗಳನ್ನು ಖಾತ್ರಿಪಡಿಸುತ್ತಿತ್ತು. ರಾಜ್ಯ ಸರ್ಕಾರಗಳ ಅಂಗೀಕಾರವಿಲ್ಲದೇ, ಮನರೇಗಾವನ್ನು ರದ್ದುಪಡಿಸಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಲ್ಲಿನ ಮಹಾತ್ಮಾ ಗಾಂಧಿ ಹೆಸರನ್ನು ತೆಗೆಯಲಾಗಿದೆ. ರಾಜ್ಯದ ರೈತರು ಒಕ್ಕೊರಲಿನಿಂದ ನೂತನ ಯೋಜನೆಯನ್ನು ವಿರೋಧಿಸಬೇಕೆಂದರು.

