
ಸಿದ್ದರಾಮಯ್ಯ
Union Budget- 2026| ಇದು ಕೇಂದ್ರ ಬಜೆಟ್ ಅಲ್ಲ, ಕಾರ್ಪೊರೇಷನ್ ಬಜೆಟ್- ಸಿಎಂ ಲೇವಡಿ
ಆರೋಗ್ಯ ವಲಯಕ್ಕೆ ಕಳೆದ ವರ್ಷ 25,171 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. 2026-27 ಕ್ಕೆ ಒಂದು ನಯಾಪೈಸೆಯಷ್ಟೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯಾವುದೇ ಆರ್ಥಿಕ ದೂರದೃಷ್ಟಿ, ಗೊತ್ತು ಗುರಿಯಿಲ್ಲದ ಬಜೆಟ್ ಮಂಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಕಲಬುರಗಿಯಲ್ಲಿ ಭಾನುವಾರ ಕೇಂದ್ರ ಬಜೆಟ್ ಕುರಿತು ಮಾಧ್ಯಮಗೋಷ್ಠಿ ಉದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮತ್ತು ದಕ್ಷಿಣ ಭಾರತವನ್ನು ಕೇಂದ್ರ ಬಜೆಟ್ ನಿರ್ಲಕ್ಷಿಸಿದೆ. ವಿಕಸಿತ ಭಾರತದ ಸಂಕಲ್ಪವು ನಾಲಿಗೆ ಮೇಲಿನ ಮಾತಾಗಿದೆಯೇ ಹೊರತು ಕೃತಿಗಿಳಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
2025-26 ರಲ್ಲಿ ಬಜೆಟ್ ಗಾತ್ರ 50,65,345 ಕೋಟಿ ರೂ.ಗಳಾಗಿತ್ತು. ಪರಿಷ್ಕೃತ ಅಂದಾಜು 49,64,842 ಕೋಟಿ ರೂ.ಗಳಿಗೆ ಇಳಿಕೆಯಾಗಿತ್ತು. ಸುಮಾರು 1 ಲಕ್ಷ ಕೋಟಿಗೂ ಕಡಿಮೆ ಗಾತ್ರಕ್ಕೆ ಬಜೆಟ್ ಪರಿಷ್ಕರಿಸಲಾಯಿತು. 2025-26 ರಲ್ಲಿ ರೂ. 28.37 ಲಕ್ಷ ಕೋಟಿ ನಿವ್ವಳ ತೆರಿಗೆ ಆದಾಯ ಇರಲಿದೆ ಎಂದು ಅಂದಾಜು ಮಾಡಿದ್ದರು. ಕೇಂದ್ರವು ಸ್ವೀಕರಿಸುವ ತೆರಿಗೆ ಆದಾಯ 27.3 ಲಕ್ಷ ಕೋಟಿ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿತ್ತು. ಜಿಡಿಪಿ ಸಾಲದ ದರ ಶೇ.55 ರಷ್ಟು ಇರಲಿದೆ. ವಿತ್ತೀಯ ಕೊರತೆ ಶೇ. 4.3 ರಷ್ಟಿರಲಿದೆ ಎಂದು ಹೇಳಲಾಗಿತ್ತು. ಆದರೆ ರಕ್ಷಣಾ ವಲಯ ಸೇರಿದಂತೆ ಅನೇಕ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಕಡಿಮೆ ಇಡಲಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.
2025-26ರ ಬಜೆಟ್‌ನಲ್ಲಿ ರಾಜ್ಯಗಳಿಗೆ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ 5.41 ಲಕ್ಷ ಕೋಟಿ ರೂ. ನೀಡುವ ಭರವಸೆ ಕೊಟ್ಟಿದ್ದರು. ಆದರೆ, ಈಗ 4.2 ಲಕ್ಷ ಕೋಟಿಗೆ ಇಳಿಸಿದ್ದು, ಸುಮಾರು 1.21 ಲಕ್ಷ ಕೋಟಿ ಕಡಿಮೆ ಮಾಡಲಾಗಿದೆ. ಇದು ನನ್ನ ರಾಜಕೀಯ ಜೀವನದ ಅತ್ಯಂತ ನಿರಾಶಾದಾಯಕ ಬಜೆಟ್. ಕೇಂದ್ರದ ಬಜೆಟ್ ದೊಡ್ಡ ನಗರಗಳ ಕಾರ್ಪೊರೇಷನ್ ಬಜೆಟ್ಗಳಿಗಿಂತ ಮೇಲೆ ಹೋಗಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕಕ್ಕೆ ಚೊಂಬು ಕೊಟ್ಟ ಬಜೆಟ್
ಕರ್ನಾಟಕಕ್ಕೆ ಏನೂ ಸಿಗಲಿಲ್ಲ. ಯಥಾ ಪ್ರಕಾರ ಚೊಂಬು ಕೊಟ್ಟಿದ್ದಾರೆ. ಇಡೀ ದಕ್ಷಿಣ ಭಾರತಕ್ಕೂ ಏನೂ ಸಿಗಲಿಲ್ಲ. ಬೆಂಗಳೂರು- ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಎರಡು ಹೈ ಸ್ಪೀಡ್ ರೈಲುಗಳನ್ನು ಕೊಡುವುದಾಗಿ ಘೋಷಿಸಿದ್ದಾರೆ. ಆ ಎರಡರಿಂದ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ. ಅತಿ ಹೆಚ್ಚಿನ ಕಿ. ಮೀ ಸಂಚರಿಸುವುದಿಲ್ಲ. ನಮಗೆ ನಿಜವಾಗಿಯೂ ಬೆಂಗಳೂರು- ಮುಂಬೈ, ಬೆಂಗಳೂರು ಮಂಗಳೂರಿಗೆ ರೈಲು ಯೋಜನೆ ರೂಪಿಸಬೇಕಿತ್ತು. ಆಗ ಅನುಕೂಲ ಆಗುತ್ತಿತ್ತು ಎಂದು ಸಿಎಂ ಹೇಳಿದ್ದಾರೆ.
ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅದೇ ಸವಕಲು ಪದಗಳಿಂದ ತುಂಬಿತ್ತು. ಕೇಂದ್ರ ಸರ್ಕಾರವು ದೇಶದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದಿಕ್ಕೂಚಿಯಿಲ್ಲದೆ ಕಂಗಾಲಾಗಿರುವ ಕುರುಹುಗಳು ಬಜೆಟ್ನಲ್ಲಿ ಕಾಣಿಸುತ್ತಿವೆ. ನಮ್ಮಿಂದ ಈ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ, ಸಂಪೂರ್ಣ ದಣಿದಿದ್ದೇವೆ ಎಂಬುದನ್ನು ಸಾಬೀತುಪಡಿಸುವ ಬಜೆಟ್ ಇದಾಗಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರ ದಣಿದಿದೆ
ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ದಣಿದಿದೆ. ಅವರಿಗೆ 13 ನೇ ಬಜೆಟ್ ನಲ್ಲಿ ಗಾಂಧೀಜಿ ಹಾಗೂ ಕಾಂಗ್ರೆಸ್ ಆಶಯಗಳು ಸರಿಯಾಗಿವೆ ಎಂಬುದು ಅರ್ಥವಾಗಿರುವಂತಿದೆ. ಮೊದಲ ಬಾರಿಗೆ ಬೌದ್ಧರ ಐತಿಹಾಸಿಕ ಸ್ಥಳಗಳು ನೆನಪಾಗಿವೆ.
ರೂಪಾಯಿ ಮೌಲ್ಯ ಕುಸಿತವಾಗುತ್ತಿದ್ದರೂ ಅದನ್ನು ಸರಿ ಮಾಡುವ ಕುರಿತು ಒಂದೇ ಒಂದು ಮಾತು ಇಲ್ಲ. ವಿದೇಶಿ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ. ಆಮದು ಹೆಚ್ಚಾಗುತ್ತಿದೆ. ರಫ್ತು ಕಡಿಮೆಯಾಗುತ್ತಿದೆ. ಇದನ್ನು ಹೇಗೆ ಸರಿಪಡಿಸಬೇಕು ಎಂಬುದರ ಪ್ರಸ್ತಾಪ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಬಜೆಟ್ ನಲ್ಲಿ ಯೂರಿಯಾ ಸಬ್ಸಿಡಿಯನ್ನು 1.26 ಲಕ್ಷ ಕೋಟಿಯಿಂದ 1.16 ಲಕ್ಷ ಕೋಟಿಗೆ ಕಡಿತಗೊಳಿಸಲಾಗಿದೆ. ನ್ಯೂಟ್ರಿಯೆಂಟ್ ಬೇಸ್ಟ್ ಕಾರ್ಯಕ್ರಮಕ್ಕೆ 60 ಸಾವಿರದಿಂದ 54 ಸಾವಿರಕ್ಕೆ ಕಡಿತಗೊಳಿಸಿದ್ದಾರೆ.
ರಕ್ಷಣಾ ವಲಯಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇವೆಂದು ಹೇಳಿದ್ದ ಮೋದಿ ಸರ್ಕಾರ, ಏರ್ ಕ್ರಾಫ್ಟ್ ವಿಭಾಗಕ್ಕೆ ರೂ. 72780 ಕೋಟಿಯಿಂದ 63734 ಕೋಟಿ ಕಡಿತಗೊಳಿಸಿದೆ. ಪರಿಸರ ಮಾಲಿನ್ಯಕ್ಕೆ ಕಳೆದ ವರ್ಷ 1300 ಕೋಟಿ ರೂ. ಇಟ್ಟಿದ್ದರೆ, ಈ ವರ್ಷ 1091 ಕೋಟಿ ರೂ. ಮೀಸಲಿರಿಸಿದೆ. ರಾಷ್ಟ್ರೀಯ ಭದ್ರತಾ ತಂತ್ರಜ್ಞಾನಕ್ಕೆ ಕಳೆದ ವರ್ಷ 31631 ಕೋಟಿ ಇಟ್ಟಿದ್ದರೆ, ಈ ವರ್ಷ ರೂ.9800 ಕೋಟಿಗೆ ಇಳಿದಿದೆ ಎಂದು ಅಂಕಿ ಅಂಶ ತೆರೆದಿಟ್ಟಿದ್ದಾರೆ.
ರಫಿಗೆ ಉತ್ತೇಜನ ಕೊಡುವ ದೃಷ್ಟಿಯಿಂದ ಕಳೆದ ಬಜೆಟ್ನಲ್ಲಿ ರಫ್ತು, ಉತ್ಪನ್ನಗಳ ಮೇಲಿನ ತೆರಿಗೆ ವಿನಾಯತಿ 18,233 ಕೋಟಿ ರೂ. ಇಟ್ಟಿದ್ದರೆ, ಈ ಬಾರಿ ಕೇವಲ 10 ಸಾವಿರ ಕೋಟಿಗೆ ಇಳಿಸಿದ್ದಾರೆ. ಇದು ಮೋದಿ ಸರ್ಕಾರದ ದೂರದೃಷ್ಟಿ ಇಲ್ಲದ ಬಜೆಟ್ ಎನ್ನುವುದಕ್ಕೆ ನಿದರ್ಶನ ಎಂದು ಹೇಳಿದ್ದಾರೆ.
ವಿಬಿ ಜಿ ರಾಮ್ ಜಿ ಯೋಜನೆಗೆ 95,692 ಕೋಟಿ ರೂ. ಇಡಲಾಗಿದೆ. ವಿಜಿಎಫ್ ವಯಾ ಗ್ಯಾಪ್ ಫಂಡಿಂಗ್ ಮೂಲಕ ಹಾಸ್ಟೆಲ್ ನಿರ್ಮಿಸುವುದಾಗಿ ಹೇಳಿದ್ದಾರೆ. ಆದರೆ, ಅದಕ್ಕೆ ಅನುದಾನ ಒದಗಿಸಿಲ್ಲ. ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪವಿಲ್ಲ. ತೆಂಗು ಬೆಳೆಗಾರರಿಗೆ ಆದ್ಯತೆ ನೀಡುವುದಾಗಿ ಘೋಷಿಸಿದ್ದಾರೆ. ಆದರೆ, ಅದಕ್ಕೂ ಅನುದಾನ ಒದಗಿಸಿಲ್ಲ ಎಂದು ಕಿಡಿಕಾರಿದ್ದಾರೆ.
ಬಜೆಟ್‌ನಲ್ಲಿ ಹಲವು ಬಾರಿ ಇಂಡಿಯಾ ಎಐ ಮಿಷನ್ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಕಳೆದ ಬಜೆಟ್ ನಲ್ಲಿ ಇದಕ್ಕಾಗಿ 2000 ಕೋಟಿ ರೂ. ಒದಗಿಸಿದ್ದರೆ, ಈ ಬಾರಿ ಅದನ್ನು 1000 ಕೋಟಿ ರೂ.ಗೆ ಇಳಿಸಿದ್ದಾರೆ. ಬೆಂಗಳೂರು ಮೆಟ್ರೋ, ಸಬರ್ಬನ್ ರೈಲುಗಳ ಕುರಿತು ಯಾವುದೇ ಉಲ್ಲೇಖಗಳಿಲ್ಲ. ಒಟ್ಟಾರೆ ಈ ಬಜೆಟ್ ಯಾವುದೇ ದೂರದೃಷ್ಟಿ ಹೊಂದಿಲ್ಲ.
ಆರೋಗ್ಯ ಇಲಾಖೆಗೆ ನಯಾಪೈಸೆ ಇಲ್ಲ
ಆರೋಗ್ಯ ವಲಯಕ್ಕೆ ಕಳೆದ ವರ್ಷ 25,171 ಕೋಟಿ ರೂ. ಅನುದಾನ ಒದಗಿಸಲಾಗಿತ್ತು. 2026-27 ಕ್ಕೆ ಒಂದು ನಯಾಪೈಸೆಯಷ್ಟೂ ಕೊಟ್ಟಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕವು ದೇಶದ ಜಿಡಿಪಿಗೆ 8.7 ರಷ್ಟು ಕೊಡುಗೆ ನೀಡುತ್ತಿದೆ. ತಲಾವಾರು ತೆರಿಗೆ ಸಂಗ್ರಹದಲ್ಲಿ ಮೊದಲ ಸ್ಥಾನದಲ್ಲಿದೆ. 14ನೇ ಹಣಕಾಸು ಆಯೋಗದಿಂದ 1.25 ಲಕ್ಷ ಕೋಟಿ ರೂ. ನಷ್ಟವಾಯಿತು. ಜಿಎಸ್ಟಿ ಪರಿಹಾರದಲ್ಲಿ ಪ್ರತಿ ವರ್ಷ 20 ಸಾವಿರ ಕೋಟಿ ರೂ. ನಷ್ಟವಾಗುತ್ತಿದೆ. ಇಷ್ಟಿದ್ದರೂ ಕೂಡ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದ್ದಾರೆ.
16ನೇ ಹಣಕಾಸು ಆಯೋಗದಲ್ಲೂ ಅನ್ಯಾಯ
16 ನೇ ಹಣಕಾಸು ಆಯೋಗದ ಶಿಫಾರಸುಗಳಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. 14 ನೇ ಹಣಕಾಸು ಆಯೋಗದ ವರದಿಯಲ್ಲಿ ರಾಜ್ಯಕ್ಕೆ ಶೇ. 4.71 ರಷ್ಟು ತೆರಿಗೆ ಪಾಲು ಸಿಕ್ಕಿತ್ತು. 15ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.64 ಕ್ಕೆ ಇಳಿದ ಕಾರಣ ನಮಗೆ ಶೇ.23 ರಷ್ಟು ನಷ್ಟವಾಗಿತ್ತು. ಈ ಕಾರಣದಿಂದ ರಾಜ್ಯಕ್ಕೆ ಕನಿಷ್ಟ 14ನೇ ಹಣಕಾಸು ಆಯೋಗ ಕೊಟ್ಟ ತೆರಿಗೆ ಪಾಲಿಗಿಂತ ಹೆಚ್ಚಿನ ಪಾಲು ಕೊಟ್ಟರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ಹೇಳಿದ್ದೆವು. ಹಲವು ಬಾರಿ ಚರ್ಚಿಸಿ ಮನವಿ ಸಲ್ಲಿಸಿದ್ದೆವು. ಆದರೆ, ನಾವು ನಿರೀಕ್ಷಿಸಿದ ಫಲಿತಾಂಶ ನಮಗೆ ಸಿಕ್ಕಿಲ್ಲ. 16 ನೇ ಹಣಕಾಸು ಆಯೋಗವು ಶೇ.4.131 ರಷ್ಟು ಪಾಲನ್ನು ನಮಗೆ ಹಂಚಿಕೆ ಮಾಡಿದೆ. 14 ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ ಇನ್ನೂ ಶೇ. 0.58 ರಷ್ಟು ಕಡಿಮೆಯಾಗಿದೆ ಎಂದು ದೂರಿದ್ದಾರೆ.
15ನೇ ಹಣಕಾಸು ಆಯೋಗವು ತೆರಿಗೆ ಪಾಲಿನಲ್ಲಿ ಸ್ವಲ್ಪ ಹೆಚ್ಚಿಗೆ ಕೊಟ್ಟಂತೆ ಮಾಡಿ ಪ್ರಕೃತಿ ವಿಕೋಪ ನಿಧಿಯಡಿ ಅನ್ಯಾಯ ಮಾಡಿದ್ದಾರೆ. ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಕೂಡ ನಾವು ನಿರೀಕ್ಷಿಸಿದಷ್ಟು ಕೊಟ್ಟಿಲ್ಲ. ನೀರಾವರಿ ಯೋಜನೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ, ಬೆಂಗಳೂರು ಅಭಿವೃದ್ಧಿ, ಮಲೆನಾಡು-ಕರಾವಳಿ ಅಭಿವೃದ್ಧಿಗೆ ವಿಶೇಷ ನೆರವು ಕೋರಿದ್ದೆವು. ಈ ಕುರಿತಂತೆ ಯಾವುದೇ ಶಿಫಾರಸ್ಸುಗಳಿಲ್ಲ ಎಂದು ಹೇಳಿದ್ದಾರೆ.
ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇ.41 ರಿಂದ ಶೇ.50 ಕ್ಕೆ ಹೆಚ್ಚಿಸಬೇಕೆಂದು ಒತ್ತಾಯಿಸಿದ್ದೆವು. (ಶೇ.41 ರಷ್ಯನ್ನೆ ಉಳಿಸಿದ್ದಾರೆ.) ಬೆಂಗಳೂರಿಗೆ ರೂ. 27093 ಕೋಟಿ ಹಾಗೂ ಉಳಿದ ಭಾಗಗಳಿಗೆ ಅನುದಾನ ಘೋಷಿಸುವಂತೆ ಕೇಳಿದ್ದೆವು. ಸೆಸ್ ಅನ್ನು ಶೇ.5ಕ್ಕೆ ಮಿತಿಗೊಳಿಸುವಂತೆ ಕೇಳಿದ್ದೆವು. ಈ ಒತ್ತಾಯಗಳನ್ನು ಹಣಕಾಸು ಆಯೋಗವು ಪರಿಗಣಿಸದಿರುವುದು ದುರದೃಷ್ಟಕರ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

