ರೈಲ್ವೆ ಪರೀಕ್ಷೆ ರದ್ದು, ಕನ್ನಡಿಗರಿಗೆ ಅನ್ಯಾಯ: ಹಿಂದಿ ಹೇರಿಕೆ ವಿರುದ್ಧ ಸಿಎಂ ಗುಡುಗು
x
ಸಿಎಂ ಸಿದ್ದರಾಮಯ್ಯ

ರೈಲ್ವೆ ಪರೀಕ್ಷೆ ರದ್ದು, ಕನ್ನಡಿಗರಿಗೆ ಅನ್ಯಾಯ: ಹಿಂದಿ ಹೇರಿಕೆ ವಿರುದ್ಧ ಸಿಎಂ ಗುಡುಗು

ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿಯಲ್ಲಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯಿಂದಾಗಿ ಕನ್ನಡಿಗ ಉದ್ಯೋಗಾಕಾಂಕ್ಷಿಗಳು ಮೊದಲಿಂದಲೂ ಅನ್ಯಾಯಕ್ಕೆ ತುತ್ತಾಗುತ್ತಾ ಬಂದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.


Click the Play button to hear this message in audio format

ನೈರುತ್ಯ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದಲ್ಲಿ ಕನ್ನಡಿಗರಿಗೆ ಕನ್ನಡದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಿ, ಕೊನೆಗಳಿಗೆಯಲ್ಲಿ ಪರೀಕ್ಷೆಯನ್ನೇ ದಿಢೀರ್ ರದ್ದುಪಡಿಸಿರುವ ಕೇಂದ್ರ ಸರ್ಕಾರದ ನಡೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ಇದೊಂದು ಭಾಷಾ ದಬ್ಬಾಳಿಕೆ ಹಾಗೂ ಹಿಂದಿ ಹೇರಿಕೆಯ ಕುಟಿಲತನ ಎಂದು ಬಣ್ಣಿಸಿರುವ ಅವರು, ಇದರಿಂದ ಕನ್ನಡಿಗ ಉದ್ಯೋಗಾಕಾಂಕ್ಷಿಗಳಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೈರುತ್ಯ ರೈಲ್ವೆ ಇಲಾಖೆಯ 194 ಗೂಡ್ಸ್‌ ರೈಲು ಮ್ಯಾನೇಜರ್‌ ಹಾಗೂ ಹುಬ್ಬಳ್ಳಿ ವಿಭಾಗದ 101 ಎಲ್‌ಡಿಸಿಇ ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ಪರೀಕ್ಷೆಗಳು ನಡೆಯಬೇಕಿತ್ತು. ಆದರೆ, ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಭ್ಯರ್ಥಿಗಳ ಶಾಂತಿಯುತ ಪ್ರತಿರೋಧವನ್ನು ಆರಂಭದಿಂದಲೂ ನಿರ್ಲಕ್ಷಿಸುತ್ತಾ ಬಂದಿದ್ದ ರೈಲ್ವೆ ಇಲಾಖೆ, ಪ್ರತಿಭಟನೆಯ ಕಾವು ಹೆಚ್ಚಾದ ಕೂಡಲೇ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲು ಕೊನೆ ಕ್ಷಣದಲ್ಲಿ ಪರೀಕ್ಷೆಯನ್ನೇ ರದ್ದುಪಡಿಸಿ ಗೊಂದಲ ಸೃಷ್ಟಿಸಿದೆ. ಇದರಿಂದ ಕನ್ನಡಿಗ ಉದ್ಯೋಗಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ ಎಂದು ಮುಖ್ಯಮಂತ್ರಿಗಳು ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ನೈರುತ್ಯ ರೈಲ್ವೇ ಇಲಾಖೆಯ 194 ಗೂಡ್ಸ್‌ ರೈಲು ಮ್ಯಾನೇಜರ್‌ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದಲ್ಲಿ ಎಲ್‌ಡಿಸಿಇ 101 ಹುದ್ದೆಗಳಿಗೆ ಮುಂಬಡ್ತಿ ನೀಡುವ ಸಂಬಂಧ ಇಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಕನ್ನಡಿಗರು ಹಾಗೂ ಕನ್ನಡ ಸಂಘಟನೆಗಳ ಭಾರೀ ವಿರೋಧದ ತರುವಾಯ ರೈಲ್ವೇ ಇಲಾಖೆಯು ದಿಢೀರನೇ ರದ್ದುಪಡಿಸಿ ಕನ್ನಡಿಗ ಉದ್ಯೋಗಿಗಳನ್ನು ಅತಂತ್ರ…

ಕೇಂದ್ರದ ವಿವಿಧ ಇಲಾಖೆಗಳ ಉದ್ಯೋಗ ಭರ್ತಿಯಲ್ಲಿ ಹಿಂದಿ ಮತ್ತು ಇಂಗ್ಲಿಷ್‌ಗೆ ಮಾತ್ರ ಅವಕಾಶ ನೀಡುವ ಮೂಲಕ ಉತ್ತರ ಭಾರತದ ಹಿಂದಿ ಭಾಷಿಗರಿಗೆ ನೆರವಾಗುವ ಏಕೈಕ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಇದು ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಮುಂದುವರಿದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಇದೇ ವೇಳೆ, ರೈಲ್ವೆ ಖಾತೆ ರಾಜ್ಯ ಸಚಿವರಾಗಿರುವ ಕನ್ನಡಿಗ ವಿ. ಸೋಮಣ್ಣ ಅವರ ವಿರುದ್ಧವೂ ಅಸಮಾಧಾನ ಹೊರಹಾಕಿರುವ ಸಿಎಂ, ಸೋಮಣ್ಣನವರು ರಾಜ್ಯದ ಪರವಾಗಿ ನಿಂತು ಅನ್ಯಾಯವನ್ನು ಸರಿಪಡಿಸುತ್ತಾರೆ ಎಂಬ ತಮ್ಮ ನಂಬಿಕೆ ಹುಸಿಯಾಗಿದೆ ಎಂದಿದ್ದಾರೆ. ರೈಲ್ವೆ ಇಲಾಖೆ ಇರುವುದೇ ಕರ್ನಾಟಕಕ್ಕಾಗಿ ಎಂಬಂತೆ ಮಾತಿನ ಅರಮನೆ ಕಟ್ಟುವುದನ್ನು ಬಿಟ್ಟು, ಸೋಮಣ್ಣನವರು ಕರ್ನಾಟಕದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಭಾರತವು ಭಾಷೆಗಳ ಆಧಾರದ ಮೇಲೆ ರಚನೆಯಾಗಿರುವ ರಾಜ್ಯಗಳ ಒಕ್ಕೂಟ ಎಂಬುದನ್ನು ಮರೆಯಬಾರದು. ಹಿಂದಿ ಭಾಷೆಯ ಬಗ್ಗೆ ನಮ್ಮ ವಿರೋಧವಿಲ್ಲ, ಆದರೆ ಅದನ್ನು ಕನ್ನಡದ ಮೇಲೆ ಹೇರುವುದನ್ನು ಖಂಡಿತಾ ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಮುಖ್ಯಮಂತ್ರಿಗಳು, ಕನ್ನಡಿಗರು ಉದ್ಯೋಗ ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆ ಬೇಡುತ್ತಿಲ್ಲ, ಬದಲಾಗಿ ತಾವು ಶಿಕ್ಷಣ ಪಡೆದ ಭಾಷೆಯಲ್ಲಿಯೇ ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆಳುವ ಪಕ್ಷದ ಸಂಸದರು ಮುಲಾಜಿಗೆ ಬಿದ್ದು ಬಾಯಿ ಮುಚ್ಚಿಕೊಂಡಿದ್ದರೂ, ಕನ್ನಡಿಗರು ಜಾಗೃತರಾಗಿದ್ದಾರೆ ಎಂದು ಎಚ್ಚರಿಸಿದ್ದಾರೆ.

ಭವಿಷ್ಯದಲ್ಲಿ ಇಂತಹ ಭಾಷಾ ತಾರತಮ್ಯ ಮರುಕಳಿಸದಂತೆ ಪ್ರಧಾನಿ ನರೇಂದ್ರ ಮೋದಿಯವರೇ ಖುದ್ದಾಗಿ ಮಧ್ಯಪ್ರವೇಶಿಸಿ ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಹಾಗೂ ರದ್ದುಪಡಿಸಿರುವ ಪರೀಕ್ಷೆಯನ್ನು ಶೀಘ್ರವೇ ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿ ಮರು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Read More
Next Story