
ರಂಜಾನ್ ಸಂಭ್ರಮ: ಮುಸ್ಲಿಂಮರಿಗೆ ಶುಭಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಮಾಜದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಜೀವನ ನಡೆಸಬೇಕು ಎಂದು ಅವರು ನೆರೆದಿದ್ದ ಭಕ್ತಾದಿಗಳಿಗೆ ಕಿವಿಮಾತು ಹೇಳಿದರು.
ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿರುವ ಪವಿತ್ರ ರಂಜಾನ್ (ಈದ್ ಉಲ್ ಫಿತ್ರ್) ಹಬ್ಬದ ಪ್ರಯುಕ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಸಮಸ್ತ ಮುಸ್ಲಿಂರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಆಯೋಜಿಸಲಾಗಿದ್ದ ಈದ್ ಉಲ್ ಫಿತ್ರ್ ಸಾಮೂಹಿಕ ಪ್ರಾರ್ಥನೆಯಲ್ಲಿ ಖುದ್ದಾಗಿ ಪಾಲ್ಗೊಂಡ ಅವರು, ನಾಡಿನ ಶಾಂತಿ, ಸಮೃದ್ಧಿ ಹಾಗೂ ಮನುಕುಲದ ಒಳಿತಿಗಾಗಿ ಪ್ರಾರ್ಥಿಸಿದರು. ಈ ಶುಭ ಸಂದರ್ಭದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸಹೋದರತೆ ಮತ್ತು ಸೌಹಾರ್ದತೆಯ ಮಹತ್ವವನ್ನು ಸಾರಿದರು.
ಪ್ರಾರ್ಥನೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
ಪರಸ್ಪರ ಪ್ರೀತಿಯ ಸಂದೇಶ
ರಂಜಾನ್ ಹಬ್ಬವು ಕೇವಲ ಆಚರಣೆಯಲ್ಲ, ಅದು ತ್ಯಾಗ, ಕರುಣೆ ಮತ್ತು ಪರೋಪಕಾರದ ಸಂಕೇತವಾಗಿದೆ ಎಂದು ಮುಖ್ಯಮಂತ್ರಿಗಳು ಬಣ್ಣಿಸಿದರು. ಇಂದಿನ ದಿನಮಾನಗಳಲ್ಲಿ ಕೇವಲ ವೈಯಕ್ತಿಕ ಬೇಡಿಕೆಗಳಿಗಿಂತ ಮನುಕುಲದ ಒಳಿತಿಗಾಗಿ ಹಾಗೂ ವಿಶ್ವಶಾಂತಿಗಾಗಿ ಪ್ರಾರ್ಥನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಪ್ರತಿಯೊಬ್ಬರೂ ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು, ಪರಸ್ಪರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆಯಿಂದ ಜೀವನ ನಡೆಸಬೇಕು ಎಂದು ಅವರು ನೆರೆದಿದ್ದ ಭಕ್ತಾದಿಗಳಿಗೆ ಕಿವಿಮಾತು ಹೇಳಿದರು.
ಭಾರತವು ಬಹುತ್ವದ ನೆಲೆಬೀಡಾಗಿದ್ದು, ಇಲ್ಲಿನ ವಿವಿಧತೆಯಲ್ಲಿ ಏಕತೆಯೇ ನಮ್ಮ ದೇಶದ ಅತಿದೊಡ್ಡ ಶಕ್ತಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು. ನಮ್ಮ ದೇಶವು ಹತ್ತು-ಹಲವು ಜಾತಿ, ಧರ್ಮ, ಭಾಷೆ ಮತ್ತು ಸಂಸ್ಕೃತಿಗಳ ಸುಂದರ ಸಂಗಮವಾಗಿದ್ದು, ಈ ವೈವಿಧ್ಯತೆಯ ನಡುವೆಯೂ ನಾವೆಲ್ಲರೂ ಅಣ್ಣ-ತಮ್ಮಂದಿರಂತೆ ಒಟ್ಟಾಗಿ ಬಾಳಬೇಕು ಎಂದು ಅವರು ಕರೆ ನೀಡಿದರು. ಜಗತ್ತಿನ ಯಾವುದೇ ಧರ್ಮವೂ ದ್ವೇಷ, ಅಸೂಯೆಯನ್ನು ಬೋಧಿಸುವುದಿಲ್ಲ, ಬದಲಾಗಿ ಪ್ರತಿಯೊಂದು ಧರ್ಮವೂ ಕೇವಲ ಪ್ರೀತಿ, ಕರುಣೆ ಮತ್ತು ಸಹಬಾಳ್ವೆಯನ್ನೇ ಸಾರುತ್ತದೆ ಎಂಬ ಮಾರ್ಮಿಕ ಸಂದೇಶವನ್ನು ಅವರು ರಂಜಾನ್ ಹಬ್ಬದ ವೇದಿಕೆಯ ಮೂಲಕ ಸಮಾಜಕ್ಕೆ ರವಾನಿಸಿದರು.

