Maintaining fiscal discipline despite the Centers non-cooperation: CM Siddaramaiah
x

ಸಿಎಂ ಸಿದ್ದರಾಮಯ್ಯ

ಕೇಂದ್ರದ ಅಸಹಕಾರದ ನಡುವೆಯೂ ವಿತ್ತೀಯ ಶಿಸ್ತು ಪಾಲನೆ: ಸಿಎಂ ಸಿದ್ದರಾಮಯ್ಯ

ಕೇಂದ್ರದ ಹೊಸ ಜಿಎಸ್‌ಟಿ ದರ ಪರಿಷ್ಕರಣೆಯಿಂದ ರಾಜ್ಯಕ್ಕೆ ಈ ವರ್ಷ 10 ಸಾವಿರ ಕೋಟಿ ರೂ. ಹಾಗೂ ಮುಂದಿನ ವರ್ಷ 15 ಸಾವಿರ ಕೋಟಿ ರೂ.ಗಳ ಭಾರಿ ನಷ್ಟವಾಗಲಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು.


Click the Play button to hear this message in audio format

ರಾಜ್ಯಕ್ಕೆ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ನಿರಂತರವಾಗಿ ಮಲತಾಯಿ ಧೋರಣೆ ಮತ್ತು ಅಸಹಕಾರ ತೋರುತ್ತಿದೆ. ಆದರೂ, ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ, ಆರ್ಥಿಕ ಮಾನದಂಡಗಳನ್ನು ಮೀರಿ ಯಾವುದೇ ಉಲ್ಲಂಘನೆ ಮಾಡದೆ ಅತ್ಯಂತ ಕಟ್ಟುನಿಟ್ಟಾಗಿ ವಿತ್ತೀಯ ಶಿಸ್ತನ್ನು ಪಾಲಿಸಿಕೊಂಡು ಬರಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದಾರೆ.

ತಮ್ಮ 17ನೇ ರಾಜ್ಯ ಬಜೆಟ್ ಮಂಡನೆಯ ಬಳಿಕ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಕರೆದಿದ್ದ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ನ ಆರ್ಥಿಕ ಲೆಕ್ಕಾಚಾರಗಳು, ಕೇಂದ್ರದ ನೀತಿಗಳಿಂದಾಗುತ್ತಿರುವ ನಷ್ಟ ಹಾಗೂ ಸರ್ಕಾರದ ಭವಿಷ್ಯದ ಯೋಜನೆಗಳ ಕುರಿತು ಎಳೆಎಳೆಯಾಗಿ ವಿವರಿಸಿದರು.

ಜಿಎಸ್‌ಟಿ ಮತ್ತು ಕೇಂದ್ರದ ನೀತಿಗಳಿಂದ ರಾಜ್ಯಕ್ಕೆ ಭಾರಿ ನಷ್ಟ

ಕೇಂದ್ರದ ಹೊಸ ಜಿಎಸ್‌ಟಿ ದರ ಪರಿಷ್ಕರಣೆಯಿಂದ ರಾಜ್ಯಕ್ಕೆ ಈ ವರ್ಷ 10 ಸಾವಿರ ಕೋಟಿ ರೂ. ಹಾಗೂ ಮುಂದಿನ ವರ್ಷ 15 ಸಾವಿರ ಕೋಟಿ ರೂ.ಗಳ ಭಾರಿ ನಷ್ಟವಾಗಲಿದೆ ಎಂದು ಸಿಎಂ ಕಳವಳ ವ್ಯಕ್ತಪಡಿಸಿದರು. ದರ ತರ್ಕಬದ್ಧಗೊಳಿಸುವಿಕೆಯಿಂದಾಗಿ, ರಾಜ್ಯದ ಜಿಎಸ್‌ಟಿ ಸಂಗ್ರಹಣೆಯ ಬೆಳವಣಿಗೆಯು ಶೇ.10 ರಿಂದ ಶೇ.4 ಕ್ಕೆ ಕುಸಿದಿದೆ. ಮಹಾರಾಷ್ಟ್ರದ ನಂತರ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯ ಕರ್ನಾಟಕವಾಗಿದ್ದರೂ, ಕೇಂದ್ರದ ನೀತಿಗಳಿಂದ ನಮಗೆ ಅನ್ಯಾಯವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಲಜೀವನ್ ಮಿಷನ್ (JJM) ಅಡಿ 69,488 ಕೋಟಿ ರೂ. ಯೋಜನಾ ವೆಚ್ಚದಲ್ಲಿ ಕೇಂದ್ರದ ಪಾಲು 30,880 ಕೋಟಿ ರೂ.ಗಳಿದ್ದರೂ, ಈವರೆಗೆ ಕೇವಲ 11,786 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ತನ್ನ ಪಾಲಿನ 38,600 ಕೋಟಿ ರೂ. ಜೊತೆಗೆ 15,500 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಖರ್ಚು ಮಾಡಿದೆ ಎಂದು ವಿವರಿಸಿದರು.

'ವಿಬಿ ಜಿ ರಾಮ್ ಜಿ' ಕಾಯ್ದೆಯಿಂದ 3,000 ಕೋಟಿ ಹೊರೆ

ಮನರೇಗಾ ಯೋಜನೆಯಡಿ ಹಿಂದೆ ಕೇಂದ್ರ ಸರ್ಕಾರ ಶೇ.100ರಷ್ಟು ಅನುದಾನ ನೀಡುತ್ತಿತ್ತು. ಆದರೆ, ಇದೀಗ 'ವಿಬಿ ಜಿ ರಾಮ್ ಜಿ' ಕಾಯ್ದೆ ತರುವ ಮೂಲಕ ಕೇಂದ್ರ ಶೇ.60 ಹಾಗೂ ರಾಜ್ಯ ಶೇ.40ರಷ್ಟು ಅನುದಾನ ಭರಿಸುವಂತೆ ಷರತ್ತು ವಿಧಿಸಲಾಗಿದೆ. ಇದರಿಂದ ವರ್ಷಕ್ಕೆ 100 ದಿನಗಳ ಉದ್ಯೋಗ ಪಡೆಯುತ್ತಿದ್ದ 77 ಲಕ್ಷ ಕನ್ನಡಿಗರ ಹಕ್ಕನ್ನು ಮೊಟಕುಗೊಳಿಸಿದಂತಾಗಿದೆ. ಅಲ್ಲದೆ, ಸಂವಿಧಾನದ 73ನೇ ಪರಿಚ್ಛೇದದಡಿ ಗ್ರಾಮಸಭೆಗಳಿಗಿದ್ದ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಈ ಕಾಯ್ದೆಯಿಂದ ರಾಜ್ಯ ಬೊಕ್ಕಸದ ಮೇಲೆ ಹೆಚ್ಚುವರಿಯಾಗಿ 3,000 ಕೋಟಿ ರೂ.ಗಳ ಆರ್ಥಿಕ ಹೊರೆ ಬೀಳಲಿದ್ದು, ಕೂಡಲೇ ಈ ಕಾಯ್ದೆಯನ್ನು ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಸಿಎಂ ಆಗ್ರಹಿಸಿದರು.

ಕೇಂದ್ರಕ್ಕಿಂತ ರಾಜ್ಯದ ಆರ್ಥಿಕ ಬೆಳವಣಿಗೆಯೇ ಉತ್ತಮ

ರಾಜ್ಯ ಸರ್ಕಾರ ಕೇವಲ ಸಾಲ ಮಾಡುತ್ತಿದೆ ಎಂಬ ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಸಿಎಂ, "ಸಾಲ ಮಾಡದೆ ಯಾವುದೇ ರಾಜ್ಯ ಅಥವಾ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಆದರೆ, ನಮ್ಮ ಸಾಲವು ಆರ್ಥಿಕ ಮಿತಿಯೊಳಗೇ ಇದೆ. ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮುನ್ನ ದೇಶದ ಸಾಲ 53.11 ಲಕ್ಷ ಕೋಟಿ ಇತ್ತು, ಈಗ ಅದು 165 ಲಕ್ಷ ಕೋಟಿಗೆ ತಲುಪಿದೆ. ರಾಜ್ಯದ ಜಿಎಸ್‌ಡಿಪಿ (GSDP) ಬೆಳವಣಿಗೆ ಶೇ. 8.1 ರಷ್ಟಿದ್ದರೆ, ರಾಷ್ಟ್ರದ ಜಿಡಿಪಿ ಶೇ. 7.4 ರಷ್ಟಿದೆ. ಹಾಗಾಗಿ, ಕೇಂದ್ರಕ್ಕಿಂತ ನಮ್ಮ ಆರ್ಥಿಕ ಬೆಳವಣಿಗೆಯೇ ಉತ್ತಮವಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಇದುವರೆಗೆ 1,21,591 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ಬಿಜೆಪಿಯವರೇ ಈಗ ನಮ್ಮ ಗ್ಯಾರಂಟಿ ಮಾದರಿಯನ್ನು ಕಾಪಿ ಮಾಡುತ್ತಿದ್ದಾರೆ" ಎಂದು ತಿವಿದರು.

56,432 ಹುದ್ದೆಗಳ ಭರ್ತಿ ಹಾಗೂ ಅಭಿವೃದ್ಧಿ ಯೋಜನೆಗಳು

ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ರಾಜ್ಯದಲ್ಲಿ ಖಾಲಿ ಇರುವ 56,432 ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ನಿರ್ಧರಿಸಲಾಗಿದೆ. ವಿಳಂಬದ ಕಾರಣದಿಂದಾಗಿ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ 5,000 ಕೋಟಿ ರೂ. ಮೀಸಲಿಡಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪ್ರೊ. ಎಂ. ಗೋವಿಂದರಾವ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು 4,291 ಕೋಟಿ ರೂ. ನೀಡಲಾಗಿದೆ. ಯುಕೆಪಿ 3ನೇ ಹಂತದ (UKP-3) ಯೋಜನೆಗೆ ಸಂಬಂಧಿಸಿದಂತೆ, ಮುಳುಗಡೆಯಾಗುವ ಖುಷ್ಕಿ ಜಮೀನಿಗೆ 30 ಲಕ್ಷ ರೂ. ಹಾಗೂ ನೀರಾವರಿ ಜಮೀನಿಗೆ 40 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಲಾಗಿದ್ದು, ಈ ಪ್ರಕ್ರಿಯೆಯನ್ನು 4 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ತುಂಗಭದ್ರಾ ಜಲಾಶಯದ ಎಲ್ಲಾ ಗೇಟುಗಳನ್ನು ಜೂನ್ ಅಂತ್ಯದೊಳಗೆ ಬದಲಾಯಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ನೀತಿ ನಿಯಮಗಳನ್ನು ರೂಪಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

Read More
Next Story