ಗ್ಯಾರಂಟಿ ಯೋಜನೆಗಳ ಪರಿಶೀಲನೆ: ದುರುಪಯೋಗಕ್ಕೆ ಬ್ರೇಕ್ ಹಾಕಲು ಸಿಎಂ ಕಟ್ಟುನಿಟ್ಟಿನ ಆದೇಶ
x

ಗ್ಯಾರಂಟಿ ಯೋಜನೆಗಳ ಪರಿಶೀಲನೆ: ದುರುಪಯೋಗಕ್ಕೆ ಬ್ರೇಕ್ ಹಾಕಲು ಸಿಎಂ ಕಟ್ಟುನಿಟ್ಟಿನ ಆದೇಶ

ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವುದು ಕಂಡುಬಂದಿದ್ದು, ಇದನ್ನು ತಡೆಯಲು ತಕ್ಷಣ ತನಿಖೆ ನಡೆಸಲು ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಮತ್ತು ದುರುಪಯೋಗವನ್ನು ತಡೆಯಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಬೊಕ್ಕಸದ ಹಣ ಅರ್ಹರಿಗೆ ಮಾತ್ರ ತಲುಪಬೇಕು ಮತ್ತು ಕಾಳಸಂತೆ ಹಾಗೂ ತಾಂತ್ರಿಕ ಅಕ್ರಮಗಳಿಗೆ ಅವಕಾಶ ನೀಡಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ತಾಕೀತು ಮಾಡಿದ್ದಾರೆ.

ಶಕ್ತಿ ಯೋಜನೆಯು ಮಹಿಳಾ ಸಬಲೀಕರಣದಲ್ಲಿ ಮೈಲಿಗಲ್ಲಾಗಿದೆ. ಮೇ ಅಂತ್ಯದವರೆಗೆ 763 ಕೋಟಿ ಮಹಿಳಾ ಪ್ರಯಾಣಿಕರು ಇದರ ಲಾಭ ಪಡೆದಿದ್ದು, ಟಿಕೆಟ್ ಮೌಲ್ಯ ಸುಮಾರು 20,047.69 ಕೋಟಿ ರೂಪಾಯಿಗಳಷ್ಟಿದೆ. ಇನ್ನು 2026-27ನೇ ಸಾಲಿಗೆ ವಿದ್ಯಾರ್ಥಿಗಳಿಗಾಗಿ 10 ಲಕ್ಷ ಉಚಿತ ಬಸ್ ಪಾಸ್‌ಗಳನ್ನು ವಿತರಿಸಲು ಅಂದಾಜಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 1.65 ಕೋಟಿ ಫಲಾನುಭವಿಗಳಿದ್ದಾರೆ. ಆದರೆ, ಹೊರ ರಾಜ್ಯದವರು ಇಲ್ಲಿ ನೆಲೆಸಿ ಈ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಅಂತಹವರ ಮಾಹಿತಿ ಸಂಗ್ರಹಿಸಲು ಮತ್ತು ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರು ಇರುವವರಿಗೆ ಮಾತ್ರ ಯೋಜನೆ ಸೀಮಿತಗೊಳಿಸಲು ಸೂಚಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ಜುಲೈ 2023 ರಿಂದ ಡಿಸೆಂಬರ್ 2024ರವರೆಗೆ 72 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಡಿಬಿಟಿ ಮೂಲಕ 11,561 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ. ಫೆಬ್ರವರಿ 2025 ರಿಂದ ರಾಜ್ಯದ 4.44 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.

ದುರುಪಯೋಗ ಮತ್ತು ತಾಂತ್ರಿಕ ಅಕ್ರಮಗಳಿಗೆ ಕಡಿವಾಣ

ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪದೋಷಗಳ ಬಗ್ಗೆ ಲೆಕ್ಕ ಪರಿಶೋಧನಾ ವರದಿ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೆಲವೊಂದು ಕಠಿಣ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವುದು (ಸುಮಾರು 60 ಕೋಟಿ ರೂ. ಮೊತ್ತದ 3 ಲಕ್ಷ ಕಂತುಗಳು) ಕಂಡುಬಂದಿದೆ. ಒಬ್ಬರೇ ವ್ಯಕ್ತಿ ಹಲವು ಖಾತೆಗಳನ್ನು ನೋಂದಾಯಿಸಿ ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ತಡೆಯಲು ತಕ್ಷಣ ತನಿಖೆ ನಡೆಸಲು ಸೂಚಿಸಲಾಗಿದೆ. ಏರ್‌ಟೆಲ್ ಆಪ್ ಬ್ಯಾಂಕ್ ಮುಂತಾದವುಗಳನ್ನು ಬಳಸಿ ಯುಪಿಐ ಖಾತೆಗಳ ಮೂಲಕ ಅಕ್ರಮ ನಡೆಸುತ್ತಿರುವುದು ಪತ್ತೆಯಾಗಿದೆ. ಇನ್ನು ಮುಂದೆ ಕರ್ನಾಟಕ ರಾಜ್ಯದಲ್ಲಿರುವ ಬ್ಯಾಂಕ್ ಖಾತೆಗಳಿಗೆ ಮಾತ್ರ ಹಣ ವರ್ಗಾವಣೆಯಾಗಬೇಕು. ಹೊರ ರಾಜ್ಯದ ಖಾತೆಗಳಿಗೆ ಹಣ ಹೋಗುತ್ತಿರುವುದನ್ನು ಸಂಪೂರ್ಣವಾಗಿ ತಡೆಹಿಡಿಯಬೇಕು. ಗೃಹಲಕ್ಷ್ಮಿ ಯೋಜನೆಯಲ್ಲಿ ಮೃತಪಟ್ಟವರಿಗೂ ಹಣ ಹೋಗುತ್ತಿರುವುದು ಗಂಭೀರ ವಿಷಯವಾಗಿದೆ. ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿ, ನಿಷ್ಕ್ರಿಯವಾಗಿರುವ ಎನ್‌ಪಿಸಿಐ ಖಾತೆಗಳನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ.

ಫಲಾನುಭವಿಗಳಿಗೆ ತೊಂದರೆಯಾಗದಂತೆ ಎಚ್ಚರ

ದುರುಪಯೋಗ ತಡೆಯುವ ಭರದಲ್ಲಿ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗಬಾರದು ಎಂಬುದು ಸರ್ಕಾರದ ಸ್ಪಷ್ಟ ನಿಲುವು. ಸಾಲದ ಖಾತೆಗಳಿಗೆ ಗೃಹಲಕ್ಷ್ಮಿ ಹಣ ಜಮೆಯಾದ ತಕ್ಷಣ ಬ್ಯಾಂಕ್‌ಗಳು ಅದನ್ನು ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ. ಅಂತಹ ಫಲಾನುಭವಿಗಳಿಗೆ ಬೇರೆ ಖಾತೆಗೆ ಬದಲಾಯಿಸಲು ಅವಕಾಶ ನೀಡಬೇಕು ಮತ್ತು ಅವರಿಗೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು. ಅಲ್ಲದೆ, ಗೃಹಲಕ್ಷ್ಮಿ ಹಣ ಜಮೆಯಾದ ಕೂಡಲೇ ಫಲಾನುಭವಿಯ ನೋಂದಾಯಿತ ಮೊಬೈಲ್ ಸಂಖ್ಯೆಗೆ ವಾಯ್ಸ್ ಮೆಸೇಜ್ ಮೂಲಕ ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ರಾಜ್ಯದ ಯೋಜನೆ, ನಮ್ಮ ಜನರಿಗೆ ಮಾತ್ರ

ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಫಲಾನುಭವಿಗಳಿಗೆ ಮಾತ್ರ ಸೀಮಿತವಾಗಿರಬೇಕು ಎಂದು ಮುಖ್ಯಮಂತ್ರಿಗಳು ಪುನರುಚ್ಚರಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ಅರ್ಹರು. ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಅನರ್ಹರು ಯೋಜನೆಯ ಲಾಭ ಪಡೆಯುತ್ತಿದ್ದರೆ ಅಂತಹವರಿಗೆ ಬ್ರೇಕ್ ಹಾಕಬೇಕು, ಆದರೆ ಅರ್ಹರ ವಿಷಯದಲ್ಲಿ ಮಾನವೀಯತೆ ಮೆರೆಯಬೇಕು ಎಂದು ಸ್ಪಷ್ಟಪಡಿಸಿದ್ದಾರೆ. ಅನುಕೂಲಸ್ಥರು, ತೆರಿಗೆ ಪಾವತಿದಾರರು ಅಥವಾ ಆರ್ಥಿಕವಾಗಿ ಸಬಲರಾದವರು ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಟ್ಟರೆ, ಅಂಥವರನ್ನು ಸಾರ್ವಜನಿಕವಾಗಿ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವಾಗಬೇಕು. ಇದರಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ನೆರವು ಸಿಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಕೇಂದ್ರದ ನೀತಿಗಳ ಬಗ್ಗೆ ಕಳವಳ

ಸಭೆಯಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳಿಂದಾಗಿ ಬೆಲೆ ಏರಿಕೆ, ಬಡವರ ತಲಾ ಆದಾಯ ಕುಸಿತ ಮತ್ತು ಮಧ್ಯಮ ವರ್ಗದವರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ಪ್ರಸ್ತಾಪಿಸಲಾಯಿತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ರಾಜ್ಯದ ಗ್ಯಾರಂಟಿ ಯೋಜನೆಗಳು ಬಡವರ ಪಾಲಿಗೆ ಆಸರೆಯಾಗಿವೆ, ಹೀಗಾಗಿ ಯಾವುದೇ ಕಾರಣಕ್ಕೂ ಅಕ್ರಮಗಳಿಗೆ ಆಸ್ಪದ ನೀಡದೆ ಪಾರದರ್ಶಕವಾಗಿ ಯೋಜನೆಗಳನ್ನು ಮುಂದುವರಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮುಖ್ಯ ತೀರ್ಮಾನಗಳು

ಎಜಿ ವರದಿಯಲ್ಲಿನ ಲೋಪಗಳನ್ನು ಸರಿಪಡಿಸಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲು ನಿರ್ದೇಶನ ನೀಡಲಾಯಿತು. ಹಿಂದೆ ಸಲ್ಲಿಸಿದ ಅರ್ಜಿಗಳ ನೈಜತೆಯನ್ನು ಮರುಪರಿಶೀಲಿಸುವುದು. ಎನ್‌ಪಿಸಿಐ ಮತ್ತು ಬ್ಯಾಂಕ್ ಖಾತೆಗಳ ಡೇಟಾವನ್ನು ಆಧಾರ್‌ಗೆ ಲಿಂಕ್ ಮಾಡಿ ದುರುಪಯೋಗ ತಡೆಯುವುದು. ಯೋಜನೆಗಳ ದುರುಪಯೋಗ ತಡೆಯಲು ಗ್ರಾಮ ಮಟ್ಟದಲ್ಲಿ ಜಾಗೃತಿ ಮೂಡಿಸುವುದಾಗಿದೆ. ಈ ಸಭೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಸೋರಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ. ಅರ್ಹರಿಗೆ ಯೋಜನೆ ತಲುಪುವಂತೆ ಮಾಡುವುದು ಮತ್ತು ಅಕ್ರಮ ನಡೆಸುವವರನ್ನು ಕಾನೂನಿನಡಿ ತರುವುದು ಸರ್ಕಾರದ ಮುಂದಿನ ಸವಾಲಾಗಿದೆ.

Read More
Next Story