
ಪಶ್ನೆ ಪತ್ರಿಕೆ ಸೋರಿಕೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ: ಡಿ.ಕೆ. ಶಿವಕುಮಾರ್ ಎಚ್ಚರಿಕೆ
ರಾಜ್ಯದಲ್ಲಿ ನೇಮಕಾತಿ ಪರ್ವ ನಡೆಯುತ್ತಿದ್ದು, ಸುಮಾರು 70 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಶ್ನೆ ಪತ್ರಿಕೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಸಿಎಂ ಹೇಳಿದ್ದಾರೆ.
ರಾಜ್ಯದಲ್ಲಿ ನೇಮಕಾತಿ ಪರ್ವ ನಡೆಯುತ್ತಿದ್ದು, ಸುಮಾರು 70 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳೇ ಹೊಣೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದ ಅನುಭವ ಮಂಟಪದಲ್ಲಿ ಶನಿವಾರ ನಡೆದ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನೇಮಕಾತಿ ಪರೀಕ್ಷೆ ನಡೆಯುವ ಕಡೆ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು. ಪರೀಕ್ಷೆಯ, ಪ್ರಶ್ನೆ ಪತ್ರಿಕೆ ತಯಾರಿಕೆ, ಹಂಚಿಕೆ ಹೀಗೆ ಪ್ರತಿಯೊಂದು ಹಂತವೂ ದಾಖಲೆಯಾಗಬೇಕು. ನೀಟ್ ಹಗರಣ ಎಲ್ಲರ ಗಮನದಲ್ಲಿರಲಿ ಎಂದು ಹೇಳಿದರು.
ಜನರ ಮನೆ ಬಾಗಿಲಿಗೆ ಸರ್ಕಾರ ಹೋಗಬೇಕು. ಜನರು ಸರ್ಕಾರದ ಬಾಗಿಲಿಗೆ ಬರಬಾರದು. ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಸುಮ್ಮನೆ ತಕರಾರು ಮಾಡಿದರೆ ಕ್ರಮ ಕೈಗೊಳ್ಳುವೆ. ನಾನು ಕೊಟ್ಟ ಸ್ವಾತಂತ್ರ್ಯ ದುರುಪಯೋಗ ಮಾಡಿಕೊಂಡರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೊಸ ಬೋರ್ ವೆಲ್ ವಿಡಿಯೋ, ಫೋಟೊ, ಜಿಪಿಎಸ್ ಕಡ್ಡಾಯ
ಹೊಸ ಬೋರ್ ವೆಲ್ ಕೊರೆಯುವ ಮುಂಚಿನ ಹಾಗೂ ನಂತರದ ವಿಡಿಯೋ, ಫೋಟೋಗಳನ್ನು ದಾಖಲಿಸಬೇಕು. ಜಿಪಿಎಸ್ ಕೂಡ ನಮೂದಿಸಬೇಕು. ಬೋರ್ ವೆಲ್ ಆಳದ ಬಗ್ಗೆಯೂ ದಾಖಲಿಸಬೇಕು. 150 ಅಡಿ ಆಳ ಕೊರೆದು 500- 600 ಅಡಿ ಆಳ ಕೊರೆಯಲಾಗಿದೆ ಎಂದು ಅಕ್ರಮಕ್ಕೆ ಆಸ್ಪದ ನೀಡಬಾರದು. ಹೊಸದಾಗಿ ಬೋರ್ ವೆಲ್ ಕೊರೆದರೆ, ದುರಸ್ತಿಗೊಳಿಸಿದರೆ ಪ್ರತಿಯೊಂದರ ಮಾಹಿತಿ ದಾಖಲಿಸಬೇಕು. ಹೊಸ ಬೋರ್ ವೆಲ್ ಕೊರೆದರೆ ಜಿಪಿಎಸ್ ಮಾಹಿತಿ ದಾಖಲಿಸಬೇಕು. ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಬಗ್ಗೆಯೂ ಮಾಹಿತಿಗಳು ಪಾರದರ್ಶಕವಾಗಿರಬೇಕು. ಎಲ್ ನೀನೋ ಪ್ರಭಾವದಿಂದಾಗಿ ರಾಜ್ಯದಲ್ಲಿ ಬಹುತೇಕ ಎಲ್ಲಾ ಅಣೆಕಟ್ಟುಗಳಲ್ಲಿ ನೀರಿನ ಶೇಖರಣೆ ಕಡಿಮೆಯಾಗಿದ್ದು, ಈ ಬಾರಿಯ ಬರ ಪರಿಸ್ಥಿತಿಯನ್ನು ನಾವೆಲ್ಲರೂ ‘ಟೀಮ್ ಕರ್ನಾಟಕ’ವಾಗಿ ಎದುರಿಸೋಣ ಎಂದು ಕರೆ ನೀಡಿದರು.
ಮಂದಿನ ವಾರ ಸಚಿವ ಸಂಪುಟ ವಿಸ್ತರಣೆ
ಮುಂದಿನ ವಾರ ಸಚಿವ ಸಂಪುಟ ವಿಸ್ತರಣೆ ಆಗಬಹುದು. ಆಗ ಎಲ್ಲಾ ಸಚಿವರು ಕೈ ಜೋಡಿಸಿ ಕೆಲಸ ಮಾಡಬೇಕಾಗುತ್ತದೆ. ಒಟ್ಟಾಗಿ ರಾಜ್ಯದ ಬರ ಪರಿಸ್ಥಿತಿ ಅವಲೋಕಿಸಬೇಕು. ರೈತರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಇದೇ ನಮ್ಮ ಮುಂದಿರುವ ಹೊಣೆಗಾರಿಕೆ. ಜಿಲ್ಲಾಡಳಿತವು ಗ್ರಾಮೀಣ ಭಾಗದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಗೆ 1 ಕೋಟಿ ರೂ.ವರೆಗೆ ಖರ್ಚು ಮಾಡಬಹುದು ಎಂದು ಬೆಳಗಾವಿ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಬೆಳೆ ವಿಮೆ ಬಗ್ಗೆ ರೈತರಿಗೆ ಅಧಿಕಾರಿಗಳು ನೆರವಾಗಬೇಕು. ಅರಿವು ಮೂಡಿಸಬೇಕು. ರೈತರು ಯಾವುದೇ ಕಾರಣಕ್ಕೂ ಮುಂದಿನ ಮಳೆ, ಅಣೆಕಟ್ಟು ನೀರು ನೆಚ್ಚಿಕೊಂಡು ಬೆಳೆ ಹಾಕಬಾರದು. ನೀರಾವರಿ ಸಮಿತಿ, ಅಧಿಕಾರಿಗಳು ಹಾಗೂ ಸರ್ಕಾರದ ಮಾರ್ಗದರ್ಶನ ಆಧಾರದ ಮೇಲೆ ಬೆಳೆ ಹಾಕಿಕೊಳ್ಳಬೇಕು. ನಿಮ್ಮಷ್ಟಕ್ಕೆ ನೀವೆ ಬೆಳೆ ಹಾಕಿದರೆ ನಷ್ಟಕ್ಕೆ ನೀವೇ ಹೊಣೆಯಾಗಬೇಕಾಗುತ್ತದೆ. ನಮ್ಮಿಂದ ಸಹಕಾರ ನೀಡಲು ಆಗುವುದಿಲ್ಲ. ಆಲಮಟ್ಟಿ ಹೊರತಾಗಿ ಬೇರೆ ಯಾವ ಜಲಾಶಯದಲ್ಲೂ ನೀರಿನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದರು.
ದೆಹಲಿಯಲ್ಲಿ ಸಂಸದರ ಸಭೆ
ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಾಗುವುದು. ದೆಹಲಿಯಲ್ಲಿ ಸೋಮವಾರ ಸಂಸದರ ಸಭೆ ನಡೆಸಲಾಗುವುದು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಾಹಣಾ ಸಮಿತಿ ಮುಂದೆ ಹೇಳಲಾಗಿದೆ. ಅವರಿಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಹ ಎಲ್ ನೀನೋ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಈ ಎಚ್ಚರಿಕೆಯನ್ನು ನಾವು ಕಡೆಗಣಿಸಬಾರದು. ನಾನು ಸಹ ಪ್ರಧಾನಿಯವರಿಗೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಉಪಮುಖ್ಯಮಂತ್ರಿ ಅವರೂ ಸಹ ಬರದ ಬಗ್ಗೆ ವಸ್ತುಸ್ಥಿತಿ ತಿಳಿಸಲು ಪ್ರಧಾನಿಯವರ ಬಳಿಗೆ ಶೀಘ್ರ ನಿಯೋಗ ಕಳುಹಿಸಲಿದ್ದಾರೆ ಎಂದು ತಿಳಿಸಿದರು.

