x

CJP ಅಭಿಜೀತ್‌ ದಿಪ್ಕೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ: KPSC ಹಗರಣ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರು ಕೈಬಿಟ್ಟ ಆರೋಪದ ವಿರುದ್ಧ ಅಕ್ಟೋಬರ್‌ 10ರಂದು ದೆಹಲಿಯಲ್ಲಿ ಪ್ರತಿಭಟನೆಗೆ ಸಿಜೆಪಿ ಕರೆ ನೀಡಿದೆ. ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದಾರೆ.


ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮತದಾನದ ಹಕ್ಕುಗಳ ರಕ್ಷಣೆಗೆ ದೇಶಾದ್ಯಂತದ ರಾಜಕೀಯ ಪಕ್ಷಗಳು, ನಾಗರಿಕ ಸಮಾಜದ ಸಂಘಟನೆಗಳು ಮತ್ತು ಯುವಕರು ಒಗ್ಗೂಡಬೇಕು ಎಂದು ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದೆ. ಅಕ್ಟೋಬರ್‌ 10ರಂದು ದೆಹಲಿಯ ಜಂತರ್‌ ಮಂತರ್‌ನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಉದ್ದೇಶಿಸಿರುವುದಾಗಿ ಸಂಘಟನೆಯ ಪ್ರತಿನಿಧಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಎಸ್‌ಐಆರ್‌ ಕುರಿತ ಜನತಾ ನ್ಯಾಯಮಂಡಳಿ ಸಭೆಯ ಬಳಿಕ ಮಾತನಾಡಿದ ಸಿಜೆಪಿ ಪ್ರತಿನಿಧಿಗಳು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದರು. ಜೀವಂತವಾಗಿರುವ ಕೆಲವರನ್ನು ಮೃತಪಟ್ಟಿದ್ದಾರೆ ಎಂದು ದಾಖಲಿಸಿ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು. ಇಂತಹ ಪ್ರಕರಣಗಳಲ್ಲಿ ಸಂಬಂಧಪಟ್ಟವರು ಆಧಾರ್‌ ಕಾರ್ಡ್‌, ಬ್ಯಾಂಕ್‌ ದಾಖಲೆಗಳು ಸೇರಿದಂತೆ ಗುರುತಿನ ದಾಖಲೆಗಳನ್ನು ಪ್ರದರ್ಶಿಸಿದ್ದಾರೆ ಎಂದೂ ಹೇಳಿದರು.

ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಪಾರದರ್ಶಕತೆ ಮತ್ತು ಸ್ಪಷ್ಟನೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆ, ಎಸ್‌ಐಆರ್‌ ಪ್ರಕ್ರಿಯೆ ಸ್ಥಗಿತ ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ತಟಸ್ಥ ವ್ಯವಸ್ಥೆ ರೂಪಿಸುವುದು ತಮ್ಮ ಪ್ರಮುಖ ಬೇಡಿಕೆಗಳೆಂದು ತಿಳಿಸಿದರು.

ಪ್ರತಿಭಟನೆಗೆ ದೆಹಲಿಯಲ್ಲಿ ಅನುಮತಿ ನಿರಾಕರಿಸುವುದು ಅಥವಾ ಪ್ರತಿಭಟನಾಕಾರರನ್ನು ಬಂಧಿಸುವುದು ಸರಿಯಲ್ಲ ಎಂದು ಸಿಜೆಪಿ ಪ್ರತಿನಿಧಿಗಳು ವಾದಿಸಿದರು. ಸಂವಿಧಾನದ ಚೌಕಟ್ಟಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುವುದು ನಾಗರಿಕರ ಹಕ್ಕು ಎಂದು ಹೇಳಿದರು. ಯಾವುದೇ ರಾಜಕೀಯ ಪಕ್ಷದವರು ತಮ್ಮ ಪಕ್ಷದ ಧ್ವಜ ಅಥವಾ ಬ್ಯಾನರ್‌ಗಳಿಲ್ಲದೆ ನಾಗರಿಕರಾಗಿ ಚಳವಳಿಯಲ್ಲಿ ಪಾಲ್ಗೊಳ್ಳಬಹುದು ಎಂದರು.

ನ್ಯಾಯಮಂಡಳಿಯಲ್ಲಿ ಮಾತನಾಡಿದ ನಾಗರಿಕ ಸಮಾಜದ ಪ್ರತಿನಿಧಿಗಳು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಪ್ರಕ್ರಿಯೆಯಿಂದ ಅಂಚಿನಲ್ಲಿರುವ ಸಮುದಾಯಗಳು, ವಲಸೆ ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದರು. ದೆಹಲಿಯಲ್ಲಿ ಪ್ರತಿಭಟನಾಕಾರರನ್ನು ಬಂಧಿಸಿದರೆ ಕರ್ನಾಟಕದಲ್ಲಿಯೂ ವಿವಿಧ ಸಂಘಟನೆಗಳು ಒಗ್ಗೂಡಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಿವೆ ಎಂದು ತಿಳಿಸಿದರು.

ಎಸ್‌ಐಆರ್‌ ಕುರಿತ ಆರೋಪಗಳು ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆ ಕುರಿತು ಸ್ವತಂತ್ರ ಪರಿಶೀಲನೆ ಹಾಗೂ ಅಧಿಕೃತ ಸ್ಪಷ್ಟನೆ ಅಗತ್ಯವಿದೆ.

Read More
Next Story