
Iran-Israel War| ಇರಾನ್‌ನಲ್ಲಿ ಚಿಕ್ಕಮಗಳೂರು ಯುವಕ ನಾಪತ್ತೆ; ಮಗನ ರಕ್ಷಣೆಗೆ ಕೇಂದ್ರಕ್ಕೆ ಪೋಷಕರ ಮೊರೆ
Chikkamagaluru Youth Missing: ಇರಾನ್-ಇಸ್ರೇಲ್ ಸಂಘರ್ಷದ ನಡುವೆ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರಿನ ನಿಶ್ಚಿತ್ ಕಳೆದ 8 ದಿನಗಳಿಂದ ನಾಪತ್ತೆಯಾಗಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಭೀಕರ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲೇ, ಇರಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಯುವಕನೊಬ್ಬ ನಾಪತ್ತೆಯಾಗಿದ್ದಾರೆ. ಕಳೆದ ಎಂಟು ದಿನಗಳಿಂದ ಮಗನ ಯಾವುದೇ ಸುಳಿವು ಸಿಗದೆ ಪೋಷಕರು ಕಂಗಾಲಾಗಿದ್ದು, ಆತನನ್ನು ಪತ್ತೆ ಹಚ್ಚುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ನಿಶ್ಚಿತ್
ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೆಕೊಡಿಗೆ ಗ್ರಾಮದ ನಿಶ್ಚಿತ್ ಎಂಬ ಯುವಕ ಕಳೆದ ಆರು ತಿಂಗಳ ಹಿಂದೆ ಕೆಲಸದ ನಿಮಿತ್ತ ಇರಾನ್‌ಗೆ ತೆರಳಿದ್ದರು. ಮರ್ಚೆಂಟ್ ನೇವಿಯಲ್ಲಿ ಉದ್ಯೋಗದಲ್ಲಿದ್ದ ನಿಶ್ಚಿತ್, ಇರಾನ್‌ನಿಂದ ಹಡಗಿನ ಮೂಲಕ ಕುವೈತ್‌ಗೆ ತೆರಳುವುದಾಗಿ ಎಂಟು ದಿನಗಳ ಹಿಂದೆ ತಂದೆಯೊಂದಿಗೆ ಮಾತನಾಡಿದ್ದರು. ಆದರೆ, ಅದಾದ ಬಳಿಕ ಅವರ ಮೊಬೈಲ್ ಸಂಪರ್ಕ ಕಡಿತಗೊಂಡಿದ್ದು, ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಪೋಷಕರ ಆತಂಕ
ಫೆಬ್ರವರಿ 28 ರಂದು ಇರಾನ್‌ನ ಪರಮಾಣು ಕಾರ್ಯಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ಸಂಘಟಿತ ವೈಮಾನಿಕ ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಕೊಲ್ಲಿ ರಾಷ್ಟ್ರಗಳ ಮೇಲೆ ಸರಣಿ ದಾಳಿಗಳನ್ನು ಆರಂಭಿಸಿದೆ. ಈ ಸಂಘರ್ಷದ ಸಮಯದಲ್ಲೇ ನಿಶ್ಚಿತ್ ನಾಪತ್ತೆಯಾಗಿರುವುದು ಪೋಷಕರ ನಿದ್ದೆಗೆಡಿಸಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ಮಗ ಸಿಲುಕಿಕೊಂಡಿರಬಹುದು ಎಂಬ ಆತಂಕದಲ್ಲಿರುವ ಕುಟುಂಬಸ್ಥರು, ವಿದೇಶಾಂಗ ಇಲಾಖೆ ತಕ್ಷಣ ಮಧ್ಯಪ್ರವೇಶಿಸಿ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಕಣ್ಣೀರು ಹಾಕುತ್ತಿದ್ದಾರೆ.
ಸಂಘರ್ಷದ ಹಿನ್ನೆಲೆ
ದೀರ್ಘಕಾಲದ ಸಂಘರ್ಷದ ಬಳಿಕ ಫೆಬ್ರವರಿ 28 ರಿಂದ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹೆಚ್ಚಾಗಿದೆ. ಇರಾನ್ ಮೇಲೆ ನಡೆದ ದಾಳಿಗೆ ಪ್ರತಿಯಾಗಿ ತಹ್ರಾನ್ ಕೂಡ ಗಲ್ಫ್ ರಾಷ್ಟ್ರಗಳನ್ನು ಗುರಿಯಾಗಿ ದಾಳಿ ನಡೆಸುತ್ತಿದೆ. ಈ ವಿಕೋಪದ ನಡುವೆ ಸಾವಿರಾರು ಭಾರತೀಯರು ಆ ಪ್ರದೇಶದಲ್ಲಿ ಸಿಲುಕಿಕೊಂಡಿದ್ದು, ಈಗ ಕನ್ನಡಿಗ ಯುವಕನ ನಾಪತ್ತೆ ಪ್ರಕರಣ ಭಾರಿ ಆತಂಕ ಮೂಡಿಸಿದೆ.

