ಚಾಮರಾಜನಗರ ಶೂಟೌಟ್: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು
x

ಹನೂರು ಎನ್‌ಕೌಂಟರ್ ಬಲಿಯಾದವರು

ಚಾಮರಾಜನಗರ ಶೂಟೌಟ್: ಮೂವರು ಅರಣ್ಯ ಸಿಬ್ಬಂದಿಗೆ ನಿರೀಕ್ಷಣಾ ಜಾಮೀನು

ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ ಹಾಗೂ ವಾಚರ್‌ಗಳಾದ ಶಿವಲಿಂಗ ನಾಯ್ಕ್ ಮತ್ತು ಗಿರೀಶ್ ಅವರಿಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಮಂಜೂರಾಗಿದೆ.


Click the Play button to hear this message in audio format

ಕಾವೇರಿ ವನ್ಯಜೀವಿಧಾಮದ ಹೊಳೆ ಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಗೆ ಸಂಬಂಧಿಸಿದಂತೆ ಆರೋಪ ಎದುರಿಸುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.

ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ ಹಾಗೂ ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಅವರಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಈ ಮೂವರ ವಿಚಾರಣೆ ಈಗಾಗಲೇ ಸಿಐಡಿ ಅಧಿಕಾರಿಗಳಿಂದ ನಡೆದಿತ್ತು.

ಗುಂಡಿನ ಚಕಮಕಿಯಲ್ಲಿ ಮೂವರು ಬೇಟೆಗಾರರು ಸಾವು

ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮದ ಹೊಳೆ ಮುರಿದಟ್ಟಿ ಕರಿಕಲ್ಲು ಗುಡ್ಡದ ಸಮೀಪ ಅರಣ್ಯ ಸಿಬ್ಬಂದಿ ಹಾಗೂ ಬೇಟೆಗಾರರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಘಟನೆಯಲ್ಲಿ ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ, ಲಾಸರ್ ದೊಡ್ಡಿ ಗ್ರಾಮದ ಡೇವಿಡ್ ಕುಮಾರ್ ಹಾಗೂ ಜಗನ್ನಾಥ್ ದೊಡ್ಡಿ ಗ್ರಾಮದ ಜಾನ್ ರೋಸ್ ಪೀಟರ್ ಮೃತಪಟ್ಟಿದ್ದರು.

ಈ ಘಟನೆಯ ಬಳಿಕ ಅರಣ್ಯ ಸಿಬ್ಬಂದಿ ಗುಂಡು ಹಾರಿಸಿದ ರೀತಿಯ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ಎಸ್‌ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಸಂಬಂಧಪಟ್ಟ ಸಿಬ್ಬಂದಿಯನ್ನು ವಿಚಾರಣೆ ನಡೆಸಲಾಗಿತ್ತು.

ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆಗೆ ಆದೇಶ

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಅಪರಾಧ ಸಂಖ್ಯೆ 166/2026ರಲ್ಲಿ ಈ ಮೂವರು ಸಿಬ್ಬಂದಿಯನ್ನು ಬಂಧಿಸುವ ಪರಿಸ್ಥಿತಿ ಎದುರಾದರೆ, ನ್ಯಾಯಾಲಯ ವಿಧಿಸಿರುವ ಷರತ್ತುಗಳ ಅನ್ವಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಲಾಗಿದೆ.

ನ್ಯಾಯಾಲಯ ವಿಧಿಸಿರುವ ಷರತ್ತುಗಳು

ನ್ಯಾಯಾಲಯದ ಆದೇಶದಂತೆ ಮೂವರು ಅರ್ಜಿದಾರರು ಆದೇಶದ ದಿನಾಂಕದಿಂದ 25 ದಿನಗಳೊಳಗೆ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಈ ವೇಳೆ ತಲಾ 1 ಲಕ್ಷ ರೂ. ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತದ ಒಬ್ಬ ಜಾಮೀನುದಾರರನ್ನು ಒದಗಿಸಬೇಕು.

ತನಿಖೆ ನಡೆಯುವ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು. ಅಲ್ಲದೆ, ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸುವವರೆಗೆ ಪ್ರತಿ ಶನಿವಾರ ಸಂಬಂಧಪಟ್ಟ ಪೊಲೀಸ್ ಠಾಣೆಗೆ ತೆರಳಿ ಹಾಜರಾತಿ ದಾಖಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ಸಾಕ್ಷಿಗಳಿಗೆ ಬೆದರಿಕೆ ಹಾಕದಂತೆ ಸೂಚನೆ

ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಅಥವಾ ಘಟನೆ ಕುರಿತು ಮಾಹಿತಿ ಹೊಂದಿರುವ ವ್ಯಕ್ತಿಗಳ ಮೇಲೆ ಯಾವುದೇ ರೀತಿಯ ಒತ್ತಡ, ಬೆದರಿಕೆ, ಪ್ರಲೋಭನೆ ಅಥವಾ ಪ್ರಭಾವ ಬೀರುವಂತಿಲ್ಲ. ತನಿಖೆಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿರುಚುವ ಪ್ರಯತ್ನವೂ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದರ ಜೊತೆಗೆ, ಜಾಮೀನು ಬಾಂಡ್ ಸಲ್ಲಿಸುವ ವೇಳೆ ಅರ್ಜಿಯಲ್ಲಿ ನಮೂದಿಸಿರುವ ತಮ್ಮ ವಾಸಸ್ಥಳದ ವಿಳಾಸಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆಗಳನ್ನು ತನಿಖಾಧಿಕಾರಿಗೆ ನೀಡುವಂತೆ ಸೂಚಿಸಲಾಗಿದೆ.

ನ್ಯಾಯಾಲಯದ ಷರತ್ತುಗಳೊಂದಿಗೆ ನಿರೀಕ್ಷಣಾ ಜಾಮೀನು ದೊರೆತ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ಮೂವರು ಅರಣ್ಯ ಸಿಬ್ಬಂದಿಗೆ ತಾತ್ಕಾಲಿಕವಾಗಿ ಬಂಧನದ ಭೀತಿ ದೂರವಾಗಿದೆ.

Read More
Next Story