
ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಧರಿಸಿ ಪುಷ್ಪಾರ್ಚನೆ: ಬಾನು ಮುಷ್ತಾಕ್ ವಿರುದ್ಧ ಆಕ್ರೋಶ
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಯಾರು ದೇವರೆಂದು ನಂಬಿದ್ದಾರೋ, ಅವರಿಗೂ ಬಾನು ಮುಷ್ತಾಕ್ ಅಪಮಾನ ಮಾಡಿದ್ದಾರೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಸಾಹಿತಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಪುಷ್ಪಾರ್ಚನೆ ಮಾಡಿರುವುದನ್ನು ಖಂಡಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸರ್ಕಾರ ಈ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ (ಮಾ. 16) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಾನು ಮುಷ್ತಾಕ್ ಅವರು ಚಪ್ಪಲಿ ಧರಿಸಿ ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು. "ಸರ್ಕಾರ ಈ ಕೂಡಲೇ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ನನ್ನ ಪ್ರಕಾರ ಬಾನು ಮುಷ್ತಾಕ್ ಅವರು ಅಲ್ಲಾಹನನ್ನು ಚಪ್ಪಲಿಗೆ ಹೋಲಿಸಿದ್ದಾರೆ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೂ ಅಪಮಾನ ಮಾಡಿದ್ದಾರೆ" ಎಂದು ಕಿಡಿಕಾರಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಆರಾಧ್ಯ ದೈವ ಎಂದು ನಂಬಿರುವ ಹಿಂದೂ ಹಾಗೂ ಮುಸಲ್ಮಾನರಿಗೆ ಇವರು ಅಪಮಾನ ಮಾಡಿದ್ದು, ಅವರ ಈ ದುರಹಂಕಾರಕ್ಕೆ ನನ್ನ ಧಿಕ್ಕಾರವಿದೆ. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದಾಗ ಕನ್ನಡ ವಿರೋಧಿ ಎಂಬ ಕಾರಣಕ್ಕೆ ಹಲವರು ವಿರೋಧಿಸಿದ್ದರು. ಆ ಸಮಯದಲ್ಲಿ ರಾಜ್ಯದ ಅನೇಕ ದಲಿತ ಸಂಘಟನೆಗಳು ಹಾಗೂ ಹೋರಾಟಗಾರರು ಅವರ ಬೆಂಬಲಕ್ಕೆ ನಿಂತಿದ್ದರು. ಆದರೆ ಈಗ ಅದೇ ಸಂಘಟನೆಗಳ ಮುಖಂಡರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಬಾನು ಮುಷ್ತಾಕ್ ಉದ್ಧಟತನದ ಪ್ರದರ್ಶನ
"ಮುಸಲ್ಮಾನರ ದೇವರು ಅಲ್ಲಾಹು. ಇಸ್ಲಾಂ ಬಂಧುಗಳು ಅಲ್ಲಾಹುವನ್ನು ಪ್ರಾರ್ಥಿಸುತ್ತಾರೆ, ನಾವು ಅದನ್ನು ಗೌರವಿಸುತ್ತೇವೆ. ಆದರೆ ಬಾನು ಮುಷ್ತಾಕ್ ಅವರು 'ಚಪ್ಪಲಿ ನನ್ನ ಮನೆದೇವರು, ಆದ್ದರಿಂದ ನಾನು ಚಪ್ಪಲಿ ಧರಿಸಿಯೇ ಅಂಬೇಡ್ಕರ್ ಅವರಿಗೆ ಪುಷ್ಪಾರ್ಚನೆ ಮಾಡಿದ್ದೇನೆ' ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಉದ್ಧಟತನದಿಂದ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಅವರು ಕ್ಷಮೆಗೆ ಅರ್ಹರಲ್ಲ" ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ದಲಿತ ಸಂಘಟನೆಗಳಿಗೆ ಪ್ರಶ್ನೆ
ದೇವರಂತಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಈ ರೀತಿ ಅಪಮಾನ ಮಾಡಿದ್ದರಿಂದ, ಇನ್ನು ಮುಂದೆ ರಾಜ್ಯದ ದಲಿತ ಸಂಘಟನೆಗಳು ಬಾನು ಮುಷ್ತಾಕ್ ಅವರಿಗೆ ಅವರು ಹೇಳಿರುವಂತೆ 'ಮನೆದೇವರಿಂದಲೇ' (ಚಪ್ಪಲಿಯಿಂದಲೇ) ಪೂಜೆ ಮಾಡಬೇಕು. ಅವರು ಯಾವುದೇ ಸ್ಥಳಕ್ಕೆ ಬಂದರೂ ದಲಿತ ಸಂಘಟನೆಗಳು, ಹಿಂದೂಗಳು ಹಾಗೂ ಇಸ್ಲಾಂ ಸಮುದಾಯದವರು ಅವರಿಗೆ ಛೀಮಾರಿ ಹಾಕಬೇಕು ಎಂದು ಕರೆ ನೀಡಿದರು.
ಇಸ್ಲಾಂ ಧರ್ಮಗುರುಗಳ ಮೌನಕ್ಕೆ ಆಕ್ಷೇಪ
"ಚಪ್ಪಲಿ ಹೊಲಿಯುವುದು ನಮ್ಮ ಸಮುದಾಯದ ಕಸುಬಾಗಿದ್ದು, ಚಪ್ಪಲಿ ಹೊಲಿಯುವವರು ಮುಸಲ್ಮಾನ ಸಮುದಾಯದವರಲ್ಲ. ಹಾಗಿದ್ದ ಮೇಲೆ ನೀವು ಪರಿಶಿಷ್ಟ ಜಾತಿಗೆ ಸೇರಿದವರೇ? ಅಲ್ಲಾಹುವನ್ನು ಪೂಜಿಸುವವರಿಗೆ ಚಪ್ಪಲಿ ಮನೆದೇವರು ಎಂದ ಮೇಲೆ ನೀವು ಯಾರನ್ನು ಯಾರಿಗೆ ಹೋಲಿಸಿದ್ದೀರಿ? ಒಂದು ವೇಳೆ ಹಾಗೇನಾದರೂ ಇದ್ದರೆ ಡಾ. ಅಂಬೇಡ್ಕರ್ ಅವರು ಧರಿಸಿದ್ದ ಚಪ್ಪಲಿ ಅಥವಾ ಶೂ ನಿಮ್ಮ ಮನೆದೇವರಾಗಿರಬಹುದೇ? ಇದನ್ನು ಇಸ್ಲಾಂ ಧರ್ಮ ಒಪ್ಪುತ್ತದೆಯೇ? ಇದನ್ನು ಕೇಳಿದ ಮೇಲೂ ಇಸ್ಲಾಂ ಧರ್ಮದ ಧರ್ಮಗುರುಗಳು ಹಾಗೂ ಮುಲ್ಲಾಗಳು ಏಕೆ ತಟಸ್ಥರಾಗಿದ್ದಾರೆ? ನೀವು ಅವರನ್ನು ಏಕೆ ಪ್ರಶ್ನಿಸುತ್ತಿಲ್ಲ?" ಎಂದು ಪ್ರಶ್ನಿಸಿದರು.
ಬಾನು ಮುಷ್ತಾಕ್ ಸಮರ್ಥನೆ ಹಿನ್ನೆಲೆ
ಶನಿವಾರ (ಮಾ. 14) ಮಂಡ್ಯದಲ್ಲಿ ನಡೆದ 'ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ' ಸಾಹಿತಿ ಬಾನು ಮುಷ್ತಾಕ್ ಅವರು ಅಂಬೇಡ್ಕರ್ ಭಾವಚಿತ್ರಕ್ಕೆ ಚಪ್ಪಲಿ ಧರಿಸಿಯೇ ಪುಷ್ಪ ನಮನ ಸಲ್ಲಿಸಿದ್ದರು. ಕಾರ್ಯಕ್ರಮದ ಸಂಘಟಕರು ಚಪ್ಪಲಿ ಬಿಡುವಂತೆ ವಿನಂತಿಸಿದರೂ ಅವರು ಒಪ್ಪಿರಲಿಲ್ಲ. ಬಳಿಕ ವೇದಿಕೆಯಲ್ಲಿ ಮಾತನಾಡುತ್ತಾ, "ಚಪ್ಪಲಿ ಹೊಲಿಯುವುದು ನಮ್ಮ ವೃತ್ತಿ ಮತ್ತು ಚಪ್ಪಲಿ ನಮ್ಮ ಮನೆದೇವರು. ಅದು ನಮ್ಮ ಅಸ್ಮಿತೆಯ ಸಂಕೇತವಾಗಿರುವುದರಿಂದ ನಮಗೆ ಅದರ ಬಗ್ಗೆ ಅಪಾರ ಗೌರವವಿದೆ" ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

