
'ಕೃಷ್ಣ' ಪಠ್ಯ ಹೆಸರಲ್ಲಿ ಕನ್ನಡಿಗರಿಗೆ ಅವಮಾನ: ಕೇಂದ್ರದ ವಿರುದ್ಧ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಿಡಿ
ಪಠ್ಯಪುಸ್ತಕದಲ್ಲಿನ ವಿಷಯಗಳು ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಗೆ ವಿರುದ್ಧವಾಗಿವೆ ಎಂದು ಆರೋಪಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೂಡಲೇ ಈ ಪಠ್ಯವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ.
ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಮೂರನೇ ಭಾಷೆಯಾಗಿ ಬೋಧಿಸಲು ಎನ್‌ಸಿಇಆರ್‌ಟಿ ಪ್ರಕಟಿಸಿರುವ ಹೊಸ ಪಠ್ಯಪುಸ್ತಕವು ಇದೀಗ ಭಾರಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಪಠ್ಯಪುಸ್ತಕಕ್ಕೆ "ಕೃಷ್ಣ" ಎಂದು ನಾಮಕರಣ ಮಾಡಿರುವುದು ಮತ್ತು ಅದರಲ್ಲಿ ಅಡಕವಾಗಿರುವ ವಿಷಯಗಳು ಕರ್ನಾಟಕದ ಸಾಂಸ್ಕೃತಿಕ ಅಸ್ಮಿತೆಗೆ ವಿರುದ್ಧವಾಗಿವೆ ಎಂದು ಆರೋಪಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೂಡಲೇ ಈ ಪಠ್ಯವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರು ಜಂಟಿಯಾಗಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ, ಕರ್ನಾಟಕದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಅಸ್ಮಿತೆಯಾಗಿ ಕಾವೇರಿ ನದಿಯನ್ನು ಬಿಂಬಿಸಲಾಗಿದೆ. "ಕಾವೇರಿಯಿಂದಮಾ..." ಎಂದು ಕವಿರಾಜಮಾರ್ಗದಲ್ಲಿ ವರ್ಣಿಸಿರುವ ನಾಡಿನಲ್ಲಿ, ಜಲ ಮೂಲವನ್ನು ಗುರುತಿಸುವುದು ಕಾವೇರಿಯ ಮೂಲಕವೇ ಹೊರತು ಕೃಷ್ಣನ ಮೂಲಕವಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಕೃಷ್ಣ ಎನ್ನುವುದು ಇಲ್ಲಿನ ಜನರ ಜೀವನಾಡಿಯಲ್ಲ, ಅದು ಕೆಲವರ ವೈಯಕ್ತಿಕ ಆರಾಧ್ಯ ದೈವವಷ್ಟೇ. ಆದರೆ ಕಾವೇರಿ ಎಂದರೆ 'ಕಾಪಾಡುವ ನೀರು'. ಕರ್ನಾಟಕದ ಸಂಸ್ಕೃತಿಯನ್ನು ಪ್ರತಿನಿಧಿಸದ ಹೆಸರನ್ನು ಪಠ್ಯಕ್ಕೆ ಇಟ್ಟಿರುವುದು ಕನ್ನಡಿಗರಿಗೆ ಮಾಡಿರುವ ಅವಮಾನ ಎಂದು ಪ್ರಾಧಿಕಾರ ಕಿಡಿಕಾರಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಆಪಾದನೆ
ಈ ಪಠ್ಯಪುಸ್ತಕ ರಚನೆಯ ಹಿಂದೆ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಹಿಂಬಾಗಿಲಿನಿಂದ ಜಾರಿಗೊಳಿಸುವ ಕುತಂತ್ರವಿದೆ. ಕನ್ನಡದ ಸಾಂಸ್ಕೃತಿಕ ಚರಿತ್ರೆಯ ಅರಿವಿಲ್ಲದವರು ಅಥವಾ ಕರ್ನಾಟಕದ ನೆಲದ ಮೂಲವನ್ನು ದ್ವೇಷಿಸುವವರು ಮಾತ್ರ ಇಂತಹ ಪಠ್ಯವನ್ನು ರಚಿಸಲು ಸಾಧ್ಯ ಎಂದು ತೀವ್ರ ವಾಗ್ದಾಳಿ ನಡೆಸಿದೆ. ಪಠ್ಯದ ಒಳಗಿನ ವಿಷಯಗಳು ಏಕಧರ್ಮದ ಆರಾಧನೆ, ಋಷಿ ಪರಂಪರೆ ಮತ್ತು ತಳಸಮುದಾಯಗಳ ಆಚರಣೆಗಳನ್ನು ವ್ಯಂಗ್ಯವಾಡುವಂತಿದ್ದು, ಇದು ಜನಸಮುದಾಯದ ವಿರೋಧಿಯಾಗಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಎನ್‌ಸಿಇಆರ್‌ಟಿ ನೀಡಿರುವ ಸ್ಪಷ್ಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಸೇರಿದಂತೆ ಸದಸ್ಯರೆಲ್ಲಾ ಶುದ್ಧ ಸುಳ್ಳು ಮತ್ತು ವಿಷಯಾಂತರ ಮಾಡುವ ತಿರುಚುವ ಸ್ಪಷ್ಟನೆ ಎಂದು ಕರೆದಿದೆ. ಪಠ್ಯಪುಸ್ತಕದ 63ನೇ ಪುಟದಲ್ಲಿ ನೀಡಿರುವ ಆಹಾರ ಪದ್ಧತಿಯ ಚಿತ್ರದ ಬಗ್ಗೆಯೂ ಪ್ರಾಧಿಕಾರ ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ. ಕನ್ನಡಿಗರ ಸಮತೋಲನ ಆಹಾರ ಪದ್ಧತಿಯಲ್ಲಿ ಮಾಂಸಹಾರವು ಪ್ರಮುಖ ಭಾಗವಾಗಿದ್ದರೂ, ಪಠ್ಯದ ಚಿತ್ರದಲ್ಲಿ ಮೀನು, ಮಾಂಸದಂತಹ ಪದಾರ್ಥಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಇಡ್ಲಿ, ಚಟ್ನಿ, ಮೊಟ್ಟೆಗಳ ಚಿತ್ರಗಳನ್ನು ನೀಡಿರುವ ಎನ್‌ಸಿಇಆರ್‌ಟಿ, ನಮ್ಮ ಸಾಂಸ್ಕೃತಿಕ ಆಹಾರದ ವೈವಿಧ್ಯತೆಯನ್ನು ಮರೆಮಾಚುವ ಕೆಲಸ ಮಾಡಿದೆ ಎಂದು ಆರೋಪಿಸಲಾಗಿದೆ.
ರಾಜ್ಯದ ಶೈಕ್ಷಣಿಕ ಸಂಸ್ಥೆಗಳನ್ನು ಕಡೆಗಣಿಸಿದ್ದೇಕೆ?
ಕರ್ನಾಟಕದ ಶೈಕ್ಷಣಿಕ ವಿಷಯಗಳ ಬಗ್ಗೆ ರಾಜ್ಯದ ಅಧಿಕೃತ ಸಂಸ್ಥೆಯಾದ ಡಿಎಸ್‌ಇಆರ್‌ಟಿ ಜೊತೆ ಚರ್ಚಿಸದೆ, ಅಥವಾ ರಾಜ್ಯದ ಸಂಪನ್ಮೂಲ ವ್ಯಕ್ತಿಗಳು ಸಿದ್ಧಪಡಿಸಿರುವ 'ಸಿರಿಗನ್ನಡ', 'ನಲಿಕನ್ನಡ'ಗಳಂತಹ ಅತ್ಯುತ್ತಮ ಪಠ್ಯಗಳನ್ನು ಬಳಸದೆ, ಎನ್‌ಸಿಇಆರ್‌ಟಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಖಂಡನೀಯ. ಸ್ಥಳೀಯ ಇತಿಹಾಸ, ವೀರರು, ಆಹಾರ ಮತ್ತು ಬದುಕಿನ ಕ್ರಮಗಳನ್ನು ಒಳಗೊಂಡಿರುವ ನಮ್ಮ ಸ್ವಂತ ಪಠ್ಯಗಳನ್ನು ಕಡೆಗಣಿಸಿರುವುದು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆಯಾಗಿದೆ. ತಕ್ಷಣವೇ ಈ ಪಠ್ಯವನ್ನು ಕೇಂದ್ರ ಸರ್ಕಾರ ಹಿಂಪಡೆಯಬೇಕು. ರಾಜ್ಯದ ಸಾಂಸ್ಕೃತಿಕ ಅಸ್ಮಿತೆಯನ್ನು ಪ್ರತಿಬಿಂಬಿಸುವ, ತಾರತಮ್ಯಗಳಿಲ್ಲದ, ಕರ್ನಾಟಕದ ನೆಲದ ಮಣ್ಣಿನ ವಾಸನೆ ಇರುವ ಪಠ್ಯಗಳನ್ನು ಮರುಜಾರಿ ಮಾಡಬೇಕೆಂದು ಆಗ್ರಹಿಸಿದೆ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ ಮತ್ತು ಸದಸ್ಯರು ಆಗ್ರಹಿಸಿದ್ದಾರೆ.
ಭಾಷಾ ವಿಷಯಗಳಲ್ಲಿ ಮತ್ತು ಸಾಂಸ್ಕೃತಿಕ ವಿಷಯಗಳಲ್ಲಿ ಕೇಂದ್ರ ಸಂಸ್ಥೆಗಳ ಅತಿಕ್ರಮಣವು ಆಗಾಗ್ಗೆ ಕರ್ನಾಟಕದಲ್ಲಿ ವಿವಾದಕ್ಕೆ ಕಾರಣವಾಗುತ್ತಿದೆ. ಎನ್‌ಸಿಇಆರ್‌ಟಿ ಪಠ್ಯದ ಹೆಸರಿನಿಂದ ಹಿಡಿದು ಅದರಲ್ಲಿನ ವಿಷಯಗಳವರೆಗೆ ಕರ್ನಾಟಕದ ಸ್ಥಳೀಯ ವೈವಿಧ್ಯತೆಯನ್ನು ಕಡೆಗಣಿಸಿರುವುದು, ರಾಜ್ಯದ ಬುದ್ಧಿಜೀವಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳಲ್ಲಿ ಅಸಮಾಧಾನವನ್ನು ಮೂಡಿಸಿದೆ. ಶಿಕ್ಷಣ ಎಂಬುದು ಸಾಂವಿಧಾನಿಕವಾಗಿ ರಾಜ್ಯ ಪಟ್ಟಿಯ ವಿಷಯವಾಗಿದ್ದರೂ, ಕೇಂದ್ರ ಸಂಸ್ಥೆಗಳು ಇಂತಹ ಹಾರಿಕೆ ಉತ್ತರಗಳನ್ನು ನೀಡುವುದರಿಂದ ಸಂಯುಕ್ತ ವ್ಯವಸ್ಥೆಯ ಮೌಲ್ಯಗಳಿಗೆ ಧಕ್ಕೆಯಾಗುತ್ತದೆ ಎಂದು ತಿಳಿಸಿದ್ದಾರೆ.

