x

ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‌ ಕಾವೇರಿ ನೀರು ಹರಿಸಲು ಸಿಡಬ್ಲ್ಯುಆರ್‌ಸಿ ಶಿಫಾರಸು

ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಮಳೆ ಕೊರತೆ ಹಾಗೂ ಕುಡಿಯುವ ನೀರಿನ ಅಗತ್ಯತೆ ಕುರಿತು ಕರ್ನಾಟಕದ ಅಧಿಕಾರಿಗಳು ಸಮಿತಿಗೆ ವಿವರಿಸಿದರು.


Click the Play button to hear this message in audio format

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ಸ್ ನೀರನ್ನು 15 ದಿನಗಳ ಕಾಲ ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ. ನೀರಿನ ಕೊರತೆಯ ನಡುವೆಯೇ ಬಂದಿರುವ ಈ ಆದೇಶ ಕಾವೇರಿ ಜಲಾನಯನ ಪ್ರದೇಶದ ರೈತರಲ್ಲಿ ಆತಂಕ ಹೆಚ್ಚಿಸಿದೆ.

ದೆಹಲಿಯಲ್ಲಿ ನಡೆದ ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಪುದುಚೇರಿಯ ಅಧಿಕಾರಿಗಳು ಭಾಗವಹಿಸಿದ್ದರು. ರಾಜ್ಯದ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ, ಮಳೆ ಕೊರತೆ ಹಾಗೂ ಕುಡಿಯುವ ನೀರಿನ ಅಗತ್ಯತೆ ಕುರಿತು ಕರ್ನಾಟಕದ ಅಧಿಕಾರಿಗಳು ಸಮಿತಿಗೆ ವಿವರಿಸಿದರು.

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಲ್ಲಿ ಸೀಮಿತ ಪ್ರಮಾಣದ ನೀರು ಮಾತ್ರ ಲಭ್ಯವಿದ್ದು, ಅದನ್ನು ಮುಂದಿನ ಬೇಸಿಗೆ ಅವಧಿಯವರೆಗೆ ಕುಡಿಯುವ ನೀರು ಸೇರಿದಂತೆ ವಿವಿಧ ಅಗತ್ಯಗಳಿಗೆ ಬಳಸಬೇಕಿದೆ ಎಂದು ಕರ್ನಾಟಕ ವಾದಿಸಿತು.

15 ದಿನಗಳಲ್ಲಿ 7.8 ಟಿಎಂಸಿ ನೀರು ಬಿಡುಗಡೆ

ಕರ್ನಾಟಕದ ವಾದದ ಹೊರತಾಗಿಯೂ ತಮಿಳುನಾಡಿಗೆ ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಹರಿಸುವಂತೆ CWRC ಸೂಚಿಸಿದೆ. 15 ದಿನಗಳ ಅವಧಿಯಲ್ಲಿ ಒಟ್ಟು ಸುಮಾರು 7.8 ಟಿಎಂಸಿ ನೀರು ತಮಿಳುನಾಡಿಗೆ ಹರಿಯಲಿದೆ.

ಈ ಆದೇಶದಿಂದ ಕಾವೇರಿ ಜಲಾನಯನ ಪ್ರದೇಶದ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆ ಇದೆ. ಈಗಾಗಲೇ ನೀರಿನ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಹೆಚ್ಚುವರಿ ನೀರು ಬಿಡುಗಡೆ ಮಾಡುವುದು ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ಕರ್ನಾಟಕದ ಮರುಮನವಿ

ಸಿಡಬ್ಲ್ಯೂಆರ್‌ಸಿ ಆದೇಶದ ಬೆನ್ನಲ್ಲೇ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆ ನಡೆಯಲಿದೆ. ಸಿಡಬ್ಲ್ಯೂಆರ್‌ಸಿ ನೀಡಿರುವ ನಿರ್ದೇಶನವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಮತ್ತೊಮ್ಮೆ ತನ್ನ ಮನವಿಯನ್ನು ಪ್ರಾಧಿಕಾರದ ಮುಂದೆ ಮಂಡಿಸಲು ಸಿದ್ಧವಾಗಿದೆ.

ಆದರೆ ಈ ಹಿಂದಿನ ಸಂದರ್ಭಗಳಲ್ಲಿ ಸಿಡಬ್ಲ್ಯೂಆರ್‌ಸಿ ನೀಡಿದ್ದ ನೀರು ಬಿಡುಗಡೆ ಆದೇಶಗಳನ್ನು ಸಿಡಬ್ಲ್ಯೂಆರ್‌ಸಿ ಎತ್ತಿಹಿಡಿದಿರುವುದರಿಂದ, ಈ ಬಾರಿಯೂ ರಾಜ್ಯದ ಪರವಾಗಿ ತೀರ್ಮಾನ ಬರುವ ಸಾಧ್ಯತೆ ಬಗ್ಗೆ ಅನುಮಾನ ಮೂಡಿದೆ.

ರೈತರ ರಕ್ಷಣೆ ಸರ್ಕಾರಕ್ಕೆ ಸವಾಲು

ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರ ಬೆಳೆಗಳಿಗೆ ಮಾತ್ರವಲ್ಲದೆ ಬೆಂಗಳೂರಿನ ಕುಡಿಯುವ ನೀರಿನ ಪೂರೈಕೆಯ ಮೇಲೂ ಪರಿಣಾಮ ಬೀರುವ ಆತಂಕವಿದೆ. ಈ ಹಿನ್ನೆಲೆಯಲ್ಲಿಸಿಡಬ್ಲ್ಯೂಆರ್‌ಸಿ ಆದೇಶವನ್ನು ಸರ್ಕಾರ ಹೇಗೆ ನಿಭಾಯಿಸಲಿದೆ ಎಂಬುದು ಈಗ ಪ್ರಮುಖ ಪ್ರಶ್ನೆಯಾಗಿದೆ.

ಸಿಡಬ್ಲ್ಯೂಆರ್‌ಸಿ ಸಭೆಯ ತೀರ್ಮಾನದ ಬಳಿಕ ಕರ್ನಾಟಕ ಸರ್ಕಾರ ಮುಂದಿನ ಕಾನೂನು ಕ್ರಮಗಳ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಆಯ್ಕೆಯೂ ಸರ್ಕಾರದ ಮುಂದಿದೆ. ಆದರೂ ಹಿಂದಿನ ಕಾವೇರಿ ನೀರು ಹಂಚಿಕೆ ಪ್ರಕರಣಗಳ ಆದೇಶಗಳನ್ನು ಗಮನಿಸಿದರೆ, ಮುಂದಿನ ಬೆಳವಣಿಗೆಗಳ ಬಗ್ಗೆ ಕುತೂಹಲ ಹೆಚ್ಚಿದೆ.

Read More
Next Story