
ಕರ್ನಾಟಕಕ್ಕೆ ದೊಡ್ಡ ಆಘಾತ, ತಮಿಳುನಾಡಿಗೆ 3,500 ಕ್ಯುಸೆಕ್ ಕಾವೇರಿ ನೀರು ಹರಿಸಲು CWRC ಶಿಫಾರಸು
ದೆಹಲಿಯಲ್ಲಿ ನಡೆದ CWRC ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವರ್ಚುವಲ್ ಮೂಲಕ ನಡೆದ ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಆಘಾತ ಎದುರಾಗಿದೆ. ತಮಿಳುನಾಡಿಗೆ ದಿನಕ್ಕೆ 3,500 ಕ್ಯುಸೆಕ್‌ನಂತೆ ಮುಂದಿನ 15 ದಿನಗಳ ಕಾಲ (ಒಟ್ಟು ಸುಮಾರು 4 ಟಿಎಂಸಿ) ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹತ್ವದ ಶಿಫಾರಸು ಮಾಡಿದೆ.
ದೆಹಲಿಯಲ್ಲಿ ನಡೆದ CWRC ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ವರ್ಚುವಲ್ ಮೂಲಕ ನಡೆದ ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಕರ್ನಾಟಕದ ವಾದ ತಿರಸ್ಕರಿಸಿದ ಸಮಿತಿ
ಸಭೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಹಾಗೂ ತಜ್ಞರ ತಂಡವು ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆ ಅಭಾವದ ಕುರಿತು ಅಂಕಿ-ಅಂಶಗಳ ಸಮೇತ ಮಾಹಿತಿ ನೀಡಿತು. ಹಾರಂಗಿ ಜಲಾಶಯವನ್ನು ಹೊರತುಪಡಿಸಿ, ಕೆಆರ್‌ಎಸ್ (KRS), ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಅತ್ಯಂತ ಕಡಿಮೆಯಾಗಿದೆ.
ಬೆಳೆಗಳಿಗೆ ಮಾತ್ರವಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಲಿದೆ ಎಂದು ರಾಜ್ಯ ಸರ್ಕಾರ ಬಲವಾಗಿ ವಾದಿಸಿತು. ಆದಾಗ್ಯೂ, ಕರ್ನಾಟಕದ ಸಂಕಷ್ಟ ಹಾಗೂ ವಾದವನ್ನು ಪರಿಗಣಿಸದ ಸಮಿತಿಯು, ತಮಿಳುನಾಡಿಗೆ ತಕ್ಷಣವೇ ನೀರು ಹರಿಸುವಂತೆ ಸೂಚಿಸಿರುವುದು ರಾಜ್ಯದ ರೈತರಲ್ಲಿ ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸರ್ಕಾರದ ಮುಂದಿನ ನಡೆ ಏನು?
ಸಿಡಬ್ಲ್ಯುಆರ್‌ಸಿ ನೀಡಿರುವ ಈ ಶಿಫಾರಸನ್ನು ಪ್ರಶ್ನಿಸಿ, ಮೇಲಿನ ಹಂತದ 'ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ'ಕ್ಕೆ (CWMA) ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಇಲಾಖೆಯ ಉನ್ನತಾಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ತುರ್ತು ಸಮಾಲೋಚನೆ ನಡೆಸಲಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ನಿಯಮಗಳ ಪ್ರಕಾರ ಸಿಡಬ್ಲ್ಯುಆರ್‌ಸಿ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ ಪ್ರಶ್ನಿಸಲು ಅವಕಾಶವಿದೆ. ಆದರೆ, ಅಲ್ಲಿಯೂ ಪ್ರಾಧಿಕಾರವು ನೀರು ಹರಿಸುವಂತೆ ಆದೇಶ ನೀಡಿದರೆ, ಆ ನಿರ್ಧಾರವೇ ಅಂತಿಮವಾಗಲಿದ್ದು, ಕರ್ನಾಟಕ ನೀರು ಬಿಡಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ..

