ಬೆಂಗಳೂರಿನಿಂದಲೇ ಕಾವೇರಿ ನದಿ ಮಲಿನ; ರಾಷ್ಟ್ರೀಯ ಹಸಿರು ಪೀಠಕ್ಕೆ ತಮಿಳುನಾಡು ದೂರು
x

ಬೆಂಗಳೂರಿನಿಂದಲೇ ಕಾವೇರಿ ನದಿ ಮಲಿನ; ರಾಷ್ಟ್ರೀಯ ಹಸಿರು ಪೀಠಕ್ಕೆ ತಮಿಳುನಾಡು ದೂರು

ಬೆಂಗಳೂರಿನಿಂದ ಕಾವೇರಿ ನದಿಗೆ ಹರಿದು ಬರುವ ಕಲುಷಿತ ನೀರು ನೇರವಾಗಿ ಮೆಟ್ಟೂರು ಜಲಾಶಯ ಸೇರುತ್ತಿದೆ. ಇದರಿಂದ ಲಕ್ಷಾಂತರ ಜನರ ಕುಡಿಯುವ ನೀರು ಮತ್ತು ಕೃಷಿಗೆ ಗಂಭೀರ ಅಪಾಯ ಎದುರಾಗಿದೆ ಎಂದು ತಮಿಳುನಾಡು ಆರೋಪಿಸಿದೆ.


ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟಿನ ನಡುವೆಯೇ ಬೆಂಗಳೂರಿನ ಒಳಚರಂಡಿ ಮತ್ತು ಕೈಗಾರಿಕಾ ತ್ಯಾಜ್ಯದಿಂದಲೇ ಕಾವೇರಿ ನದಿ ಸಂಪೂರ್ಣ ಮಲಿನವಾಗಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರ ಇದೀಗ ರಾಷ್ಟ್ರೀಯ ಹಸಿರುಪೀಠಕ್ಕೆ ದೂರು ಸಲ್ಲಿಸಿದೆ. ಕಾವೇರಿ ನೀರಿನ ಗದ್ದಲದ ಮಧ್ಯೆ ತಮಿಳುನಾಡಿನ ಹೊಸ ಖ್ಯಾತೆಗೆ ಕರ್ನಾಟಕ ಎಚ್ಚೆತ್ತುಕೊಂಡಿದ್ದು, ತ್ಯಾಜ್ಯ ನೀರಿನ ಸಂಸ್ಕರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಲ್ಲದೇ ಈ ಹೊಸ ಖ್ಯಾತೆ ಎರಡೂ ರಾಜ್ಯಗಳ ಮಧ್ಯೆ ಹೊಸ ಬಿಕ್ಕಟ್ಟಿಗೂ ಕಾರಣವಾಗಿದೆ.

ತಮಿಳುನಾಡಿನ ದೂರು ಏನು?

ಬೆಂಗಳೂರು ಹಾಗೂ ಇತರೆಡೆಗಳಿಂದ ಕಾವೇರಿ ನದಿಗೆ ಹರಿದು ಬರುವ ಕಲುಷಿತ ನೀರು ನೇರವಾಗಿ ಮೆಟ್ಟೂರು ಜಲಾಶಯ ಸೇರುತ್ತಿದೆ. ಇದರಿಂದ ಲಕ್ಷಾಂತರ ಜನರ ಕುಡಿಯುವ ನೀರು ಮತ್ತು ಕೃಷಿಗೆ ಗಂಭೀರ ಅಪಾಯ ಎದುರಾಗಿದೆ.

ಕರ್ನಾಟಕ ಸರ್ಕಾರವು ತನ್ನ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ನದಿ ಮಲಿನವಾಗಿದೆ. ರಾಜ್ಯದ ಗಡಿ ದಾಟುವ ಮುನ್ನವೇ ಕೈಗಾರಿಕಾ ತ್ಯಾಜ್ಯ ನದಿ ಸೇರುವುದನ್ನು ತಡೆಯುವಲ್ಲಿ ಅಲ್ಲಿನ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ತಮಿಳುನಾಡು ದೂರಿದೆ. ಬೆಂಗಳೂರಿನಿಂದ ಅಪಾರ ಪ್ರಮಾಣದ ಕೊಳಚೆ ನೀರು ವೃಷಭಾವತಿ ನದಿ ಕಣಿವೆ ಮೂಲಕ ಕಾವೇರಿ ನದಿ ಜಲಾನಯನ ಪ್ರದೇಶ ಸೇರುತ್ತಿದೆ ಎಂದು ತಮಿಳುನಾಡು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.

ಬಿಳಿಗುಂಡ್ಲು ಮುಂತಾದ ಅಂತರರಾಜ್ಯ ಮಾಪನ ಕೇಂದ್ರಗಳನ್ನು ತಲುಪುವ ಮುಂಚೆಯೇ ನೀರಿನ ಗುಣಮಟ್ಟ ಸಂಪೂರ್ಣ ಹದಗೆಡುತ್ತಿದ್ದು, ತಮಿಳುನಾಡಿನ ಕುಡಿಯುವ ನೀರಿನ ಯೋಜನೆಗಳಿಗೆ ಭಾರೀ ತೊಂದರೆಯಾಗುತ್ತಿದೆ ಎಂದು ಆರೋಪಿಸಿದೆ.

ಕರ್ನಾಟಕದ ವಾದವೇನು?

ಕಾವೇರಿ ನದಿ ಮಾಲಿನ್ಯದ ಕುರಿತು ತಮಿಳುನಾಡು ದೂರಿಗೆ ಸಂಬಂಧಿಸಿ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ರಾಮಲಿಂಗಾ ರೆಡ್ಡಿ ಅವರು, "ಬೆಂಗಳೂರಿನಲ್ಲಿ ಒಟ್ಟು 2375 ದಶಲಕ್ಷ ಲೀಟರ್(MLD) ನೀರು ಬಳಕೆಯಾಗುತ್ತಿದೆ. ಇದರಲ್ಲಿ 4 MLD ಬೋರ್ವೆಲ್ ನೀರು ಸೇರಿದೆ. ಬಳಕೆಯಾದ ಬಳಿಕ ಸುಮಾರು 2000 MLD ಕಲುಷಿತ ನೀರು ಹೊರಬರುತ್ತಿದೆ. ಸದ್ಯ 1215 MLD ನೀರು ಹರಿದು ಹೋಗುತ್ತಿದ್ದು, ವೃಷಭಾವತಿ ಮೂಲಕ ಕಾವೇರಿ ನದಿ ಸೇರುತ್ತಿದೆ." ಎಂದು ವಿವರಿಸಿದ್ದಾರೆ.

ಎನ್‌ಜಿಟಿ ವಿಚಾರಣೆ ಹಿನ್ನೆಲೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಸಂಸ್ಕರಣಾ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಸಂಸ್ಕರಿಸದ ನೈರ್ಮಲ್ಯ ನೀರು ನದಿಗೆ ಸೇರದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕೈಗಾರಿಕೆಗಳಿಗೆ ಕಠಿಣ ಎಚ್ಚರಿಕೆ

ಕಾವೇರಿ ನದಿಯ ಉಗಮ ಸ್ಥಾನದಿಂದ ತಮಿಳುನಾಡು ಪ್ರವೇಶಿಸುವವರೆಗೂ ನದಿ ಮಾಲಿನ್ಯ ತಡೆಯಲು ಸರ್ಕಾರ ಬದ್ಧವಾಗಿದೆ. ಅನಧಿಕೃತವಾಗಿ ನದಿಗೆ ಕಲುಷಿತ ನೀರು ಬಿಡುವ ಕೈಗಾರಿಕೆಗಳನ್ನು ಮುಲಾಜಿಲ್ಲದೆ ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಹರಿದುಹೋಗುತ್ತಿರುವ ನೀರನ್ನು ಕೃಷಿ ಅಥವಾ ಇತ್ಯಾದಿ ಕೆಲಸಗಳಿಗೆ ಎರಡನೇ ಬಾರಿಗೆ ಮರುಬಳಕೆ ಮಾಡಿಕೊಳ್ಳುವ ಪ್ರಮಾಣವನ್ನು ಇನ್ನು ಹೆಚ್ಚಿಸಬೇಕಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಯಾವುದೇ ಕಾರ್ಖಾನೆಗಳು ತ್ಯಾಜ್ಯವನ್ನು ಸಂಸ್ಕರಿಸದೇ ಚರಂಡಿಗೆ ಹರಿಸಿದರೆ ವಿದ್ಯುತ್‌ ಕಡಿತ ಮಾಡಲಾಗುವುದು. ಬೆಂಗಳೂರಿನಲ್ಲಿ ಎಲ್ಲೆಲ್ಲಿ ತ್ಯಾಜ್ಯ ನೀರನ್ನು ವೃಷಾಭಾವತಿಗೆ ಹರಿಸಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗುವುದು. ಎರಡನೇ ಹಂತದಲ್ಲಿ ಸಂಸ್ಕರಿಸದೇ ಚರಂಡಿಗೆ ತ್ಯಾಜ್ಯ ಹರಿಸುವ ಕಾರ್ಖಾನೆಗಳು, ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳ ವಿದ್ಯುತ್‌ ಸಂಪರ್ಕ ಕಡಿತಗೊಳಿಸಲಾಗುವುದು. ಈ ಸಂಬಂಧ ಬೆಸ್ಕಾಂ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ರಾಮಲಿಂಗಾ ರೆಡ್ಡಿ ಹೇಳಿದ್ಧಾರೆ.

ಒಟ್ಟಾರೆ, ಎರಡೂ ರಾಜ್ಯಗಳ ನಡುವಿನ ಈ ಜಲವಿವಾದವು ಕೇವಲ ರಾಜಕೀಯ ವಿಷಯವಷ್ಟೇ ಅಲ್ಲದೆ, ಲಕ್ಷಾಂತರ ನಾಗರಿಕರ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಗಂಭೀರ ಸವಾಲಾಗಿದೆ.

Read More
Next Story