x

ಕಾವೇರಿ ಸಂಘರ್ಷ: 30 ಸಾವಿರ ಕ್ಯೂಸೆಕ್‌ ಹರಿಸಿದ್ರೂ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಕರ್ನಾಟಕದ ಜಲಾಶಯಗಳಿಂದ 30,000 ಕ್ಯೂಸೆಕ್‌ ನೀರು ಹರಿಯುತ್ತಿದ್ದರೂ ತಮಿಳುನಾಡು ಮತ್ತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದೆ. ಕಾವೇರಿ ವಿವಾದದ ಪೂರ್ಣ ವಿವರ ಇಲ್ಲಿದೆ.


ಕಾವೇರಿ ನದಿ ನೀರು ಹಂಚಿಕೆ ವಿವಾದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಒಂದೆಡೆ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರಮುಖ ಜಲಾಶಯಗಳು ಭರ್ತಿಯಾಗಿ ಕೋಡಿ ಹರಿಯುತ್ತಿದ್ದರೆ, ಇನ್ನೊಂದೆಡೆ ತಮಿಳುನಾಡು ಸರ್ಕಾರ ತಮಗೆ ನ್ಯಾಯಸಮ್ಮತ ಪಾಲು ಸಿಗುತ್ತಿಲ್ಲ ಎಂದು ಆರೋಪಿಸಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಕರ್ನಾಟಕ ಈಗಾಗಲೇ ದಿನಕ್ಕೆ ಸುಮಾರು 30,000 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸುತ್ತಿರುವಾಗ, ನೆರೆ ರಾಜ್ಯ ತಮಿಳುನಾಡು ಮತ್ತೆ ನ್ಯಾಯಾಲಯದ ಮೊರೆ ಹೋಗಿರುವುದು ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಜಲಾಶಯಗಳು ಭರ್ತಿ: 30,000 ಕ್ಯೂಸೆಕ್‌ ನೀರು ಬಿಡುಗಡೆ

ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾವೇರಿ ಕಣಿವೆಯ ಜಲಾಶಯಗಳಿಗೆ ಹರಿವು ತೀವ್ರಗೊಂಡಿದೆ. ಕೆಆರ್‌ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯಗಳ ಒಳಹರಿವು ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೂ ನೀರಿನ ಹರಿವು ಏರಿಕೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಈ ಹಿಂದೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿದ್ದ ಆದೇಶದಂತೆ ತಮಿಳುನಾಡಿಗೆ ದಿನಕ್ಕೆ 3,500 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲು ಸೂಚಿಸಲಾಗಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಮಳೆ ಹೆಚ್ಚಾಗಿರುವುದರಿಂದ ಜಲಾಶಯಗಳು ಭರ್ತಿಯಾಗಿದ್ದು, ಪ್ರಸ್ತುತ ತಮಿಳುನಾಡಿನತ್ತ ಸುಮಾರು 30,000 ಕ್ಯೂಸೆಕ್ಸ್ ನೀರನ್ನು ಹರಿಸಲಾಗುತ್ತಿದೆ," ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಿದ್ದು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.

ಕಾವೇರಿ ಸರ್ವಪಕ್ಷಗಳ ಸಭೆಯಲ್ಲಿ ಸಿಎಂ ಸ್ಪಷ್ಟನೆ

ಕಾವೇರಿ ನೀರು ಹಂಚಿಕೆ ಹಾಗೂ ಜಲಾಶಯಗಳ ಸ್ಥಿತಿಗತಿ ಕುರಿತು ಕರೆಯಲಾಗಿದ್ದ ಮಹತ್ವದ ಸರ್ವಪಕ್ಷ ಸಭೆಯಲ್ಲಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, "ರಾಜ್ಯದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆಯಿಂದ ನೀರು ಸಂಗ್ರಹಿಸಿಡಲಾಗಿದೆ. ಸದ್ಯ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಡ್ಯಾಮ್ ಭರ್ತಿಯಾಗಿರುವುದರಿಂದ ಹೆಚ್ಚುವರಿ ಒಳಹರಿವನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ. ಹೀಗಾಗಿ ನದಿಗೆ ಸಹಜ ಹರಿವನ್ನು ಬಿಡಲಾಗುತ್ತಿದೆ," ಎಂದಿದ್ದಾರೆ.

CWMA ಆದೇಶ ಏನಿತ್ತು?

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ (CWRC) ಆದೇಶವನ್ನು ಎತ್ತಿಹಿಡಿಯಲಾಗಿತ್ತು. ಅದರಂತೆ ಜುಲೈ 29 ರಿಂದ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಲಾಗಿತ್ತು. ಆದರೆ ಈ ಆದೇಶದ ಬೆನ್ನಲ್ಲೇ ತಮಿಳುನಾಡು ಸರ್ಕಾರ ತನ್ನ ಅಸಮಾಧಾನ ಹೊರಹಾಕಿದೆ.

ತಮಿಳುನಾಡು ಸರ್ಕಾರದ ವಾದವೇನು?

1. ಬಿಲಿಗುಂಡ್ಲು ಹರಿವಿನ ಕೊರತೆ: ಜುಲೈ 29 ರಿಂದ ಆಗಸ್ಟ್ 2 ರವರೆಗೆ ಬಿಳಿಗುಂಡ್ಲು ಗೇಜಿಂಗ್ ಕೇಂದ್ರದಲ್ಲಿ ದಾಖಲಾಗಿರುವ ನೀರಿನ ಹರಿವು ಕೇವಲ 158 ರಿಂದ 550 ಕ್ಯೂಸೆಕ್ಸ್ ಮಾತ್ರ. ಆದೇಶದ ಪ್ರಮಾಣಕ್ಕೆ ಹೋಲಿಸಿದರೆ ಇದು ತೀರಾ ಕಡಿಮೆಯಾಗಿದೆ.

2. ಜಲಾಶಯಗಳ ಸಂಗ್ರಹ: ಆಗಸ್ಟ್ 3 ರ ವೇಳೆಗೆ ಕರ್ನಾಟಕದ ನಾಲ್ಕು ಪ್ರಮುಖ ಜಲಾಶಯಗಳಲ್ಲಿ (KRS, ಕಬಿನಿ, ಹಾರಂಗಿ, ಹೇಮಾವತಿ) ಒಟ್ಟು 77.537 ಟಿಎಂಸಿ ನೀರು ಸಂಗ್ರಹವಾಗಿದೆ.

3. ನೀರಿನ ಲೆಕ್ಕಾಚಾರ: ಜಲಾಶಯಗಳ ಸಂಗ್ರಹ ಮಟ್ಟಕ್ಕೆ ಅನುಗುಣವಾಗಿ ಬಿಳಿಗುಂಡ್ಲು ಬಳಿ ತಮಿಳುನಾಡಿಗೆ 26.954 ಟಿಎಂಸಿ ನೀರು ತಲುಪಬೇಕಿತ್ತು. ಆದರೆ CWMA ಹಂಚಿಕೆ ಮಾಡಿರುವುದು ಕೇವಲ 4.536 ಟಿಎಂಸಿ ಮಾತ್ರ. ಇದು ತಮಗೆ ಉಂಟಾದ ಅನ್ಯಾಯ ಎಂದು ವಾದಿಸಿದೆ.

Read More
Next Story