
Cabinet Meeting| ರೋಹಿತ್ ವೇಮುಲಾ ಕಾಯ್ದೆಗೆ ಸಚಿವ ಸಂಪುಟ ಅನುಮೋದನೆ
ರಾಜ್ಯದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ 2025 ಏ.16 ರಂದು ಪತ್ರ ಬರೆದಿದ್ದರು.
ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯುವ ಸಲುವಾಗಿ ರೋಹಿತ್ ವೇಮುಲಾ ಕಾಯ್ದೆ ಜಾರಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಬೆಂಗಳೂರಿನ ವಿಧಾನಸೌಧದಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕ ವಿಧೇಯಕಕ್ಕೆ ಅನುಮೋದನೆ ನೀಡಲಾಯಿತು. ಮುಂದಿನ ಬಜೆಟ್ ಅಧಿವೇಶನದಲ್ಲಿ ವಿಧೇಯಕ ಮಂಡನೆ ಮಾಡಲು ಸಂಪುಟ ಸಭೆ ನಿರ್ಣಯಿಸಿದೆ.
2025ಜೂನ್ 19ರಂದು ನಡೆದಿದ್ದ ಸಂಪುಟ ಸಭೆಯಲ್ಲಿ ಕಾಯ್ದೆಯನ್ನು ಪ್ರಸ್ತಾಪಿಸಲಾಗಿತ್ತು. ವಿಸ್ತೃತ ಚರ್ಚೆ ಅಗತ್ಯವಿರುವ ಹಿನ್ನೆಲೆಯಲ್ಲಿ ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ.
ರಾಜ್ಯದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ 2025 ಏ.16 ರಂದು ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಸಿಎಂ ಅವರು ಅಧಿವೇಶನದಲ್ಲಿ ಕಾಯ್ದೆ ಜಾರಿಗೊಳಿಸುವ ಭರವಸೆ ನೀಡಿದ್ದರು. ಅದರಂತೆ ರೋಹಿತ್ ವೇಮುಲ ಕಾಯ್ದೆ ಸಿದ್ದಪಡಿಸಿ ಸಂಪುಟ ಮುಂದೆ ಇಡಲಾಗಿತ್ತು. ಸಾಕಷ್ಟು ಚರ್ಚೆಯ ಬಳಿಕ ಇಂದು ಸಚಿವ ಸಂಪುಟ ಸಭೆಯಲ್ಲಿ ವಿಧೇಯಕಕ್ಕೆ ಅನುಮೋದನೆ ನೀಡಲಾಗಿದೆ.
ಕಾಯ್ದೆ ಜಾರಿಗೆ ತಂದ ಮೊದಲ ರಾಜ್ಯ
ರೋಹಿತ್ ವೇಮುಲಾ ಕಾಯ್ದೆಯನ್ನು ಮುಂದಿನ ಬಜೆಟ್ ಅಧಿವೇಶನದಲ್ಲಿ ಜಾರಿಗೆ ತಂದರೆ ಇಂತಹ ಕಾನೂನನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಕರ್ನಾಟಕವಾಗಲಿದೆ. ಇದು ಶಿಕ್ಷಣದಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವಲ್ಲಿ ರಾಷ್ಟ್ರವ್ಯಾಪಿ ಸುಧಾರಣೆಗಳಿಗೆ ಪೂರ್ವನಿದರ್ಶನ ಆಗಲಿದೆ. ಅಲ್ಲದೇ ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಭೇದ-ಭಾವ ವಿರೋಧಿ ಘಟಕಗಳನ್ನು ಸ್ಥಾಪಿಸಲು ಮತ್ತು ಜಾತಿ ಆಧಾರಿತ ಹಲ್ಲೆ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಕಲ್ಪಿಸಲಿದೆ.
ವೇಮುಲಾ ಕಾಯ್ದೆಯ ಅನುಕೂಲ ಏನು?
ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ವಿರೋಧಿ ಘಟಕಗಳನ್ನು ಕಡ್ಡಾಯವಾಗಿ ಸ್ಥಾಪಿಸಲಾಗುತ್ತದೆ. ಸಾಂಸ್ಥಿಕ ತಾರತಮ್ಯಕ್ಕೆ ಕಠಿಣ ದಂಡಗಳು ವಿಧಿಸಲು ಅವಕಾಶ ಇರಲಿದೆ.
ವಿಶ್ವವಿದ್ಯಾನಿಲಯಗಳಲ್ಲಿ ಸ್ವತಂತ್ರ ಕುಂದುಕೊರತೆ ನಿವಾರಣಾ ಘಟಕಗಳನ್ನು ಸ್ಥಾಪಿಸಲು ಅವಕಾಶ ನೀಡಲಿದೆ. ನಿರ್ಲಕ್ಷ್ಯ ಅಥವಾ ಪಕ್ಷಪಾತದ ಪ್ರಕರಣಗಳಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಬಹುದಾಗಿಸಿದೆ.
ರೋಹಿತ್ ವೇಮುಲಾ ಆತ್ಮಹತ್ಯೆ ಏಕೆ?
ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲಾ ಅವರು 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾಲೇಜಿನಲ್ಲಿ ಜಾತಿ ಆಧಾರಿತ ಭೇದಭಾವ ಮತ್ತು ಅನ್ಯಾಯದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ನಲ್ಲಿ ಆರೋಪಿಸಿದ್ದರು.
ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ (ASA) ಸದಸ್ಯರಾಗಿದ್ದ ವೇಮುಲಾ, ಜಾತಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ, 2015ರ ಆಗಸ್ಟ್‌ನಲ್ಲಿ ವೇಮುಲಾ ಮತ್ತು ಇತರ ನಾಲ್ವರನ್ನು ಹಾಸ್ಟೆಲ್‌ನಿಂದ ಉಚ್ಚಾಟಿಸಲಾಗಿತ್ತು. ಇದರಿಂದ ಮಾನಸಿಕವಾಗಿ ನೊಂದಿದ್ದ ವೇಮುಲಾ ಆತ್ಮಹತ್ಯೆ ಮಾಡಿಕೊಂಡಿದ್ದರು.
ವೇಮುಲಾ ಸಾವಿನ ನಂತರ ದೇಶಾದ್ಯಂತ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಅವರ ತಾಯಿ ರಾಧಿಕಾ ವೇಮುಲಾ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. 2024ರಲ್ಲಿ ತೆಲಂಗಾಣ ಪೊಲೀಸರು ಪ್ರಕರಣದ ತನಿಖೆ ನಡೆಸಿ, ಪರಿಸಮಾಪ್ತಿ ವರದಿ ಸಲ್ಲಿಸಿದ್ದರು.

