
ಕೇಂದ್ರ ಸರ್ಕಾರದಿಂದ 23 ಸಾವಿರ ಕೋಟಿಯ 'ಗೋಬರ್-ಧನ್' ಯೋಜನೆಗೆ ಹಸಿರು ನಿಶಾನೆ
ಕೃಷಿ ತ್ಯಾಜ್ಯ, ದನದ ಸಗಣಿ, ಸಾವಯವ ತ್ಯಾಜ್ಯಗಳನ್ನು ಕೇವಲ ಕಸವೆಂದು ಪರಿಗಣಿಸದೆ, ಅವುಗಳನ್ನು ಸಂಸ್ಕರಿಸಿ ಸ್ವಚ್ಛ ಇಂಧನವಾಗಿ ಪರಿವರ್ತಿಸುವುದು ಗೋಬರ್-ಧನ್ ಯೋಜನೆಯ ಮುಖ್ಯ ಗುರಿಯಾಗಿದೆ.
ದೇಶದ ಇಂಧನ ಭದ್ರತೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ದಿಕ್ಕಿನಲ್ಲಿ ಕೇಂದ್ರ ಸರ್ಕಾರವು ಎರಡು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಪರಿಸರ ಸ್ನೇಹಿ ಇಂಧನ ಉತ್ಪಾದನೆಗೆ ಒತ್ತು ನೀಡುವ 'ಗೋಬರ್-ಧನ್' ರಾಷ್ಟ್ರೀಯ ವೃತ್ತಾಕಾರದ ಬಯೋಎನರ್ಜಿ ಯೋಜನೆಗೆ ಹಸಿರು ನಿಶಾನೆ ತೋರಿಸಲಾಗಿದೆ. ಇದರ ಜೊತೆಗೆ, ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಬರೋಬ್ಬರಿ 8,970 ಕೋಟಿ ರೂಪಾಯಿಗಳ ಬೃಹತ್ ಹೆದ್ದಾರಿ ಯೋಜನೆಗೂ ಅನುಮೋದನೆ ನೀಡಲಾಗಿದೆ.
ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಗೋಬರ್-ಧನ್ ಯೋಜನೆ ಭಾರತದ ಸ್ವಚ್ಛ ಇಂಧನ ಪ್ರಯಾಣದಲ್ಲಿ ಒಂದು ಹೊಸ ಶಕೆ ಎಂದು ಬಣ್ಣಿಸಿದ್ದಾರೆ.
ಕೃಷಿ ತ್ಯಾಜ್ಯ, ದನದ ಸಗಣಿ, ಕಬ್ಬಿನ ಗದ್ದೆಯ ಪ್ರೆಸ್ ಮಡ್, ನಗರದ ಸಾವಯವ ತ್ಯಾಜ್ಯ ಮತ್ತು ಇತರೆ ಜೈವಿಕ ಸಂಪನ್ಮೂಲಗಳನ್ನು ಕೇವಲ ಕಸವೆಂದು ಪರಿಗಣಿಸದೆ, ಅವುಗಳನ್ನು ಸಂಸ್ಕರಿಸಿ ಕ್ಲೀನ್ ಫ್ಯೂಯಲ್ (ಸ್ವಚ್ಛ ಇಂಧನ) ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 23,731 ಕೋಟಿ ರೂಪಾಯಿಗಳಾಗಿದ್ದು, ಇದು 2026-27 ರಿಂದ 2035-36ರ ಅವಧಿಯಲ್ಲಿ ಹಂತ ಹಂತವಾಗಿ ಜಾರಿಯಾಗಲಿದೆ. ಈ ಬೃಹತ್ ಯೋಜನೆಯು ದೇಶಾದ್ಯಂತ ಸುಮಾರು 1.5 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಸರ್ಕಾರ ಅಂದಾಜಿಸಿದೆ. ಭಾರತದ ಇಂಧನ ಮಿಶ್ರಣದಲ್ಲಿ ಕಂಪ್ರೆಸ್ಡ್ ಬಯೋಗ್ಯಾಸ್ ಅನ್ನು ಪ್ರಮುಖ ಸ್ತಂಭವನ್ನಾಗಿ ಸ್ಥಾಪಿಸುವುದು ಯೋಜನೆಯ ಧ್ಯೇಯವಾಗಿದೆ. ಪ್ರಸ್ತುತ ಉತ್ಪಾದನೆಯನ್ನು ಸುಮಾರು 10 ಪಟ್ಟು ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದು ಖಾಸಗಿ ಹೂಡಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯಲಿದೆ. ಈ ಯೋಜನೆಯು ಗ್ರಾಮೀಣ ಭಾಗದಲ್ಲಿ ರೈತರ ಆದಾಯವನ್ನು ಹೆಚ್ಚಿಸುವುದಲ್ಲದೆ, ರಾಷ್ಟ್ರೀಯ ಆರ್ಥಿಕತೆಗೆ ಭಾರಿ ಮೌಲ್ಯವನ್ನು ಸೇರಿಸಲಿದೆ. ಸ್ವಚ್ಛ ಭಾರತದ ಕನಸಿಗೆ ಇದು ಇಂಧನ ನೀಡುವ 'ಬಯೋ-ಕ್ರಾಂತಿ'ಯಾಗಲಿದೆ ಎಂದು ಹೇಳಿದರು.
ಅಸ್ಸಾಂಗೆ ಹೆದ್ದಾರಿ ಭಾಗ್ಯ: 135 ಕಿ.ಮೀ. ನಾಲ್ಕು ಪಥದ ರಸ್ತೆ
ಸಂಪುಟವು ಅಸ್ಸಾಂನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಗುವಾಹಟಿ ಸಮೀಪದ ಬೈಹಾಟಾ ಚರಿಯಾಲಿಯಿಂದ ತೇಜ್‌ಪುರದವರೆಗೆ ರಾಷ್ಟ್ರೀಯ ಹೆದ್ದಾರಿ-15 (NH-15) ಅನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸಲು ಅನುಮೋದನೆ ದೊರೆತಿದೆ. ಒಟ್ಟು 135.87 ಕಿಲೋಮೀಟರ್ ಉದ್ದದ ಈ ಯೋಜನೆಗೆ 8,970 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಯೋಜನೆಯನ್ನು 'ಬಿಲ್ಟ್-ಆಪರೇಟ್-ಟ್ರಾನ್ಸ್‌ಫರ್' ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈ ಯೋಜನೆಯ ಅತ್ಯಂತ ಆಕರ್ಷಕ ಅಂಶವೆಂದರೆ, ತೇಜ್‌ಪುರ ಬೈಪಾಸ್‌ನಲ್ಲಿ ಭಾರತೀಯ ವಾಯುಪಡೆಯ ಸಹಯೋಗದೊಂದಿಗೆ 'ತುರ್ತು ಭೂಸ್ಪರ್ಶ ಸೌಲಭ್ಯ' ನಿರ್ಮಾಣ. ಯುದ್ಧ ಅಥವಾ ವಿಪತ್ತಿನ ಸಮಯದಲ್ಲಿ ಇದು ವಾಯುಪಡೆಗೆ ವರದಾನವಾಗಲಿದೆ. ಬೈಹಾಟಾ ಚರಿಯಾಲಿ, ಸಿಪಾಜರ್, ಖರುಪೇಟಿಯಾ, ದೇಕಿಯಾಜುಲಿ ಮತ್ತು ತೇಜ್‌ಪುರದಂತಹ ಜನನಿಬಿಡ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು 58.7 ಕಿ.ಮೀ. ಉದ್ದದ ಐದು ಬೃಹತ್ ಬೈಪಾಸ್‌ಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.
ಈ ಯೋಜನೆಯಿಂದಾಗುವ ಲಾಭಗಳು
ಸರಾಸರಿ ಪ್ರಯಾಣದ ವೇಗವು ಶೇ. 100 ರಷ್ಟು ಹೆಚ್ಚಾಗಲಿದ್ದು, ಗಮ್ಯಸ್ಥಾನ ತಲುಪುವ ಸಮಯವು ಅರ್ಧಕ್ಕೆ ಇಳಿಯಲಿದೆ. ಉತ್ತಮ ರಸ್ತೆ ಸಂಪರ್ಕದಿಂದ ಸ್ಥಳೀಯ ವ್ಯಾಪಾರ-ವಹಿವಾಟುಗಳಿಗೆ ಉತ್ತೇಜನ ಸಿಗಲಿದೆ. ವಾಹನಗಳ ಕಾರ್ಯಾಚರಣೆ ವೆಚ್ಚ ಕಡಿಮೆಯಾಗಲಿದೆ ಮತ್ತು ಇಂಧನ ದಕ್ಷತೆ ಹೆಚ್ಚಲಿದೆ. ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಆಧುನಿಕ ಸುರಕ್ಷತಾ ಮಾನದಂಡಗಳನ್ನು ಅಳವಡಿಸಲಾಗುವುದು.

