
20 ಸಾವಿರ ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ, ಸೇತುವೆಗಳ ಅಭಿವೃದ್ಧಿಗೆ ಸಂಪುಟ ಒಪ್ಪಿಗೆ
ರಾಜ್ಯದ ಎಲ್ಲಾ ಭಾಗಗಳಲ್ಲೂ ಸುಗಮ ಸಂಚಾರ ಕಲ್ಪಿಸುವುದು ಮತ್ತು ಗ್ರಾಮೀಣ ಆರ್ಥಿಕತೆಗೆ ಬಲ ನೀಡಲು ರಸ್ತೆ ಜಾಲಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿ ಮಹತ್ವದ ನಿರ್ಣಯ ಕೈಗೊಂಡಿದೆ.
ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ವೇಗ ನೀಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸಚಿವ ಸಂಪುಟ ಕೈಗೊಂಡಿದೆ. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ಸಂಪರ್ಕ ಕೊಂಡಿಗಳು ಹಾಗೂ ಸೇತುವೆಗಳ ಸಮಗ್ರ ಅಭಿವೃದ್ಧಿಗಾಗಿ ಬರೋಬ್ಬರಿ 20 ಸಾವಿರ ಕೋಟಿ ರೂಪಾಯಿಗಳ ಬೃಹತ್ ಯೋಜನೆಗೆ ಸಚಿವ ಸಂಪುಟ ಸಭೆಯು ಅಧಿಕೃತ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯದ ಎಲ್ಲಾ ಭಾಗಗಳಲ್ಲೂ ಸುಗಮ ಸಂಚಾರ ಕಲ್ಪಿಸುವುದು ಮತ್ತು ಗ್ರಾಮೀಣ ಆರ್ಥಿಕತೆಗೆ ಬಲ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ರಸ್ತೆ ಜಾಲದ ಸಂಪೂರ್ಣ ಕಾಯಕಲ್ಪಕ್ಕೆ ಸಂಪುಟ ಅನುಮೋದನೆ ನೀಡಿದೆ.
ಸಂಪುಟ ಸಭೆಯಲ್ಲಿ ಅನುಮೋದನೆಗೊಂಡ 20 ಸಾವಿರ ಕೋಟಿ ರೂಪಾಯಿಗಳ ಅನುದಾನವನ್ನು ವಿವಿಧ ಪ್ರಮುಖ ವಿಭಾಗಗಳಿಗೆ ಹಂಚಿಕೆ ಮಾಡಲಾಗಿದೆ. ಒಂದು ಜಿಲ್ಲಾ ಕೇಂದ್ರದಿಂದ ಮತ್ತೊಂದು ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಹಾಗೂ ತಾಲೂಕು ಕೇಂದ್ರಗಳಿಂದ ಅಕ್ಕಪಕ್ಕದ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷೆಯ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ. ಒಟ್ಟು 3,986 ಕಿ.ಮೀ. ಉದ್ದದ ರಸ್ತೆ ಜಾಲವನ್ನು 6 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಸಂಪುಟ ಸಮ್ಮತಿಸಿದೆ. ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ರಸ್ತೆಗಳು, ಸೇತುವೆಗಳು ಮತ್ತು ಸರ್ಕಾರಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುಬಂಧ-ಇ ಅಡಿಯಲ್ಲಿ 6 ಸಾವಿರ ಕೋಟಿ ರೂ. ಅಂದಾಜು ವೆಚ್ಚಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಹಂತ 5, ಘಟ್ಟ 2ರ ಅಡಿಯಲ್ಲಿ ರಾಜ್ಯಾದ್ಯಂತ ಒಟ್ಟು 1,897 ಕಿ.ಮೀ. ಉದ್ದದ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ರಾಜ್ಯದ ತುರ್ತು ಮತ್ತು ಆದ್ಯತೆಯ ರಸ್ತೆ ಕಾಮಗಾರಿಗಳಿಗಾಗಿ ಹೆಚ್ಚುವರಿಯಾಗಿ 3 ಸಾವಿರ ಕೋಟಿ ಅನುದಾನವನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ.
ಬೆಂಗಳೂರು ಸುತ್ತಮುತ್ತಲ ರಸ್ತೆಗಳಿಗೆ 3,409 ಕೋಟಿ ರೂ. ಪರಿಷ್ಕೃತ ಅನುಮೋದನೆ
ಬೆಂಗಳೂರು ನಗರ ಹಾಗೂ ಅದರ ಸುತ್ತಮುತ್ತಲಿನ ಉಪನಗರಗಳಲ್ಲಿ ತೀವ್ರವಾಗಿರುವ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಯೋಜನೆಗೆ ಪರಿಷ್ಕೃತ ಅನುಮೋದನೆ ನೀಡಲಾಗಿದೆ.
ಬೆಂಗಳೂರು ಸುತ್ತಮುತ್ತಲಿನ ಒಟ್ಟು 155 ಕಿ.ಮೀ. ರಸ್ತೆಗಳನ್ನು ಇ.ಪಿ.ಸಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು 2017ರಲ್ಲಿಯೇ 2,095 ಕೋಟಿ ರೂ. ವೆಚ್ಚದಲ್ಲಿ ಅನುಮೋದನೆ ನೀಡಲಾಗಿತ್ತು. 2019ರಲ್ಲಿ ಈ ಕಾಮಗಾರಿಗಳು ಅಧಿಕೃತವಾಗಿ ಆರಂಭವಾಗಿದ್ದವು. ಪರಿಷ್ಕೃತಗೊಂಡ 142.27 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೈಕಿ ಈಗಾಗಲೇ 121.78 ಕಿ.ಮೀ. ರಸ್ತೆ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಕಾಮಗಾರಿಯ ವ್ಯಾಪ್ತಿ ವಿಸ್ತರಣೆ ಮತ್ತು ಭೂಸ್ವಾಧೀನ ಸೇರಿದಂತೆ ಇತರೆ ವೆಚ್ಚಗಳನ್ನು ಸರಿದೂಗಿಸಲು ಒಟ್ಟು 10 ಪ್ಯಾಕೇಜ್ಗಳಲ್ಲಿ ನಡೆಯುತ್ತಿರುವ ಈ ಯೋಜನೆಗೆ 3,409.02 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಈ ಯೋಜನೆಯಿಂದಾಗಿ ಬೆಂಗಳೂರು ಹೊರವಲಯದ ಪ್ರಮುಖ ಕೈಗಾರಿಕಾ ಪ್ರದೇಶಗಳು, ಐಟಿ ಕಾರಿಡಾರ್ಗಳು ಹಾಗೂ ಹೆದ್ದಾರಿಗಳಿಗೆ ಪರ್ಯಾಯ ಸಂಪರ್ಕ ದೊರೆಯಲಿದ್ದು, ನಗರದ ಕೇಂದ್ರ ಭಾಗದ ಮೇಲಿನ ವಾಹನ ದಟ್ಟಣೆ ಗಣನೀಯವಾಗಿ ತಗ್ಗಲಿದೆ. ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ರಸ್ತೆಗಳು ಸುಧಾರಣೆಯಾಗುವುದರಿಂದ ರೈತರು ಬೆಳೆದ ತರಕಾರಿ, ಹಣ್ಣು-ಹಂಪಲು ಹಾಗೂ ಧಾನ್ಯಗಳನ್ನು ಮಾರುಕಟ್ಟೆಗಳಿಗೆ ಶೀಘ್ರವಾಗಿ ತಲುಪಿಸಲು ಸಾಧ್ಯವಾಗುತ್ತದೆ. ರಾಜ್ಯ ಹೆದ್ದಾರಿಗಳ ಸುಧಾರಣೆಯಿಂದ ಪ್ರವಾಸಿ ತಾಣಗಳಿಗೆ ಸಂಪರ್ಕ ಸುಲಭವಾಗಲಿದೆ. ಅಲ್ಲದೆ ಗ್ರಾಮೀಣ ಹಾಗೂ ದ್ವಿತೀಯ ಹಂತದ ನಗರಗಳಲ್ಲಿ ಹೊಸ ಕೈಗಾರಿಕೆಗಳು ತಲೆಎತ್ತಲು ಉತ್ತಮ ರಸ್ತೆ ಜಾಲ ದಾರಿ ಮಾಡಿಕೊಡಲಿದೆ. ಹಳೆಯ ಸೇತುವೆಗಳ ಪುನರ್ನಿರ್ಮಾಣ ಮತ್ತು ರಸ್ತೆಗಳ ಅಗಲೀಕರಣದಿಂದಾಗಿ ಅಪಘಾತಗಳ ಪ್ರಮಾಣ ಗಣನೀಯವಾಗಿ ತಗ್ಗಲಿದೆ.
