
ಬಿಡದಿ ಟೌನ್‌ಶಿಪ್ ವಿವಾದ: ರೈತರ ಬೆಂಬಲಕ್ಕೆ ನಿಂತ ಬಿಜೆಪಿ, ಸರ್ಕಾರದ ವಿರುದ್ಧ ಸಮರ
ಬಿಜೆಪಿ ನಿಯೋಗವು ಬಿಡದಿಯ ಕೆಂಪಯ್ಯನಪಾಳ್ಯ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿದ್ದು, ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ
ರಾಜ್ಯ ರಾಜಕಾರಣದಲ್ಲಿ ಇದೀಗ ಬಿಡದಿ ಟೌನ್‌ಶಿಪ್ ಯೋಜನೆಯು ಭಾರಿ ವಿವಾದದ ಕೇಂದ್ರಬಿಂದುವಾಗಿದೆ. ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ಕುರಿತು ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ತೀವ್ರಗೊಂಡಿದೆ. ಬಿಜೆಪಿ ನಿಯೋಗವು ಬಿಡದಿಯ ಕೆಂಪಯ್ಯನಪಾಳ್ಯ ಸೇರಿದಂತೆ ಹಲವು ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸಿದ್ದು, ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಿದೆ.
ಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬಿಡದಿಯ ರೈತರೊಂದಿಗೆ ನಡೆಸಿದ ನೇರ ಸಂವಾದದಲ್ಲಿ ಸರ್ಕಾರದ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಸರ್ಕಾರ ಈ ಭಾಗದ ಭೂಮಿಯನ್ನು ಬರಡು ಭೂಮಿ ಎಂದು ಬಿಂಬಿಸಿ, ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದೆ. ಆದರೆ ವಾಸ್ತವದಲ್ಲಿ ಇಲ್ಲಿ ತೆಂಗು, ಅಡಿಕೆ ಮತ್ತು ರೇಷ್ಮೆಯಂತಹ ಬೆಳೆಗಳನ್ನು ಬೆಳೆಯುವ ಫಲವತ್ತಾದ ಭೂಮಿಯಿದೆ. ಈ ಭೂಮಿ ಸಾವಿರಾರು ಕುಟುಂಬಗಳ ಬದುಕಿನ ಆಧಾರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿ ಮಾಡುವುದಾದರೆ ಉತ್ತರ ಕರ್ನಾಟಕದಂತಹ ಹಿಂದುಳಿದ ಭಾಗಗಳಲ್ಲಿ ಮಾಡಿ, ಅಲ್ಲಿನ ಯುವಕರಿಗೆ ಕೆಲಸ ಕೊಡಿ ಎಂದು ಸವಾಲು ಹಾಕಿದ ಅವರು, ಫಲವತ್ತಾದ ಕೃಷಿ ಭೂಮಿಯನ್ನು ಕಸಿಯುವ ಸರ್ಕಾರಕ್ಕೆ ರೈತರ ಶಾಪ ತಟ್ಟದೆ ಇರದು ಎಂದು ಎಚ್ಚರಿಸಿದರು.
ಪ್ರಧಾನಿ ಮೋದಿಯವರ ಹೆಸರಿನ ದುರ್ಬಳಕೆ
ಬಿಡದಿ ಟೌನ್‌ಶಿಪ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರ ಒಪ್ಪಿಗೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದನ್ನು ತೀವ್ರವಾಗಿ ಖಂಡಿಸಿದರು. ಮೋದಿ ಅವರು ಎಂದಿಗೂ ರೈತ ವಿರೋಧಿ ಕ್ರಮಗಳನ್ನು ಬೆಂಬಲಿಸುವುದಿಲ್ಲ. ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಪ್ರಧಾನಿ ಅವರ ಹೆಸರನ್ನು ಎಳೆದು ತಂದಿರುವ ಡಿ.ಕೆ. ಶಿವಕುಮಾರ್ ಅವರಿಗೆ ನಾಚಿಕೆಯಾಗಬೇಕು. ರಿಯಲ್ ಎಸ್ಟೇಟ್ ಧಂಧೆ ಮಾಡಲು ಬೇಕಾದಷ್ಟು ಜಾಗವಿದೆ, ಆದರೆ ರೈತರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡಬಾರದು ಎಂದು ಕಿಡಿಕಾರಿದರು.
ರೈತರ ತೋಟಕ್ಕೆ ಆರ್. ಅಶೋಕ್ ಅವರ ಭೇಟಿ
ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ರೈತರ ತೋಟಕ್ಕೆ ನೇರವಾಗಿ ಭೇಟಿ ನೀಡಿ, ಅಲ್ಲಿನ ಹಸಿರು ಪರಿಸರವನ್ನು ಕಣ್ಣಾರೆ ಕಂಡರು. ಸರ್ಕಾರ ಇಲ್ಲಿನ ಭೂಮಿಯನ್ನು ಬರಡು ಎಂದು ಹೇಳುತ್ತಿದೆ, ಆದರೆ ಇಲ್ಲಿನ ಸಮೃದ್ಧಿಯನ್ನು ನೋಡಿದರೆ ಇದು ಮರುಭೂಮಿಯಲ್ಲ, ಅನ್ನದಾತನ ಬದುಕಿನ ತಾಯಿ ಎಂದು ಅರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ತಲೆಮಾರುಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಭೂಮಿಯನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ನಿಯೋಗದ ಮುಂದೆ ರೈತರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ರಾತ್ರೋರಾತ್ರಿ ಗೂಂಡಾಗಳನ್ನು ಕಳುಹಿಸಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಪ್ರಾಣ ಬೇಕಾದರೂ ಕೊಡುತ್ತೇವೆ, ಆದರೆ ಜಮೀನು ಬಿಟ್ಟುಕೊಡುವುದಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಅನ್ನದಾತರ ಪರವಾಗಿ ನಿಲ್ಲಬೇಕಾದ ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಲಾಬಿಯ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ರೈತರ ಗಂಭೀರ ಆರೋಪ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು, ಸರ್ಕಾರ ಗೂಂಡಾಗಳನ್ನು ಬಳಸಿಕೊಂಡು ರೈತರನ್ನು ಬೆದರಿಸುವ ಕೆಲಸವನ್ನು ನಿಲ್ಲಿಸಬೇಕು. ಪೋಸ್ಟರ್ ಕ್ಯಾಂಪೇನ್ ಮೂಲಕ ಅಪಪ್ರಚಾರ ಮಾಡುವುದನ್ನು ಬಿಟ್ಟು, ನೈಜವಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ನಾವು ನಿಮ್ಮ ಶಾಸಕರಲ್ಲ, ನಮ್ಮ ವಿರುದ್ಧ ದಬ್ಬಾಳಿಕೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ರಾಜಕೀಯ ಲಾಭಕ್ಕಾಗಿ ರೈತರ ಬಲಿ
ಬಿಜೆಪಿ ಮುಖಂಡರು ಆರೋಪಿಸುವಂತೆ, ಈ ಯೋಜನೆ ಸರ್ಕಾರದ ದೃಷ್ಟಿಯಲ್ಲಿ ಅಭಿವೃದ್ಧಿಯಾದರೆ, ರೈತರ ದೃಷ್ಟಿಯಲ್ಲಿ ಬದುಕಿನ ವಿನಾಶವಾಗಿದೆ. ಬಿಡದಿ ಭಾಗದಲ್ಲಿ ಕೈಗಾರಿಕಾ ಟೌನ್‌ಶಿಪ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಸಕ್ರಿಯವಾಗಿದೆ. ರಾಜ್ಯ ಸರ್ಕಾರದ ಇಚ್ಛಾಶಕ್ತಿಯು ಜನರ ಒಳಿತಿಗಾಗಿ ಇರಬೇಕೇ ಹೊರತು, ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತಾಸಕ್ತಿಗಾಗಿಯಲ್ಲ ಎಂಬುದನ್ನು ಬಿಜೆಪಿ ನಾಯಕರು ಪುನರುಚ್ಚರಿಸಿದ್ದಾರೆ.

