
ಅಡ್ಡಮತದಾನ -'ಮೀರ್ ಸಾದಿಕ'ಗಳ ವಿರುದ್ಧ ಕ್ರಮ ನಿಶ್ಚಿತ: ಬಿ.ವೈ. ವಿಜಯೇಂದ್ರ ಎಚ್ಚರಿಕೆ
ರಾಜ್ಯದ ಜನ ಈಗಾಗಲೇ ಬಹಳಷ್ಟು ಚಾಣಕ್ಯರನ್ನು ನೋಡಿದ್ದಾರೆ. ಕುದುರೆ ಓಡುವ ಸಮಯದಲ್ಲಿ ಓಡುತ್ತದೆ, ಬೀಳುವ ಸಮಯದಲ್ಲಿ ಬೀಳುತ್ತದೆ. ಅಧಿಕಾರದ ಮದದಲ್ಲಿ ಯಾರನ್ನೂ ಲಘುವಾಗಿ ಕಾಣಬಾರದು.
ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅನಿರೀಕ್ಷಿತ ಅಡ್ಡಮತದಾನವು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪಕ್ಷದ ಶಿಸ್ತನ್ನು ಗಾಳಿಗೆ ತೂರಿ, ಅಡ್ಡಮತದಾನ ಮೂಲಕ ವಿರೋಧ ಪಕ್ಷಗಳ ಪಾಲಿಗೆ ಅನುಕೂಲ ಮಾಡಿಕೊಟ್ಟಿರುವ ತಮ್ಮದೇ ಪಕ್ಷದ ಶಾಸಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ, ಇಂತಹ ಮೀರ್ ಸಾದಿಕರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಅವರು ಗುಡುಗಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವು ರಾಜ್ಯದಲ್ಲಿ ಜಂಟಿಯಾಗಿ ಹೋರಾಟ ನಡೆಸಲು ತೀರ್ಮಾನಿಸಿತ್ತು. ಎಂಟು ದಿನಗಳ ಹಿಂದೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ತಮಗೆ ಕರೆ ಮಾಡಿ, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಇಂಗಿತ ವ್ಯಕ್ತಪಡಿಸಿದ್ದರು. ಎರಡೂ ಪಕ್ಷಗಳು ಒಗ್ಗೂಡಿ ಸೆಣಸಾಟ ಮಾಡೋಣ, ಒಳ್ಳೆ ಉದ್ದೇಶದಿಂದ ಈ ಹೋರಾಟ ಆರಂಭಿಸಿದ್ದೆವು. ಆದರೆ, ಮತದಾನದ ಫಲಿತಾಂಶವು ಮೈತ್ರಿಕೂಟಕ್ಕೆ ಆಘಾತ ತಂದಿದೆ. ಜೆಡಿಎಸ್‌ನಿಂದ ಆರೇಳು ಮತಗಳು ಹಾಗೂ ಬಿಜೆಪಿಯಿಂದ ನಾಲ್ಕೈದು ಮತಗಳು ಅಡ್ಡಮತದಾನವಾಗಿವೆ. ಈ ಬೆಳವಣಿಗೆಯು ಮೈತ್ರಿ ಪಾಳಯದಲ್ಲಿ ತೀವ್ರ ಅಸಮಾಧಾನ ಮತ್ತು ಬೇಸರಕ್ಕೆ ಕಾರಣವಾಗಿದೆ.
'ಮೀರ್ ಸಾದಿಕ'ಗಳ ಗುರುತಿಸುವಿಕೆ - ಶಿಸ್ತುಕ್ರಮ
ಬಿಜೆಪಿಯ ಟಿಕೆಟ್‌ನಲ್ಲಿ ಗೆದ್ದು ಬಂದ ಶಾಸಕರೇ ಪಕ್ಷದ ವಿರುದ್ಧ ಮತ ಚಲಾಯಿಸಿರುವುದು ವಿಜಯೇಂದ್ರ ಅವರಿಗೆ ನುಂಗಲಾರದ ತುತ್ತಾಗಿದೆ. ಅಡ್ಡಮತದಾನ ಮಾಡಿರುವವರು ಯಾರು ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಪಕ್ಷದಲ್ಲಿ ಇಂತಹವರನ್ನು ಮೀರ್ ಸಾದಿಕರು ಎಂದು ಕರೆಯಬೇಕಾಗುತ್ತದೆ. ಇವರಿಗೆ ಗೆರೆ ಎಳೆಯುವ ಕೆಲಸವನ್ನು ಪಕ್ಷ ಮಾಡಲಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಆಟ ಆಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತು ವಿವರವಾದ ವರದಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸಲ್ಲಿಸಲಾಗುವುದು. ಹೈಕಮಾಂಡ್‌ಗೆ ಭೇಟಿ ನೀಡಲು ಸಮಯ ಕೋರಿದ್ದು, ಭೇಟಿ ಆದ ತಕ್ಷಣ ಅಡ್ಡಮತದಾನ ಮಾಡಿದವರ ಪಟ್ಟಿ ಮತ್ತು ಅಂದಿನ ಸಂಪೂರ್ಣ ಪರಿಸ್ಥಿತಿಯನ್ನು ವಿವರಿಸುವುದಾಗಿ ತಿಳಿಸಿದ್ದಾರೆ.
ರಾಜಕೀಯ ಆರೋಪ - ಪ್ರತ್ಯಾರೋಪ
ವಿಧಾನಪರಿಷತ್ ಚುನಾವಣೆಯ ಫಲಿತಾಂಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಚಾಣಕ್ಯ ಎಂದು ಕರೆಯಲಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ಜನ ಈಗಾಗಲೇ ಬಹಳಷ್ಟು ಚಾಣಕ್ಯರನ್ನು ನೋಡಿದ್ದಾರೆ. ಕುದುರೆ ಓಡುವ ಸಮಯದಲ್ಲಿ ಓಡುತ್ತದೆ, ಬೀಳುವ ಸಮಯದಲ್ಲಿ ಬೀಳುತ್ತದೆ. ಅಧಿಕಾರದ ಮದದಲ್ಲಿ ಯಾರನ್ನೂ ಲಘುವಾಗಿ ಕಾಣಬಾರದು. ಬಿಜೆಪಿಗೆ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ, ನಮ್ಮದು ದೊಡ್ಡ ಸಂಘಟನೆ ಮತ್ತು ಬಲಿಷ್ಠ ಕಾರ್ಯಕರ್ತರ ಪಡೆಯಿದೆ. ಯಾರನ್ನು ಯಾವಾಗ ಹೇಗೆ ಬಗ್ಗಿಸಬೇಕು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ" ಎಂದು ತಿರುಗೇಟು ನೀಡಿದ್ದಾರೆ. ಯಾರೇ ಮುಖ್ಯಮಂತ್ರಿಯಾದರೂ ಬಿಜೆಪಿಗೆ ಹೆದರುವ ಪ್ರಶ್ನೆಯೇ ಇಲ್ಲ. ಸಣ್ಣಪುಟ್ಟ ಘಟನೆಗಳಿಗೆ ವಿಚಲಿತರಾಗಿ ಓಡಿಹೋಗುವ ಜಾಯಮಾನ ತಮ್ಮದಲ್ಲ ಎಂದು ಹೇಳುವ ಮೂಲಕ, ಪಕ್ಷದ ಆಂತರಿಕ ಗೊಂದಲಗಳನ್ನು ಬಗೆಹರಿಸಿ ಮೈತ್ರಿಕೂಟವನ್ನು ಮತ್ತೆ ಬಲಪಡಿಸುವ ದೃಢ ನಿರ್ಧಾರವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಾರ್ಯಕರ್ತರಲ್ಲಿ ಬೇಸರ, ತಾರ್ಕಿಕ ಅಂತ್ಯದ ಗುರಿ
ಪಕ್ಷದ ರಾಜ್ಯ ಘಟಕದ ಅಧ್ಯಕ್ಷನಾಗಿ, ತಾನು ಬರಿ ಅಧಿಕಾರಿಯಾಗಿ ಕೆಲಸ ಮಾಡುತ್ತಿಲ್ಲ, ಒಬ್ಬ ಕಾರ್ಯಕರ್ತನಾಗಿ ಪಕ್ಷದ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಬಿಜೆಪಿಯ ಸಣ್ಣಪುಟ್ಟ ಗೊಂದಲಗಳಿಂದ ಕಾರ್ಯಕರ್ತರು ನೊಂದಿರುವುದು ನಿಜ ಎಂದಿದ್ದಾರೆ. ಈ ಫಲಿತಾಂಶದಿಂದ ನಮ್ಮ ಕಾರ್ಯಕರ್ತರಿಗೆ ನೋವಾಗಿದೆ, ಆದರೆ ನಾವು ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಅಡ್ಡಮತದಾನ ಮಾಡಿದವರ ವಿರುದ್ಧದ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಭರವಸೆ ನೀಡಿದ್ದಾರೆ.

