
ಗ್ಯಾರಂಟಿಗಳ ಫಲಾನುಭವಿಗಳ ಕಡಿತಕ್ಕೆ ಬಿಜೆಪಿ ವಿರೋಧ - ವಿಜಯೇಂದ್ರ ಆಕ್ರೋಶ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದ ಸರ್ಕಾರ, ಈಗ ಫಲಾನುಭವಿಗಳ ಮೇಲೆ ಗೂಬೆ ಕೂರಿಸಿ, ಲಕ್ಷಾಂತರ ಮಂದಿಯನ್ನು ಪಟ್ಟಿಯಿಂದ ಕೈಬಿಡಲು ಹೊರಟಿದೆ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಗ್ಯಾರಂಟಿ' ಯೋಜನೆಗಳ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲ ಮತ್ತು ಫಲಾನುಭವಿಗಳ ಕಡಿತದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಗ್ಯಾರಂಟಿಗಳಿಗೆ ಹಣ ಹೊಂದಿಸಲಾಗದೆ ಕೈಚೆಲ್ಲಿದೆ ಎಂದು ಆರೋಪಿಸಿರುವ ಅವರು, ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗದ ಸರ್ಕಾರ, ಈಗ ಫಲಾನುಭವಿಗಳ ಮೇಲೆ ಗೂಬೆ ಕೂರಿಸಿ, ಲಕ್ಷಾಂತರ ಮಂದಿಯನ್ನು ಪಟ್ಟಿಯಿಂದ ಕೈಬಿಡಲು ಹೊರಟಿದೆ. ಚುನಾವಣೆಗೂ ಮುನ್ನ ಪ್ರತಿಯೊಬ್ಬರಿಗೂ ಭರವಸೆ ನೀಡಿದ್ದ ಸರ್ಕಾರ, ಇಂದು ಮಾನದಂಡಗಳನ್ನು ಬದಲಾಯಿಸುವ ಮೂಲಕ ಜನರಿಗೆ ಮೋಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಸರ್ಕಾರ ಘೋಷಿಸಿದ್ದ ಯೋಜನೆಗಳು ರಾಜಕೀಯ ಲಾಭಕ್ಕಾಗಿ ನೀಡಿದ ಆಮಿಷಗಳಾಗಿದ್ದವೇ ಹೊರತು, ಜನಪರ ಕಳಕಳಿಯಿಂದಲ್ಲ ಎಂಬುದಕ್ಕೆ ಈಗಿನ ಗೊಂದಲಗಳೇ ಸಾಕ್ಷಿ ಎಂದು ಟೀಕಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ ಎಂದು ಆರೋಪಿಸಿದ ವಿಜಯೇಂದ್ರ, ಸರ್ಕಾರ ಈ ವಿಚಾರದಲ್ಲಿ ಪಾರದರ್ಶಕವಾಗಿಲ್ಲ ಎಂದು ಕಿಡಿಕಾರಿದರು. ರಾಜ್ಯದ ನೈಜ ಹಣಕಾಸು ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರು ಜನರಿಗೆ ಉತ್ತರದಾಯಿಗಳಾಗಿರಬೇಕು. ನಾವು ಈ ಹಿಂದೆಯೇ ಶ್ವೇತಪತ್ರ ಹೊರಡಿಸುವಂತೆ ಒತ್ತಾಯಿಸಿದ್ದೆವು, ಆದರೆ ಸರ್ಕಾರ ಸತ್ಯವನ್ನು ಮರೆಮಾಚುತ್ತಿದೆ. ಈಗಲಾದರೂ ವಾಸ್ತವಿಕ ಸ್ಥಿತಿಯನ್ನು ಜನರ ಮುಂದೆ ಬಿಚ್ಚಿಡಬೇಕು ಎಂದು ಸವಾಲು ಹಾಕಿದರು.
ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದ ಉದಾಹರಣೆ
ಕಾಂಗ್ರೆಸ್ ಆಡಳಿತವಿರುವ ಇತರ ರಾಜ್ಯಗಳ ಪರಿಸ್ಥಿತಿಯನ್ನು ಉಲ್ಲೇಖಿಸಿದ ವಿಜಯೇಂದ್ರ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಗ್ಯಾರಂಟಿಗಳ ಅತಿಯಾದ ಆಸೆಯಿಂದಾಗಿ ಸರ್ಕಾರಿ ನೌಕರರಿಗೆ ಸಂಬಳ ನೀಡಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಅದೇ ಸ್ಥಿತಿ ಈಗ ಕರ್ನಾಟಕಕ್ಕೂ ಬಂದೊದಗಿದೆ. ಒಂದೊಂದೇ ನೆಪಗಳನ್ನು ಒಡ್ಡಿ ಗ್ಯಾರಂಟಿಗಳಿಗೆ ಕತ್ತರಿ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಕೇಳಿ ಪಡೆದವರಲ್ಲ, ಸರ್ಕಾರವೇ ಸ್ವಯಂಪ್ರೇರಿತವಾಗಿ ಘೋಷಣೆ ಮಾಡಿದೆ. ಈಗ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ವಿಫಲವಾಗಿ ಫಲಾನುಭವಿಗಳಿಗೆ ಅಪಮಾನ ಮಾಡುತ್ತಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳ ಸಭೆಯಲ್ಲಿ ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದನ್ನು ವಿಜಯೇಂದ್ರ ಲೇವಡಿ ಮಾಡಿದರು. ಕಾಂಗ್ರೆಸ್ ಮತ್ತು ಭ್ರಷ್ಟಾಚಾರಕ್ಕೆ ಅವಿನಾಭಾವ ಸಂಬಂಧವಿದೆ. ಇಂತಹ ಹಿನ್ನೆಲೆ ಇರುವವರು ಭ್ರಷ್ಟಾಚಾರ ನಿಯಂತ್ರಣದ ಬಗ್ಗೆ ಮಾತನಾಡುವುದು ಜನರಿಗೆ ಹಾಸ್ಯಸ್ಪದವಾಗಿ ಕಾಣುತ್ತದೆ ಎಂದು ವ್ಯಂಗ್ಯವಾಡಿದರು.
ಅಧಿಕಾರದ ಹಸ್ತಾಂತರದ ಕುರಿತು ಚರ್ಚೆ
ರಾಜ್ಯ ರಾಜಕೀಯದಲ್ಲಿ ಚರ್ಚೆಯಾಗುತ್ತಿರುವ ಸಿಎಂ ಬದಲಾವಣೆ ಮತ್ತು ಡಿ.ಕೆ.ಶಿವಕುಮಾರ್ ಅವರ ತಾಳ್ಮೆಯ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, "ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತದೋ ಇಲ್ಲವೋ ಎಂಬುದು ಅವರ ಪಕ್ಷದ ಆಂತರಿಕ ವಿಷಯ. ಅವರ ತಾಳ್ಮೆಗೆ ಅಭಿನಂದನೆ ಸಲ್ಲಿಸಬೇಕು. ಆದರೆ, ಈ ಮೂರು ವರ್ಷಗಳಲ್ಲಿ ಸರ್ಕಾರವು ರಾಜ್ಯದಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಕೇವಲ ಟೀಕೆಗಳನ್ನು ಮಾಡುವುದನ್ನು ಬಿಟ್ಟು ಮುಂದಿನ ದಿನಗಳಲ್ಲಿ ಆದರೂ ಜನರಿಗೆ ಉತ್ತಮ ಆಡಳಿತ ನೀಡಲಿ ಎಂದು ಸಲಹೆ ನೀಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನವು ರಾಜಕೀಯ ಅಂಕಗಣಿತದ ಕೇಂದ್ರ ಬಿಂದುವಾಗಿದ್ದು, ಬಿಜೆಪಿಯು ಇದನ್ನು ಸರ್ಕಾರದ ವೈಫಲ್ಯವೆಂದು ಬಿಂಬಿಸಲು ಮುಂದಾಗಿದೆ. ಸರ್ಕಾರ ಈ ಆರೋಪಗಳಿಗೆ ಯಾವ ರೀತಿ ಉತ್ತರ ನೀಡುತ್ತದೆ ಮತ್ತು ಬಜೆಟ್ ಹಾಗೂ ಆರ್ಥಿಕ ನಿರ್ವಹಣೆಯ ವಿಚಾರದಲ್ಲಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

