ಬಜೆಟ್ ಆರ್ಥಿಕ , ಬೌದ್ಧಿಕ ದಿವಾಳಿತನದ ಪರಮಾವಧಿ: ಬಿ.ವೈ. ವಿಜಯೇಂದ್ರ ವಾಗ್ದಾಳಿ
x

ಬಜೆಟ್ ಆರ್ಥಿಕ , ಬೌದ್ಧಿಕ ದಿವಾಳಿತನದ ಪರಮಾವಧಿ: ಬಿ.ವೈ. ವಿಜಯೇಂದ್ರ ವಾಗ್ದಾಳಿ

ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ, ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡುವ ಬಜೆಟ್ ಮಂಡಿಸಬಹುದಿತ್ತು. ಆದರೆ, ಸಿಎಂ ಅವರು ಅಸಹಾಯಕರಾಗಿ ಕೈಚೆಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ ಎಂದು ವಿಜಯೇಂದ್ರ ಟೀಕಿಸಿದರು.


Click the Play button to hear this message in audio format

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್‌ ಜನರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ಹುಸಿಗೊಳಿಸಿದ್ದು, ಇದು ಸರ್ಕಾರದ ಆರ್ಥಿಕ ಮತ್ತು ಬೌದ್ಧಿಕ ದಿವಾಳಿತನದ ಪರಮಾವಧಿಯಾಗಿದೆ ಎಂದು ಬಿಜೆಪಿ ನಾಯಕ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂಕಿ-ಅಂಶಗಳ ಸಮೇತ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ವೈಫಲ್ಯ ಮುಚ್ಚಿಡಲು ಕೇಂದ್ರದತ್ತ ಬೊಟ್ಟು

ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಜೀವನದ ಸುದೀರ್ಘ ಅನುಭವದ ಹಿನ್ನೆಲೆಯಲ್ಲಿ ಇದುವರೆಗೆ 17 ಬಜೆಟ್‌ಗಳನ್ನು ಮಂಡಿಸಿದ್ದಾರೆ. "ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿರುವ ಮುಖ್ಯಮಂತ್ರಿಗಳಿಗೆ ಇದೊಂದು ಸುವರ್ಣಾವಕಾಶವಾಗಿತ್ತು. ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸುವ, ರಾಜ್ಯದ ಅಭಿವೃದ್ಧಿಗೆ ಹೊಸ ದಿಕ್ಸೂಚಿ ನೀಡುವ ಬಜೆಟ್ ಮಂಡಿಸಬಹುದಿತ್ತು. ಆದರೆ, ಈ ಬಜೆಟ್ ನೋಡಿದರೆ ಅವರು ಅಸಹಾಯಕರಾಗಿ ಕೈಚೆಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ," ಎಂದು ವಿಜಯೇಂದ್ರ ಟೀಕಿಸಿದರು.

ಬಜೆಟ್ ಉದ್ದಕ್ಕೂ ಮುಖ್ಯಮಂತ್ರಿಗಳು ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವ ಕುತಂತ್ರ ನಡೆಸಿದ್ದಾರೆ. ರಾಜ್ಯದ ಆದಾಯ ಸಂಗ್ರಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಆ ವೈಫಲ್ಯವನ್ನು ಮರೆಮಾಚಲು 'ಕೇಂದ್ರದಿಂದ ಅನ್ಯಾಯವಾಗಿದೆ' ಎಂಬ ಹಳೆಯ ರಾಗವನ್ನೇ ಮತ್ತೆ ಹಾಡುತ್ತಿದೆ ಎಂದು ಕಿಡಿಕಾರಿದರು.

ಸಾಲದ ಸುಳಿಯಲ್ಲಿ ರಾಜ್ಯ: ಭರವಸೆಗಳೆಲ್ಲ ಕಾಗದದ ಮೇಲಷ್ಟೇ!

ರಾಜ್ಯದ ಆರ್ಥಿಕ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ವಿಜಯೇಂದ್ರ, ಸರ್ಕಾರವು ಮಿತಿಮೀರಿ ಸಾಲ ಮಾಡುವ ಮೂಲಕ ಕರ್ನಾಟಕವನ್ನು ಸಾಲದ ಸುಳಿಗೆ ದೂಡುತ್ತಿದೆ ಎಂದರು. ಸಾಲದ ಭಾರ ಒಂದೆಡೆಯಾದರೆ, ಅದರ ಅಸಲು ಮತ್ತು ಬಡ್ಡಿಯನ್ನು ಪಾವತಿಸುವುದೇ ರಾಜ್ಯಕ್ಕೆ ದೊಡ್ಡ ಹೊರೆಯಾಗಿದೆ. ವಿತ್ತೀಯ ಕೊರತೆ ಮಿತಿ ಮೀರಿದ್ದು, ಇದನ್ನು ಸರಿದೂಗಿಸಲು ಜನರ ಮೇಲೆ ಪದೇಪದೇ ಬೆಲೆ ಏರಿಕೆಯ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಗುತ್ತಿದೆ. ಇದು ಈ ನಾಡಿನ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.

"ಮುಖ್ಯಮಂತ್ರಿಗಳು ತಮ್ಮ ಬಜೆಟ್ ಭಾಷಣದಲ್ಲಿ ಇದನ್ನು ರೈತರು, ಮಹಿಳೆಯರು, ಯುವಜನರು ಮತ್ತು ದಮನಿತರ ಕನಸುಗಳನ್ನು ನನಸು ಮಾಡುವ ಜೀವಂತ ದಾಖಲೆ ಎಂದು ಕರೆದಿದ್ದಾರೆ. ಆದರೆ, ಇದು ಸತ್ಯಕ್ಕೆ ದೂರವಾದ ಹಾಗೂ ಹಸಿ ಸುಳ್ಳಿನಿಂದ ಕೂಡಿದ ಕಟ್ಟುಕಥೆ. ಕಳೆದ ಮೂರು ವರ್ಷಗಳಲ್ಲಿ ಈ ಸರ್ಕಾರ ಎಷ್ಟು ಹೊಸ ರಸ್ತೆಗಳನ್ನು ನಿರ್ಮಿಸಿದೆ? ಎಷ್ಟು ಸೇತುವೆಗಳನ್ನು ಕಟ್ಟಿದೆ? ಎಂಬ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖವೇ ಇಲ್ಲ. ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಹೇಳುತ್ತಲೇ ಇದ್ದಾರೆ, ಆದರೆ ವಾಸ್ತವದಲ್ಲಿ ಎಷ್ಟು ಜನರಿಗೆ ನೇಮಕಾತಿ ಆದೇಶ ನೀಡಿದ್ದಾರೆ? ಮನೆ ಇಲ್ಲದವರಿಗೆ ಮನೆ ನೀಡುತ್ತೇವೆ ಎಂಬ ಭರವಸೆ ಕೇವಲ ಕಾಗದದ ಮೇಲಷ್ಟೇ ಉಳಿದಿದೆ," ಎಂದು ತರಾಟೆಗೆ ತೆಗೆದುಕೊಂಡರು. ಬಜೆಟ್ ಓದುತ್ತಿರುವಾಗ ಆಡಳಿತ ಪಕ್ಷದ ಶಾಸಕರಿಗೇ ಅದರ ಬಗ್ಗೆ ಆಸಕ್ತಿ ಇರಲಿಲ್ಲ, ಅನೇಕ ಸದಸ್ಯರು ಅಸಹಾಯಕರಾಗಿ ಸದನದಿಂದ ಹೊರನಡೆದಿದ್ದನ್ನು ನಾನೇ ಗಮನಿಸಿದ್ದೇನೆ ಎಂದು ವ್ಯಂಗ್ಯವಾಡಿದರು.

ಪ್ರಧಾನ ಕಚೇರಿ ಇದೆ ಎಂದ ಮಾತ್ರಕ್ಕೆ ತೆರಿಗೆ ಪಾಲು ಕೇಳುವುದು ಅವೈಜ್ಞಾನಿಕ

ತೆರಿಗೆ ಹಂಚಿಕೆ ಕುರಿತ ಸರ್ಕಾರದ ವಾದವನ್ನು ಅಲ್ಲಗಳೆದ ಅವರು, "ಬೆಂಗಳೂರಿನಲ್ಲಿ ಇನ್ಫೋಸಿಸ್, ವಿಪ್ರೋದಂತಹ ಕಂಪನಿಗಳ ಪ್ರಧಾನ ಕಚೇರಿಗಳಿವೆ ಹಾಗೂ ಅವು ಇಲ್ಲಿ ತೆರಿಗೆ ಪಾವತಿಸುತ್ತವೆ ಎಂಬುದು ನಿಜ. ಆದರೆ ಆ ಕಂಪನಿಗಳ ವ್ಯವಹಾರ ಮತ್ತು ಗ್ರಾಹಕರು ಇಡೀ ದೇಶಾದ್ಯಂತ ಹರಡಿದ್ದಾರೆ. ಕೇವಲ ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಇದೆ ಎಂಬ ಕಾರಣಕ್ಕೆ ಇಡೀ ದೇಶದ ವ್ಯವಹಾರದ ತೆರಿಗೆ ಪಾಲನ್ನು ರಾಜ್ಯಕ್ಕೇ ನೀಡಬೇಕು ಎನ್ನುವುದು ಅವೈಜ್ಞಾನಿಕ ವಾದ," ಎಂದು ವಿಶ್ಲೇಷಿಸಿದರು. ಕೇಂದ್ರ ಸರ್ಕಾರವು ರಕ್ಷಣೆ, ರಾಷ್ಟ್ರೀಯ ಹೆದ್ದಾರಿಗಳು ಮತ್ತು ರೈಲ್ವೆ ಯೋಜನೆಗಳಿಗೆ ವ್ಯಯಿಸುವ ಹಣವನ್ನು ರಾಜ್ಯ ಸರ್ಕಾರ ತನ್ನ ಲೆಕ್ಕಾಚಾರದಲ್ಲಿ ಪರಿಗಣಿಸುತ್ತಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ತೆರಿಗೆ ಹಂಚಿಕೆಯು ಮರು ಹಂಚಿಕೆಯ ತತ್ವದ ಮೇಲೆ ನಿಂತಿದೆ ಎಂದು ಅವರು ಸ್ಪಷ್ಟಪಡಿಸಿದರು.

ತೆರಿಗೆ ಹಂಚಿಕೆ: ಯುಪಿಎ-ಎನ್‌ಡಿಎ ತುಲನೆ

ತೆರಿಗೆ ಹಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಪದೇಪದೇ ಆರೋಪಿಸುತ್ತಿರುವುದಕ್ಕೆ ತಿರುಗೇಟು ನೀಡಿದ ವಿಜಯೇಂದ್ರ, "2014ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಕರ್ನಾಟಕವು ಕೇಂದ್ರಕ್ಕೆ 1.40 ಲಕ್ಷ ಕೋಟಿ ರೂ. ನೀಡಿದಾಗ ವಾಪಸ್ ಬಂದಿದ್ದು ಕೇವಲ 28 ಸಾವಿರ ಕೋಟಿ ರೂ. ಮಾತ್ರ. ಅದೇ ರೀತಿ ಪ್ರಸ್ತುತ ಎನ್‌ಡಿಎ ಆಡಳಿತವಿರುವ ಮಹಾರಾಷ್ಟ್ರ ರಾಜ್ಯವು 6.5 ಲಕ್ಷ ಕೋಟಿ ರೂ. ತೆರಿಗೆ ನೀಡಿದರೂ, ಅವರಿಗೆ ಸಿಗುತ್ತಿರುವುದು 89,726 ಕೋಟಿ ರೂ. ಅಂದರೆ ಅವರಿಗೂ 100 ರೂ.ಗೆ ಸಿಗುತ್ತಿರುವುದು ಕೇವಲ 13-14 ರೂಪಾಯಿ ಮಾತ್ರ," ಎಂದು ಅಂಕಿ-ಅಂಶಗಳ ಸಮೇತ ವಾಗ್ದಾಳಿ ನಡೆಸಿದರು.

"ಬಿಹಾರ ಅಥವಾ ಉತ್ತರ ಪ್ರದೇಶದಂತಹ ಅತಿ ಹೆಚ್ಚು ಜನಸಂಖ್ಯೆ ಇರುವ ಮತ್ತು ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವುದು ಸಾಂವಿಧಾನಿಕ ಮಾನದಂಡಗಳ ಆಧಾರದ ಮೇಲೆ ನಡೆಯುತ್ತದೆಯೇ ಹೊರತು ಪ್ರಧಾನಿಯವರ ವೈಯಕ್ತಿಕ ನಿರ್ಧಾರದಿಂದಲ್ಲ. ರಾಜ್ಯದ ಆರ್ಥಿಕತೆಯ ಜಿಎಸ್‌ಟಿ ಪಾಲಿನಲ್ಲಿ ಶೇ. 60ರಷ್ಟು ಪಾಲು ಸೇವಾ ಕ್ಷೇತ್ರ ಮತ್ತು ಕಾರ್ಪೊರೇಟ್ ಕಂಪನಿಗಳಿಂದ ಬರುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರದ ವೈಯಕ್ತಿಕ ಸಾಧನೆ ಏನೂ ಇಲ್ಲ. ಬದಲಾಗಿ, ಕೇಂದ್ರದ ಉತ್ತಮ ನೀತಿಗಳಿಂದಾಗಿ ಸಂಗ್ರಹ ಹೆಚ್ಚುತ್ತಿದೆ," ಎಂದು ಅವರು ತಮ್ಮ ವಾದ ಮಂಡಿಸಿದರು.

Read More
Next Story