ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮತ್ತೆ ಭಾರಿ ಕಾಡ್ಗಿಚ್ಚು: 35 ಎಕರೆಗೂ ಹೆಚ್ಚು ಅರಣ್ಯ ಭಸ್ಮ
x

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮತ್ತೆ ಭಾರಿ ಕಾಡ್ಗಿಚ್ಚು: 35 ಎಕರೆಗೂ ಹೆಚ್ಚು ಅರಣ್ಯ ಭಸ್ಮ

ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದಿರುವ ಸ್ಥಳೀಯರೇ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿರಬಹುದು ಎಂಬ ಗಂಭೀರ ಚರ್ಚೆಗಳು ಇದೀಗ ಮುನ್ನೆಲೆಗೆ ಬಂದಿವೆ.


Click the Play button to hear this message in audio format

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಕೇವಲ ಒಂದು ವಾರದ ಅಂತರದಲ್ಲಿ ಎರಡನೇ ಬಾರಿಗೆ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಈ ದುರಂತದಲ್ಲಿ ಅಂದಾಜು 25 ರಿಂದ 35 ಎಕರೆಗೂ ಅಧಿಕ ವಿಸ್ತೀರ್ಣದ ಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದ್ದು,

ಅಮೂಲ್ಯ ವನ್ಯಜೀವಿ ಸಂಕುಲಕ್ಕೆ ತೀವ್ರ ಆತಂಕ ಎದುರಾಗಿದೆ. ಜಿಲ್ಲೆಯ ಹನೂರು ತಾಲೂಕಿನ ಲೊಕ್ಕನಹಳ್ಳಿ ಭಾಗದಲ್ಲಿ ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಕಾಡುಪ್ರಾಣಿಗಳ ಹಾವಳಿ ಮತ್ತು ಸ್ಥಳೀಯರ ಆಕ್ರೋಶ

ಕಾಡಂಚಿನ ಗ್ರಾಮಗಳಿಗೆ ಇತ್ತೀಚಿನ ದಿನಗಳಲ್ಲಿ ಪದೇಪದೇ ಕಾಡುಪ್ರಾಣಿಗಳು ಲಗ್ಗೆಯಿಡುತ್ತಿದ್ದು, ಸಾರ್ವಜನಿಕರ ಬದುಕಿಗೆ ಕಂಟಕವಾಗಿ ಪರಿಣಮಿಸಿವೆ. ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಮುಖ ಆರೋಪವಾಗಿದೆ.

ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದಿರುವ ಸ್ಥಳೀಯರೇ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿರಬಹುದು ಎಂಬ ಗಂಭೀರ ಚರ್ಚೆಗಳು ಇದೀಗ ಮುನ್ನೆಲೆಗೆ ಬಂದಿವೆ. ಕಾಡಂಚಿನ ಜನರ ವಿಶ್ವಾಸ ಗಳಿಸುವಲ್ಲಿ ಮತ್ತು ಅವರ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಅರಣ್ಯಾಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಮಡುಗಟ್ಟಿದೆ.

ಸರಣಿ ಅಗ್ನಿ ಅವಘಡಗಳು ಮತ್ತು ಇಲಾಖೆಯ ವೈಫಲ್ಯ

ಕಳೆದ ಮಾರ್ಚ್ 26ರಂದು ಸಹ ಬಿಳಿಗಿರಿರಂಗನ ಬೆಟ್ಟದ ಬೈಲೂರು ಹಾಗೂ ಕೊಳ್ಳೇಗಾಲ ವನ್ಯಜೀವಿ ವಲಯದಲ್ಲಿ ಇದೇ ರೀತಿ ಬೆಂಕಿ ಕಾಣಿಸಿಕೊಂಡಿತ್ತು. ಆಗ ಅರಣ್ಯ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇದೀಗ ಮತ್ತೆ ಅದೇ ಕೊಳ್ಳೇಗಾಲ ವಲಯದಲ್ಲಿ ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಪದೇಪದೇ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸುತ್ತಿದ್ದರೂ, ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸುವಲ್ಲಿ ಅರಣ್ಯ ಇಲಾಖೆ ಎಡವಿದೆ. ಅಲ್ಲದೆ, ಸರಣಿ ಘಟನೆಗಳ ಕುರಿತು ಮಾಹಿತಿ ಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸಿದರೂ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಲಭ್ಯವಾಗುತ್ತಿಲ್ಲ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ.

Read More
Next Story