ಬಿಪಿಎಲ್‌  ಪಡಿತರ ಚೀಟಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ
x

ಬಿಪಿಎಲ್‌ ಪಡಿತರ ಚೀಟಿ ವಾರ್ಷಿಕ ಆದಾಯ ಮಿತಿ 3 ಲಕ್ಷ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ

ಪ್ರಸ್ತುತ ಜಾರಿಯಲ್ಲಿರುವ ಆದಾಯ ಮಿತಿಯು ಎಂಟು ವರ್ಷಗಳಷ್ಟು ಹಳೆಯದಾಗಿದೆ. ಜನ ಜೀವನ ವೆಚ್ಚ, ಆದಾಯದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಹಳೆಯ ಮಾನದಂಡಗಳನ್ನೇ ಇಂದಿಗೂ ಮುಂದುವರಿಸುವುದು ವೈಜ್ಞಾನಿಕವಲ್ಲ.


Click the Play button to hear this message in audio format

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಗಳಿಗೆ ನೀಡಲಾಗುವ ಪಡಿತರ ಚೀಟಿಗಳ ವಾರ್ಷಿಕ ಆದಾಯ ಮಿತಿಯನ್ನು ಪ್ರಸ್ತುತ ಇರುವ 1.20 ಲಕ್ಷ ರೂಪಾಯಿಗಳಿಂದ 3 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ರಾಜ್ಯ ಸರ್ಕಾರ ಗಂಭೀರ ಪರಿಶೀಲನೆ ನಡೆಸುತ್ತಿದೆ.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಪ್ರಶ್ನೆಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್‌.ಮುನಿಯಪ್ಪ ಪರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉತ್ತರಿಸಿದರು.

ಪ್ರಸ್ತುತ ಜಾರಿಯಲ್ಲಿರುವ ಆದಾಯ ಮಿತಿಯು ಎಂಟು ವರ್ಷಗಳಷ್ಟು ಹಳೆಯದಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಜನರ ಜೀವನ ವೆಚ್ಚ ಮತ್ತು ಆದಾಯದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಹಳೆಯ ಮಾನದಂಡಗಳನ್ನೇ ಇಂದಿಗೂ ಮುಂದುವರಿಸುವುದು ವೈಜ್ಞಾನಿಕವಲ್ಲ. ಅಲ್ಲದೆ, ನಗರ ಮತ್ತು ಗ್ರಾಮೀಣ ಭಾಗಗಳಿಗೆ ಒಂದೇ ರೀತಿಯ ಆದಾಯ ಮಿತಿಯನ್ನು ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯ ನಿಯಮಗಳ ಪ್ರಕಾರ, ಗ್ರಾಮೀಣ ಭಾಗದಲ್ಲಿ ಶೇಕಡಾ 75 ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇಕಡಾ 50 ರಷ್ಟು ಬಿಪಿಎಲ್ ಕಾರ್ಡ್‌ಗಳನ್ನು ಹೊಂದಲು ಅವಕಾಶವಿದೆ. ಆದರೆ, ಪ್ರಸ್ತುತ ನಗರ ಪ್ರದೇಶಗಳಲ್ಲಿ ಅರ್ಹ ಬಡವರಿಗೆ ಆದ್ಯತಾ ಚೀಟಿಗಳು (ಬಿಪಿಎಲ್‌) ಸಿಗುತ್ತಿಲ್ಲ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ಕಾರ್ಡ್‌ಗಳ ರದ್ದತಿಯಿಂದ ಬಡವರ ಸಂಕಷ್ಟ

ಬಿಜೆಪಿ ಸದಸ್ಯ ಎನ್. ಗೋಪಾಲಯ್ಯ ಅವರು ಪಡಿತರ ಚೀಟಿಗಳ ರದ್ದತಿಯಿಂದಾಗುತ್ತಿರುವ ಅನ್ಯಾಯವಾಗಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಆರರಿಂದ ಎಂಟು ಸಾವಿರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಯಾವುದೇ ಮನೆಮನೆ ಸಮೀಕ್ಷೆ ನಡೆಸದೆ ಏಕಾಏಕಿ ಕಾರ್ಡ್‌ಗಳನ್ನು ರದ್ದುಗೊಳಿಸುವುದು ಬಡವರಿಗೆ ಮಾಡುತ್ತಿರುವ ಅನ್ಯಾಯ. ತಾಂತ್ರಿಕ ಕಾರಣಗಳನ್ನು ನೀಡಿ ಬಡವರ ಅನ್ನವನ್ನು ಕಸಿದುಕೊಳ್ಳಬಾರದು ಎಂದು ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ ಬಾಬು, ಪಡಿತರ ಚೀಟಿಯು ಕೇವಲ ಅಕ್ಕಿ ಪಡೆಯಲು ಮಾತ್ರ ಸೀಮಿತವಾಗಿಲ್ಲ. ಚಾಲಕ ವೃತ್ತಿ ಮಾಡುವವರು ಅಥವಾ ಸಣ್ಣ ಪುಟ್ಟ ಕೆಲಸ ಮಾಡುವವರ ಆದಾಯ ಹೆಚ್ಚಿಲ್ಲದಿದ್ದರೂ, ಅವರ ಕಾರ್ಡ್‌ಗಳನ್ನು ರದ್ದು ಮಾಡಲಾಗುತ್ತಿದೆ. ಬಿಪಿಎಲ್ ಕಾರ್ಡ್ ಕೇವಲ ಆಹಾರಕ್ಕಷ್ಟೇ ಅಲ್ಲದೆ, ಉಚಿತ ಆರೋಗ್ಯ ಸೇವೆಗಳು ಮತ್ತು ಮಕ್ಕಳ ಶಿಕ್ಷಣ ಸೇರಿದಂತೆ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಅತ್ಯಗತ್ಯವಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ದಿನೇಶ್‌ ಗುಂಡೂರಾವ್‌, ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯ ಆಡಳಿತ ಸುಧಾರಣಾ ಆಯೋಗವು ಈ ಕುರಿತು ಈಗಾಗಲೇ ವರದಿ ನೀಡಿದೆ. ಆ ವರದಿಯಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಇರುವ ವಾರ್ಷಿಕ ಆದಾಯದ ಮಿತಿಯನ್ನು 3 ಲಕ್ಷ ರೂಪಾಯಿಗಳಿಗೆ ಏರಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಈ ಶಿಫಾರಸ್ಸನ್ನು ಸರ್ಕಾರವು ಸಕಾರಾತ್ಮಕವಾಗಿ ಪರಿಶೀಲಿಸುತ್ತಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಕರ್ನಾಟಕದಲ್ಲಿ 1.09 ಕೋಟಿ ಬಿಪಿಎಲ್ ಕಾರ್ಡ್‌ಗಳು ಇರಬೇಕು. ಆದರೆ, ಪ್ರಸ್ತುತ ರಾಜ್ಯದಲ್ಲಿ ಈ ಸಂಖ್ಯೆಗಿಂತ ಸುಮಾರು 15 ರಿಂದ 20 ಲಕ್ಷದಷ್ಟು ಹೆಚ್ಚುವರಿ ಕಾರ್ಡ್‌ಗಳಿವೆ. ಈ ಹೆಚ್ಚುವರಿ ಕಾರ್ಡ್‌ದಾರರಿಗೆ ಕೇಂದ್ರದಿಂದ ಪಡಿತರ ಬರುವುದಿಲ್ಲ, ಬದಲಾಗಿ ರಾಜ್ಯ ಸರ್ಕಾರವೇ ತನ್ನ ಸ್ವಂತ ಬಜೆಟ್‌ನಿಂದ ಹಣ ವ್ಯಯಿಸಿ ಪಡಿತರವನ್ನು ಒದಗಿಸುತ್ತಿದೆ. 2017ರಲ್ಲಿ ರೂಪಿಸಲಾದ ಮಾನದಂಡಗಳ ಆಧಾರದ ಮೇಲೆ ಪ್ರಸ್ತುತ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಹೇಳಿದರು.

ಪಡಿತರ ಚೀಟಿಗಳ ವಿಚಾರದ ಚರ್ಚೆಯು ಗಂಭೀರ ಸ್ವರೂಪ ಪಡೆದುಕೊಂಡಾಗ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಧ್ಯಪ್ರವೇಶಿಸಿದರು. ಇದು ಲಕ್ಷಾಂತರ ಬಡ ಕುಟುಂಬಗಳ ಜೀವನಕ್ಕೆ ಸಂಬಂಧಿಸಿದ ಗಂಭೀರ ವಿಚಾರವಾಗಿದೆ. ಈ ಬಗ್ಗೆ ಕೇವಲ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚಿಸಿದರೆ ಸಾಲದು, ಸಂಬಂಧಪಟ್ಟ ಆಹಾರ ಸಚಿವರಿಂದಲೇ ಸಮಗ್ರವಾದ ಉತ್ತರ ಕೊಡಿಸಬೇಕು ಎಂದು ಒತ್ತಾಯಿಸಿದರು.

ಸದನದ ಗದ್ದಲ ಮತ್ತು ಶಾಸಕರ ಕಳಕಳಿಯನ್ನು ಗಮನಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌, ಈ ವಿಷಯದ ಬಗ್ಗೆ ಸಮಗ್ರವಾಗಿ ಚರ್ಚಿಸಲು ಅರ್ಧ ಗಂಟೆಯ ಕಾಲಾವಕಾಶವನ್ನು ನಿಗದಿಪಡಿಸುವುದಾಗಿ ಭರವಸೆ ನೀಡಿದ ಬಳಿಕ ಮುಂದಿನ ಕಲಾಪವು ಸುಗಮವಾಗಿ ನಡೆಯಿತು.

Read More
Next Story