ಮುಖ್ಯಕಾರ್ಯದರ್ಶಿ ವಿರುದ್ಧ ಅಕ್ರಮ ಒತ್ತುವರಿ ಆರೋಪ - ಬಿಎಂಟಿಎಫ್‌ಗೆ ದೂರು
x

ಮುಖ್ಯಕಾರ್ಯದರ್ಶಿ ವಿರುದ್ಧ ಅಕ್ರಮ ಒತ್ತುವರಿ ಆರೋಪ - ಬಿಎಂಟಿಎಫ್‌ಗೆ ದೂರು

ಎಚ್.ಎಸ್.ಆರ್ ಲೇಔಟ್‌ನ ಸೆಕ್ಟರ್ 6ರಲ್ಲಿ ಶಾಲಿನಿ ರಜನೀಶ್ ಹೆಸರಿನಲ್ಲಿನ ಆಸ್ತಿಯ ಸುತ್ತಮುತ್ತಲಿನ ಪಾದಚಾರಿ ಮಾರ್ಗ ಮತ್ತು ನಗರ ಪಾಲಿಕೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


Click the Play button to hear this message in audio format

ಆಡಳಿತ ವ್ಯವಸ್ಥೆಯ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿರುವ ಸರ್ಕಾರದ ಹಾಲಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ವಿರುದ್ಧ ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡಿಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಬೆಂಗಳೂರು ಮಹಾನಗರ ಕಾರ್ಯಪಡೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಪ್ರದೇಶವಾದ ಎಚ್.ಎಸ್.ಆರ್ ಲೇಔಟ್‌ನ ಸೆಕ್ಟರ್ 6ರಲ್ಲಿ ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯಲ್ ಅವರ ಹೆಸರಿನಲ್ಲಿ ಸ್ವತ್ತು ಸಂಖ್ಯೆ 14ಸಿ ಇದೆ. ಈ ಆಸ್ತಿಯ ಸುತ್ತಮುತ್ತಲಿನ ಜಾಗದಲ್ಲಿ ಸಾರ್ವಜನಿಕರಿಗೆ ಸೇರಬೇಕಾದ ಪಾದಚಾರಿ ಮಾರ್ಗ ಮತ್ತು ನಗರ ಪಾಲಿಕೆಯ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಟಿ. ನರಸಿಂಹ ಮೂರ್ತಿ ಎಂಬುವವರು ದೂರು ನೀಡಿದ್ದಾರೆ. ಕೇವಲ ಜಾಗವನ್ನು ಕಬಳಿಸುವುದಷ್ಟೇ ಅಲ್ಲದೆ, ಅಲ್ಲಿ ಶಾಶ್ವತವಾದ ಸ್ಟೀಲ್-ಫ್ರೇಮ್ ರಚನೆಗಳನ್ನು ನಿರ್ಮಿಸಲಾಗಿದೆ. ಇದು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಸರ್ಕಾರದ ಜಾಗವನ್ನು ಖಾಸಗೀಕರಣಗೊಳಿಸಿದಂತಾಗಿದೆ ಎಂಬುದು ದೂರುದಾರರ ಪ್ರಮುಖ ವಾದವಾಗಿದೆ.

ನಿಯಮಗಳ ಉಲ್ಲಂಘನೆ?

ದೂರುದಾರರು ಸಲ್ಲಿಸಿರುವ ಮಾಹಿತಿಯ ಪ್ರಕಾರ, ಈ ಪ್ರಕರಣದಲ್ಲಿ ಮೂರು ಪ್ರಮುಖ ಉಲ್ಲಂಘನೆಗಳು ನಡೆದಿವೆ. ಬಿಡಿಎನಿಂದ ಮಂಜೂರಾದ ಖಾತಾ ಗಡಿಗಳನ್ನು ಮೀರಿ, ಸಾರ್ವಜನಿಕ ಪಾದಚಾರಿ ಮಾರ್ಗದ ಜಾಗವನ್ನು ತಮ್ಮ ಆಸ್ತಿಯ ಭಾಗವನ್ನಾಗಿ ಮಾಡಿಕೊಳ್ಳಲಾಗಿದೆ. ಬಿಬಿಎಂಪಿ ಮತ್ತು ಸಂಬಂಧಪಟ್ಟ ಪ್ರಾಧಿಕಾರಗಳ ಅನುಮತಿಯಿಲ್ಲದೆ, ಸಾರ್ವಜನಿಕ ಜಾಗದಲ್ಲಿ ಕಬ್ಬಿಣದ ಕಂಬಗಳನ್ನು ಹಾಕಿ ಶಾಶ್ವತ ಕಟ್ಟಡ ರಚನೆಗಳನ್ನು ಮಾಡಲಾಗಿದೆ. ಇದು ಬೃಹತ್ ಬೆಂಗಳೂರು ಆಡಳಿತ ಕಾಯ್ದೆ, 2024ರ ಸ್ಪಷ್ಟ ಉಲ್ಲಂಘನೆಯಾಗಿದೆ. ಬಿಡಿಎ ವಸತಿ ಉದ್ದೇಶಕ್ಕಾಗಿ ಹಂಚಿಕೆ ಮಾಡಿರುವ ಆಸ್ತಿಯನ್ನು, ಹೆಚ್ಚಿನ ಬಾಡಿಗೆಗೆ ವಾಣಿಜ್ಯ ಉದ್ದೇಶಕ್ಕಾಗಿ ಉಪ-ಗುತ್ತಿಗೆ ನೀಡಲಾಗಿದೆ. ವಸತಿ ಉದ್ದೇಶದ ನಿವೇಶನವನ್ನು ವಾಣಿಜ್ಯಿಕವಾಗಿ ಬಳಸುವುದು ಬಿಡಿಎ ನಿಯಮಗಳ ಪ್ರಕಾರ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಾಕ್ಷ್ಯಾಧಾರಗಳ ಸಲ್ಲಿಕೆ

ಈ ಆರೋಪವನ್ನು ಬಲಪಡಿಸಲು ದೂರುದಾರರು ಕೆಲವು ಪ್ರಮುಖ ಸಾಕ್ಷ್ಯಗಳನ್ನು ನೀಡಿದ್ದಾರೆ. ಬಿಬಿಎಂಪಿ ನೀಡಿರುವ ಇ-ಖಾತಾ ಪ್ರತಿ, ಆ ಆಸ್ತಿಯ ಬಳಕೆಯನ್ನು ಸ್ವಂತ ಮತ್ತು ಬಾಡಿಗೆ ಎಂದು ತೋರಿಸುತ್ತಿದೆ. ಅಲ್ಲದೆ, ಸ್ಥಳದಲ್ಲಿ ನಡೆದಿರುವ ಅಕ್ರಮ ನಿರ್ಮಾಣಗಳನ್ನು ತೋರಿಸುವ ಛಾಯಾಚಿತ್ರಗಳನ್ನು ಸಹ ಪೊಲೀಸರಿಗೆ ನೀಡಲಾಗಿದೆ. ಇದು ಸಾಮಾನ್ಯ ವ್ಯಕ್ತಿಗಳ ತಪ್ಪಲ್ಲ, ಬದಲಾಗಿ ಕಾನೂನು ಪಾಲಕರಾಗಬೇಕಾದವರೇ ಮಾಡಿರುವ ತಪ್ಪು ಎಂದು ದೂರಿನಲ್ಲಿ ಕಟುವಾಗಿ ಟೀಕಿಸಲಾಗಿದೆ.


ದೂರುದಾರರ ಒತ್ತಾಯ

ಬಿಎಂಟಿಎಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಕೇವಲ ಆರೋಪ ಮಾಡಿಲ್ಲ, ಬದಲಾಗಿ ಕಾನೂನು ಕ್ರಮಕ್ಕೆ ನಾಲ್ಕು ಬೇಡಿಕೆಗಳನ್ನು ಇಡಲಾಗಿದೆ. ಬೃಹತ್ ಬೆಂಗಳೂರು ಆಡಳಿತ ಕಾಯ್ದೆ, 2024 ಮತ್ತು ಭಾರತೀಯ ನ್ಯಾಯ ಸಂಹಿತೆ, 2023ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು. ಕೂಡಲೇ ಅಕ್ರಮ ನಡೆದ ಜಾಗದಲ್ಲಿ ಸರ್ವೆ ನಡೆಸಿ, ಒತ್ತುವರಿಯನ್ನು ಖಚಿತಪಡಿಸಿಕೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿರುವ ಅಕ್ರಮ ರಚನೆಗಳನ್ನು ತೆರವುಗೊಳಿಸಿ, ಸಾರ್ವಜನಿಕರ ಬಳಕೆಗೆ ಅದನ್ನು ಹಿಂದಿರುಗಿಸಬೇಕು. ಆಸ್ತಿ ಹಂಚಿಕೆಯ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಿಡಿಎ ವತಿಯಿಂದ ಕ್ರಮ ಕೈಗೊಳ್ಳಬೇಕು ಮತ್ತು ಸರ್ಕಾರದ ಸೇವಾ ನಡಾವಳಿ ಉಲ್ಲಂಘನೆಗಾಗಿ ಶಿಸ್ತು ಪ್ರಾಧಿಕಾರಕ್ಕೆ ವಿಷಯವನ್ನು ವರದಿ ಮಾಡಬೇಕು ಎಂದು ಆಗ್ರಹಿಸಲಾಗಿದೆ.

ಸಾಮಾನ್ಯವಾಗಿ ಸಾರ್ವಜನಿಕರು ಒತ್ತುವರಿ ಮಾಡಿದರೆ ಬಿಬಿಎಂಪಿ ಅಧಿಕಾರಿಗಳು ತಕ್ಷಣವೇ ಜೆಸಿಬಿ ತಂದು ಒತ್ತುವರಿ ತೆರವು ಮಾಡುತ್ತಾರೆ. ಆದರೆ, ಇಡೀ ರಾಜ್ಯದ ಆಡಳಿತ ಯಂತ್ರದ ಮುಖ್ಯಸ್ಥರಾಗಿರುವ ಅವರ ವಿರುದ್ಧವೇ ದೂರು ಬಂದಿರುವುದು, ನಮ್ಮ ವ್ಯವಸ್ಥೆಯ ಪಾರದರ್ಶಕತೆಗೆ ಒಂದು ದೊಡ್ಡ ಪರೀಕ್ಷೆಯಾಗಿದೆ. ಕಾನೂನಿಗಿಂತ ಯಾರೂ ಮೇಲಲ್ಲ ಎಂಬ ತತ್ವವನ್ನು ಈ ಪ್ರಕರಣ ಸಾಬೀತುಪಡಿಸಬೇಕಿದೆ. ಮುಂದಿನ ದಿನಗಳಲ್ಲಿ ತನಿಖಾ ಸಂಸ್ಥೆಗಳು ಯಾವ ರೀತಿಯಾಗಿ ಈ ದೂರಿಗೆ ಸ್ಪಂದಿಸುತ್ತವೆ ಮತ್ತು ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ವಿರುದ್ಧ ಕಾನೂನು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Read More
Next Story