
ಬಿಎಂಟಿಸಿ ಸಿಬ್ಬಂದಿಯ ಅಪಘಾತ ವಿಮೆ ಪರಿಹಾರವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಹೊಸ ಒಪ್ಪಂದದಲ್ಲಿ ಸಾವಿನ ಪರಿಹಾರ, ಅಂಗವೈಕಲ್ಯ ವಿಮೆ ಮತ್ತು ವೈದ್ಯಕೀಯ ನೆರವಿಗೂ ಅವಕಾಶವಿದೆ.
ಬಿಎಂಟಿಸಿ ಸಿಬ್ಬಂದಿ ಅಪಘಾತ ವಿಮೆ 1 ಕೋಟಿಗೆ ಹೆಚ್ಚಳ
ತಿಂಗಳಿಗೆ 25,000 ರೂ.ಗಿಂತ ಕಡಿಮೆ ವೇತನ ಪಡೆಯುವವರಿಗೆ 5 ಲಕ್ಷ ರೂ. ಹಾಗೂ 25,000 ರೂ.ಗಿಂತ ಹೆಚ್ಚಿನ ವೇತನ ಪಡೆಯುವವರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ಸಿಬ್ಬಂದಿಗೆ ನೀಡಲಾಗುವ ಅಪಘಾತ ವಿಮೆ ಪರಿಹಾರದ ಮೊತ್ತವನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಹೆಚ್ಚಿಸಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗಿನ ಒಪ್ಪಂದ ನವೀಕರಣದ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಅಕ್ಟೋಬರ್ 8ರಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಘುನಂದನ ಮೂರ್ತಿ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಎಚ್.ಟಿ. ವಾಸಪ್ಪ ಅವರು ಪರಿಷ್ಕೃತ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 2023ರಲ್ಲಿ ಮಾಡಿಕೊಂಡಿದ್ದ ಒಪ್ಪಂದವನ್ನು ನವೀಕರಿಸುವ ಮೂಲಕ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಆರ್ಥಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವೇತನ ಖಾತೆ ಹೊಂದಿರುವ ಸಿಬ್ಬಂದಿ ಅಪಘಾತದಿಂದ ಮೃತಪಟ್ಟರೆ, ಅವರ ನಾಮಿನಿಗಳಿಗೆ 1 ಕೋಟಿ ರೂ. ಪರಿಹಾರ ದೊರೆಯಲಿದೆ.
ಸಹಜ ಸಾವಿಗೂ ಪರಿಹಾರ ಸೌಲಭ್ಯ
ಸಿಬ್ಬಂದಿಯ ಸಹಜ ಸಾವು ಅಥವಾ ಇತರ ಕಾರಣಗಳಿಂದ ಸಂಭವಿಸುವ ಸಾವಿನ ಸಂದರ್ಭದಲ್ಲಿಯೂ ಪರಿಹಾರ ನೀಡಲು ಒಪ್ಪಂದದಲ್ಲಿ ಅವಕಾಶ ಕಲ್ಪಿಸಲಾಗಿದೆ. ತಿಂಗಳಿಗೆ 25,000 ರೂ.ಗಿಂತ ಕಡಿಮೆ ವೇತನ ಪಡೆಯುವವರಿಗೆ 5 ಲಕ್ಷ ರೂ. ಹಾಗೂ 25,000 ರೂ.ಗಿಂತ ಹೆಚ್ಚಿನ ವೇತನ ಪಡೆಯುವವರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.
ಅಂಗವೈಕಲ್ಯಕ್ಕೂ 1 ಕೋಟಿ ರೂ.ವರೆಗೆ ವಿಮೆ
ಶಾಶ್ವತ ಭಾಗಶಃ ಅಥವಾ ಸಂಪೂರ್ಣ ಅಂಗವೈಕಲ್ಯ ಉಂಟಾದ ಸಂದರ್ಭದಲ್ಲಿಯೂ 1 ಕೋಟಿ ರೂ.ವರೆಗೆ ವಿಮಾ ರಕ್ಷಣೆ ದೊರೆಯಲಿದೆ. ರೂಪೇ ಪ್ಲಾಟಿನಂ ಡೆಬಿಟ್ ಕಾರ್ಡ್ ಮೂಲಕ ಹೆಚ್ಚುವರಿ ಪರಿಹಾರದ ಸೌಲಭ್ಯವೂ ಇರಲಿದೆ. ತಿಂಗಳಿಗೆ 25,000 ರೂ.ಗಿಂತ ಕಡಿಮೆ ವೇತನ ಪಡೆಯುವವರಿಗೆ 4 ಲಕ್ಷ ರೂ. ಹಾಗೂ ಅದಕ್ಕಿಂತ ಹೆಚ್ಚಿನ ವೇತನ ಪಡೆಯುವವರಿಗೆ 15 ಲಕ್ಷ ರೂ. ಪರಿಹಾರ ಲಭ್ಯವಾಗಲಿದೆ.
