ಸಾರಿಗೆ ಸಚಿವರ ವಿರುದ್ಧ ತಿರುಗಿಬಿದ್ದ ನೌಕರರ ಸಂಘ ; ಕಂಡಕ್ಟರ್ ಅಮಾನತು ಆದೇಶ ಹಿಂಪಡೆಯಲು ಆಗ್ರಹ
100 ರೂ. ನೋಟಿಗೆ ಚಿಲ್ಲರೆ ಇಲ್ಲ ಎಂದು ಹೇಳಿ ಸಚಿವರಿಗೆ ಬಸ್ನಿಂದ ಕೆಳಗಿಳಿಯಲು ಹೇಳಿದರೆಂಬ ಕಾರಣಕ್ಕೆ ಬಿಎಂಟಿಸಿ ನಿರ್ವಾಹಕರನ್ನು ಅಮಾನತು ಮಾಡಿರುವುದಕ್ಕೆ ಸಾರಿಗೆ ಇಲಾಖೆ ನೌಕರರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಮುಖಕ್ಕೆ ಮಾಸ್ಕ್ ಧರಿಸಿ ಬಿಎಂಟಿಸಿ ಬಸ್ನಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಸಂಚರಿಸಿ ರಿಯಾಲಿಟಿ ಚೆಕ್' ನಡೆಸಿದ್ದ ಸಾರಿಗೆ ಸಚಿವ ಬೈರತಿ ಸುರೇಶ್ ಅವರ ನಡೆ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ.
100 ರೂ. ನೋಟು ನೀಡಿದಾಗ ಚಿಲ್ಲರೆ ಇಲ್ಲ ಎಂದು ಹೇಳಿ ಸಚಿವರನ್ನು ಬಸ್ನಿಂದ ಕೆಳಗಿಳಿಯಲು ಹೇಳಿದರೆಂಬ ಒಂದೇ ಕಾರಣಕ್ಕೆ ಬಿಎಂಟಿಸಿ ನಿರ್ವಾಹಕ ಟಿ.ಜಿ. ರಾಮಕೃಷ್ಣ ಅವರನ್ನು ಅಮಾನತು ಮಾಡಿರುವುದಕ್ಕೆ ಸಾರಿಗೆ ಇಲಾಖೆ ನೌಕರರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಸಂಬಂಧ 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೆಎಸ್ಆರ್ಟಿಸಿ ನೌಕರರ ಸಂಘದ ಕಾರ್ಯಾಧ್ಯಕ್ಷ ಜಿ.ಟಿ. ರಂಗೇಗೌಡ ಅವರು, ಸಾರಿಗೆ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ, ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಪ್ರಚಾರಕ್ಕಾಗಿ ಅಮಾನತು ಆರೋಪ
"ಸಚಿವರು 100 ರೂಪಾಯಿ ನೀಡಿದಾಗ ಚಿಲ್ಲರೆ ಇಲ್ಲದಿದ್ದರೆ ಕಂಡಕ್ಟರ್ ತಾನೇ ಏನು ಮಾಡಲು ಸಾಧ್ಯ?, ಒಂದು ವೇಳೆ ಕಂಡಕ್ಟರ್ ದುಡ್ಡು ಪಡೆದು ಟಿಕೆಟ್ ನೀಡದಿದ್ದರೆ ಖಂಡಿತ ಅಮಾನತು ಮಾಡಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಕೇವಲ ಚಿಲ್ಲರೆ ಇಲ್ಲ ಎಂದು ಹೇಳಿದ್ದಕ್ಕೆ ಒಬ್ಬ ಬಡ ನೌಕರನನ್ನು ಅಮಾನತು ಮಾಡಿರುವುದು ಯಾವುದೇ ರೀತಿಯಲ್ಲೂ ಸರಿಯಲ್ಲ. ಅಲ್ಲದೇ ಬಸ್ನಿಂದ ಕೆಳಗಿಳಿಯಿರಿ ಎಂದು ಕಂಡಕ್ಟರ್ ಹೇಳಿದ ವಿಡಿಯೋ ಇಲ್ಲ, ಒಂದು ವೇಳೆ ಆ ರೀತಿ ಹೇಳಿದ್ದರೆ ಬುದ್ದಿವಾದ ಹೇಳಬಹುದಿತ್ತು. ಪ್ರಚಾರಕ್ಕೋಸ್ಕರ ಸಚಿವರು ಈ ರೀತಿ ಮಾಡಿದ್ದಾರೆ ಎಂದು ರಂಗೇಗೌಡ ಆಕ್ರೋಶ ಹೊರಹಾಕಿದ್ದಾರೆ.
ನೈಜ ಸಮಸ್ಯೆಗಳನ್ನು ನೋಡಲಿ
ಸಾರಿಗೆ ನೌಕರರು ಎದುರಿಸುತ್ತಿರುವ ನೈಜ ಸಮಸ್ಯೆಗಳ ಕಡೆಗೆ ಸಚಿವರ ಗಮನ ಸೆಳೆದ ನೌಕರರ ಒಕ್ಕೂಟದ ಮುಖಂಡರು, ರಾಜ್ಯ ಸರ್ಕಾರದ ಉಚಿತ ಟಿಕೆಟ್ (ಶಕ್ತಿ ಯೋಜನೆ) ಹಾಗೂ ಪಾಸ್ಗಳ ವಿತರಣೆಯಿಂದಾಗಿ ಕಂಡಕ್ಟರ್ಗಳ ಬಳಿ ನಗದು ಚಿಲ್ಲರೆ ಹಣ ಸಂಗ್ರಹವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದರಿಂದ ನಗದು ಚಲಾವಣೆ ಗಣನೀಯವಾಗಿ ಕಡಿಮೆಯಾಗಿದೆ. ಇಂತಹ ಸಂದರ್ಭದಲ್ಲಿ ಇಲಾಖೆಯೇ ಸಿಬ್ಬಂದಿಗೆ ಸಾಕಷ್ಟು ಚಿಲ್ಲರೆ ಒದಗಿಸಬೇಕು. ಅದನ್ನು ಬಿಟ್ಟು ಸಿಬ್ಬಂದಿಯನ್ನೇ ಹೊಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಅಧಿಕಾರಿಗಳ ಹಂತದಲ್ಲಿ ಏನೇಲ್ಲಾ ಆಗುತ್ತಿದೆ, ಏನೇನು ಸಮಸ್ಯೆ ಇದೆ ಎಂಬುದನ್ನು ಸಚಿವರು ದಿಢೀರ್ ಭೇಟಿ ನೀಡಿ ಕ್ರಮಕೈಗೊಳ್ಳಲಿ. ಕಂಡಕ್ಟರ್ ಅಮಾನತು ಮಾಡಿರುವುದನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಆ ಕುಟುಂಬದ ಶಾಪ ಸರ್ಕಾರಕ್ಕೆ ತಟ್ಟಲಿದೆ ಎಂದು ಕಿಡಿಕಾರಿದ್ದಾರೆ.

