15 ವರ್ಷ ಹಳೆಯ 57 ಮೆಟ್ರೋ ರೈಲುಗಳಿಗೆ ಮೇಜರ್ ಸರ್ಜರಿ; ಬಿಎಂಆರ್‌ಸಿಎಲ್ ಸಜ್ಜು
x

15 ವರ್ಷಗಳಿಂದ ಸೇವೆ ನೀಡುತ್ತಿರುವ 57 ನಮ್ಮ ಮೆಟ್ರೋ ರೈಲುಗಳ ಸಮಗ್ರ ನವೀಕರಣಕ್ಕೆ BMRCL ಮುಂದಾಗಿದೆ.

15 ವರ್ಷ ಹಳೆಯ 57 ಮೆಟ್ರೋ ರೈಲುಗಳಿಗೆ ಮೇಜರ್ ಸರ್ಜರಿ; ಬಿಎಂಆರ್‌ಸಿಎಲ್ ಸಜ್ಜು

ರೈಲುಗಳ ನವೀಕರಣದಿಂದ ಮೆಟ್ರೋ ಸೇವೆಗೆ ಅಡ್ಡಿಯಾಗದಂತೆ ಬಿಎಂಆರ್‌ಸಿಎಲ್ ವಿಶೇಷ ಯೋಜನೆ ರೂಪಿಸಿದೆ. ಪ್ರತಿದಿನದ ಕಾರ್ಯಾಚರಣೆ ಮುಗಿದ ಬಳಿಕ ರೈಲುಗಳನ್ನು ಡಿಪೋಗೆ ತೆಗೆದುಕೊಂಡು ಹೋಗಿ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತದೆ.


Click the Play button to hear this message in audio format

ಬೆಂಗಳೂರು ನಮ್ಮ ಮೆಟ್ರೋ ಸೇವೆಯಲ್ಲಿ ಮಹತ್ವದ ಬದಲಾವಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮುಂದಾಗಿದೆ. ಸುಮಾರು 15 ವರ್ಷಗಳಿಂದ ಸೇವೆ ನೀಡುತ್ತಿರುವ 57 ಮೆಟ್ರೋ ರೈಲುಗಳನ್ನು ಹಂತ ಹಂತವಾಗಿ ಸಮಗ್ರವಾಗಿ ನವೀಕರಿಸಲು ನಿರ್ಧರಿಸಲಾಗಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಸಂಚರಿಸುತ್ತಿರುವ ಈ ರೈಲುಗಳ ಪೈಕಿ ಹಲವು ಈಗಾಗಲೇ 10 ಲಕ್ಷ ಕಿಲೋಮೀಟರ್‌ಗೂ ಹೆಚ್ಚು ಸಂಚಾರ ನಡೆಸಿವೆ.

ರೈಲುಗಳ ಸಂಪೂರ್ಣ ತಾಂತ್ರಿಕ ತಪಾಸಣೆ

ನವೀಕರಣದ ವೇಳೆ ರೈಲುಗಳ ಪ್ರಮುಖ ತಾಂತ್ರಿಕ ವ್ಯವಸ್ಥೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ. ಟ್ರಾಕ್ಷನ್ ಮೋಟಾರ್, ಚಕ್ರಗಳು, ಆಕ್ಸೆಲ್‌ಗಳು, ಬ್ರೇಕಿಂಗ್ ವ್ಯವಸ್ಥೆ, ವಿದ್ಯುತ್ ಉಪಕರಣಗಳು, ಕೇಬಲ್‌ಗಳು ಮತ್ತು ಬ್ಯಾಟರಿಗಳ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯವಿರುವ ದುರಸ್ತಿ ಹಾಗೂ ಬದಲಾವಣೆಗಳನ್ನು ಕೈಗೊಳ್ಳಲಾಗುತ್ತದೆ.

ಇದರ ಜತೆಗೆ ಬಾಗಿಲುಗಳ ಕಾರ್ಯವೈಖರಿ, ಹವಾನಿಯಂತ್ರಣ ವ್ಯವಸ್ಥೆ, ಪ್ರಯಾಣಿಕರ ಸುರಕ್ಷತಾ ಉಪಕರಣಗಳು, ಆಸನಗಳು ಹಾಗೂ ರೈಲಿನ ಒಳಾಂಗಣ ವ್ಯವಸ್ಥೆಗಳನ್ನೂ ನವೀಕರಿಸುವ ಸಾಧ್ಯತೆಯಿದೆ. ಸಿಗ್ನಲಿಂಗ್ ಮತ್ತು ನಿಯಂತ್ರಣ ವ್ಯವಸ್ಥೆಗಳನ್ನೂ ಪರಿಶೀಲಿಸಲಾಗುತ್ತದೆ.

ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಾಮಗಾರಿ

ರೈಲುಗಳ ನವೀಕರಣದಿಂದ ಮೆಟ್ರೋ ಸೇವೆಗೆ ಅಡ್ಡಿಯಾಗದಂತೆ ಬಿಎಂಆರ್‌ಸಿಎಲ್ ವಿಶೇಷ ಯೋಜನೆ ರೂಪಿಸಿದೆ. ಪ್ರತಿದಿನದ ಕಾರ್ಯಾಚರಣೆ ಮುಗಿದ ಬಳಿಕ ರೈಲುಗಳನ್ನು ಡಿಪೋಗೆ ತೆಗೆದುಕೊಂಡು ಹೋಗಿ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತದೆ. ಹೀಗಾಗಿ ಪ್ರಯಾಣಿಕರ ದೈನಂದಿನ ಸಂಚಾರದ ಮೇಲೆ ಪರಿಣಾಮ ಬೀಳದಂತೆ ಹಂತ ಹಂತವಾಗಿ ರೈಲುಗಳನ್ನು ನವೀಕರಿಸಲಾಗುತ್ತದೆ.

ಹೊಸ ರೈಲುಗಳ ಸೇರ್ಪಡೆಯಿಂದ ಹಳೆಯ ರೈಲುಗಳಿಗೆ ವಿಶ್ರಾಂತಿ

ಹಳೆಯ ರೈಲುಗಳನ್ನು ನಿರ್ವಹಣೆಗೆ ಹಿಂಪಡೆಯಲು ಅಗತ್ಯವಿರುವ ಹೆಚ್ಚುವರಿ ಸಾಮರ್ಥ್ಯವನ್ನು ಹೊಸ ರೈಲುಗಳ ಸೇರ್ಪಡೆಯಿಂದ ಹೊಂದಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಹಸಿರು ಮಾರ್ಗಕ್ಕಾಗಿ ಹೊಸ ರೈಲುಗಳ ಸೇರ್ಪಡೆ ಪ್ರಕ್ರಿಯೆಯೂ ನಡೆಯುತ್ತಿದ್ದು, ಇದರಿಂದ ಹಳೆಯ ರೈಲುಗಳನ್ನು ಒಂದೊಂದಾಗಿ ಓವರ್‌ಹಾಲ್‌ಗೆ ಕಳುಹಿಸಲು ಅನುಕೂಲವಾಗಲಿದೆ.

ಈ ನವೀಕರಣದ ಬಳಿಕ 15 ವರ್ಷಗಳಿಂದ ಸೇವೆ ನೀಡುತ್ತಿರುವ ರೈಲುಗಳ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆ ಸುಧಾರಿಸುವ ನಿರೀಕ್ಷೆಯಿದೆ. ನಗರದ ಮೆಟ್ರೋ ಜಾಲ ವಿಸ್ತರಣೆಯಾಗುತ್ತಿರುವ ಸಂದರ್ಭದಲ್ಲಿ ಹಳೆಯ ರೈಲುಗಳ ನಿರ್ವಹಣೆಗೂ ಬಿಎಂಆರ್‌ಸಿಎಲ್ ಆದ್ಯತೆ ನೀಡಿದೆ.

ಕೇಂದ್ರ ಸಿಲ್ಕ್ ಬೋರ್ಡ್ ನಿಲ್ದಾಣಕ್ಕೂ ಹೊಸ ಸೌಲಭ್ಯ

ಇದೇ ವೇಳೆ ಕೇಂದ್ರ ಸಿಲ್ಕ್ ಬೋರ್ಡ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕವರ್‌ಡ್ ಟ್ರಾವೆಲೇಟರ್ ಮತ್ತು ಸಂಪರ್ಕಿತ ಪಾದಚಾರಿ ಮಾರ್ಗ ನಿರ್ಮಾಣಕ್ಕೂ ಬಿಎಂಆರ್‌ಸಿಎಲ್ ಮುಂದಾಗಿದೆ. ಈ ಕಾಮಗಾರಿಗೆ ಸುಮಾರು 55.48 ಕೋಟಿ ರೂ. ವೆಚ್ಚವಾಗಲಿದೆ.

Read More
Next Story