ಶೂ ಧರಿಸಿ ಗಣೇಶನ ಮೂರ್ತಿ ಹಿಡಿದ ಬಿಜೆಪಿ ನಾಯಕರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌- ನೆಟ್ಟಿಗರು ಗರಂ
x

ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಯನ್ನು ರಾಜಕೀಯ ಪ್ರತಿಭಟನೆಗೆ ಬಳಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಎತ್ತಿದ್ದಾರೆ.

ಶೂ ಧರಿಸಿ ಗಣೇಶನ ಮೂರ್ತಿ ಹಿಡಿದ ಬಿಜೆಪಿ ನಾಯಕರು: ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌- ನೆಟ್ಟಿಗರು ಗರಂ

ಟಿ. ನರಸೀಪುರದ ಪ್ರತಿಭಟನೆ ವೇಳೆ ಬಿಜೆಪಿ ನಾಯಕರು ಎಡವಟ್ಟು ಮಾಡಿಕೊಂಡಿದ್ದು, ಶೂ- ಚಪ್ಪಲಿ ಧರಿಸಿ ಗಣೇಶನ ಮೂರ್ತಿ ಹಿಡಿದುಕೊಂಡಿರುವ ನಾಯಕರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.


Click the Play button to hear this message in audio format

ಟಿ. ನರಸೀಪುರದ ಮಸೀದಿ ರಸ್ತೆಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆಸದಂತೆ ಸೂಚನೆ ನೀಡಲಾಗಿದೆ ಎನ್ನಲಾದ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಬಿಜೆಪಿ ನಾಯಕರು ಭಾನುವಾರ ನಡೆಸಿದ ಪ್ರತಿಭಟನೆ ಇದೀಗ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಪ್ರತಿಭಟನೆಯ ವೇಳೆ ಬಿಜೆಪಿ ನಾಯಕರು ಗಣೇಶನ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಪೊಲೀಸ್ ಕ್ರಮ ಖಂಡಿಸಿ ಬಿಜೆಪಿ ಪ್ರತಿಭಟನೆ

ಗಣೇಶೋತ್ಸವದ ಸಂದರ್ಭದಲ್ಲಿ ಮೆರವಣಿಗೆಗೆ ನಿರ್ಬಂಧ ಹೇರಿರುವ ಪೊಲೀಸರ ಕ್ರಮವನ್ನು ವಿರೋಧಿಸಿ ಮಾಜಿ ಸಂಸದ ಪ್ರತಾಪ್ ಸಿಂಹ, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್, ಸಚ್ಚಿದಾನಂದ ಸೇರಿದಂತೆ ಹಲವು ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ನಾಯಕರು ಗಣೇಶನ ಮೂರ್ತಿಯನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮಸೀದಿ ರಸ್ತೆಯಲ್ಲಿ ಗಣೇಶ ಮೂರ್ತಿ ಮೆರವಣಿಗೆಗೆ ಅವಕಾಶ ನೀಡದಿರುವುದು ಹಿಂದೂಗಳ ಧಾರ್ಮಿಕ ಹಕ್ಕಿಗೆ ಧಕ್ಕೆ ತರುತ್ತದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸರು ಕೈಗೊಂಡಿರುವ ಕ್ರಮವನ್ನು ಮರುಪರಿಶೀಲಿಸಬೇಕು ಹಾಗೂ ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಗಣೇಶ ಮೂರ್ತಿ ಹಿಡಿದ ಫೋಟೋಗಳು ವೈರಲ್

ಪ್ರತಿಭಟನೆಯ ಸಂದರ್ಭದಲ್ಲಿ ನಾಯಕರು ಗಣೇಶನ ಮೂರ್ತಿಯನ್ನು ಎತ್ತಿ ಹಿಡಿದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಶೇಷವಾಗಿ ಕೆಲ ನಾಯಕರು ಕಾಲಿಗೆ ಶೂ ಹಾಗೂ ಚಪ್ಪಲಿ ಧರಿಸಿಕೊಂಡೇ ಗಣೇಶನ ಮೂರ್ತಿಯನ್ನು ಹಿಡಿದಿರುವುದು ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿದೆ.

ಗಣೇಶನ ಮೂರ್ತಿಯನ್ನು ಸ್ಪರ್ಶಿಸುವಾಗ ಧಾರ್ಮಿಕ ಸಂಪ್ರದಾಯ ಹಾಗೂ ಗೌರವವನ್ನು ಪಾಲಿಸಬೇಕಿತ್ತು. ಆದರೆ ಪಾದರಕ್ಷೆ ಧರಿಸಿಕೊಂಡೇ ಮೂರ್ತಿಯನ್ನು ಹಿಡಿದಿರುವುದು ಸರಿಯಲ್ಲ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲ ಚಿತ್ರಗಳಲ್ಲಿ ಗಣೇಶನ ಮೂರ್ತಿಯನ್ನು ಒಂದೇ ಕೈಯಲ್ಲಿ ಹಿಡಿದಿರುವ ದೃಶ್ಯಗಳೂ ಕಾಣಿಸಿಕೊಂಡಿದ್ದು, ಇದಕ್ಕೂ ವಿರೋಧ ವ್ಯಕ್ತವಾಗಿದೆ.

ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಯನ್ನು ರಾಜಕೀಯ ಪ್ರತಿಭಟನೆಗೆ ಬಳಸುವುದು ಎಷ್ಟರ ಮಟ್ಟಿಗೆ ಸೂಕ್ತ ಎಂಬ ಪ್ರಶ್ನೆಯನ್ನೂ ನೆಟ್ಟಿಗರು ಎತ್ತಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕಿದ್ದ ನಾಯಕರು, ಪ್ರತಿಭಟನೆಯ ವೇಳೆ ಗಣೇಶನ ಮೂರ್ತಿಯನ್ನು ಬಳಸಿಕೊಂಡಿರುವುದು ಸರಿಯಲ್ಲ ಎಂದು ಕೆಲವರು ಟೀಕಿಸಿದ್ದಾರೆ.

ಮತ್ತೊಂದೆಡೆ, ಮೆರವಣಿಗೆಗೆ ಪೊಲೀಸರು ವಿಧಿಸಿರುವ ನಿರ್ಬಂಧದ ವಿರುದ್ಧ ಪ್ರತಿಭಟನೆ ನಡೆಸುವುದು ತಮ್ಮ ಹಕ್ಕು ಎಂದು ಬಿಜೆಪಿ ನಾಯಕರು ವಾದಿಸಿದ್ದಾರೆ. ಇದೀಗ ಪೊಲೀಸ್ ಕ್ರಮದ ವಿರುದ್ಧದ ಪ್ರತಿಭಟನೆಗಿಂತಲೂ ಗಣೇಶನ ಮೂರ್ತಿಯನ್ನು ಹಿಡಿದಿರುವ ಫೋಟೋಗಳೇ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಚರ್ಚೆಗೆ ಕಾರಣವಾಗಿವೆ.

Read More
Next Story