x

ಬಿಡದಿ ಟೌನ್‌ಶಿಪ್‌ ವಿರುದ್ಧ ಜಂಟಿ ಸಮರ: ಹೆಚ್‌ಡಿಕೆ-ಅಶೋಕ್ ಸಭೆ ಬೆನ್ನಲ್ಲೇ ಮೈತ್ರಿ ನಾಯಕರ ಮಹತ್ವದ ನಿರ್ಧಾರ

ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆಯಲ್ಲಿ ಎಚ್.ಡಿ. ಕುಮಾರಸ್ವಾಮಿ, ಅಶೋಕ್, ಛಲವಾದಿ ನಾರಾಯಣಸ್ವಾಮಿ ಭಾಗಿಯಾಗಿ ಬಿಡದಿ ಪಾದಯಾತ್ರೆ, ಸದನ ಚರ್ಚೆ ಬಗ್ಗೆ ಚರ್ಚಿಸಿದರು.


Click the Play button to hear this message in audio format

ಬಿಡದಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ವಿರೋಧಿಸಿ ಜೆಡಿಎಸ್‌ ನಾಯಕ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಆಗಸ್ಟ್‌ 9ರಿಂದ ಆರಂಭವಾಗಲಿರುವ ಮೂರು ದಿನಗಳ ಪಾದಯಾತ್ರೆಗೆ ಬಿಜೆಪಿ ಬೆಂಬಲ ಘೋಷಿಸಿದೆ. ಬಿಜೆಪಿ ನಾಯಕರು ಸಂಪೂರ್ಣ ಪಾದಯಾತ್ರೆಯಲ್ಲಿ ಭಾಗವಹಿಸುವುದಿಲ್ಲವಾದರೂ, ಆರಂಭದಲ್ಲಿ ಚಾಲನೆ ನೀಡಿ ಬೆಂಬಲ ವ್ಯಕ್ತಪಡಿಸಲಿದ್ದಾರೆ.

ಬಿಜೆಪಿ ರಾಜ್ಯದ ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಕರೆ ನೀಡಿದ್ದಾರೆ.

ಸದನದಲ್ಲೂ ಕಾಂಗ್ರೆಸ್‌ ವಿರುದ್ಧ ಒಗ್ಗಟ್ಟಿನ ಹೋರಾಟ

ಆಗಸ್ಟ್‌ 13ರಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಈ ವೇಳೆ ಬಿಜೆಪಿ ಮತ್ತು ಜೆಡಿಎಸ್‌ ಒಗ್ಗಟ್ಟಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ತೀರ್ಮಾನಿಸಿವೆ. ವಿವಿಧ ಸರ್ಕಾರದ ವೈಫಲ್ಯಗಳು, ಸಚಿವರ ವಿರುದ್ಧದ ಆರೋಪಗಳು ಸೇರಿದಂತೆ ಹಲವು ವಿಚಾರಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಉಭಯ ಪಕ್ಷಗಳು ಸಜ್ಜಾಗಿವೆ.

ಸಮನ್ವಯ ಸಮಿತಿ ರಚನೆಗೆ ನಿರ್ಧಾರ

ಇನ್ನು ಮುಂದೆ ಸರ್ಕಾರದ ವಿರುದ್ಧ ಯಾವುದೇ ಹೋರಾಟ ಅಥವಾ ಪ್ರಮುಖ ರಾಜಕೀಯ ವಿಚಾರಗಳ ಕುರಿತು ಎರಡೂ ಪಕ್ಷಗಳು ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳದೆ, ಸಮನ್ವಯದೊಂದಿಗೆ ಮುಂದುವರಿಯಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್‌ನ ಸದಸ್ಯರನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಎರಡು ಗಂಟೆಗಳ ಕಾಲ ನಡೆದ ಮಹತ್ವದ ಸಭೆ

ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಸುಮಾರು ಎರಡು ಗಂಟೆಗಳ ಕಾಲ ಸಭೆ ನಡೆಸಿದರು. ಸಭೆಯಲ್ಲಿ ಮುಂಬರುವ ಅಧಿವೇಶನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರ ಹಾಗೂ ಹೊರಗಿನ ಹೋರಾಟಗಳ ಬಗ್ಗೆ ಚರ್ಚೆ ನಡೆಯಿತು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಗೈರಾಗಿರುವುದು ಕೂಡ ಗಮನ ಸೆಳೆಯಿತು. ಆದರೂ ಉಭಯ ಪಕ್ಷಗಳ ಪ್ರಮುಖ ನಾಯಕರು ಒಟ್ಟಾಗಿ ಸಭೆ ನಡೆಸಿ, ಬಿಜೆಪಿ–ಜೆಡಿಎಸ್‌ ಮೈತ್ರಿಯಲ್ಲಿ ಒಗ್ಗಟ್ಟಿನ ಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ.

Read More
Next Story