ಎಸ್‌ಐಆರ್‌ನಲ್ಲಿ ಅಕ್ರಮ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ-ಜೆಡಿಎಸ್ ಸಮರ
x

ಎಸ್‌ಐಆರ್‌ನಲ್ಲಿ ಅಕ್ರಮ: ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ-ಜೆಡಿಎಸ್ ಸಮರ

ಎಸ್‌ಐಆರ್‌ ಪರಿಷ್ಕರಣೆಗಾಗಿ ಬಿಎಲ್‌ಒ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಆದರೆ, ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ನಿಯಮಬಾಹಿರವಾಗಿ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.


Click the Play button to hear this message in audio format

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾರರ ಪಟ್ಟಿ ತಯಾರಿಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಅಕ್ರಮ ಎಸಗುತ್ತಿದೆ ಎಂಬ ಗಂಭೀರ ಆರೋಪಗಳನ್ನು ಬಿಜೆಪಿ ಮತ್ತು ಜೆಡಿಎಸ್ ಮಾಡಿವೆ.

ಚುನಾವಣಾ ಆಯೋಗದ ನಿಯಮದ ಪ್ರಕಾರ, ಮತದಾರರ ಪಟ್ಟಿಯ ಪರಿಷ್ಕರಣೆಗಾಗಿ ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿಗಳು) ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು. ಇದು ಪಾರದರ್ಶಕ ಮತ್ತು ನಿಖರವಾದ ಪ್ರಕ್ರಿಯೆ. ಆದರೆ, ರಾಜ್ಯದಲ್ಲಿನ ಎಸ್‌ಎಸ್‌ಆರ್ ಪ್ರಕ್ರಿಯೆಯು ನಿಯಮಬಾಹಿರವಾಗಿ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಬಿಎಲ್‌ಒಗಳು ಮನೆ ಬಾಗಿಲಿಗೆ ಹೋಗುವ ಬದಲಾಗಿ ಮಸೀದಿಗಳು, ದೇವಸ್ಥಾನಗಳು, ಸಮುದಾಯ ಭವನಗಳು ಮತ್ತು ಕಲ್ಯಾಣ ಮಂಟಪಗಳಲ್ಲಿ ಜನರನ್ನು ಸಾಮೂಹಿಕವಾಗಿ ಕರೆಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಒಂದು ನಿರ್ದಿಷ್ಟ ಧರ್ಮದ ಆರಾಧನಾ ಕೇಂದ್ರಗಳು ಅಥವಾ ಸಮುದಾಯ ಭವನಗಳಲ್ಲಿ ಜನರನ್ನು ಸೇರಿಸಿ ಈ ಪ್ರಕ್ರಿಯೆ ನಡೆಸುವುದರ ಹಿಂದಿನ ಉದ್ದೇಶವೇನು? ಇದು ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರು ಸೇರಿಸಲು ಅಥವಾ ತೆಗೆದುಹಾಕಲು ನಡೆಯುತ್ತಿರುವ ವ್ಯವಸ್ಥಿತ ಸಂಚು ಎಂದು ವಿಪಕ್ಷಗಳು ಆರೋಪಿಸಿವೆ.

ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜಂಟಿ ಸಮರ

ಈ ವಿಷಯವನ್ನು ಬಿಜೆಪಿ ಮತ್ತು ಜೆಡಿಎಸ್ ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಕೇಂದ್ರ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಈ ಅವ್ಯವಸ್ಥೆಯನ್ನು ಕೇಂದ್ರದ ಗಮನಕ್ಕೆ ತರಲಾಗಿದೆ. ದೆಹಲಿಗೆ ತೆರಳಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟದ ಮೂಲಕ ಬೃಹತ್ ಜಂಟಿ ಹೋರಾಟಕ್ಕೆ ರೂಪರೇಷೆಗಳನ್ನು ಸಿದ್ಧಪಡಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಸರ್ಕಾರವು ಅಧಿಕಾರ ದುರುಪಯೋಗಪಡಿಸಿಕೊಂಡು ಮತದಾರರ ಪಟ್ಟಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಲು ಯತ್ನಿಸುತ್ತಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಕೃತ್ಯ. ನಾವು ಇದನ್ನು ಸಹಿಸುವುದಿಲ್ಲ, ರಾಜ್ಯಾದ್ಯಂತ ಈ ಅಕ್ರಮದ ವಿರುದ್ಧ ಜನಜಾಗೃತಿ ಮೂಡಿಸುತ್ತೇವೆ ಎಂದು ಉಭಯ ಪಕ್ಷಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕೋಲಾರದಲ್ಲಿ ಅಧಿಕಾರಿಗಳಿಗೆ ಬಿಸಿ

ಈ ವಿವಾದವು ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗಿಲ್ಲ. ಇದು ಈಗಾಗಲೇ ಆಡಳಿತಾತ್ಮಕ ಕ್ರಮಕ್ಕೂ ಕಾರಣವಾಗಿದೆ. ಕೋಲಾರದಲ್ಲಿ ಮತದಾರರನ್ನು ಗುಂಪು ಸೇರಿಸಿ ಎಸ್‌ಎಸ್‌ಆರ್ ನಡೆಸಿದ ಆರೋಪದ ಮೇಲೆ, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ. ನಿಯಮ ಉಲ್ಲಂಘಿಸಿದ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಮತ್ತು ಐವರು ಬಿಎಲ್‌ಒಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಸಾಮೂಹಿಕವಾಗಿ ಜನರನ್ನು ಸೇರಿಸಿ ಮಾಹಿತಿ ಸಂಗ್ರಹಿಸುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದ್ದಾರೆ. ಕೋಲಾರದಲ್ಲಿ ನಡೆದ ಈ ಘಟನೆಯು ಸರ್ಕಾರದ ಲೋಪಗಳಿಗೆ ಸಾಕ್ಷಿಯಾಗಿದೆ ಎಂದು ಪ್ರತಿಪಕ್ಷಗಳು ಹೇಳಿದ್ದು, ರಾಜ್ಯದ ಇತರೆ ಜಿಲ್ಲೆಗಳಲ್ಲೂ ಇದೇ ರೀತಿಯ ಅಕ್ರಮಗಳು ನಡೆದಿವೆ ಎಂದು ದೂರಿವೆ.

ಮೈಸೂರಿನಲ್ಲೂ ನಿಯಮ ಉಲ್ಲಂಘನೆ

ಇತ್ತ ಮೈಸೂರಿನಲ್ಲೂ ಮನೆ ಮನೆಗೆ ತೆರಳದೆ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೈಸೂರಿನ ಎನ್.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಎಲ್‌ಒಗಳು ಸಾರ್ವಜನಿಕ ಸ್ಥಳ ಹಾಗೂ ಮತಗಟ್ಟೆ ಕೇಂದ್ರಗಳಲ್ಲಿ ಸಾರ್ವಜನಿಕರನ್ನು ಗುಂಪುಗೂಡಿಸಿ ಸಾಮೂಹಿಕವಾಗಿ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಮನೆ ಮನೆಗೆ ತೆರಳಿ ಪಾರದರ್ಶಕವಾಗಿ ಪರಿಷ್ಕರಣೆ ನಡೆಸಬೇಕು ಎಂದು ಸ್ಥಳೀಯ ನಿವಾಸಿಗಳು ತೀವ್ರ ಒತ್ತಾಯ ಹೇರಿದ್ದಾರೆ.

ರಾಜಕೀಯ ಪರಿಣಾಮಗಳು

ಮುಂಬರುವ ದಿನಗಳಲ್ಲಿ ವಿಧಾನಸಭೆಯ ಅಧಿವೇಶನದಲ್ಲಿ ಎಸ್‌ಐಆರ್‌ ಗೊಂದಲವು ಕೋಲಾಹಲವನ್ನುಂಟು ಮಾಡಲಿದೆ. ಪ್ರತಿಪಕ್ಷಗಳು ಈ ವಿಷಯವನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದು, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಯೋಜನೆ ರೂಪಿಸುತ್ತಿವೆ. ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಜೀವಾಳ. ಇದರಲ್ಲಿ ಅಕ್ರಮ ನಡೆದರೆ ಚುನಾವಣೆಯ ಫಲಿತಾಂಶದ ಮೇಲೇ ಪರಿಣಾಮ ಬೀರುತ್ತದೆ. ಹಾಗಾಗಿ ಈ ಆರೋಪವು ಕೇವಲ ರಾಜಕೀಯವಲ್ಲ, ಸಂವಿಧಾನಾತ್ಮಕ ಬಿಕ್ಕಟ್ಟಾಗಿದೆ. ಈ ಹೋರಾಟವು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟವನ್ನು ಮತ್ತಷ್ಟು ಹತ್ತಿರ ತಂದಿದೆ. ಜಂಟಿ ಹೋರಾಟದ ಮೂಲಕ ತಳಮಟ್ಟದಲ್ಲಿ ಸಂಘಟನೆ ಬಲಪಡಿಸಲು ಎರಡೂ ಪಕ್ಷಗಳಿಗೆ ಇದು ಉತ್ತಮ ವೇದಿಕೆ ಒದಗಿಸಿದೆ. ನೋಟಿಸ್ ಜಾರಿ ಮಾಡಿರುವ ಕ್ರಮವು, ತಪ್ಪು ಮಾಡುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಂತಾಗಿದೆ. ಇದರಿಂದ ಇನ್ನು ಮುಂದೆ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತಾಗಿದೆ ಎಂದು ಹೇಳಲಾಗಿದೆ.

Read More
Next Story