ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಸಮರ: ಪಾದಯಾತ್ರೆ ತಡೆದ ಪೊಲೀಸರು
x

ಬಿಡದಿ ಟೌನ್‌ಶಿಪ್ ವಿರುದ್ಧ ಜೆಡಿಎಸ್ ಸಮರ: ಪಾದಯಾತ್ರೆ ತಡೆದ ಪೊಲೀಸರು

ಪಾದಯಾತ್ರೆ ತಡೆದಿದ್ದರೂ, ರೈತರ ಹಿತರಕ್ಷಣೆಯ ಹೋರಾಟವನ್ನು ಆ.18ರಂದು ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಹೋರಾಟ ನಡೆಸಲು ಜೆಡಿಎಸ್‌ ತೀರ್ಮಾನಿಸಲಾಗಿದೆ.


Click the Play button to hear this message in audio format

ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ಸ್ವರೂಪದ ಸಂಘರ್ಷಕ್ಕೆ ನಾಂದಿ ಹಾಡಿದೆ. ರಾಮನಗರ ಜಿಲ್ಲೆಯ ಬೈರಮಂಗಲದಿಂದ ಆರಂಭವಾದ ಜೆಡಿಎಸ್‌ನ ಮೂರು ದಿನಗಳ ಬೃಹತ್ ಪಾದಯಾತ್ರೆಯನ್ನು ಪೊಲೀಸರು ಕಣಿಮಿನಿಕೆ ಬಳಿ ತಡೆದ ನಂತರ, ರಾಜಕೀಯ ವಾತಾವರಣ ಮತ್ತಷ್ಟು ಬಿಸಿಯಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯನ್ನು ಸರ್ಕಾರ ತಡೆದಿದೆ. ಈ ಹಿನ್ನೆಲೆಯಲ್ಲಿ, ಆಗಸ್ಟ್ 18ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಬೃಹತ್ ಹೋರಾಟವು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

ಕಣಿಮಿನಿಕೆ ಬಳಿ ಪಾದಯಾತ್ರೆಯನ್ನು ತಡೆಯಲು ಪೊಲೀಸರು ಭಾರಿ ಭದ್ರತೆ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಸರ್ಕಾರದ ಸೂಚನೆಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಆರೋಪಿಸಿದ ನಿಖಿಲ್ ಕುಮಾರಸ್ವಾಮಿ, ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗೆ ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಕಿಡಿಕಾರಿದರು. ಕಳೆದ 517 ದಿನಗಳಿಂದ ಬೈರಮಂಗಲದಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಕನಿಷ್ಠ ಗೌರವವನ್ನೂ ನೀಡುತ್ತಿಲ್ಲ. ಪಾದಯಾತ್ರೆ ತಡೆಯಲ್ಪಟ್ಟಿದ್ದರೂ, ರೈತರ ಹಿತರಕ್ಷಣೆಯ ಹೋರಾಟವನ್ನು ಆಗಸ್ಟ್ 18ರಂದು ಫ್ರೀಡಂ ಪಾರ್ಕ್‌ನಲ್ಲಿ ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾಗುವುದು ಎಂದು ಘೋಷಿಸಿದರು.

ಸಿಎಂ ಡಿ.ಕೆ. ಶಿವಕುಮಾರ್, ಶಾಸಕ ಬಾಲಕೃಷ್ಣ ವಿರುದ್ಧ ಕಿಡಿ

ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದರು. ಒಂದು ಕಾಲದಲ್ಲಿ ಪೆನ್ನು-ಪೇಪರ್ ಹಿಡಿದು ಜನರ ಬಳಿ ಸಮಸ್ಯೆ ಕೇಳುತ್ತಿದ್ದ ಡಿ.ಕೆ. ಶಿವಕುಮಾರ್, ಇಂದು ಅದೇ ಪೆನ್ನು-ಪೇಪರ್ ಬಳಸಿ ರೈತರ ಭೂಮಿಯನ್ನು ಕಿತ್ತುಕೊಳ್ಳಲು ಹೊರಟಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು. ಸರ್ಕಾರ ರೈತರಿಗಾಗಿ ಕೆಲಸ ಮಾಡುತ್ತಿಲ್ಲ, ಬದಲಾಗಿ ರಿಯಲ್ ಎಸ್ಟೇಟ್ ಏಜೆಂಟ್‌ಗಳಂತೆ ವರ್ತಿಸುತ್ತಿದೆ. ಇನ್ನು, ನೂತನ ಸಚಿವ ಬಾಲಕೃಷ್ಣ ಅವರು ರೈತರ ವಿಷಯದಲ್ಲಿ ಸಂತೆ ಭಾಷಣ ಮಾಡುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ರೈತರಿಗೆ ಎಕರೆಗೆ 3 ಕೋಟಿ ರೂಪಾಯಿ ಪರಿಹಾರ ನೀಡುವುದಾಗಿ ಘೋಷಿಸಿದ್ದಕ್ಕೆ ತಿರುಗೇಟು ನೀಡಿದ ನಿಖಿಲ್ ಕುಮಾರಸ್ವಾಮಿ, "ನಿಮ್ಮ ಹಣದ ಆಮಿಷಕ್ಕೆ ರೈತರು ಬಲಿಯಾಗುವುದಿಲ್ಲ. ರಾಜ್ಯದ ಅತೀ ಶ್ರೀಮಂತ ಮುಖ್ಯಮಂತ್ರಿಯಾದ ನೀವು, ರೈತರ ಸ್ವಾಭಿಮಾನವನ್ನು ಹಣದಲ್ಲಿ ಅಳೆಯಬೇಡಿ. ಈ ರೈತರು ತಮ್ಮ ಭೂಮಿಯನ್ನು ಒಂದಿಂಚೂ ಬಿಟ್ಟುಕೊಡುವುದಿಲ್ಲ. ಎಷ್ಟು ಜನ ರೈತರು ನಿಜಕ್ಕೂ ಪರಿಹಾರದ ಚೆಕ್ ಪಡೆದಿದ್ದಾರೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಏಜೆಂಟ್‌ಗಳನ್ನು ಬಿಟ್ಟು ರೈತರ ಬ್ರೇನ್ ವಾಶ್ ಮಾಡುವ ಕೆಲಸವನ್ನು ಸರ್ಕಾರ ನಿಲ್ಲಿಸಬೇಕೆಂದು ಆಗ್ರಹಿಸಿದರು.

ದೇವೇಗೌಡರ ಕುಟುಂಬ: ರೈತರ ಪರ ದೃಢ ನಿಲುವು

"ದೇವೇಗೌಡರ ಕುಟುಂಬ ಯಾವಾಗಲೂ ರೈತರ ಪರವಾಗಿ ನಿಲ್ಲುತ್ತದೆ. ಅದು ಅಧಿಕಾರದಲ್ಲಿ ಇರಲಿ, ವಿರೋಧ ಪಕ್ಷದಲ್ಲಿ ಇರಲಿ, ರೈತರ ರಕ್ಷಣೆಗೆ ಜೆಡಿಎಸ್ ಸದಾ ಸಿದ್ಧ. ಟೌನ್‌ಶಿಪ್ ಯೋಜನೆಯ ವಿರುದ್ಧ ಕಾನೂನು ಸಮರವನ್ನು ಮುಂದುವರಿಸುವುದಲ್ಲದೆ, ಬೀದಿಗಿಳಿದು ಹೋರಾಟ ಮಾಡಲಾಗುವುದು. ಅನ್ನದಾತರ ಹಿತ ಕಾಯುವ ವಿಷಯದಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಹೋರಾಟ ಈಗ ಕೇವಲ ಸ್ಥಳೀಯ ವಿಷಯವಾಗಿ ಉಳಿದಿಲ್ಲ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸ್ವತಃ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಯ ನೇತೃತ್ವ ವಹಿಸುತ್ತಿರುವುದು, ಈ ಹೋರಾಟವನ್ನು ರಾಜ್ಯಮಟ್ಟದ ಚರ್ಚೆಯಾಗಿ ಬದಲಿಸಿದೆ. ಜೆಡಿಎಸ್ ಈ ಹೋರಾಟದ ಮೂಲಕ ತನ್ನ ಬೇರುಗಳನ್ನು ಗಟ್ಟಿಗೊಳಿಸಲು ಮತ್ತು ಸರ್ಕಾರದ ಭೂಸ್ವಾಧೀನ ನೀತಿಯನ್ನು ಬಯಲಿಗೆಳೆಯಲು ಸಜ್ಜಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಈ ಬೃಹತ್ ಹೋರಾಟವು ಸರ್ಕಾರದ ಮೇಲೆ ಯಾವ ರೀತಿಯ ಒತ್ತಡ ಹೇರಲಿದೆ ಎಂದು ತಿಳಿಸಿದರು.

Read More
Next Story