ಅರಣ್ಯ ನಾಶಕ್ಕೆ ಪ್ರತೀಕಾರ; ಬೆಂಗಳೂರಿಗೂ ವ್ಯಾಪಿಸಿದ ಪ್ರಾಣಿ-ಮಾನವ ಸಂಘರ್ಷ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಜಿಗಣಿ ಮತ್ತು ಆನೇಕಲ್ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಆನೆಗಳ ಸಾಂಪ್ರದಾಯಿಕ ಪಥಗಳಾಗಿವೆ. ಶತಮಾನಗಳಿಂದ ಆನೆಗಳು ಇದೇ ಹಾದಿಯಲ್ಲಿ ಆಹಾರ ಮತ್ತು ನೀರಿಗಾಗಿ ಬಂದು ಹೋಗುತ್ತಿದ್ದವು.
ಭಾರತದ ಸಿಲಿಕಾನ್ ವ್ಯಾಲಿ, ದೇಶದ ಐಟಿ ಕ್ಯಾಪಿಟಲ್, ಉದ್ಯಾನನಗರಿ ಬೆಂಗಳೂರು ಇಂದು ಆತಂಕಕಾರಿ ಕಾರಣಕ್ಕೆ ಸುದ್ದಿಯಲ್ಲಿದೆ. ಎರಡು ದಿನಗಳ ಹಿಂದೆ ಕೆಂಗೇರಿ ಸಮೀಪ ಅಂಚೆಪಾಳ್ಯದಲ್ಲಿ ಕಾಡಾನೆಯೊಂದು ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಯನ್ನು ತುಳಿದು ಸಾಯಿಸಿದ ಬೆನ್ನಲ್ಲೇ ಈಗ ಚಿರತೆ ಕೂಡ ಪ್ರತ್ಯಕ್ಷವಾಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಕುಡ್ಲು ಗೇಟ್, ಕನಕಪುರ ರಸ್ತೆ, ತುಮಕೂರು ರಸ್ತೆ ಕೇವಲ ಬೆಂಗಳೂರಿನ ಎಂಟ್ರಿ ಪಾಯಿಂಟ್‌ಗಳಾಗಿ ಉಳಿದಿಲ್ಲ. ಕಾಡುಪ್ರಾಣಿಗಳ ಪುರಪ್ರವೇಶದ ಹಾಟ್ ಸ್ಪಾಟ್ ಗಳಾಗಿ ಬದಲಾಗಿವೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಜಿಗಣಿ ಮತ್ತು ಆನೇಕಲ್ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳು ಆನೆಗಳ ಸಾಂಪ್ರದಾಯಿಕ ಪಥಗಳಾಗಿವೆ. ಶತಮಾನಗಳಿಂದ ಆನೆಗಳು ಇದೇ ಹಾದಿಯಲ್ಲಿ ಆಹಾರ ಮತ್ತು ನೀರಿಗಾಗಿ ಬಂದು ಹೋಗುತ್ತಿದ್ದವು. ಆದರೆ ಒಂದೆರಡು ದಶಕಗಳಲ್ಲಿ ಈ ಗಡಿ ಪ್ರದೇಶ ಸಂಪೂರ್ಣ ಕಾಂಕ್ರೀಟ್ ಮಯವಾಗಿದೆ. ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳು, ರೆಸಾರ್ಟ್ ಗಳು, ಚತುಷ್ಪಥ ಹೆದ್ದಾರಿಗಳಿಂದಾಗಿ ಆನೆ ಕಾರಿಡಾರ್ ಗಳು ಬಂದ್ ಆಗಿವೆ.
ಯಾವಾಗ ಆನೆ ಕಾರಿಡಾರ್ ಬಂದ್ ಆಯ್ತೋ, ಗೊಂದಲಕ್ಕೆ ಒಳಗಾದ ಸೂಕ್ಷ್ಮಪತಿ ಆನೆಗಳು ನೇರವಾಗಿ ಜನವಸತಿ ಪ್ರದೇಶ, ರೈತರ ಬೆಳೆಗಳಿಗೆ ನುಗ್ಗಲು ಆರಂಭಿಸಿದವು. ಇದು ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು. ಕರ್ನಾಟಕದಲ್ಲಿ ಆನೆಗಳ ಸಂತತಿ ಹೆಚ್ಚಾಗಲು ಪ್ರಮುಖ ಕಾರಣವೆಂದರೆ, ಕಳೆದ ಕೆಲ ದಶಕಗಳಲ್ಲಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ವನ್ಯಜೀವಿ ಸಂರಕ್ಷಣಾ ಕ್ರಮದಿಂದಲೇ ಆನೆಗಳ ಸಂತತಿ ಹೆಚ್ಚುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ, ಬೇಟೆಗಾರರಿಗೆ ಕಡಿವಾಣ ಮತ್ತು ವನ್ಯಜೀವಿ ಧಾಮಗಳ ರಕ್ಷಣೆಯಿಂದಾಗಿ ಆನೆಗಳ ಜನನ ಪ್ರಮಾಣ ಹೆಚ್ಚಾಗುತ್ತಿದೆ. ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಸುಮಾರು 6,395 ಆನೆಗಳಿವೆ. ಆ ಮೂಲಕ ಭಾರತದಲ್ಲೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ರಾಜ್ಯವಾಗಿದೆ.
ಕುಗ್ಗಿದ ಅರಣ್ಯ ಪ್ರದೇಶ
ಇಲ್ಲಿ 6,395 ಆನೆಗಳ ಸುಸ್ಥಿರ ಜೀವನ ನಡೆಸಲು ಕನಿಷ್ಠ 9 ಸಾವಿರದಿಂದ 14 ಸಾವಿರ ಚದರ ಕಿ.ಮೀ ವಿಸ್ತೀರ್ಣದ ದಟ್ಟ ಅರಣ್ಯ ಅಗತ್ಯವಿದೆ. ಆದರೆ, ಕರ್ನಾಟಕದಲ್ಲಿ 8,900 ರಿಂದ 13 ಸಾವಿರ ಚದರ ಕಿ.ಮೀ ವಿಸ್ತೀರ್ಣದಲ್ಲಿ ಆನೆಗಳ ಭೂಸದೃಶ್ಯವಿದೆ. ಇತ್ತೀಚೆಗಂತೂ ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನಗಳಲ್ಲಿ ಆನೆಗಳ ಸಾಂದ್ರತೆ ಹೆಚ್ಚಾಗಿದೆ. ಇಲ್ಲಿ ಪ್ರತಿ ಚದರ ಕಿ.ಮೀಗೆ ಒಂದಕ್ಕಿಂತ ಹೆಚ್ಚು ಆನೆಗಳಿವೆ. ಬನ್ನೇರುಘಟ್ಟ, ನಾಗರಹೊಳೆ, ಬಂಡೀಪುರ ಉದ್ಯಾನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನಧಿಕೃತ ಚಟುವಟಿಕೆಗಳಿಂದಾಗಿ ವಿಸ್ತೀರ್ಣ ಕಡಿಮೆಯಾಗುತ್ತಿದೆ. ಸಾಮಾನ್ಯವಾಗಿ ಒಂದು ಆನೆಗೆ ದಿನಕ್ಕೆ ಸುಮಾರು 150 ಕೆಜಿ ಆಹಾರ ಮತ್ತು 100 ರಿಂದ 200 ಲೀಟರ್ ನೀರು ಬೇಕು. ಅಲ್ಲದೇ ಆನೆಗಳಿಗೆ ಆಹಾರ ಹಾಗೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿ ನಾಡಿನತ್ತ ಲಗ್ಗೆ ಇಡುತ್ತಿವೆ.
ಇನ್ನು ಆನೆಗಳ ಸಂತತಿ ಹೆಚ್ಚಿದಂತೆ ಮಾನವ ಹಾಗೂ ಪ್ರಾಣಿ ಸಂಘರ್ಷವೂ ತಾರಕಕ್ಕೇರುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ ಸರಾಸರಿ 25ರಿಂದ 35 ಜನರು ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ.
ಕಳೆದ 5 ವರ್ಷಗಳಲ್ಲಿ ರಾಜ್ಯಾದ್ಯಂತ ಆನೆ ದಾಳಿಯಿಂದ 150ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರಿನ ದಕ್ಷಿಣ ಭಾಗದ ಕೆಂಗೇರಿ, ಬಿಡದಿ, ಆನೇಕಲ್, ಕನಕಪುರ ರಸ್ತೆಗಳಲ್ಲಿ ವರ್ಷಕ್ಕೆ ಸರಾಸರಿ 2 ರಿಂದ 5 ಜೀವಹಾನಿಗಳು ವರದಿಯಾಗುತ್ತಿವೆ. ಇನ್ನು ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಆನೆಗಳಿಂದ ಹೆಚ್ಚು ಪ್ರಾಣ ಹಾನಿ ಸಂಭವಿಸುತ್ತಿದೆ. ಪ್ರತಿ ವರ್ಷ ಅರಣ್ಯ ಇಲಾಖೆಗೆ 15 ರಿಂದ 20 ಸಾವಿರಕ್ಕೂ ಹೆಚ್ಚು ಬೆಳೆ ಹಾನಿ ಪರಿಹಾರ ಅರ್ಜಿಗಳು ಸಲ್ಲಿಕೆಯಾಗುತ್ತವೆ.
ಚಿರತೆಗಳಿಗೂ ಹಾಟ್‌ಸ್ಪಾಟ್
ಬೆಂಗಳೂರಿನ ನಗರ ಹಾಗೂ ಹೊರವಲಯ ಪ್ರದೇಶಗಳಲ್ಲಿ ಕಾಡುಪ್ರದೇಶಗಳು ಕಮ್ಮಿಯಾಗಿ ನಗರೀಕರಣ ಹೆಚ್ಚಾಗಿರುವುದರಿಂದ ಚಿರತೆಗಳ ಸಂಚಾರ ಮತ್ತು ಪ್ರತ್ಯಕ್ಷವಾಗುವ ಘಟನೆಗಳು ಹೆಚ್ಚಾಗಿವೆ. ಎಲೆಕ್ಟ್ರಾನಿಕ್ ಸಿಟಿ, ಕುಡ್ಲು ಗೇಟ್, ಮಾರತ್ತಹಳ್ಳಿಯಂತಹ ಹೈಟೆಕ್ ಪ್ರದೇಶಗಳಲ್ಲೂ ಚಿರತೆಗಳು ಏಕೆ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಬೆಂಗಳೂರು ಹೊರವಲಯದಲ್ಲಿ ಎಲ್ಲೆಂದರಲ್ಲಿ ಕೋಳಿ ಹಾಗೂ ಇತರೆ ತ್ಯಾಜ್ಯ ಎಸೆಯುವುದರಿಂದ ಬೀದಿ ನಾಯಿಗಳ ಸಂಖ್ಯೆ ಮಿತಿಮೀರಿ ಬೆಳೆದಿದೆ. ಸುಲಭವಾಗಿ ಸಿಗುವ ನಾಯಿಗಳನ್ನೇ ಹುಡುಕಿಕೊಂಡು ಚಿರತೆಗಳು ನಾಡಿನತ್ತ ಬರುತ್ತಿವೆ. ಸರ್ಕಾರಗಳು ಸಾವಿರಾರು ಎಕರೆ ಗುಡ್ಡಗಾಡು ಹಾಗೂ ಬಫರ್ ಝೋನ್ ಪ್ರದೇಶಗಳನ್ನು ಆಕ್ರಮಿಸಿಕೊಂಡು, ಅಭಿವೃದ್ಧಿಗೆ ಬಳಸಿಕೊಳ್ಳುತ್ತಿವೆ. ವನ್ಯಜೀವಿಗಳ ಆವಾಸಸ್ಥಾನ ಕಿತ್ತುಕೊಳ್ಳುತ್ತಾ ಹೋದರೆ ಉಳಿದಿರುವ ಅಲ್ಪಸ್ವಲ್ಪ ಕಾಡು ತುಂಡಾಗಲಿದೆ. ಆಗ ಆನೆಗಳು ಮತ್ತು ಚಿರತೆಗಳು ಇನ್ನಷ್ಟು ಹೆಚ್ಚಾಗಿ ವಸತಿ ಪ್ರದೇಶಗಳಿಗೆ ನುಗ್ಗಲಿವೆ.
ವೀಕ್ಷಕರೇ, ಚಿರತೆಗಳು ಹುಲಿಗಳಂತೆ ದಟ್ಟ ಕಾಡಿಗೆ ಮಾತ್ರ ಸೀಮಿತವಾಗಿಲ್ಲ. ಅವು ಸಣ್ಣ ಪೊದೆಗಳು, ಕಬ್ಬಿನ ಗದ್ದೆಗಳು, ಗುಹೆಗಳು ಮತ್ತು ಬಫರ್ ಝೋನ್ಗಳಲ್ಲೂ ಸುಲಭವಾಗಿ ಬದುಕಲಿವೆ. ಕಾಡಿನಲ್ಲಿ ಜಿಂಕೆ, ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡುವುದಕ್ಕಿಂತ ಬೀದಿ ನಾಯಿಗಳು, ಕೋಳಿ ಮತ್ತು ಕುರಿಗಳನ್ನು ಬೇಟೆಯಾಡಿದರೆ ಸುಲಭವಾಗಿ ಹಸಿವು ನೀಗಿಸಲಿದೆ. ಜೊತೆಗೆ ಕಾಡಿನಲ್ಲಿ ಹುಲಿ ಮತ್ತು ಕಾಡುನಾಯಿಗಳ ಸಂಖ್ಯೆ ಹೆಚ್ಚಿರುವುದರಿಂದ ಚಿರತೆಗಳು ತಮ್ಮ ಜೀವ ಉಳಿಸಿಕೊಳ್ಳಲು ಮತ್ತು ಮರಿಗಳನ್ನು ರಕ್ಷಿಸಲು ಕಾಡಂಚಿನ ಗ್ರಾಮಗಳು, ಬೆಟ್ಟಗುಡ್ಡಗಳತ್ತ ಬರುತ್ತಿವೆ. ಇವುಗಳಿಗೆ ಸುಲಭವಾಗಿ ಆಹಾರ ಲಭ್ಯವಾಗುತ್ತಿರುವುದರಿಂದ ಸಂತಾನೋತ್ಪತ್ತಿ ಪ್ರಮಾಣ ಕೂಡ ಏರಿಕೆಯಾಗುತ್ತಿದೆ.
ಆನೆಗಳು ಹಾಗೂ ಚಿರತೆಗಳಿಂದ ಹೆಚ್ಚುತ್ತಿರುವ ಪ್ರಾಣಿ-ವನ್ಯಜೀವಿ ಸಂಘರ್ಷ ತಡೆಗೆ ಅರಣ್ಯ ಇಲಾಖೆ ಹಲವು ಕ್ರಮಗಳನ್ನು ಕೈಗೊಂಡರೂ ಜೀವಹಾನಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ. ಆನೆಗಳು ಹಾಗೂ ಚಿರತೆಗಳ ಸೆರೆಗೆ ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ. ಚಿರತೆಗಳ ಸೆರೆಗೆ ಸಿಸಿಟಿವಿ ಕ್ಯಾಮೆರಾಗಳು, ಥರ್ಮಲ್ ಡ್ರೋನ್ ಹಾಗೂ ಬೋನುಗಳನ್ನು ಅಳವಡಿಸಿ ನಿರಂತರ ಕಣ್ಗಾವಲು ಇರುಸಲಾಗುತ್ತದೆ.
ಅದೇ ರೀತಿ ಆನೆಗಳ ಹಾವಳಿ ತಡೆಗೂ ಟಾಸ್ಕ್ ಪೋರ್ಸ್ ರಚಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾಡಂಚಿನ ಗ್ರಾಮಗಳಲ್ಲಿ ನಿರಂತವಾಗಿ ಎಚ್ಚರಿಕೆ ಸಂದೇಶ ರವಾನಿಸುತ್ತಿರುತ್ತಾರೆ. ಜೊತೆಗೆ ಕಾಡಿನಿಂದ ಆನೆಗಳು ನಾಡಿನತ್ತ ಬರುವುದನ್ನ ತಡೆಯಲು ರೈಲ್ವೆ ಹಳಿಗಳ ಬ್ಯಾರಿಕೇಡ್ ಕೂಡ ನಿರ್ಮಿಸಲಾಗುತ್ತಿದೆ. ವಿಪರ್ಯಾಸ ಎಂದರೆ ಆ ಬ್ಯಾರಿಕೇಡ್ಗಳನ್ನು ದಾಟಿ ಅಥವಾ ನುಗ್ಗಿ ಬರುವಷ್ಟು ಬುದ್ದಿವಂತಿಕೆ ಆನೆಗಳಲ್ಲಿದೆ.
ನಮಗೆ ಅಭಿವೃದ್ಧಿ ಬೇಕು. ಆದರೆ, ಪರಿಸರ ಮತ್ತು ವನ್ಯಜೀವಿಗಳ ಆವಾಸ ಸ್ಥಾನವನ್ನು ಆಪೋಷನ ಮಾಡುವಂತಹ ಅಭಿವೃದ್ಧಿ ಅನಗತ್ಯ. ಆನೆ ಕಾರಿಡಾರ್ಗಳ ರಕ್ಷಣೆ, ಬಫರ್ ಝೋನ್ಗಳಲ್ಲಿ ಅಕ್ರಮ ಒತ್ತುವರಿ ತಡೆ ಹಾಗೂ ವೈಜ್ಞಾನಿಕ ಕಸ ವಿಲೇವಾರಿಯಿಂದ ಪ್ರಾಣಿ ಹಾಗೂ ಮಾನವ ಸಂಘರ್ಷವನ್ನು ತಕ್ಕಮಟ್ಟಿಗೆ ತಡೆಯಬಹುದಾಗಿದೆ. ಇಲ್ಲದೇ ಹೋದರೆ, ಇಂದು ಅಂಚೇಪಾಳ್ಯದಲ್ಲಿ ನಡೆದ ಘಟನೆ ನಾಳೆ ನಾವು- ನೀವು ವಾಸಿಸುವ ಜಾಗದಲ್ಲೂ ಆಗಬಹುದು. ಮನುಷ್ಯ ಹಾಗೂ ಪ್ರಾಣಿಗಳ ಸುಸ್ಥಿರ ಸಹ ಜೀವನದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
