ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ
x

ಬೆಂಗಳೂರು ವಿವಿ ಜ್ಞಾನಭಾರತಿ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ವಿಮೆ

ಕ್ಯಾಂಪಸ್ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಕುಲಪತಿ ಡಾ. ಶಿವರಾಜ್ ನಿರ್ಧರಿಸಿದ್ದಾರೆ.


ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ಆತಂಕದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಮಹತ್ವದ ನಿರ್ಧಾರ ಕೈಗೊಂಡಿದೆ.

ಕ್ಯಾಂಪಸ್ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಕುಲಪತಿ ಡಾ. ಶಿವರಾಜ್ ನಿರ್ಧರಿಸಿದ್ದಾರೆ.

ಜ್ಞಾನಭಾರತಿ ಕ್ಯಾಂಪಸ್ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಇದರಿಂದ ಸಾಲು ಸಾಲು ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿತ್ತು. ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದವರಾಗಿರುವ ಕಾರಣ ಹಠಾತ್ ಎದುರಾಗುವ ವೈದ್ಯಕೀಯ ವೆಚ್ಚಗಳು ಕುಟುಂಬಗಳಿಗೆ ಹೊರೆಯಾಗುತ್ತಿತ್ತು. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವಿಶ್ವವಿದ್ಯಾಲಯವು ಇನ್ಶುರೆನ್ಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಈ ಯೋಜನೆಯನ್ನು ರೂಪಿಸಿದೆ.

ವಿಮಾ ಯೋಜನೆ ಹೇಗಿರಲಿದೆ?

ವಿದ್ಯಾರ್ಥಿಗಳು ದಾಖಲಾತಿ ಸಮಯದಲ್ಲಿ ಕೇವಲ 100 ರೂ. ನಿಯಮಿತ ಶುಲ್ಕವನ್ನು ಪಾವತಿಸಿ ವಿಮೆ ವ್ಯಾಪ್ತಿಗೆ ಸೇರಬಹುದು.

ಕ್ಯಾಂಪಸ್ ಒಳಗೆ ಅಥವಾ ಹೊರಗೆ ಅಚಾನಕ್‌ ಆಗಿ ಯಾವುದೇ ಅಪಘಾತಗಳು ಸಂಭವಿಸಿದರೂ ನಿಗದಿತ ವೆಚ್ಚದವರೆಗೆ ಉಚಿತ ಆರೋಗ್ಯ ಸೇವೆ ಲಭ್ಯವಾಗಲಿದೆ. ವಿದ್ಯಾರ್ಥಿಯು ಕೋರ್ಸ್ ಪೂರ್ಣಗೊಳಿಸುವ ತನಕ ಈ ವಿಮಾ ರಕ್ಷಣೆ ಚಾಲ್ತಿಯಲ್ಲಿರುತ್ತದೆ. ವಿಶ್ವವಿದ್ಯಾಲಯವು ಈಗಾಗಲೇ ಪ್ರಮುಖ ವಿಮಾ ಕಂಪನಿಗಳೊಂದಿಗೆ ಚರ್ಚೆ ನಡೆಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ವಿದ್ಯಾರ್ಥಿ ಸಮುದಾಯದಿಂದ ಮೆಚ್ಚುಗೆ

ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಆರ್ಥಿಕ ಸ್ಥಿತಿ ಹಾಗೂ ಆರೋಗ್ಯದ ಕಾಳಜಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಕುಲಪತಿಗಳು ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶೈಕ್ಷಣಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಿವಿಯ ಎಲ್ಲಾ ವಿದ್ಯಾರ್ಥಿಗಳಿಗೆ ಈ ಯೋಜನೆಯ ಲಾಭ ಸಿಗಲಿದ್ದು, ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಭದ್ರತೆಯ ಭಾವನೆ ಮೂಡಿದೆ.

Read More
Next Story