
ಬೆಂಗಳೂರು ರಸ್ತೆ ಗುಂಡಿಯಿಂದ ಯುಪಿಎಸ್‌ಸಿ ಪರೀಕ್ಷೆಗೆ ಗೈರಾದ 6 ಅಭ್ಯರ್ಥಿಗಳು!
ಮಹಾದೇವಪುರ, ಐಟಿಪಿಎಲ್ ಹಾಗೂ ವೈಟ್ಫೀಲ್ಡ್ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಕಿತ್ತುಹೋಗಿದ್ದು, ಮಳೆಯ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿವೆ. ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅದಕ್ಕೆ ಹೊಣೆ ಯಾರು ಎಂಬುದು ಸಾರ್ವಜನಿಕರ ಪ್ರಶ್ನೆ.
ಐಟಿ ಹಬ್, ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಮತ್ತು ರಸ್ತೆ ಗುಂಡಿಗಳ ಸಮಸ್ಯೆ ಇದೀಗ ಯುಪಿಎಸ್‌ಸಿ ವಿದ್ಯಾರ್ಥಿಗಳ ಜೀವನದ ಕನಸಿಗೂ ಕೊಳ್ಳಿ ಇಟ್ಟಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಯುಪಿಎಸ್‌ಪಿ ಪ್ರಿಲಿಮ್ಸ್ ಪರೀಕ್ಷೆಗೆ ಆರು ಮಂದಿ ವಿದ್ಯಾರ್ಥಿಗಳು ಸಂಚಾರ ದಟ್ಟಣೆಯ ಕಾರಣ ನಿಗದಿತ ಅವಧಿಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಪರೀಕ್ಷಾ ಕೇಂದ್ರ ಬಳಿ ಕೊಂಚ ತಡವಾಗಿ ಬರುತ್ತಲೇ ಗೇಟ್ ಬಂದ್ ಮಾಡಲಾಗಿತ್ತು. ಎಷ್ಟೇ ಅಂಗಲಾಚಿದರೂ ಪರೀಕ್ಷಾರ್ಥಿಗಳನ್ನು ಒಳಬಿಡಲಿಲ್ಲ. ಪರೀಕ್ಷೆ ಬರೆಯಲು ಅವಕಾಶ ಕೈ ತಪ್ಪಿದ್ದರಿಂದ ವಿದ್ಯಾರ್ಥಿಗಳು ಕಣ್ಣೀರು ಹಾಕುತ್ತಾ ಮನೆಗೆ ವಾಪಸಾದ ಪ್ರಸಂಗ ನಡೆದಿದೆ.
ಏನಿದು ಕಹಿ ಘಟನೆ?
ಭಾನುವಾರ ದೇಶಾದ್ಯಂತ ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆಗಳು ನಡೆದಿವೆ. ಬೆಂಗಳೂರಿನಲ್ಲೂ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ, ವೈಟ್ಫೀಲ್ಡ್ ಮತ್ತು ಮಹಾದೇವಪುರ ಭಾಗದಿಂದ ಚಾಲುಕ್ಯ ಸರ್ಕಲ್ ಬಳಿಯ ಆರ್. ಸಿ. ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಬರಬೇಕಿದ್ದ ಆರು ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗಿಲ್ಲ.
ವೈಟ್ಫೀಲ್ಡ್ ಹಾಗೂ ಮಹಾದೇವಪುರ ಭಾಗದಲ್ಲಿ ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಭಾರಿ ಪ್ರಮಾಣದ ರಸ್ತೆ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ಭಾನುವಾರ ಮುಂಜಾನೆಯೇ ತೀವ್ರ ವಾಹನ ದಟ್ಟಣೆ ಉಂಟಾಗಿತ್ತು. ರಸ್ತೆಯ ಗುಂಡಿಗಳನ್ನು ತಪ್ಪಿಸಿಕೊಂಡು, ಟ್ರಾಫಿಕ್ ದಾಟಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪುವಷ್ಟರಲ್ಲಿ ಸಮಯ ಮೀರಿಹೋಗಿತ್ತು. ನಿಯಮಗಳ ಪ್ರಕಾರ ಪರೀಕ್ಷಾ ಕೇಂದ್ರದ ಮುಖ್ಯ ಗೇಟ್ಗಳನ್ನು ಮುಚ್ಚಲಾಗಿತ್ತು. ಇದರಿಂದ ವಿದ್ಯಾರ್ಥಿಗಳು ಪರೀಕ್ಷಾ ಅವಕಾಶದಿಂದ ವಂಚಿತರಾದರು.
" ಬೆಳಿಗ್ಗೆ ಏಳು ಗಂಟೆಗೆ ಮನೆಯಿಂದ ಹೊರಟಿದ್ದೆವು. ಆದರೆ, ಮಹಾದೇವಪುರ ಮತ್ತು ವೈಟ್ಫೀಲ್ಡ್ ರಸ್ತೆಗಳ ನರಕಯಾತನೆ ಹಾಗೂ ಟ್ರಾಫಿಕ್ ನಮ್ಮನ್ನು ಸಕಾಲಕ್ಕೆ ತಲುಪಲು ಬಿಡಲಿಲ್ಲ. ನಮ್ಮ ವರ್ಷಗಳ ಪರಿಶ್ರಮಕ್ಕೆ ಬಿಬಿಎಂಪಿ ಮತ್ತು ಕಳಪೆ ರಸ್ತೆಗಳೇ ಕಾರಣ" ಎಂದು ನೊಂದ ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಜಿಬಿಎ ವಿರುದ್ಧ ಸಾರ್ವಜನಿಕರ ಆಕ್ರೋಶ
ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ. ಕೇವಲ ವಾಹನ ಸವಾರರ ಪ್ರಾಣಕ್ಕೆ ಮಾತ್ರವಲ್ಲದೆ, ವಿದ್ಯಾರ್ಥಿಗಳ ಭವಿಷ್ಯಕ್ಕೂ ಗುಂಡಿಗಳು ಕಂಟಕವಾಗಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಮಹಾದೇವಪುರ, ಐಟಿಪಿಎಲ್ ಹಾಗೂ ವೈಟ್ಫೀಲ್ಡ್ ಸುತ್ತಮುತ್ತಲಿನ ರಸ್ತೆಗಳು ಸಂಪೂರ್ಣ ಕಿತ್ತುಹೋಗಿದ್ದು, ಮಳೆಯ ನಂತರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿವೆ. ವಿದ್ಯಾರ್ಥಿಗಳ ಭವಿಷ್ಯ ಹಾಳಾದರೆ ಅದಕ್ಕೆ ಹೊಣೆ ಯಾರು, ವ್ಯವಸ್ಥೆಯ ಲೋಪದಿಂದಾಗಿ ನಿರುದ್ಯೋಗಿಗಳಾದರೆ ಯುವಪೀಳಿಗೆ ಜಿರಳೆಗಳಾಗುತ್ತಾರೆ ಎಂದು ನೆಟ್ಟಿಗರು ಟೀಕಿಸಿದ್ದಾರೆ.
ವಿದ್ಯಾರ್ಥಿಗಳಾದ ಅನ್ಯಾಯಕ್ಕೆ ಹೊಣೆ ಯಾರು?
"ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ತಪ್ಪು ಮಾಡಿರುವುದು ಇಲ್ಲಿನ ಆಡಳಿತ ವ್ಯವಸ್ಥೆ. ರಸ್ತೆಗಳು ಚೆನ್ನಾಗಿದ್ದಿದ್ದರೆ ಮಕ್ಕಳು ಸಮಯಕ್ಕೆ ಸರಿಯಾಗಿ ತಲುಪುತ್ತಿದ್ದರು. ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಭ್ರಷ್ಟಾಚಾರದ ರಸ್ತೆ ಕಾಮಗಾರಿಗಳಿಗೆ ಇಂದು ಅಮಾಯಕ ವಿದ್ಯಾರ್ಥಿಗಳು ಬೆಲೆ ತೆರಬೇಕಾಗಿದೆ. ಕಳೆದುಹೋದ ಒಂದು ವರ್ಷದ ಭವಿಷ್ಯವನ್ನು ಯಾರು ತಂದುಕೊಡುತ್ತಾರೆ?" ಎಂದು ಪರೀಕ್ಷಾ ಕೇಂದ್ರದ ಹೊರಗೆ ಪೋಷಕರು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.
ನಗರದ ಮೂಲಸೌಕರ್ಯ ಕೊರತೆಯಿಂದಾಗಿ ಪ್ರತಿಭಾನ್ವಿತ ಐಎಎಸ್, ಐಪಿಎಸ್ ಆಗುವ ಕನಸುಗಳು ರಸ್ತೆ ಮಧ್ಯೆ ಕಮರಿಹೋಗುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ.

