
ಬೆಂಗಳೂರು–ಜ್ಯೂರಿಕ್ ನೇರ ವಿಮಾನ ಸೇವೆ: ಯುರೋಪ್‌ಗೆ ಇನ್ನು ಸುಲಭ ಪ್ರಯಾಣ
ಯುರೋಪ್, ಅಮೆರಿಕದ ವಿವಿಧ ನಗರಗಳಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ಬರಲು ಇಂತಹ ನೇರ ಸಂಪರ್ಕದ ಅಗತ್ಯವಿತ್ತು. ಇದನ್ನು ಮನಗಂಡ ಸ್ವಿಸ್ ಸಂಸ್ಥೆಯು ಬೆಂಗಳೂರನ್ನು ಮಾರುಕಟ್ಟೆಯಾಗಿ ಆಯ್ಕೆ ಮಾಡಿಕೊಂಡಿದೆ.
ಬೆಂಗಳೂರು ಮತ್ತು ಸ್ವಿಟ್ಜರ್‌ಲ್ಯಾಂಡ್‌ನ ಆರ್ಥಿಕ ಕೇಂದ್ರ ಜ್ಯೂರಿಕ್ ನಡುವೆ ಹೊಸ ನೇರ ವಿಮಾನ ಸೇವೆ ಆರಂಭವಾಗುತ್ತಿದೆ. ಅಂತಾರಾಷ್ಟ್ರೀಯ ವಿಮಾನಯಾನ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿರುವ ಸ್ವಿಸ್ ಇಂಟರ್‌ನ್ಯಾಷನಲ್ ಏರ್ ಲೈನ್ಸ್ , ತನ್ನ ಹೊಸ ನೇರ ವಿಮಾನ ಸೇವೆಯನ್ನು 2026ರ ಅಕ್ಟೋಬರ್‌ನಿಂದ ಆರಂಭಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಇದು ದಕ್ಷಿಣ ಭಾರತದ ಪ್ರವಾಸಿಗರು, ಕಾರ್ಪೊರೇಟ್ ವಲಯದ ಉದ್ಯೋಗಿಗಳು ಮತ್ತು ಅನಿವಾಸಿ ಭಾರತೀಯರಿಗೆ ಸಿಹಿ ಸುದ್ದಿಯಾಗಿದೆ.
ಸ್ವಿಸ್ ಏರ್‌ಲೈನ್ಸ್ ಸಂಸ್ಥೆಯು ತನ್ನ ಕಾರ್ಯಚರಣೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರನ್ನು ಭಾರತದ ಪ್ರಮುಖ ತಾಣವನ್ನಾಗಿ ಗುರುತಿಸಿದೆ. 2026ರ ಅಕ್ಟೋಬರ್‌ನಿಂದ ಆರಂಭವಾಗಲಿರುವ ಈ ಸೇವೆಯು ವಾರಕ್ಕೆ ಐದು ದಿನಗಳ ಕಾಲ ಕಾರ್ಯಾಚರಣೆ ನಡೆಸಲಿದೆ. ಇದು ಕೇವಲ ಬೆಂಗಳೂರು ಮತ್ತು ಜ್ಯೂರಿಕ್ ನಡುವಿನ ಸಂಪರ್ಕ ಮಾತ್ರವಲ್ಲ, ಲುಫ್ತಾನ್ಸಾ ಸಮೂಹದ ಬೃಹತ್ ವಿಮಾನ ಜಾಲದ ಮೂಲಕ ಯುರೋಪ್‌ನ ವಿವಿಧ ದೇಶಗಳಿಗೆ ಮತ್ತು ಉತ್ತರ ಅಮೆರಿಕಾದ ಹಲವು ನಗರಗಳಿಗೆ ಪ್ರಯಾಣಿಸಲು ದಕ್ಷಿಣ ಭಾರತದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಬೆಂಗಳೂರನ್ನು ಏಕೆ ಆಯ್ಕೆ ಮಾಡಿಕೊಂಡಿತು?
ಬೆಂಗಳೂರು ನಗರವು ಕಳೆದ ಕೆಲವು ದಶಕಗಳಲ್ಲಿ ಜಾಗತಿಕ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿನ ವೃತ್ತಿಪರರು, ತಂತ್ರಜ್ಞಾನ ಸಂಸ್ಥೆಗಳು ಮತ್ತು ಪ್ರೀಮಿಯಂ ಪ್ರಯಾಣಿಕರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಯುರೋಪ್ ಮತ್ತು ಅಮೆರಿಕದ ವಿವಿಧ ನಗರಗಳಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದವರು ತಮ್ಮ ತಾಯ್ನಾಡಿಗೆ ಭೇಟಿ ನೀಡಲು ಇಂತಹ ನೇರ ಸಂಪರ್ಕದ ಅಗತ್ಯವಿತ್ತು. ಈ ಬೇಡಿಕೆಯನ್ನು ಮನಗಂಡೇ ಸ್ವಿಸ್ ಸಂಸ್ಥೆಯು ಬೆಂಗಳೂರನ್ನು ತನ್ನ ಹೊಸ ಮಾರುಕಟ್ಟೆಯಾಗಿ ಆಯ್ಕೆ ಮಾಡಿಕೊಂಡಿದೆ.
ಈ ಕುರಿತು ಮಾಹಿತಿ ನೀಡಿರುವ ಲುಫ್ತಾನ್ಸಾ ಗ್ರೂಪ್‌ನ ದಕ್ಷಿಣ ಏಷ್ಯಾ ಪ್ರಾದೇಶಿಕ ಮಾರಾಟ ವಿಭಾಗದ ಹಿರಿಯ ನಿರ್ದೇಶಕ ಕೆವಿನ್ ಮಾರ್ಕೆಟ್ಟೆ, ಭಾರತವು ನಮ್ಮ ಪಾಲಿಗೆ ಅತ್ಯಂತ ಮಹತ್ವದ ಮಾರುಕಟ್ಟೆ. ಫ್ರಾಂಕ್‌ಫರ್ಟ್ ಮತ್ತು ಮ್ಯೂನಿಕ್ ಬಳಿಕ, ಬೆಂಗಳೂರು ಈಗ ನಮ್ಮ ಮೂರನೇ ಪ್ರಮುಖ ಪ್ರವೇಶ ದ್ವಾರವಾಗಿದೆ. ದಕ್ಷಿಣ ಭಾರತದ ಪ್ರಯಾಣಿಕರಿಗೆ ಸ್ವಿಸ್ ಶೈಲಿಯ ಅತ್ಯುತ್ತಮ ಪ್ರಯಾಣ ಅನುಭವವನ್ನು ನೀಡುವುದು ನಮ್ಮ ಗುರಿಯಾಗಿದೆ. ಈ ಹೊಸ ಸೇವೆಯ ಮೂಲಕ ಫಸ್ಟ್ ಕ್ಲಾಸ್, ಬಿಸಿನೆಸ್ ಕ್ಲಾಸ್ ಮತ್ತು ಎಕಾನಮಿ ಕ್ಲಾಸ್ ಸೇವೆಗಳನ್ನು ಪ್ರಯಾಣಿಕರು ಪಡೆಯಬಹುದು ಎಂದು ತಿಳಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮುಖ್ಯ ಕಾರ್ಯಾಚರಣಾಧಿಕಾರಿ ಗಿರೀಶ್ ನಾಯರ್ ಅವರು ಈ ಸೇವೆಯನ್ನು ಸ್ವಾಗತಿಸಿದ್ದಾರೆ. ಈ ನೇರ ವಿಮಾನ ಸೇವೆಯು ಬೆಂಗಳೂರಿನ ಸಾಮರ್ಥ್ಯ ಮತ್ತು ಇಲ್ಲಿನ ಬೆಳವಣಿಗೆಯ ಮೇಲೆ ಜಾಗತಿಕ ಸಂಸ್ಥೆಗಳಿಗೆ ಇರುವ ವಿಶ್ವಾಸವನ್ನು ತೋರಿಸುತ್ತದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ದೇಶದ 78ಕ್ಕೂ ಹೆಚ್ಚು ನಗರಗಳಿಗೆ ಸಂಪರ್ಕವಿದ್ದು, ಎರಡನೇ ಮತ್ತು ಮೂರನೇ ಹಂತದ ನಗರಗಳ ಜನರಿಗೂ ಒಂದೇ ಟಿಕೆಟ್‌ನಲ್ಲಿ ಸುಲಭವಾಗಿ ಯುರೋಪ್ ತಲುಪಲು ಈ ಸೇವೆ ಅನುಕೂಲವಾಗಲಿದೆ ಎಂದರು.
ಪ್ರಯಾಣಿಕರಿಗೆ ಸಿಗುವ ಸೌಲಭ್ಯಗಳು
ಸ್ವಿಸ್ ಸಂಸ್ಥೆಯ ಗುಣಮಟ್ಟದ ಫಸ್ಟ್ ಕ್ಲಾಸ್ ಮತ್ತು ಬಿಸಿನೆಸ್ ಕ್ಲಾಸ್ ಸೌಲಭ್ಯಗಳಿವೆ. ಅತ್ಯುತ್ತಮ ಸ್ವಿಸ್ ಶೈಲಿಯ ಆಹಾರ ಮತ್ತು ವಿಮಾನದೊಳಗೆ ಲಭ್ಯವಿರುವ ಪ್ರೀಮಿಯಂ ಸೇವೆಗಳು. ಜ್ಯೂರಿಕ್ ವಿಮಾನ ನಿಲ್ದಾಣದ ಮೂಲಕ ಯುರೋಪ್ ಮತ್ತು ಉತ್ತರ ಅಮೆರಿಕಾದ ಇತರ ನಗರಗಳಿಗೆ ಸುಲಭವಾಗಿ ವರ್ಗಾವಣೆ ಆಗುವ ಅವಕಾಶ ಇದೆ. ಲುಫ್ತಾನ್ಸಾ ಸಮೂಹವು ಭಾರತದಲ್ಲಿ ತನ್ನ ಹಿಡಿತವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ. 2026ರ ಚಳಿಗಾಲದ ವೇಳೆಗೆ, ಈ ಸಮೂಹವು ತನ್ನ ವಿವಿಧ ವಿಮಾನಯಾನ ಸಂಸ್ಥೆಗಳ ಮೂಲಕ ಭಾರತದಿಂದ ವಾರಕ್ಕೆ 70ಕ್ಕೂ ಹೆಚ್ಚು ವಿಮಾನಗಳನ್ನು ಹಾರಾಟ ನಡೆಸುವ ಗುರಿ ಹೊಂದಿದೆ. ಇದು ಭಾರತ ಮತ್ತು ಜಾಗತಿಕ ಮಾರುಕಟ್ಟೆಗಳ ನಡುವಿನ ವಾಣಿಜ್ಯ ಮತ್ತು ಪ್ರವಾಸೋದ್ಯಮದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

