x

ಬೆಂಗಳೂರು ಟು ಲಂಡನ್ ರೋಚಕ ಪಯಣ; ಕಾರಿನಲ್ಲೇ ವಿಶ್ವ ಸುತ್ತಿದ ಕನ್ನಡಿಗ

ಕೇಶವಪ್ರಸಾದ್ ಅವರ ಪಯಣದಲ್ಲಿ -2 ಡಿಗ್ರಿಯಿಂದ ಹಿಡಿದು 48 ಡಿಗ್ರಿ ಸೆಲ್ಸಿಯಸ್ ವರೆಗಿನ ವಿಪರೀತ ಹವಾಮಾನ ಹಾಗೂ ಸಮುದ್ರ ಮಟ್ಟದಿಂದ 18,300 ಅಡಿ ಎತ್ತರದ ಪ್ರದೇಶಗಳಲ್ಲಿಯೂ ಕಾರು ಚಲಾಯಿಸಿ, ಹಲವು ಸವಾಲುಗಳನ್ನು ಎದುರಿಸಿದ್ದಾರೆ.


ಬೆಂಗಳೂರಿನಿಂದ ಲಂಡನ್‌ವರೆಗೆ 27 ದೇಶಗಳನ್ನು ದಾಟಿ ಕೇವಲ 85 ದಿನಗಳಲ್ಲಿ 25 ಸಾವಿರ ಕಿ.ಮೀ. ದೂರವನ್ನು ಕಾರಿನಲ್ಲಿ ತಲುಪುವ ಮೂಲಕ ಕೆ.ಜಿ. ಕೇಶವ ಪ್ರಸಾದ್ ಅಪ್ರತಿಮ ಸಾಹಸ ಮಾಡಿದ್ದಾರೆ. ಈ ಕುರಿತು ʼದ ಫೆಡರಲ್ ಕರ್ನಾಟಕʼದ ಪಾಡ್‌ಕಾಸ್ಟ್‌ನಲ್ಲಿ ತಮ್ಮ ರೋಚಕ ಪಯಣದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಕೇಶವ ಪ್ರಸಾದ್ ಅವರು ಮಹೀಂದ್ರಾ ಕಂಪನಿಯ ಎಕ್ಸ್‌ಯುವಿ 300 (XUV 300) ಕಾರಿನಲ್ಲಿ ಈ ಸಾಹಸ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಭಾರತದಿಂದ ಶುರುವಾದ ಪಯಣವು ನೇಪಾಳ, ಟಿಬೆಟ್, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ಉಜ್ಬೇಕಿಸ್ತಾನ್, ರಷ್ಯಾ, ಜಾರ್ಜಿಯಾ, ಟರ್ಕಿ, ಬಲ್ಗೇರಿಯಾ, ರೊಮಾನಿಯಾ, ಕ್ರೊಯೇಷಿಯಾ, ಸ್ಲೊವೇನಿಯಾ, ಇಟಲಿ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ಜರ್ಮನಿ, ನೆದರ್ಲ್ಯಾಂಡ್ಸ್, ಬೆಲ್ಜಿಯಂ, ಲಕ್ಸೆಂಬರ್ಗ್, ಫ್ರಾನ್ಸ್ ಮೂಲಕ ಸಾಗಿ ಲಂಡನ್ ತಲುಪಿದೆ. ಯಾವುದೇ ಪೂರ್ವಯೋಜನೆ ಇಲ್ಲದಿದ್ದರೂ, ಕಾಕತಾಳೀಯ ಎಂಬಂತೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದೇ ಅವರು ಲಂಡನ್ ಭೂಮಿ ಸ್ಪರ್ಶಿಸಿದರು.

ಎದುರಾದ ಸವಾಲುಗಳೇನು?

ಕೇಶವಪ್ರಸಾದ್ ಅವರ ಪಯಣದಲ್ಲಿ -2 ಡಿಗ್ರಿಯಿಂದ ಹಿಡಿದು 48 ಡಿಗ್ರಿ ಸೆಲ್ಸಿಯಸ್ ವರೆಗಿನ ವಿಪರೀತ ಹವಾಮಾನ ಹಾಗೂ ಸಮುದ್ರ ಮಟ್ಟದಿಂದ 18,300 ಅಡಿ ಎತ್ತರದ ಪ್ರದೇಶಗಳಲ್ಲಿಯೂ ಕಾರು ಚಲಾಯಿಸಿ, ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಫ್ರಾನ್ಸ್‌ನಿಂದ ಲಂಡನ್‌ಗೆ ತೆರಳಲು 55 ಕಿ.ಮೀ. ಸಾಗರ ಮಾರ್ಗದಲ್ಲಿ ಕಾರನ್ನು ದೊಡ್ಡ ಶಿಪ್‌ನಲ್ಲಿ (ಫೆರಿ) ಸಾಗಿಸಿ, 45 ನಿಮಿಷಗಳ ಕಾಲ ವಿಭಿನ್ನ ಅನುಭವ ಪಡೆದಿದ್ದಾರೆ.

ಚೀನಾ ಗಡಿಯಲ್ಲಿ ದಾಖಲೆಗಳು ಮತ್ತು ಮ್ಯಾಪ್ಗಳ ಕುರಿತು ಕಠಿಣ ತಪಾಸಣೆಗಳನ್ನು ಎದುರಿಸಬೇಕಾಯಿತು ಎಂದು ಕೇಶವ ಪ್ರಸಾದ್ ವಿವರಿಸಿದ್ದಾರೆ. ಇಂಧನ, ವಾಸಸ್ಥಳ ಹಾಗೂ ಇತರೆ ಖರ್ಚುಗಳೆಲ್ಲ ಸೇರಿ ಈ ಸಂಪೂರ್ಣ ಸಾಹಸಕ್ಕೆ ಒಟ್ಟು 25 ಲಕ್ಷ ರೂಪಾಯಿ ತಗುಲಿದೆ. ಕುಟುಂಬದವರ ಸಂಪೂರ್ಣ ಬೆಂಬಲ ಹಾಗೂ ಸ್ವಂತ ನಿರ್ಧಾರದ ಮೇರೆಗೆ ಕೈಗೊಂಡ ಈ ಏಕಾಂಗಿ ಡ್ರೈವಿಂಗ್ ಸಾಹಸವು ಕೇಶವ ಪ್ರಸಾದ್ ಜೀವನದ ಅತ್ಯಂತ ಮರೆಯಲಾರದ ಅನುಭವವಾಗಿದೆ ಎಂದು ಅಭಿಪ್ರಾಯಪಟ್ಟರು.

Read More
Next Story