ಎಸ್‌ಟಿಪಿಗಳ ಸಾಮರ್ಥ್ಯ ವೃದ್ಧಿಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವರ ಸೂಚನೆ
x

ಎಸ್‌ಟಿಪಿಗಳ ಸಾಮರ್ಥ್ಯ ವೃದ್ಧಿಗೆ ವೇಗ ನೀಡಲು ಅಧಿಕಾರಿಗಳಿಗೆ ಸಚಿವರ ಸೂಚನೆ

ಪ್ರತಿದಿನ 2580 ಎಂಎಲ್‌ಡಿ ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದೆ. ಮಂಡಳಿಯು 37 ಎಸ್‌ಟಿಪಿಗಳ ಮೂಲಕ ಒಟ್ಟು 1364.5 ಎಂಎಲ್‌ಡಿ ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 1215.5 ಎಂಎಲ್‌ಡಿ ನೀರಿನ ಸಂಸ್ಕರಣೆಯಲ್ಲಿ ಕೊರತೆ ಎದುರಾಗಿದೆ.


ಸಂಸ್ಕರಿಸದ ಒಳಚರಂಡಿ ನೀರು ನೇರವಾಗಿ ಬೆಂಗಳೂರಿನ ಜಲಮೂಲ ಸೇರುತ್ತಿರುವ ಹಾಗೂ ಬೆಂಗಳೂರು ನಗರದಿಂದಲೇ ಕಾವೇರಿ ಮಲಿನವಾಗಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ಪೀಠಕ್ಕೆ ತಮಿಳುನಾಡು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.

ಒಳಚರಂಡಿ ಸಂಸ್ಕರಣಾ ಘಟಕಗಳ ಸ್ಥಾಪನೆ ಹಾಗೂ ಪ್ರಸ್ತುತ ಇರುವ ಎಸ್‌ಟಿಪಿಗಳ ಸಾಮರ್ಥ್ಯ ವೃದ್ಧಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಲಮಂಡಳಿ ಅಧಿಕಾರಿಗಳಿಗೆ ಅರಣ್ಯ ಹಾಗೂ ಪರಿಸರ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉನ್ನತ ಮಟ್ಟದ ಸಭೆ ನಡೆಸಿದ ಅವರು, ನಗರದ ಒಳಚರಂಡಿ ನಿರ್ವಹಣೆಯ ಸಮಗ್ರ ಚಿತ್ರಣವನ್ನು ಪರಿಶೀಲಿಸಿದ್ದಾರೆ.

ನಗರಕ್ಕೆ ಕಾವೇರಿ ಮತ್ತು ಕೊಳವೆಬಾವಿಗಳಿಂದ ಒಟ್ಟು 2825 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಪ್ರತಿದಿನ 2580 ಎಂಎಲ್‌ಡಿ ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದೆ. ಮಂಡಳಿಯು 37 ಎಸ್‌ಟಿಪಿಗಳ ಮೂಲಕ ಒಟ್ಟು 1364.5 ಎಂಎಲ್‌ಡಿ ಸಂಸ್ಕರಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 1215.5 ಎಂಎಲ್‌ಡಿ ನೀರಿನ ಸಂಸ್ಕರಣೆಯಲ್ಲಿ ಕೊರತೆ ಎದುರಾಗಿದೆ. ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿರುವ 42 ಹೊಸ ಎಸ್‌ಟಿಪಿಗಳಿಂದ 1147 ಎಂಎಲ್‌ಡಿ ಹೆಚ್ಚುವರಿ ಸಾಮರ್ಥ್ಯ ಸೇರ್ಪಡೆಯಾಗಲಿದೆ ಎಂದು ವಿವರಿಸಿದ್ದಾರೆ.

ಈ ವರ್ಷ 51 ಎಂಎಲ್‌ಡಿ ಸಾಮರ್ಥ್ಯದ ಘಟಕಗಳನ್ನು ಲೋಕಾರ್ಪಣೆ ಮಾಡಲಾಗುವುದು. ಮುಂದಿನ ವರ್ಷ 413 ಎಂಎಲ್‌ಡಿ ಸಾಮರ್ಥ್ಯದ 17 ಎಸ್‌ಟಿಪಿಗಳಿಗೆ ಚಾಲನೆ ನೀಡಲಾಗುವುದು. 2028ರ ಅಂತ್ಯದೊಳಗೆ 148 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿಗಳು ಕಾರ್ಯಾರಂಭಿಸಿದರೆ, 2029ರ ಅಂತ್ಯದೊಳಗೆ 535 ಎಂಎಲ್‌ಡಿ ಸಾಮರ್ಥ್ಯದ 9 ಎಸ್‌ಟಿಪಿಗಳ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.

ಜಲಮೂಲಗಳ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ. ಎಲ್ಲಾ ಎಸ್‌ಟಿಪಿಗಳು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹಾಗೂ ಕೆಎಸ್‌ಪಿಸಿಬಿ ನಿಗದಿಪಡಿಸಿರುವ ಕಟ್ಟುನಿಟ್ಟಿನ ಮಾನದಂಡಗಳ ಅನ್ವಯವೇ ಕಾರ್ಯನಿರ್ವಹಿಸಬೇಕು. ಮಾನದಂಡ ಉಲ್ಲಂಘಿಸುತ್ತಿರುವ ಘಟಕಗಳು 30 ದಿನಗಳೊಳಗೆ ತಿದ್ದಿಕೊಳ್ಳಬೇಕು.

ಅಪಾರ್ಟ್‌ಮೆಂಟ್‌ಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು ಮತ್ತು ದೊಡ್ಡ ಕಚೇರಿಗಳಲ್ಲಿರುವ ಖಾಸಗಿ ಎಸ್‌ಟಿಪಿಗಳನ್ನು ಕೆಎಸ್‌ಪಿಸಿಬಿ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಬೇಕು. ಮಳೆನೀರು ರಾಜಕಾಲುವೆಗಳಲ್ಲಿ ಒಳಚರಂಡಿ ನೀರು ಹರಿಯುವುದನ್ನು ತಪ್ಪಿಸಲು, ಬಾಕಿ ಉಳಿದಿರುವ ಒಳಚರಂಡಿ ಮಾರ್ಗಗಳ ಸಂಪರ್ಕ ಕಲ್ಪಿಸಬೇಕು. ಹಾನಿಗೊಳಗಾದ ಮ್ಯಾನ್‌ಹೋಲ್‌ಗಳನ್ನು ತಕ್ಷಣ ದುರಸ್ತಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪೀಣ್ಯ ಮತ್ತು ಜಿಗಣಿ ಸೇರಿದಂತೆ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ದ್ರವ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ಕೆಎಸ್‌ಪಿಸಿಬಿ ಮತ್ತು ಬಿಡಬ್ಲ್ಯುಎಸ್ಎಸ್‌ಬಿ ಅಧಿಕಾರಿಗಳು ಜಂಟಿ ಸ್ಥಳ ತನಿಖೆ ನಡೆಸಬೇಕು. ಒಳಚರಂಡಿ ಜಾಲವಿದ್ದರೂ ಸಂಪರ್ಕ ಪಡೆಯದ ಪ್ರದೇಶಗಳನ್ನು ಗುರುತಿಸಿ, ಅಕ್ರಮ ಸಂಪರ್ಕಗಳ ವಿರುದ್ಧ ಪರಿಶೀಲನೆ ನಡೆಸಿ ಅಗತ್ಯವಿರುವವರಿಗೆ ಅಧಿಕೃತ ಸಂಪರ್ಕ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

Read More
Next Story