
ಏರ್‌ಪೋರ್ಟ್ ಸುತ್ತ ಕಟ್ಟಡದ ಎತ್ತರಕ್ಕೆ ನಿರ್ಬಂಧ; ಕೇಂದ್ರದ ನಿಯಮ, ರಾಜ್ಯದ ಅಹವಾಲು ಏನು?
ರನ್‌ವೇ ಸಮೀಪದ ಕಟ್ಟಡಗಳು ಕನಿಷ್ಠ ಎತ್ತರ ಹೊಂದಿರಬೇಕು ಎಂಬ ಈ ನಿಯಮದ ಕಾರಣವೇ ಬೆಂಗಳೂರಿನ ಕೇಂದ್ರ ಭಾಗಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಅಸಾಧ್ಯವಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕೆ ಇರುವ ನಿರ್ಬಂಧಗಳನ್ನು ಸಡಿಲಿಕೆ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರದ ವಿಮಾನಯಾನ ಸಚಿವಾಲಯದ ಮೊರೆ ಹೋಗಿದೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರಿನ ಹೆಚ್ಎಎಲ್, ಜಕ್ಕೂರು ಮತ್ತು ಯಲಹಂಕ ವಾಯುನೆಲೆ ಸುತ್ತ ಕಟ್ಟಡಗಳ ಎತ್ತರಕ್ಕೆ ಇರುವ ಮಿತಿ ಸಡಿಲಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದೆ. ಕಟ್ಟಡಗಳ ಎತ್ತರಕ್ಕೆ ಮಿತಿ ಹಾಕಿರುವ ಹಿನ್ನೆಲೆ ಅಭಿವೃದ್ಧಿ ಕುಂಠಿತವಾಗಿದೆ. ಹಾಗಾಗಿ ನಿಯಮ ಸಡಿಲಿಕೆ ಮಾಡಬೇಕು ಎಂದು ಒತ್ತಾಯಿಸಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಿದ್ದಾರೆ.
ಅಭಿವೃದ್ಧಿಗೆ ಅಡ್ಡಿಯಾದ ನಿಯಮ
ಭಾರತೀಯ ವಿಮಾನಯಾನ ಪ್ರಾಧಿಕಾರವು ವಿಮಾನಗಳ ಸುರಕ್ಷಿತ ಹಾರಾಟಕ್ಕಾಗಿ ಪ್ರತಿ ವಿಮಾನ ನಿಲ್ದಾಣದ ಸುತ್ತ 20 ಕಿ.ಮೀ ವ್ಯಾಪ್ತಿಯಲ್ಲಿ ಕಟ್ಟಡಗಳ ಎತ್ತರವನ್ನು ನಿರ್ಬಂಧಿಸಿದೆ.
ರನ್‌ವೇ ಸಮೀಪದ ಕಟ್ಟಡಗಳು ಕನಿಷ್ಠ ಎತ್ತರ ಹೊಂದಿರಬೇಕು ಎಂಬ ಈ ನಿಯಮದ ಕಾರಣವೇ ಬೆಂಗಳೂರಿನ ಕೇಂದ್ರ ಭಾಗಗಳಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣ ಅಸಾಧ್ಯವಾಗಿದೆ. ಇದರಿಂದ ಬಿಲ್ಡರ್‌ಗಳು ಮತ್ತು ನಾಗರಿಕರು 'ಪ್ರೀಮಿಯಂ ಎಫ್ಎಆರ್' (Floor Area Ratio) ಬಳಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಸರ್ಕಾರದಕ್ಕೂ ಇದರಿಂದ ಸಾವಿರಾರು ಕೋಟಿ ರೂ. ರಾಜಸ್ವ ಸಿಗದಂತಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಲವತ್ತುಕೊಂಡಿದ್ದಾರೆ.
ಎಎಐ ಪ್ರತಿಯೊಂದು ವಿಮಾನ ನಿಲ್ದಾಣದ ಸುತ್ತ "ಕಲರ್ ಕೋಡೆಡ್ ಝೋನಿಂಗ್ ಮ್ಯಾಪ್" ಬಿಡುಗಡೆ ಮಾಡುತ್ತದೆ. ಈ ನಕ್ಷೆಯಲ್ಲಿರುವ ಬಣ್ಣಗಳ ಆಧಾರದ ಮೇಲೆ ಎಷ್ಟು ಎತ್ತರದವರೆಗೆ ಕಟ್ಟಡ ಕಟ್ಟಬಹುದು ಎಂಬುದು ನಿರ್ಧಾರವಾಗಲಿದೆ.
ವಿಮಾನ ನಿಲ್ದಾಣದಿಂದ ನಿರ್ದಿಷ್ಟ ದೂರದ (ಸಾಮಾನ್ಯವಾಗಿ 20 ಕಿ.ಮೀ ವ್ಯಾಪ್ತಿ) ಒಳಗಿರುವ ಯಾವುದೇ ಕಟ್ಟಡಕ್ಕೆ ಎಎಐನಿಂದ ಎನ್ಒಸಿ ಪಡೆಯುವುದು ಕಡ್ಡಾಯ. ವಿಮಾನಗಳು ಟೇಕ್ಆಫ್ ಮತ್ತು ಲ್ಯಾಂಡಿಂಗ್ ಆಗುವಾಗ ಯಾವುದೇ ಅಡೆತಡೆ ಇರಬಾರದು ಎಂಬ ಉದ್ದೇಶದಿಂದ ರನ್ ವೇ ಸುತ್ತಲಿನ ಪ್ರದೇಶಗಳಲ್ಲಿ ಎತ್ತರವನ್ನು ಕನಿಷ್ಠ ಮಟ್ಟದಲ್ಲಿ ಇರಿಸಲಾಗುತ್ತದೆ.
ಹೈದರಾಬಾದ್, ಮುಂಬೈ ಮಾದರಿ ಅನುಮತಿಗೆ ಮನವಿ
ಮುಂಬೈ ಹಾಗೂ ಹೈದರಾಬಾದ್ ನಗರಗಳಲ್ಲಿ ವಿಮಾನ ನಿಲ್ದಾಣಗಳಿದ್ದರೂ ಅಲ್ಲಿನ ಕಟ್ಟಡಗಳ ಎತ್ತರಕ್ಕೆ ಹಾಕಿರುವ ಮಿತಿಗೆ ಸಡಿಲಿಕೆ ನೀಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಎತ್ತರದ ಮಿತಿಯನ್ನು ಮರುಪರಿಶೀಲಿಸಬೇಕು. ಒಂದು ವೇಳೆ ಈ ಮಿತಿ ಸಡಿಲಿಕೆಯಾದರೆ, ಬೆಂಗಳೂರಿನ ಬಿಸಿನೆಸ್ ಕಾರಿಡಾರ್ ಮತ್ತು ಹೊಸ ಬಡಾವಣೆಗಳಲ್ಲಿ ಬೃಹತ್ ವಾಣಿಜ್ಯ ಸಂಕೀರ್ಣಗಳ ನಿರ್ಮಾಣದ ಹಾದಿ ಸುಗಮವಾಗಲಿದೆ ಎಂಬುದು ರಾಜ್ಯ ಸರ್ಕಾರದ ವಾದವಾಗಿದೆ.
ಬೆಂಗಳೂರಿನಲ್ಲಿ ಎಷ್ಟು ಎತ್ತರದ ಕಟ್ಟಡಕ್ಕೆ ಅನುಮತಿ?
ಬೆಂಗಳೂರಿನ ವಿಮಾನ ನಿಲ್ದಾಣಗಳ ಸುತ್ತ 20 ಕಿ.ಮೀ ಒಳಗೆ ಗರಿಷ್ಠ ಕಟ್ಟಡದ ಎತ್ತರ 300 ಮೀಟರ್ ಇರಬೇಕು. ವಿಮಾನ ನಿಲ್ದಾಣದಿಂದ 20 ಕಿ.ಮೀ ಒಳಗೆ ಯಾವುದೇ ಬಹುಮಹಡಿ ಕಟ್ಟಡದ ನಿರ್ಮಾಣ ಕಾಮಗಾರಿ ಕೈಗೊಳ್ಳಲು ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿದೆ.
ಎಚ್‌ಎಎಲ್ ಮತ್ತು ಯಲಹಂಕ ವಾಯುನೆಲೆಗಳ ಸುತ್ತಲೂ ಕಟ್ಟಡಗಳ ನಿರ್ಮಾಣಕ್ಕೆ ಕಟ್ಟುನಿಟ್ಟಿನ ನಿಬಂಧನೆ ಹೇರಲಾಗಿದೆ. ಸಾಮಾನ್ಯವಾಗಿ 300 ಮೀ ಗಿಂತ ಕಡಿಮೆ ಎತ್ತರದ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ಅವಕಾಶವಿದೆ. ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರವು 300 ಮೀ ಅಂದರೆ 100 ಮಹಡಿಗಳವರೆಗಿನ ಕಟ್ಟಡಗಳಿಗೆ ಮಾತ್ರ ಅನುಮತಿ ನೀಡಲಿದೆ.
ಜಕ್ಕೂರು ತರಬೇತಿ ಶಾಲೆ ಹಾಗೂ ಎಚ್‌ಎಎಲ್ ಯಲಹಂಕ ಬಳಿ 15 ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆ ಕೈಗೆತ್ತಿಕೊಳ್ಳಲು ವಿಶೇಷ ಅನುಮೋದನೆ ಅಗತ್ಯವಾಗಿದೆ.
ರಕ್ಷಣಾ ಸಚಿವರ ಭೇಟಿಗೆ ನಿರ್ಧಾರ
ಎಚ್ಎಎಲ್ ಮತ್ತು ಯಲಹಂಕ ವಾಯುನೆಲೆಗಳು ರಕ್ಷಣಾ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಕೇವಲ ನಾಗರಿಕ ವಿಮಾನಯಾನ ಸಚಿವಾಲಯದ ಒಪ್ಪಿಗೆ ಸಾಕಾಗುವುದಿಲ್ಲ. ರಕ್ಷಣಾ ಸಚಿವರ ಒಪ್ಪಿಗೆಯೂ ಅಗತ್ಯ. ಹೀಗಾಗಿ, ಶೀಘ್ರದಲ್ಲೇ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಕೇಂದ್ರ ಸರ್ಕಾರ ಕಟ್ಟಡಗಳ ಎತ್ತರದ ಈ ನಿಯಮಗಳು ಸಡಿಲಿಕೆಯಾದರೆ ಬೆಂಗಳೂರಿನ ಸ್ಕೈಲೈನ್ ಸಂಪೂರ್ಣ ಬದಲಾಗಲಿದ್ದು, 'ವರ್ಟಿಕಲ್ ಸಿಟಿ' ನಿರ್ಮಾಣದ ಕನಸು ನನಸಾಗಲಿದೆ ಎಂದು ರಾಜ್ಯ ಸರ್ಕಾರ ಅಭಿಪ್ರಾಯಪಟ್ಟಿದೆ.
ಸ್ಕೈಡೆಕ್ ಕನಸಿಗೆ ನೈಸ್ ಸಂಸ್ಥೆ ತಡೆ
ಬೆಂಗಳೂರಿನ ಆಕರ್ಷಣೆಯಾಗಲಿರುವ 'ಸ್ಕೈಡೆಕ್' ನಿರ್ಮಾಣದ ವಿಚಾರದಲ್ಲಿ ನೈಸ್ ಸಂಸ್ಥೆಯ ವರ್ತನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಂಪುರ ವೃತ್ತದಲ್ಲಿ ಸ್ಕೈಡೆಕ್ ನಿರ್ಮಾಣಕ್ಕೆ ನೈಸ್ ಸಂಸ್ಥೆ ನಿರಾಕ್ಷೇಪಣಾ ಪತ್ರ ನೀಡದೆ ಅಸಹಕಾರ ತೋರುತ್ತಿದೆ. ಸರ್ಕಾರಕ್ಕೆ ಸಹಕರಿಸದವರಿಗೆ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಸ್ಕೈಡೆಕ್ ಯೋಜನೆಯನ್ನು ಸದ್ಯ ಕೆಂಪೇಗೌಡ ಲೇಔಟ್‌ಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

