ಅಪ್ಪನ ಯೋಜಿತ ಕೃತ್ಯ, ಮಗಳ ಸಾಥ್; 7 ಕೊಲೆ ನಡೆದ ಮನೆಯೊಳಗೆ ಏನೇನಿತ್ತು.?
'ಮನೆಯಲ್ಲಿ ಮಟನ್ ಬಿರಿಯಾನಿ ಮಾಡಿದ್ದೇನೆ, ಊಟಕ್ಕೆ ಬನ್ನಿ' ಎಂದು ನೆಪವೊಡ್ಡಿ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಪ್ರತ್ಯೇಕವಾಗಿ ತನ್ನ ಮನೆಗೆ ಆಹ್ವಾನಿಸಿ ಆರೋಪಿ ಹತ್ಯೆ ಮಾಡಿದ್ದಾನೆ.
ಬೆಂಗಳೂರಿನಲ್ಲಿ ಸಿನಿಮೀಯ ಶೈಲಿಯ, ಮೈಜುಮ್ಮೆನಿಸುವ ಅತ್ಯಂತ ಭೀಕರ ಸರಣಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸುಮಾರು 20 ವರ್ಷಗಳ ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ 52 ವರ್ಷದ ವ್ಯಕ್ತಿಯೋರ್ವ ತನ್ನ ಪತ್ನಿ ಸೇರಿದಂತೆ ಒಂದೇ ಕುಟುಂಬದ 7 ಜನರನ್ನು ಬರ್ಬರ ಹತ್ಯೆ ಮಾಡಿದ್ದಾನೆ. ರುಬ್ಬುವ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಶವಗಳನ್ನು ಕರ್ನಾಟಕ ಮತ್ತು ತಮಿಳುನಾಡಿನ ನಾಲ್ಕು ಬೇರೆ ಬೇರೆ ದುರ್ಗಮ ಘಾಟಿ ಪ್ರದೇಶಗಳಲ್ಲಿ ಎಸೆದಿರುವ ಅಮಾನವೀಯ ಕೃತ್ಯ ರಾಜಾಜಿನಗರದಲ್ಲಿ ನಡೆದಿದೆ.
ಆರೋಪಿಯನ್ನು ರಾಜಾಜಿನಗರದ ನಿವಾಸಿ, ಇಂದುಶೇಖರ್ ಅಲಿಯಾಸ್ ಅರ್ಜುನ್ (52) ಎಂದು ಗುರುತಿಸಲಾಗಿದ್ದು, ರಾಜಾಜಿನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಪೊಲೀಸರ ತನಿಖೆಯ ಪ್ರಕಾರ, ಈ ಭೀಕರ ಹತ್ಯಾಕಾಂಡವು ಅಕ್ಟೋಬರ್ 16 ರಿಂದ ಅಕ್ಟೋಬರ್ 31 ರ ನಡುವಿನ ಅವಧಿಯಲ್ಲಿ ನಡೆದಿದೆ. ತನಗೆ ತೊಂದರೆ ಕೊಡುತ್ತಿದ್ದ ಸಂಬಂಧಿಕರೆಲ್ಲರನ್ನೂ ಮುಗಿಸಲು ಪೂರ್ವ ನಿಯೋಜಿತ ಇಂದುಶೇಖರ್, 'ಮನೆಯಲ್ಲಿ ಮಟನ್ ಬಿರಿಯಾನಿ ಮಾಡಿದ್ದೇನೆ, ಊಟಕ್ಕೆ ಬನ್ನಿ' ಎಂದು ನೆಪವೊಡ್ಡಿ ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಪ್ರತ್ಯೇಕವಾಗಿ ತನ್ನ ಮನೆಗೆ ಆಹ್ವಾನಿಸಿದ್ದಾನೆ. ಅವರು ಮನೆಗೆ ಬರುತ್ತಿದ್ದಂತೆಯೇ, ಮನೆಯಲ್ಲಿದ್ದ ರುಬ್ಬುವ ಕಲ್ಲಿನ ಬಟ್ಟಲಿನಿಂದ ಅವರ ತಲೆಗೆ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೀಗೆ ಬರೋಬ್ಬರಿ 7 ಜನರನ್ನು ಹಂತಹಂತವಾಗಿ ಹತ್ಯೆಗೈದಿದ್ದಾನೆ.
ಕೊಲೆಗೆ 20 ವರ್ಷಗಳ ಕೌಟುಂಬಿಕ ಕಲಹವೇ ಕಾರಣ
ಹಿರಿಯ ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಆರೋಪಿ ಇಂದುಶೇಖರ್ ಮತ್ತು ಆತನ ಪತ್ನಿ ಸುನೀತಾ ನಡುವೆ ನಿರಂತರವಾಗಿ ಜಗಳ ನಡೆಯುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಇವರ ದಾಂಪತ್ಯ ಜೀವನ ತೀರಾ ಹದಗೆಟ್ಟಿತ್ತು. ಆರೋಪಿಯು ಪತ್ನಿಯ ನಡತೆಯ ಮೇಲೂ ತೀವ್ರ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ.
ದಂಪತಿ ನಡುವೆ ಕೌಟುಂಬಿಕ ಕಲಹಗಳು ನಡೆದಾಗಲೆಲ್ಲಾ ಪತ್ನಿ ಸುನೀತಾ ಅವರ ಪರವಾಗಿ ಸಂಬಂಧಿಕರಾದ ರೂಪಾವತಿ, ನಳಿನಿ, ಶಂಕರ್, ಶಿವಕುಮಾರ್ ಮತ್ತು ದಿವ್ಯಾ ನಿಲ್ಲುತ್ತಿದ್ದರು. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಇಂದುಶೇಖರ್, ತನ್ನ ಸಂಸಾರ ಹಾಳಾಗಲು ಇವರೇ ಕಾರಣ ಎಂದು ಭಾವಿಸಿ, ಪತ್ನಿ ಮತ್ತು ಆಕೆಗೆ ಬೆಂಬಲ ನೀಡುತ್ತಿದ್ದ ಸಂಬಂಧಿಕರೆಲ್ಲರನ್ನೂ ಮಟ್ಟಹಾಕಲು ಸಂಚು ರೂಪಿಸಿದ್ದ ಎಂದು ಹೇಳಿದ್ದಾರೆ.
ಕೃತ್ಯದಲ್ಲಿ 17 ವರ್ಷದ ಅಪ್ರಾಪ್ತ ಮಗಳ ಸಾಥ್!
ಈ ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ಅಂಶವೆಂದರೆ, ಆರೋಪಿಯು ಈ ಭೀಕರ ಹತ್ಯೆಗಳನ್ನು ಮಾಡಲು ಮತ್ತು ಶವಗಳನ್ನು ವಿಲೇವಾರಿ ಮಾಡಲು ತನ್ನ 17 ವರ್ಷದ ಅಪ್ರಾಪ್ತ ಮಗಳ ನೆರವು ಪಡೆದಿರುವುದು. ಈಕೆ ಖಾಸಗಿ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಕೊಲೆ ಮತ್ತು ಶವ ವಿಲೇವಾರಿಯಲ್ಲಿ ಈಕೆಯ ಪಾತ್ರ ಎಷ್ಟರಮಟ್ಟಿಗಿತ್ತು ಎಂಬ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟೇ ಸ್ಪಷ್ಟ ಚಿತ್ರಣ ಸಿಗಬೇಕಿದೆ. ಕೊಲೆ ಮಾಡಿದ ನಂತರ ಯಾರಿಗೂ ಅನುಮಾನ ಬಾರದಂತೆ ಸಾಕ್ಷ್ಯ ನಾಶಪಡಿಸಲು ಆರೋಪಿ ಇಂದುಶೇಖರ್, ತನ್ನ ಟೊಯೋಟಾ ಎಟಿಯೋಸ್ ಕಾರಿನಲ್ಲಿ ಶವಗಳನ್ನು ಸಾಗಿಸಿದ್ದಾನೆ. ಕರ್ನಾಟಕ ಮತ್ತು ತಮಿಳುನಾಡಿನ 4 ಪ್ರಮುಖ ಹಾಗೂ ಅರಣ್ಯ/ಘಾಟ್ ಪ್ರದೇಶಗಳಲ್ಲಿ ಶವಗಳನ್ನು ಬಿಸಾಡಿದ್ದಾನೆ. ತಮಿಳುನಾಡಿನ ಸೇಲಂ ಬಳಿಯ ಯೇರ್ಕಾಡ್ ಘಾಟ್, ಮೈಸೂರಿನ ಚಾಮುಂಡಿ ಬೆಟ್ಟ, ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ದಕ್ಷಿಣ ಕನ್ನಡದ ಶಿರಾಡಿ ಘಾಟ್‌ನಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 3 ರವರೆಗೆ ಆತ ಶವಗಳನ್ನು ಈ ಸ್ಥಳಗಳಲ್ಲಿ ಒಂದೊಂದಾಗಿ ಎಸೆಯುವ ಕೃತ್ಯವನ್ನು ಮುಂದುವರಿಸಿದ್ದ ಎಂದು ತಿಳಿದುಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕುಟುಂಬದ ಹಲವು ಸದಸ್ಯರು ದಿಢೀರನೆ ನಾಪತ್ತೆಯಾಗಿದ್ದರಿಂದ ಆತಂಕಗೊಂಡ ತುಂಗಮ್ಮ ಎಂಬ ಮಹಿಳೆ ನವೆಂಬರ್ 3 ರಂದು ಶ್ರೀರಾಮಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ತಮ್ಮ ಪುತ್ರಿ ನಳಿನಿ, ಅಳಿಯ ಶಂಕರ್, ಅಪ್ರಾಪ್ತ ಮೊಮ್ಮಕ್ಕಳು ಹಾಗೂ ಸಂಬಂಧಿಕರಾದ ದಿವ್ಯ, ಶಿವಕುಮಾರ್, ಪುನೀತ್ ಮತ್ತು ರೂಪಾವತಿ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರು ದಾಖಲಿಸಿಕೊಂಡ ಶ್ರೀರಾಮಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ತನಿಖೆಯ ವೇಳೆ ಪೊಲೀಸರಿಗೆ ಕುಟುಂಬದೊಂದಿಗೆ ನಿರಂತರ ವೈಷಮ್ಯ ಹೊಂದಿದ್ದ ಇಂದುಶೇಖರ್ ಮೇಲೆ ಬಲವಾದ ಸಂಶಯ ವ್ಯಕ್ತವಾಯಿತು. ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ, ಆತ ತಾನೇ 7 ಜನರನ್ನು ಬರ್ಬರವಾಗಿ ಕೊಲೆ ಮಾಡಿ ಶವಗಳನ್ನು ಎಸೆದಿರುವುದಾಗಿ ಬಾಯಿಬಿಟ್ಟಿದ್ದಾನೆ.
ಆರೋಪಿಯ ತಪ್ಪೊಪ್ಪಿಗೆಯ ಆಧಾರದ ಮೇಲೆ ರಾಜಾಜಿನಗರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕೊಲೆಗೆ ಬಳಸಲಾದ ಮಾರಕಾಸ್ತ್ರಗಳು, ಶವ ಸಾಗಿಸಲು ಬಳಸಿದ ಕಾರನ್ನು ವಶಪಡಿಸಿಕೊಳ್ಳುವ ಹಾಗೂ ಬೇರೆ ಬೇರೆ ಜಿಲ್ಲೆ ಮತ್ತು ರಾಜ್ಯಗಳಲ್ಲಿ ಎಸೆಯಲಾಗಿರುವ ಮೃತದೇಹಗಳನ್ನು ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆಗೆ ರವಾನಿಸುವ ಕಾರ್ಯಾಚರಣೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಜೊತೆಗೆ ಈ ಪ್ರಕರಣದಲ್ಲಿ ಅಪ್ರಾಪ್ತ ಬಾಲಕಿಯ ಪಾತ್ರದ ಕುರಿತು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.
ಮನೆ ಮಾಲೀಕರಿಗೆ ಮೋಸ
ರಾಜಾಜಿನಗರದ ಬಾಷ್ಯಂ ಸರ್ಕಲ್ ಬಳಿ ಪತ್ರಿಕೋದ್ಯಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಬೆದರಿಕೆ ಹಾಕುತ್ತಿದ್ದ ಆರೋಪಿ ತನ್ನ ಮನೆಯ ಸುತ್ತಮುತ್ತಲಿನವರಿಗೆ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿರುವುದು ತಿಳಿದುಬಂದಿದೆ. ಕಟ್ಟಡದ ನಿಜವಾದ ಮಾಲೀಕರಿಗೆ ಬಾಡಿಗೆ ನೀಡಬೇಡಿ, ನನಗೆ ಬಾಡಿಗೆ ಕೊಡಿ ಎಂದು ಬೆದರಿಕೆ ಹಾಕಿದ್ದಾನೆ. ಆದರೆ, ಕೆಲವರು ಬೆದರಿಕೆಗೆ ಕಿಂಚಿತ್ತೂ ಕ್ಯಾರೆ ಎನ್ನದೆ, ನಿಜವಾದ ಮಾಲೀಕರಿಗೇ ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದರು ಎನ್ನುವುದು ತಿಳಿದುಬಂದಿದೆ.
'ಪೊಲೀಸ್ ನ್ಯೂಸ್' ಮುಖವಾಡ, ಬ್ಲ್ಯಾಕ್‌ಮೇಲ್ ತಂತ್ರ
ತನ್ನ ಅಕ್ರಮಗಳನ್ನು ಮುಚ್ಚಿಹಾಕಲು ಮತ್ತು ಸಾರ್ವಜನಿಕರನ್ನು ಹೆದರಿಸಲು ಈತ ಪತ್ರಿಕೋದ್ಯಮದ ಮುಖವಾಡ ಧರಿಸಿದ್ದ. ತನ್ನ ಮನೆಯ ಮುಂದೆ ಪೊಲೀಸ್ ನ್ಯೂಸ್ ಎಂದು ನಾಮಫಲಕ ಹಾಕಿಕೊಂಡಿದ್ದ. ‘ಠಾಣಾ ವರದಿ’ ಎಂಬ ಹೆಸರಿನಲ್ಲಿ ಪತ್ರಿಕೆಯೊಂದನ್ನು ನಡೆಸುತ್ತಿದ್ದ. ತಾನೊಬ್ಬ ಪ್ರಭಾವಿ ಪತ್ರಕರ್ತ ಎಂದು ಬಿಂಬಿಸಿಕೊಂಡು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆರೋಪಿಯ ಮನೆಯ ಮುಂದೆ ರಹಸ್ಯ ಡೈರಿಯೊಂದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಡೈರಿಯಲ್ಲಿ ಹಿರಿಯ ಐಪಿಎಸ್ ಅಧಿಕಾರಿಗಳು, ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಹಾಗೂ ಹಲವು ಪ್ರಭಾವಿ ಗಣ್ಯರ ಮೊಬೈಲ್ ಸಂಖ್ಯೆಗಳನ್ನು ಬರೆದಿಟ್ಟುಕೊಂಡಿರುವುದು ಪತ್ತೆಯಾಗಿದೆ. ಈತ ಅಧಿಕಾರಿಗಳ ಹೆಸರನ್ನು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದನೇ? ಅಥವಾ ಅಧಿಕಾರಿಗಳ ಹೆಸರಿನಲ್ಲಿ ಬೇರೆ ಯಾರಿಗಾದರೂ ವಂಚಿಸಿದ್ದಾನೆಯೇ ಎಂಬ ಸಂಶಯ ವ್ಯಕ್ತವಾಗಿದೆ.
ಮುಂದುವರಿದ ಆರೋಪಿ ವಿಚಾರಣೆ
ಘಟನೆ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್, ಆರೋಪಿ ತನ್ನ ಪತ್ನಿ, ಅತ್ತೆ ಸೇರಿ ಅವರ ಕುಟುಂಬದ 7 ಜನರನ್ನು ತಾನೇ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯ ಹೇಳಿಕೆ ಪ್ರಕಾರ ಹತ್ಯೆಯಾದವರೆಲ್ಲರೂ ಆತನ ಪತ್ನಿಯ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಆರೋಪಿಯ ಪತ್ನಿ ಸುನೀತಾ, ಆರೋಪಿಯ ಅತ್ತೆ ರೂಪಾವತಿ, ಸುನೀತಾ ಅವರ ಸಹೋದರರಾದ ಶಿವಕುಮಾರ್, ಶಂಕರ್ ಮತ್ತು ಶಿವಕುಮಾರ್ ಪತ್ನಿ ದಿವ್ಯಾ, ಪುತ್ರ ಪುನೀತ್, ಶಂಕರ್ ಪತ್ನಿ ನಳಿನಿ ಕೊಲೆಯಾದವರಾಗಿದ್ದಾರೆ. ಆರೋಪಿ ಒಟ್ಟು 7 ಜನರನ್ನು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ದರೆ ಸದ್ಯಕ್ಕೆ ಪೊಲೀಸರಿಗೆ ಕೇವಲ ಒಂದು ಮೃತದೇಹ ಮಾತ್ರ ಸಿಕ್ಕಿದೆ. ಉಳಿದ ಶವಗಳನ್ನು ಎಲ್ಲೆಲ್ಲಿ ಎಸೆದಿದ್ದಾನೆ ಎಂಬ ಬಗ್ಗೆ ಆತ ಮಾಹಿತಿ ನೀಡುತ್ತಿದ್ದಾನೆ. ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆತ ಹೇಳುತ್ತಿರುವ ವಿವಿಧ ಸ್ಥಳಗಳಿಗೆ ಹುಡುಕಾಟ ನಡೆಸಲು ಈಗಾಗಲೇ ಪ್ರತ್ಯೇಕ ವಿಶೇಷ ಪೊಲೀಸ್ ತಂಡಗಳನ್ನು ರವಾನಿಸಲಾಗಿದೆ. ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಈ ಎಲ್ಲಾ 7 ಕೊಲೆಗಳು ಆರೋಪಿಯ ರಾಜಾಜಿನಗರದ ವ್ಯಾಪ್ತಿಯಲ್ಲಿರುವ ಮನೆಯಲ್ಲೇ ನಡೆದಿವೆ. ಕಳೆದ 15 ರಿಂದ 20 ದಿನಗಳ ಅವಧಿಯಲ್ಲಿ ಆರೋಪಿ ಈ ಕೊಲೆಗಳನ್ನು ಮಾಡಿದ್ದಾನೆ. ನಿಖರವಾಗಿ ಯಾವ ದಿನ, ಯಾವ ಸಮಯದಲ್ಲಿ ಯಾರನ್ನು ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಪರಿಶೀಲನೆಯ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಾಗುವುದು. ಇದೊಂದು ಅತ್ಯಂತ ಗಂಭೀರ ಹಾಗೂ ಭೀಕರ ಪ್ರಕರಣವಾಗಿರುವುದರಿಂದ ಪಶ್ಚಿಮ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಹಾಗೂ ಉತ್ತರ ವಿಭಾಗದ ಡಿಸಿಪಿ ಅವರ ವೈಯಕ್ತಿಕ ನೇತೃತ್ವದಲ್ಲೇ ಸಮಗ್ರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
