2nd International Airport| ಬೆಂಗಳೂರು ದಕ್ಷಿಣದಲ್ಲೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
x

2nd International Airport| ಬೆಂಗಳೂರು ದಕ್ಷಿಣದಲ್ಲೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಸೋಮನಹಳ್ಳಿ, ಕನಕಪುರ ರಸ್ತೆಯ ಚೂಡಹಳ್ಳಿ ಹಾಗೂ ಪಶ್ಚಿಮ ಬೆಂಗಳೂರಿನ ನೆಲಮಂಗಲ-ಕುಣಿಗಲ್ ರಸ್ತೆ ಕಾರಿಡಾರ್ನಲ್ಲಿ ಬರುವ ಚಿಕ್ಕಸೋಲೂರು ಸಮೀಪದ ಸ್ಥಳ ಗುರುತಿಸಿದೆ.


Click the Play button to hear this message in audio format

ಬೆಂಗಳೂರು ದಕ್ಷಿಣ ಭಾಗದಲ್ಲೇ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರ್ಕಾರ ಕೊನೆಗೂ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಗುರುತಿಸಿರುವ ಮೂರು ಪ್ರಮುಖ ಸ್ಥಳಗಳನ್ನು ಈಗಾಗಲೇ ವಿಮಾನ ನಿಲ್ದಾಣಗಳ ಪ್ರಾಧಿಕಾರ ಪರಿಶೀಲಿಸಿದ್ದು, ಅಂತಿಮ ಸ್ಥಳ ನಿಗದಿ ಮಾಡುವ ಪ್ರಕ್ರಿಯೆ ಆರಂಭಿಸಿದೆ.

ವಿಮಾನ ನಿಲ್ದಾಣ ಸ್ಥಾಪನೆಯ ಜಾಗ ನಿಗದಿ ಮಾಡುವ ಹೊಣೆಯನ್ನು ಕೇಂದ್ರ ವಿಮಾನಯಾನ ಸಚಿವಾಲಯ ರಾಜ್ಯ ಸರ್ಕಾರಕ್ಕೆ ನೀಡಿದೆ ಎಂದು ಕಳೆದ ವಾರವಷ್ಟೇ ಹೇಳಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಇದೀಗ ಒಂದು ಹೆಜ್ಜೆ ಮುಂದಿಟ್ಟು, ಬೆಂಗಳೂರು ದಕ್ಷಿಣದಲ್ಲೇ ವಿಮಾನ ನಿಲ್ದಾಣ ಸ್ಥಾಪನೆ ಮಾಡಲಾಗುವುದು, ಅದಕ್ಕಿಂತ ಉತ್ತಮ ಜಾಗ ಬೇರೆ ಕಡೆ ಇಲ್ಲ ಎಂದು ಹೇಳುವ ಮೂಲಕ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಕುರಿತು ಮಹತ್ವದ ಸುಳಿವು ಬಿಟ್ಟುಕೊಟ್ಟಿದ್ದಾರೆ.

ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಗುರುವಾರ (ಮಾ.26) ಬೆಂಗಳೂರು ಅಭಿವೃದ್ಧಿ ಕುರಿತಾದ ಚರ್ಚೆಯ ಮೇಲೆ ಉತ್ತರ ನೀಡಿದ ಅವರು, 2033ರ ವೇಳೆಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸುವ ಮಹತ್ವಾಕಾಂಕ್ಷಿ ಗುರಿ ಇಟ್ಟುಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ದಕ್ಷಿಣ ಬೆಂಗಳೂರಿನ ಕನಕಪುರ ರಸ್ತೆಯ ಸೋಮನಹಳ್ಳಿ, ಕನಕಪುರ ರಸ್ತೆಯ ಚೂಡಹಳ್ಳಿ ಹಾಗೂ ಪಶ್ಚಿಮ ಬೆಂಗಳೂರಿನ ನೆಲಮಂಗಲ-ಕುಣಿಗಲ್ ರಸ್ತೆ ಕಾರಿಡಾರ್ನಲ್ಲಿ ಬರುವ ಚಿಕ್ಕಸೋಲೂರು ಸಮೀಪದ ಸ್ಥಳ ಗುರುತಿಸಿದೆ. ಈ ಜಾಗಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಪರಿಶೀಲಿಸಿದ್ದು, ಭೂಮಿಯ ಲಭ್ಯತೆ, ಭೂಪ್ರದೇಶದ ಗುಣಲಕ್ಷಣ ಮತ್ತು ನಗರಕ್ಕೆ ಇರುವ ಸಂಪರ್ಕದ ಆಧಾರದ ಮೇಲೆ ವರದಿ ಸಿದ್ಧಪಡಿಸುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಕಾರ್ಯಸಾಧ್ಯತಾ ವರದಿಗೆ ಟೆಂಡರ್

ಎರಡನೇ ಅಂತಾರಾಷ್ಟ್ರೀಯ ವಿಮಾನ ಯೋಜನೆಗೆ ಸಂಬಂಧಿಸಿದಂತೆ ಗುರುತಿಸಲಾದ ಸ್ಥಳಗಳ ಆರ್ಥಿಕ ಲಾಭ ಹಾಗೂ ಪ್ರಯಾಣಿಕರ ಅನುಕೂಲದ ಬಗ್ಗೆ ವಿವರವಾದ ಕಾರ್ಯಸಾಧ್ಯತಾ ವರದಿ ಪಡೆಯಲು ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ವರದಿ ನಂತರ ಸ್ಥಳ ಅಂತಿಮಗೊಳಿಸಲು ಸರ್ಕಾರ ನಿರ್ಧರಿಸಿದೆ.

ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು 2030ರ ವೇಳೆಗೆ ತನ್ನ ಗರಿಷ್ಠ ಸಾಮರ್ಥ್ಯ ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆ ಶೇ. 29ರಷ್ಟು ಹೆಚ್ಚಾಗಿದೆ.

ಬೆಂಗಳೂರಿನ ದಕ್ಷಿಣ ಮತ್ತು ಪಶ್ಚಿಮ ಭಾಗದ ಜನರು ದೇವನಹಳ್ಳಿಗೆ ಹೋಗಲು ತಗಲುವ ಸಮಯ ಮತ್ತು ಇಂಧನ ಉಳಿಸಲು ಎರಡನೇ ನಿಲ್ದಾಣದ ಅಗತ್ಯವಿದೆ ಎಂಬುದು ಸರ್ಕಾರ ವಾದ. 2033ಕ್ಕೆ ದೇವನಹಳ್ಳಿ ನಿಲ್ದಾಣ ಆರಂಭವಾಗಿ 25 ವರ್ಷಗಳಾಗಲಿವೆ. ಅಷ್ಟರಲ್ಲಿ ಎರಡನೇ ನಿಲ್ದಾಣ ಸಿದ್ಧವಾಗಬೇಕಿದೆ. ಇದರಿಂದ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಕೈಗಾರಿಕಾ ವಲಯಗಳು ತಲೆ ಎತ್ತಲಿವೆ. ರಫ್ತು ಮತ್ತು ಆಮದು ಕಾರ್ಯಗಳಿಗೆ ವೇಗ ಸಿಗಲಿದ್ದು, ಕರ್ನಾಟಕದ ವ್ಯಾಪಾರ ವಲಯಕ್ಕೆ ದೊಡ್ಡ ಬಲ ಬರಲಿದೆ ಎಂದು ಅಂದಾಜಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಮಾ.6 ರಂದು ಮಂಡಿಸಿದ ಬಜೆಟ್ನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆಯನ್ನು ಅಧಿಕೃತವಾಗಿ ಘೋಷಿಸಿದ್ದರು. ಇದೀಗ ತಾಂತ್ರಿಕ ವರದಿಗಳಿಗಾಗಿ ಸಲಹೆಗಾರರನ್ನು ನೇಮಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಬೆಂಗಳೂರಿಗೆ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರಲಿದೆ.

ಬಿಡದಿಯಲ್ಲಿ ಎಐ ಸಿಟಿ

ಬಿಡದಿಯಲ್ಲಿ ಅಧಿಸೂಚನೆಯಾಗಿರುವ 8 ಸಾವಿರ ಎಕರೆ ಜಾಗದಲ್ಲೇ ಎಐ ಸಿಟಿ ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ವಿಧಾನಸಭೆ ಕಲಾಪದಲ್ಲಿ ಈ ಕುರಿತು ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಹೊಸಕೋಟೆಯ ನಂದಗುಡಿ, ನೆಲಮಂಗಲದ ಸೋಲೂರು, ರಾಮನಗರದ ಬಿಡದಿಯಲ್ಲಿ ಟೌನ್ ಶಿಪ್ ನಿರ್ಮಿಸಲು ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿ, ನಂತರ ಪ್ರಕ್ರಿಯೆ ಕೈಬಿಟ್ಟಿದ್ದರು.

ಪ್ರಸ್ತುತ, ಅಧಿಸೂಚನೆಗೊಂಡಿರುವ ಜಾಗದಲ್ಲೇ ಎಐ ಸಿಟಿ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಯೋಜನೆ ವಿರೋಧಿಸಿ ಬಿಡದಿ ಭಾಗದಲ್ಲಿ 11ಗ್ರಾಮಗಳ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.

“ಸ್ವಾಧೀನ ಮಾಡಿಕೊಂಡಿರುವ ಭೂಮಿಯನ್ನು ಯಾವುದೇ ಕಾರಣಕ್ಕೂ ಅಧಿಸೂಚನೆಯಿಂದ ಕೈ ಬಿಡುವುದಿಲ್ಲ. ಒಂದು ವೇಳೆ ಕೈ ಬಿಟ್ಟರೆ ನಮ್ಮ ಪರಿಸ್ಥಿತಿ ಏನಾಗಲಿದೆ ಎಂಬುದು ನಿಮಗೂ ಗೊತ್ತಿದೆ. ಬಿಡದಿಯಲ್ಲಿ ನೀರಿನ ಸೌಲಭ್ಯ ಇರುವುದರಿಂದ ಟೌನ್ ಶಿಪ್ ಮಾಡಬೇಕಾಗಿದೆ” ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ʼಬೆಂಗಳೂರು ಒಡೆಯುತ್ತಿಲ್ಲʼ

ಬೆಂಗಳೂರು ನಗರದ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಭಾಗಗಳಾಗಿ ವಿಂಗಡಿಸಲಾಗಿತ್ತು. ಬೆಂಗಳೂರು ವಿಭಜನೆ ತೀರ್ಮಾನವನ್ನು ಏಕಾಏಕಿ ಮಾಡಲಿಲ್ಲ. ವಿರೋಧ ಪಕ್ಷದ ನಾಯಕರ ಮಾತಿನಂತೆ ಸದನ ಸಮಿತಿ ರಚನೆ ಮಾಡಿ ಅವರು ನೀಡಿದ ಸಲಹೆಗಳನ್ನು ಪರಿಗಣಿಸಿ ಮಾಡಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಸದನಕ್ಕೆ ತಿಳಿಸಿದರು. ಪ್ರಸ್ತುತ, ಐದು ಪಾಲಿಕೆಗಳಲ್ಲಿ 369 ವಾರ್ಡ್ ಗಳನ್ನು ಮಾಡಲಾಗಿದೆ. ಬೆಂಗಳೂರನ್ನು ಯಾವುದೇ ಕಾರಣಕ್ಕೂ ಒಡೆಯುತ್ತಿಲ್ಲ. ಇದು ಆಡಳಿತದ ವಿಕೇಂದ್ರೀಕರಣ ಎಂದು ತಿಳಿಸಿದರು.

ಬೆಂಗಳೂರು ರಸ್ತೆ ಅಗಲೀಕರಣ ಅಸಾಧ್ಯ

ಮುಂಬೈ, ಹೈದರಾಬಾದ್, ದೆಹಲಿಯಂತೆ ಬೆಂಗಳೂರಿನಲ್ಲೂ ಹೆಚ್ಚು ವಾಹನ ದಟ್ಟಣೆ ಇದೆ. ಬೆಂಗಳೂರಿನಲ್ಲಿರುವ ರಸ್ತೆ ಪ್ರಮಾಣ ಕೇವಲ ಶೇ 8 ಮಾತ್ರ. ಹೊಸ ರಸ್ತೆಗಾಗಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ನಿರ್ಧರಿಸಲಾಗಿದೆ. ಯೋಜನೆಗೆ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಕೈಬಿಡಲು ಆಗುವುದಿಲ್ಲ. ಭೂ ಮಾಲೀಕರಿಗೆ 2013ರ ಕಾಯ್ದೆ ಅನ್ವಯ ಪರಿಹಾರ ನೀಡಲಾಗುವುದು. ಪರಿಹಾರಕ್ಕೆ 5 ಅವಕಾಶಗಳನ್ನು ನೀಡಲಾಗಿದೆ. ಸದ್ಯದಲ್ಲೇ ಟೆಂಡರ್ ಕರೆಯಲಾಗುವುದು. ಯೋಜನೆಗೆ ಒಂದೇ ದಿನದಲ್ಲಿ 26 ಸಾವಿರ ಕೋಟಿ ರೂ. ಸಾಲ ನೀಡಲು ಹುಡ್ಕೋ ಮುಂದಾಗಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ಕಾವೇರಿ 6ನೇ ಹಂತದ ಕುಡಿವ ನೀರಿನ ಯೋಜನೆಗೆ ಅನುಮೋದನೆ

ಬೆಂಗಳೂರಿಗೆ ಕಾವೇರಿ ಹೊರತಾಗಿ ಬೇರೆ ನೀರಿನ ಮೂಲವಿಲ್ಲ. ಬೆಂಗಳೂರಿನ ಕುಡಿಯುವ ನೀರಿನ 5ನೇ ಹಂತದ ಯೋಜನೆ ಅರ್ಧಕ್ಕೆ ನಿಂತಿತ್ತು. ನಂತರ ಎದುರಾಗಿದ್ದ ಅಡೆತಡೆ ನಿವಾರಿಸಿ ಯೋಜನೆ ಪೂರ್ಣಗೊಳಿಸಿದೆವು. ಎತ್ತಿನಹೊಳೆ ಯೋಜನೆಗೂ ಅರಣ್ಯ ಪ್ರದೇಶದಿಂದ ಸಮಸ್ಯೆ ಎದುರಾಗಿತ್ತು. ಬೆಂಗಳೂರು ನಗರಕ್ಕೆ 2250 ಎಂಎಲ್ ಡಿ ಸಾಮರ್ಥ್ಯದ ನೀರಿನ ಸಂಪರ್ಕ ನೀಡಲಾಗಿತ್ತು. ನಾವು 1850 ಎಂಎಲ್ಡಿ ನೀರು ಸಂಪರ್ಕ ಸೇರಿಸಿದ್ದು, ಇನ್ನು 400 ಎಂಎಲ್ ಡಿ ಸಾಮರ್ಥ್ಯದ ನೀರು ಬಾಕಿ ಇದೆ. ಜನರಿಗೆ ಕಂತಿನ ಮೂಲಕ ಪಾವತಿಗೆ ಅವಕಾಶ ನೀಡಿ ನೀರಿನ ಸಂಪರ್ಕ ಪಡೆಯಲು ಹೇಳಿದ್ದೇವೆ. ಕಾವೇರಿ ಆರನೇ ಹಂತದ ಕುಡಿಯುವ ನೀರಿನ ಯೋಜನೆಗೆ 6 ಸಾವಿರ ಕೋಟಿ ಮೊತ್ತದ ಡಿಪಿಆರ್ ಸಿದ್ಧಪಡಿಸಿ, ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಅಪಾರ್ಟ್‌ಮೆಂಟ್‌ ಕಾಯ್ದೆಗೆ ಸರ್ಕಾರ ಬದ್ಧ

ಅಪಾರ್ಟ್ಮೆಂಟ್ ಕಾಯ್ದೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಈ ವಿಚಾರವಾಗಿ ವಿರೋಧ ಪಕ್ಷಗಳ ಶಾಸಕರ ಜತೆ ಚರ್ಚೆ ಮಾಡಲಾಗುವುದು. ಎಲ್ಲರ ಅಭಿಪ್ರಾಯ ಸ್ವೀಕರಿಸಿದ ಬಳಿಕ ಸುಗ್ರೀವಾಜ್ಞೆ ಮೂಲಕವಾದರೂ ಕಾಯ್ದೆ ಜಾರಿಗೆ ತರಲಾಗುವುದು ಎಂದು ಹೇಳಿದರು.

Read More
Next Story